ಕೂಟ ಮಹಾಜಗತ್ತು ಪುತ್ತೂರು ಅಂಗಸಂಸ್ಥೆಯ ವಾರ್ಷಿಕ ಅಧಿವೇಶನ

0
  • ಯುವಕರನ್ನು ಹಳ್ಳಿಯಡೆಗೆ ಸ್ವಾಗತಿಸೋಣ – ಎಸ್.ವಿ.ರಮೇಶ ರಾವ್ ಮೈಸೂರು

ಪುತ್ತೂರು: ಒಂದು ಕಾಲಘಟ್ಟದಲ್ಲಿ ನಮ್ಮ ಯುವಕರನ್ನು ರಾಜಧಾನಿಯ ಬಸ್ಸನ್ನೇರಿಸಿ ಬೀಳ್ಕೊಟ್ಟೆವು. ಈಗ ಅವರನ್ನು ಹಳ್ಳಿಗೆ ಪ್ರೀತಿಯಿಂದ ಸ್ವಾಗತಿಸಬೇಕಾದ ದಿವಸಗಳು ಬಂದಿವೆ. ಎಲ್ಲರ ಹೊಟ್ಟೆಯನ್ನು ತಂಪುಮಾಡುವ ಕೃಷಿಯಲ್ಲಿ ತೊಡಗಿರುವ ಹಿರಿಯರಿಗೆ ವಯಸ್ಸಾಗಿದೆ. ಕೃಷಿ ಸಂಸ್ಕೃತಿಯನ್ನು ಯುವಕರು ಮುನ್ನಡೆಸಬೇಕಾಗಿದೆ ಎಂದು ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ವಿ.ರಮೇಶ ರಾವ್ ಮೈಸೂರು ಹೇಳಿದರು.

 

 


ಪುತ್ತೂರು ಕೊಂಬೆಟ್ಟಿನಲ್ಲಿ ನಡೆದ ಕೂಟ ಮಹಾಜಗತ್ತಿನ ಪುತ್ತೂರು ಅಂಗಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಹಳ್ಳಿಗೆ ಬಂದ ಯುವಕರು ಇಲ್ಲಿನ ಸಾಮಾಜಿಕ ಚಟುವಟಿಕೆಗಳಲ್ಲಿ ಬದ್ಧತೆಯಿಂದ ಭಾಗವಹಿಸಿದರೆ ಅನೇಕ ಸಂಘ-ಸಂಸ್ಥೆಗಳು ಪುಷ್ಟಿಯಾಗುವುದರಲ್ಲಿ ಸಂಶಯವಿಲ್ಲ ಎಂದರು. ಪುತ್ತೂರು ಅಂಗಸಂಸ್ಥೆಯ ಅಧ್ಯಕ್ಷ ನಾಗೇಶ ರಾವ್ ಎ. ಕೊಂಬೆಟ್ಟು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಕೇಂದ್ರ ಸಂಸ್ಥೆಯ ಉಪಾಧ್ಯಕ್ಷ ಇ.ಗೋಪಾಲಕೃಷ್ಣ ಹೇರಳೆ ಶುಭ ಹಾರೈಸಿ ಸಂಘಟನೆಯ ಆಶಯ ಹಾಗೂ ಅಗತ್ಯವನ್ನು ತಿಳಿಸಿದರು. ಸಂಘದ ಕಾರ್ಯದರ್ಶಿ ವೆಂಕಟ್ರಮಣ ರಾವ್ ಕೆ ವರದಿ ವಾಚಿಸಿದರು. ಕೋಶಾಧಿಕಾರಿ ಪ್ರೊ.ಕೆ.ಕೃಷ್ಣ ಕಾರಂತ ಲೆಕ್ಕಪತ್ರ ಮಂಡಿಸಿದರು. ಮಹಿಳಾ ವೇದಿಕೆಯ ವರದಿಯನ್ನು ಕಾರ್ಯದರ್ಶಿ ಸುಶೀಲಾ ಉಪಾಧ್ಯಾಯ ಮತ್ತು ಲಕ್ಷ್ಮೀನರಸಿಂಹ ಭಜನಾ ಮಂಡಳಿಯ ವರದಿಯನ್ನು ಸುಧಾ ಗೋಪಾಲ್ ಹೇರಳೆ ಮಂಡಿಸಿದರು. ಜಿ.ಎನ್.ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ನಾರಾಯಣ ಹೇರಳೆಯವರು ಸಹಕಾರಿ ಸಂಘದ ಚಟುವಟಿಕೆಗಳನ್ನು ಪ್ರಸ್ತುತ ಪಡಿಸಿದರು. ಅಂಗಸಂಸ್ಥೆಗೆ ಮುಂದಿನ ಮೂರು ವರುಷಗಳ ಅವಧಿಗೆ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

