ರೆಂಜಿಲಾಡಿ: ಕಾನದಬಾಗಿಲು ಸಾರ್ವಜನಿಕ ಬಸ್ಸು ತಂಗುದಾಣ-ಸ್ಥಳೀಯ ವ್ಯಕ್ತಿಯಿಂದ ಬೇಲಿ ನಿರ್ಮಿಸಲು ಹುನ್ನಾರ

0

  • 94ಸಿ ಜಾಗದಲ್ಲಿ ಬಸ್ಸು ತಂಗುದಾಣ ನಿರ್ಮಿಸಿದ್ದಾರೆ-ಪುರುಷೋತ್ತಮ
  • ಅವರ ಜಾಗ ಎಂದು ದಾಖಲೆ ಇದ್ದರೆ ತೋರಿಸಲಿ-ಪರಮೇಶ್ವರ

 


ಕಡಬ: ರೆಂಜಿಲಾಡಿ ಗ್ರಾಮದ ಕಾನದ ಬಾಗಿಲು ಎಂಬಲ್ಲಿ ಸಾರ್ವಜನಿಕ ಬಸ್ ತಂಗುದಾಣವನ್ನು ಸ್ಥಳೀಯ ವ್ಯಕ್ತಿಯೋರ್ವರು ಆಕ್ರಮಿಸಿಕೊಂಡು ಬೇಲಿ ಹಾಕುವ ಹುನ್ನಾರ ನಡೆಸುತ್ತಿದ್ದಾರೆ ಎಂದು ಅವರ ವಿರುದ್ದ ಪುತ್ತೂರು ಸಹಾಯಕ ಕಮೀಷನರ್‌ಗೆ ಮತ್ತು ಕಡಬ ಠಾಣೆಗೆ ದೂರು ನೀಡಿದ ಘಟನೆ ನಡೆದಿದೆ.


ಈ ಬಗ್ಗೆ ಕಾನದ ಬಾಗಿಲು ಅನುಷ್ಠಾನ ಸಮಿತಿಯ ಅಧ್ಯಕ್ಷ ಪರಮೇಶ್ವರ ಗೌಡ ಎಂಬವರು ಪುತ್ತೂರು ಸಹಾಯಕ ಆಯುಕ್ತರಿಗೆ ದೂರು ನೀಡಿ, ನೂಜಿಬಾಳ್ತಿಲ ಗ್ರಾ.ಪಂ.ಗೊಳಪಟ್ಟ ರೆಂಜಿಲಾಡಿ ಗ್ರಾಮದ ಕಲ್ಲುಗುಡ್ಡೆ-ಕೊಣಾಜೆ ರಸ್ತೆಯಲ್ಲಿ ಕಾನದಬಾಗಿಲು ಎಂಬಲ್ಲಿ ಶಾಲಾ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಸ್ಸು ತಂಗುದಾಣವನ್ನು ನಿರ್ಮಿಸಿ ಸುಮಾರು 9 ವರ್ಷಗಳಾಗಿವೆ, ಆದರೆ ಈ ಬಸ್ಸು ತಂಗುದಾಣವನ್ನು ಸ್ಥಳೀಯ ವ್ಯಕ್ತಿಯಾದ ಪುರುಷೋತ್ತಮ ಎಂಬವರು ಜು.23ರಂದು ಸ್ವಾಧೀನಪಡಿಸಲು ಸಿಮೆಂಟ್ ಕಂಬಗಳನ್ನು ಹಾಕಲು ತಯಾರಿ ನಡೆಸಿದ್ದಾರೆ, ಇದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತದೆ, ಈ ಬಗ್ಗೆ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

 

