ವಿವೇಕಾನಂದ ಪ. ಪೂ ಕಾಲೇಜಿನಲ್ಲಿ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟ

0

ಕಠಿಣ ಪರಿಶ್ರಮ ಮತ್ತು ಶಿಸ್ತು ಮೈಗೂಡಿಸಿಕೊಂಡಾಗ ಕ್ರೀಡೆಯಲ್ಲಿ ಯಶಸ್ಸು ಸಾಧ್ಯ-ನವೀನ್ ಕುಮಾರ್ ಎಂ.ಕೆ

ಪುತ್ತೂರು: ಬುದ್ಧಿಶಕ್ತಿ ಹೆಚ್ಚಳ, ಬೆಳವಣಿಗೆ, ದೈಹಿಕ ಮತ್ತು ಮಾನಸಿಕ ಸಮತೋಲನ ಕಾಯ್ದುಕೊಳ್ಳುವುದಕ್ಕೆ ಕ್ರೀಡೆ ವಿದ್ಯಾರ್ಥಿಗಳ ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಸಂಘಟಿತ, ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಕ್ರೀಡೆ ಸಹಕಾರಿಯಾಗಿದೆ ಎಂದು ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ನವೀನ್ ಕುಮಾರ್ ಎಂ.ಕೆ ಹೇಳಿದರು.

ವಿವೇಕಾನಂದ ಪದವಿಪೂರ್ವ ಕಾಲೇಜು ಮತ್ತು ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಭಾಗಿತ್ವದಲ್ಲಿ ಜು.26ರಂದು ಆಯೋಜಿಸಲಾದ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಒಳ್ಳೆಯ ಆರೋಗ್ಯಕ್ಕೆ ಬೇಕಾದದ್ದು ದೈಹಿಕ ಹಾಗೂ ಮಾನಸಿಕ ಚಟುವಟಿಕೆ. ಇಂಥ ಚಟುವಟಿಕೆಯನ್ನು ಕ್ರೀಡೆ ತಂದು ಕೊಡುತ್ತವೆ. ಜೀವನದಲ್ಲಿ ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುತ್ತಾ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿಕೊಳ್ಳಲು ಕ್ರೀಡೆ ಸಹಕಾರಿ. ಕ್ರೀಡಾಪಟುಗಳು ಎಳೆಯ ವಯಸ್ಸಿನಲ್ಲಿ ಕಠಿಣ ಪರಿಶ್ರಮ ಮತ್ತು ಶಿಸ್ತು ಮೈಗೂಡಿಸಿಕೊಂಡಾಗ ಮುಂದಿನ ದಿವಸದಲ್ಲಿ ಯಶಸ್ಸು ಸಿಗುತ್ತದೆ. ಸೋಲು ಕೊನೆಯಲ್ಲ. ಸೋಲೇ ಗೆಲುವಿನ ಸೋಪಾನ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಖೇಲ್ ಪ್ರಮುಖ್ ಕರುಣಾಕರ ಎಂ. ಮಾತನಾಡಿ ಆರೋಗ್ಯಕರ ಜೀವನಕ್ಕೆ ಕ್ರೀಡೆಗಳು ಅಡಿಪಾಯ ಹಾಕಿ ಕೊಟ್ಟಿವೆ. ಕ್ರೀಡೆ ಮನುಷ್ಯನ ಜೀವನ ಹಾಗೂ ದೈಹಿಕ, ಮಾನಸಿಕ ಸಂಪೂರ್ಣ ಬೆಳವಣಿಗೆಗೆ ಅತ್ಯವಶ್ಯಕ. ದೀರ್ಘಕಾಲದ ಆರೋಗ್ಯ ಭಾಗ್ಯಕ್ಕೆ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಪ್ರಧಾನವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಡಾ. ಕೃಷ್ಣಪ್ರಸನ್ನ ಕೆ ಮಾತನಾಡಿ ಎಲ್ಲಾ ಕ್ರೀಡೆಗಳನ್ನು ಸಮಾನವಾಗಿ ಸ್ವೀಕರಿಸಿಕೊಳ್ಳಬೇಕು. ಉತ್ತಮ ಆರೋಗ್ಯದ ದೃಷ್ಟಿಯಿಂದ ಕ್ರೀಡೆಗಳು ಸಹಾಯಕಾರಿ ಎಂದು ಶುಭ ಹಾರೈಸಿದರು.

ಸಮಾರಂಭದಲ್ಲಿ ವಿವೇಕಾನಂದ ಮಹಾವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ರವಿಶಂಕರ್ ವಿ ಎಸ್, ಕಾಲೇಜಿನ ಪ್ರಾಂಶುಪಾಲ ಮಹೇಶ ನಿಟಿಲಾಪುರ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಸನ್ಮಯ ಮತ್ತು ದೀಕ್ಷಾ ಶರ್ಮ ಕಾರ್ಯಕ್ರಮದಲ್ಲಿ ಪ್ರಾರ್ಥಿಸಿದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಜ್ಯೋತಿ ಸ್ವಾಗತಿಸಿ ಉಪನ್ಯಾಸಕಿ ದಿವ್ಯಾ ಜಿ ವಂದಿಸಿದರು. ಉಪನ್ಯಾಸಕಿ ದಿವ್ಯಾ ಕೆ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here