ಪ್ರತಿಭಾ ಪುರಸ್ಕಾರ, ಸನ್ಮಾನ:
ಶೈಕ್ಷಣಿಕವಾಗಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ಸ್ಪಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕೋಟ ಸಮಾಜದ ಹಿರಿಯರಾದ ಟಿ.ನಾರಾಯಣ ಮಯ್ಯ ಹಾಗೂ ಟಿ.ಶಾರದಾ ರಘುನಾಥಯ್ಯರವರನ್ನು ಮತ್ತು ಇತ್ತೀಚೆಗೆ ಬ್ರ್ಯಾಂಡ್ ಮಂಗಳೂರು ಪ್ರಶಸ್ತಿ ಪುರಸ್ಕೃತ ಲೇಖಕ, ಕಲಾವಿದ ನಾ. ಕಾರಂತ ಪೆರಾಜೆಯವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಉಪಸ್ಥಿತರಿದ್ದ ಅಂಗಸಂಸ್ಥೆಯ ಮಹಿಳಾ ವೇದಿಕೆಯ ಹಾಲಿ ಅಧ್ಯಕ್ಷೆ ರೇಖಾ ನಾರಾಯಣ ಹೇರಳೆಯವರು ನೂತನವಾಗಿ ಆಯ್ಕೆಯಾದ ಅಧ್ಯಕ್ಷೆ ಸುಶೀಲಾ ಉಪಾಧ್ಯಾಯರಿಗೆ ಪುಷ್ಪವನ್ನು ನೀಡುವುದರ ಮೂಲಕ ಸಾಂಕೇತಿಕವಾಗಿ ಅಧಿಕಾರ ಹಸ್ತಾಂತರಿಸಿದರು. ಗೀತಾ ರಾವ್ ವಾಲ್ತಾಜೆ, ವೀಣಾ ಅನಂತ ರಾವ್, ಸುಧಾ ನಾಗೇಶ ರಾವ್ ಪ್ರಾರ್ಥಿಸಿದರು. ಅಂಗಸಂಸ್ಥೆಯ ಸದಸ್ಯ ರಾಜೇಂದ್ರ ಪ್ರಸಾದ್ ಸ್ವಾಗತಿಸಿದರು. ಸದಸ್ಯ ಶಿವಪ್ರಸಾದ್ ಆರ್ಯಾಪು ವಂದಿಸಿದರು. ಅಂಕಣಗಾರ ನಾ. ಕಾರಂತ ಪೆರಾಜೆ ಕಾರ್ಯಕ್ರಮ ನಿರ್ವಹಿಸಿದರು. ಶ್ರೀಮತಿ ಸರೋಜ ರಾವ್, ಗೀತಾ ರಾಮಚಂದ್ರ ಕೆದಿಲ, ರಾಮಚಂದ್ರ ಕೆದಿಲ, ಸೂರ್ಯನಾರಾಯಣ ಮಯ್ಯ, ಅನಂತಕೃಷ್ಣ ರಾವ್ ಮತ್ತಿತರರು ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿದರು. ದಿನ ಪೂರ್ತಿ ಜರುಗಿದ ಕಲಾಪದಲ್ಲಿ ಸ್ಪರ್ಧೆಗಳು, ಅಂಗಸಂಸ್ಥೆಯ ಮಹಿಳಾ ವೇದಿಕೆಯ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದುವು. ವೇದಮೂರ್ತಿ ಕುಂಜಾರು ನರಸಿಂಹ ಮಯ್ಯ ಹಾಗೂ ವೇ.ಮೂ.ಸುಬ್ರಹ್ಯಣ್ಯ ಮಯ್ಯರ ಹಿರಿತನದಲ್ಲಿ ಶ್ರೀ ನರಸಿಂಹ ಹವನ ಮೊದಲಾದ ಧಾರ್ಮಿಕ ಕಾರ್ಯಗಳು ನಡೆಯಿತು.

LEAVE A REPLY

Please enter your comment!
Please enter your name here