ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕನ ಕೊಲೆ ಪ್ರಕರಣ ಜಿಲ್ಲಾಧಿಕಾರಿ ಬರುವಂತೆ ಆಸ್ಪತ್ರೆ ಬಳಿ ಪ್ರತಿಭಟನೆ

0

ಪುತ್ತೂರು: ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ಬಿಜೆಪಿ ಯುವ ನಾಯಕ, ಉದ್ಯಮಿ ಪ್ರವೀಣ್ ನೆಟ್ಟಾರು ಅವರ ಕೊಲೆ ಪ್ರಕರಣದ ಬಳಿಕದ ಬೆಳವಣಿಗೆಯಲ್ಲಿ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬರುವ ತನಕ ಮೃತದೇಹವನ್ನು ಕೊಂಡೊಯ್ಯುವುದಿಲ್ಲ ಎಂದು ಮೃತರ ಸಂಬಂಧಿಕರು,ಹಿತೈಷಿಗಳು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಸ್ಪತ್ರೆಯ ಬಳಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಮೃತದೇಹವನ್ನು ಪುತ್ತೂರಿನ ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಡಲಾಗಿದ್ದು ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿದಂತೆ ನೂರಾರು ಬಂದಿ ಆಸ್ಪತ್ರೆ ಬಳಿ ಜಮಾಯಿಸಿದ್ದಾರೆ.ಜಿಲ್ಲಾಧಿಕಾರಿಯವರೇ ಸ್ಥಳಕ್ಕೆ ಬರಬೇಕು, ಕೊಲೆಯಾದ ಪ್ರವೀಣ್ ಅವರ ಕುಟುಂಬಕ್ಕೆ ಸರಕಾರದಿಂದ ಪರಿಹಾರ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಸುಳ್ಯ, ಬೆಳ್ಳಾರೆ ಪೊಲೀಸರು ಸ್ಥಳದಲ್ಲಿದ್ದಾರೆ.ಸಹಾಯಕ ಆಯುಕ್ತ ಗಿರೀಶ್ ನಂದನ್ ಅವರು ಭೇಟಿ ನೀಡಲಿದ್ದಾರೆ ಎಂದು ಪ್ರತಿಭಟನಾನಿರತರಿಗೆ ಮಾಹಿತಿ ನೀಡಿದ ವೇಳೆ ಜಿಲ್ಲಾಧಿಕಾರಿಯವರೇ ಬರಬೇಕು ಎಂದು ಪಟ್ಟು ಹಿಡಿದಿದ್ದು ಆಸ್ಪತ್ರೆ ಎದುರು ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.ಬಜರಂಗದಳದ ಮುಖಂಡ ಮುರಳೀಕೃಷ್ಣ ಹಸಂತಡ್ಕ, ನಗರ ಮಂಡಲ ಬಿಜೆಪಿ ಅಧ್ಯಕ್ಷ ಪಿ.ಜಿ.ಜಗನ್ನಿವಾಸ್ ರಾವ್, ಯುವ ಮೋರ್ಚಾದ ಸಹಜ್ ರೈ ಬಳಜ್ಜ, ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದಾರೆ.
ಈ ಮಧ್ಯೆ ಮೃತರ ಪತ್ನಿ, ಮನೆಯವರನ್ನು ಆಸ್ಪತ್ರೆಯಿಂದ ಖಾಸಗಿ ಬೊಲೆರೋ ಜೀಪಲ್ಲಿ ಮನೆಗೆ ಕೊಂಡೊಯ್ಯುತ್ತಿದ್ದ ವೇಳೆ ಅವರಿಗೆ ಪೊಲೀಸ್ ರಕ್ಷಣೆ ಕೊಡುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದು ಬಳಿಕ ಪೊಲೀಸ್ ರಕ್ಷಣೆಯೊಂದಿಗೆ ಅವರನ್ನು ಮನೆಗೆ ಕಳುಹಿಸಿಕೊಡಲಾಯಿತು.

LEAVE A REPLY

Please enter your comment!
Please enter your name here