ತಾ.ಆರೋಗ್ಯ ಇಲಾಖೆಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ

0
  • ಜನಸಂಖ್ಯಾ ದಿನಾಚರಣೆಯು ಸಂಭ್ರಮಿಸುವ ದಿನವಲ್ಲ-ಡಾ. ವಿಶ್ವೇಶ್ವರ ಭಟ್

 

ಪುತ್ತೂರು:ಜನಸಂಖ್ಯಾ ದಿನಾಚರಣೆಯು ಸಂತಸ, ಸಂಭ್ರಮದ ದಿನಾಚರಣೆಯಲ್ಲ. ಜನ ಸಂಖ್ಯಾ ಸ್ಫೋಟದಿಂದಾಗುವ ದುಷ್ಪರಿಣಾಮಗಳ ಕುರಿತು ಯುವ ಜನಾಂಗಕ್ಕೆ ಜಾಗೃತಿ ಮೂಡಿಸುವ ದಿನ. ಯುವ ಜನತೆಯು ಯೋಚಿಸಿ, ಚಿಂತಿಸುವ ದಿನವಾಗಿದೆ ಎಂದು ಕಲ್ಲಡ್ಕ ಬಾಳ್ತಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ವಿಶ್ವೇಶ್ವರ ಭಟ್ ಹೇಳಿದರು.


ದ.ಕ ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿ ಕಚೇರಿ ಹಾಗೂ ಬೊಳುವಾರು ಪ್ರಗತಿ ಪ್ಯಾರಮೆಡಿಕಲ್ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಜು.26ರಂದು ಪುರಭವನದಲ್ಲಿ ನಡೆದ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಇಂದಿನ ಅಪರಿಮಿತವಾದ ಜನಸಂಖ್ಯೆಯು ಎಲ್ಲಾ ಕ್ಷೇತ್ರಗಳಲ್ಲಿ ಪರಿಣಾಮ ಬೀರುತ್ತದೆ. ಮುಂದಿನ ಯುವ ಜನಾಂಗಕ್ಕೆ ಬಹಳಷ್ಟು ಸ್ಪರ್ಧಾತ್ಮಕವಾಗಲಿದೆ. ಯುವ ಜನತೆಯು ತಮ್ಮ ಉಳಿವಿಗಾಗಿ ಹೋರಾಟ ನಡೆಸಬೇಕಾದ ಅನಿವಾರ್ಯತೆ ಎದುರುಗಾಗಲಿದೆ. ಹೀಗಾಗಿ ಜನಸಂಖ್ಯೆಯ ಒಳಿತು ಕೆಡುಕುಗಳನು ಅರಿತುಕೊಂಡು ಸ್ಥಿರತೆ ಕಾಪಾಡಿಕೊಳ್ಳಲು ಯೋಚಿಸಬೇಕಾಗಿದೆ ಎಂದರು.

ಜನಸಂಖ್ಯೆ ಹೆಚ್ಚಾದಂತೆ ಜನರಲ್ಲಿ ನಿರೀಕ್ಷೆಗಳು ಹೆಚ್ಚಾಗುತ್ತದೆ. ಸಮಾಜದಲ್ಲಿ ಸಮಸ್ಯೆ, ಸಂಘರ್ಷಗಳು ಉಂಟಾಗುತ್ತದೆ. ನಾನಾ ರೀತಿಯ ಸಾಂಕ್ರಾಮಿಕ ರೋಗಗಳು ವೃದ್ಧಿಯಾಗುತ್ತಲೇ ಸಾಗುತ್ತದೆ. ಪ್ರಾಕೃತಿಕ ವಿಕೋಪಗಳಿಗೂ ಜನಸಂಖ್ಯಾ ಸ್ಪೋಟವೇ ಕಾರಣವಾಗಿದ್ದು ಜನಸಂಖ್ಯಾ ಸ್ಪೋಟವನ್ನು ನಿಯಂತ್ರಿಸಬೇಕಾದ ಅನಿವಾರ್ಯತೆಯಿದೆ. ಈ ನಿಟ್ಟಿನಲ್ಲಿ ಯುವ ಜನತೆ ಚಿಂತಿಸಬೇಕಾದ ಸಮಯವಾಗಿದೆ. ಯುವ ಜನತೆಯಲ್ಲಿ ತಮ್ಮ ಭವಿಷ್ಯದ ಬಗ್ಗೆ ಕಲ್ಪನೆಯಿರಬೇಕು ಎಂದು ಡಾ.ವಿಶ್ವೇಶ್ವರ ಭಟ್ ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದ ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ವಿಶ್ವ ಜನಸಂಖ್ಯಾ ದಿನಾಚರಣೆಯು ಜನ ಜಾಗೃತಿ ಮೂಡಿಸುವ ದಿನಾಚರಣೆಯಾಗಿದೆ. ಇದರಿಂದಾಗುವ ದುಷ್ಪರಿಣಾಮಗಳ ಕುರಿತು ಮುಂದಿನ ಪೀಳಿಗೆಗೆ ಮಾಹಿತಿ ನೀಡುವ ದಿನಾಚರಣೆಯಾಗಿದೆ. ಜನಸಂಖ್ಯಾ ಸ್ಫೋಟದಿಂದ ದೇಶದ ಆರ್ಥಿಕತೆಗೆ ಹಿನ್ನಡೆ, ನಿರುದ್ಯೋಗ ಸೃಷ್ಟಿಯಾಗಲಿದೆ. ಇದಕ್ಕಾಗಿ ನಮ್ಮಲ್ಲಿ ನಾವು ಜಾಗೃತಿಯಾಗಬೇಕು. ಜನ ಸಂಖ್ಯೆ ನಿಯಂತ್ರಣಕ್ಕಾಗಿ ಸರಕಾರ ಬಹಳಷ್ಟು ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುತ್ತಿದ್ದು ಅವುಗಳ ಸಾಂಕೇತಿಕವಾಗಿ ನಡೆಯದೆ ಅರ್ಥಪೂರ್ಣವಾಗಿ ನಡೆಯಬೇಕು ಎಂದರು.

ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ, ತಾಲೂಕು ನೋಡೆಲ್ ಅಧಿಕಾರಿಯಾಗಿರುವ ಡಾ.ಬದ್ರುದ್ದೀನ್ ಮಾತನಾಡಿ, ಜನಸಂಖ್ಯೆಯು ತೀವ್ರ ರೀತಿಯಲ್ಲಿ ಏರಿಕೆಯಾಗುತ್ತಿದ್ದು ನಾನಾ ರೀತಿಯ ಸಾಂಕ್ರಾಮಿಕ ರೋಗಗಳ ಉದ್ಭವವಾಗುತ್ತದೆ. ಹೀಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜನಸಂಖ್ಯೆಯ ನಿಯಂತ್ರಣದ ಕುರಿತು ಜನರಿಗೆ ಅರಿವು ಮೂಡಿಸುವುದು ಅಗತ್ಯವಿದೆ ಎಂದರು.

ಬೊಳುವಾರು ಪ್ರಗತಿ ಪ್ಯಾರಮೆಡಿಕಲ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಹಾಗೂ ಆರೋಗ್ಯ ಇಲಾಖೆ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿಯವರು ಸಂದರ್ಬೋಚಿತವಾಗಿ ಮಾತನಾಡಿದರು.

ಸನ್ಮಾನ:

2021-22ನೇ ಸಾಲಿನ ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಅತೀ ಹೆಚ್ಚು ಪ್ರಗತಿ ಸಾಧಿಸಿದ ವೈದ್ಯಾಧಿಕಾರಿಗಳಾದ ಸರ್ವೆಯ ಡಾ.ನಮಿತಾ, ನೆಲ್ಯಾಡಿಯ ಡಾ.ಶಿಶಿರಾ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸುರಕ್ಷಾಧಿಕಾರಿಗಳಾದ ಸರ್ವೆಯ ಲೀನಾ, ಅಕ್ಕಮ್ಮ, ಪವಿತ್ರ, ಅಲೀಸ್, ಕಡಬದ ಅನ್ನಮ್ಮ, ನೆಲ್ಯಾಡಿಯ ಲೀಲಾ, ಕೊಳ್ತಿಗೆಯ ಅಕ್ಷತಾ, ಪಾಣಾಜೆಯ ಶೋಭಾ, ಕೊಯಿಲದ ಲಲಿತಾ, ತಿಂಗಳಾಡಿಯ ನವ್ಯ, ಈಶ್ವರಮಂಗಲದ ರಶ್ಮಿ ಹಾಗೂ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಶೋಭಾರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಆರೋಗ್ಯ ಸುರಕ್ಷಾಧಿಕಾರಿ ಲಕ್ಷ್ಮೀ ಪ್ರಾರ್ಥಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಡಾ.ನಮಿತಾ ನಾಯಕ್, ಡಾ.ಅಮಿತ್ ಕುಮಾರ್, ಡಾ.ಶಿಶಿರಾ, ಸುಲೇಖಾ, ಉಲ್ಲಾಸ್ ಕಾಮತ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ತಾಲೂಕು ಆರೋಗ್ಯಾಧಿಕಾರಿ ಕಚೇರಿಯ ಪದ್ಮಾ ಕಾರ್ಯಕ್ರಮ ನಿರೂಪಿಸಿ, ರವಿ ವಂದಿಸಿದರು.

LEAVE A REPLY

Please enter your comment!
Please enter your name here