ಈ ಬಸ್ಸು ತಂಗುದಾಣ ನನ್ನ 94ಸಿ ಜಾಗ, ಕೋರ್ಟ್‌ನಿಂದಲೂ ಆದೇಶ ಬಂದಿದೆ-ಪುರುಷೋತ್ತಮ

ಈ ಬಗ್ಗೆ ಹೇಳಿಕೆ ನೀಡಿರುವ ಪುರುಷೋತ್ತಮರವರು, ಈ ಬಸ್ಸು ತಂಗುದಾಣ ನಿರ್ಮಿಸಿರುವುದು ನನ್ನ ತಾಯಿ ಜಾನಕಿಯವರಿಗೆ 94ಸಿ ಯಡಿಯಲ್ಲಿ ಮಂಜೂರಾದ ಜಾಗದಲ್ಲಿ, ಈ ಕಟ್ಟಡವನ್ನು ನಾವೇ ಕಟ್ಟಿದ್ದೇವೆ. ಈ ಸಂದರ್ಭದಲ್ಲಿ ಸ್ಥಳೀಯ ವ್ಯಕ್ತಿಗಳು ಗೂಂಡಗಳಂತೆ ವರ್ತನೆ ಮಾಡುತ್ತಿದ್ದಾರೆ, ತಾಯಿ ಜಾನಕಿಯವರು ಹಿರಿಯ ನಾಗರಿಕರಾಗಿದ್ದು ಅವರಿಗೆ ವೃಥಾ ಮಾನಸಿಕ ಹಿಂಸೆಯನ್ನು ನೀಡುತ್ತಿದ್ದಾರೆ. ಈ ಪ್ರಕರಣ ಈಗಾಗಲೇ ನ್ಯಾಯಾಲಯದಲ್ಲಿದ್ದು, ನ್ಯಾಯಾಲಯ ಈ ಜಾಗಕ್ಕೆ ಯಾರು ಪ್ರವೇಶಿಸದಂತೆ ತಡೆಯಾಜ್ಞೆ ನೀಡಿದೆ. ಇವರಿಗೆ ನ್ಯಾಯಾಲಯಕ್ಕೂ ಕನಿಷ್ಠ ಗೌರವ ಕೊಡಲು ಗೊತ್ತಿಲ್ಲವೇ, ಈ ಮುಂದೆ ನಾವು ಹೋರಾಟ ಮಾಡುತ್ತೇವೆ. ಅಲ್ಲದೆ ನಮ್ಮ ಜಾಗಕ್ಕೆ ಪ್ರವೇಶ ಮಾಡಿ ಯಾವ ಕೆಲಸ ಮಾಡಬೇಕಿದ್ದರೂ ಕಾನೂನು ಪ್ರಕಾರ ನೋಟಿಸು ನೀಡದೆ ಮಾಡುವಂತಿಲ್ಲ ಎಂದು ಅವರು ಹೇಳಿದ್ದಾರೆ.

ಅವರ ಜಾಗ ಎಂದು ದಾಖಲೆ ಇದ್ದರೆ ತೋರಿಸಲಿ-ಪರಮೇಶ್ವರ
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಪರಮೇಶ್ವರ ಅವರು, ಬಸ್ ತಂಗುದಾಣ ನಿರ್ಮಿಸಿರುವ ಸ್ಥಳವೇ ಬೇರೆ, ೯೪ಸಿಯಲ್ಲಿ ಮಂಜೂರಾದ ಜಾಗವೇ ಬೇರೆ, ಒಂದು ವೇಳೆ ರಸ್ತೆ ಬದಿಯಲ್ಲಿ ಶೆಡ್ ನಿರ್ಮಿಸಿರುವುದಕ್ಕೆ ೯೪ಸಿ ಯಡಿಯಲ್ಲಿ ಹಕ್ಕು ಪತ್ರ ನೀಡಲು ಸಾಧ್ಯವೇ, ಅಥಾವ ನೀಡಲಾಗಿದೆಯೇ ಎಂದು ಅಧಿಕಾರಿಗಳು ಸ್ವಷ್ಟಪಡಿಸಬೇಕು.೨೦೧೬ರಲ್ಲಿ ಅಲ್ಲಿ ನಾವು ಸಾರ್ವಜನಿಕರಿಗೆ ಉಪಯೋಗವಾಗಲು ಬಸ್ ತಂಗುದಾಣ ಶೆಡ್ ನಿರ್ಮಿಸಿ ಬಳಿಕ ಅಭಿವೃದ್ಧಿ ಪಡಿಸಿದ್ದೇವೆ. ಏನಿದ್ದರೂ ಅವರು ಆ ಬಸ್ ತಂಗುದಾಣ ಇದ್ದ ಜಾಗದ ದಾಖಲೆ ತೋರಿಸಿದರೆ ಅವರಿಗೆ ನಾವು ಬಿಟ್ಟು ಕೊಡಲು ಬದ್ದ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here