ಬಿಜೆಪಿ ಯುವನಾಯಕ‌ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ

0

  • ಹಂತಕರ ಪತ್ತೆಗೆ ಪೊಲೀಸರ 5 ತಂಡ ರಚನೆ
  • ಮುಖ್ಯಮಂತ್ರಿ ಸಹಿತ ಹಲವರಿಂದ ಕಠಿಣ ಕ್ರಮದ ಎಚ್ಚರಿಕೆ

ಪುತ್ತೂರು: ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್(34ವ)ರವರ ಬರ್ಬರ ಕೊಲೆ ಪ್ರಕರಣದ ಹಂತಕರ ಬಂಧನಕ್ಕಾಗಿ ಪೊಲೀಸರ ಐದು ತಂಡ ರಚಿಸಲಾಗಿದೆ.

ಸುಳ್ಯ ತಾಲೂಕು ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರೂ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಬಿಜೆಪಿ ಯುವಮೋರ್ಛಾದ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದ ಯುವ ಉದ್ಯಮಿ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.‌

ಜುಲೈ 26ರಂದು ರಾತ್ರಿ 8.30ರ ವೇಳೆಗೆ ಪ್ರವೀಣ್‌ರವರು ಬೆಳ್ಳಾರೆ ಮೇಲಿನಪೇಟೆ ಮಾಸ್ತಿಕಟ್ಟೆಯಲ್ಲಿರುವ ತನ್ನ ಅಕ್ಷಯ ಚಿಕನ್ ಸೆಂಟರಿನಲ್ಲಿ ಕುಳಿತುಕೊಂಡಿದ್ದ ವೇಳೆ ಕೆ.ಎಲ್. ನಂಬರಿನ ಸ್ಪ್ಲೆಂಡರ್ ಬೈಕ್‌ನಲ್ಲಿ ಮುಸುಕು ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಪ್ರವೀಣರವರಿಗೆ ಬರ್ಬರವಾಗಿ ಕಡಿದು ಪರಾರಿಯಾಗಿದ್ದರು. ಬೆಳ್ಳಾರೆ ನೆಟ್ಟಾರಿನ ಶೇಖರ ಪೂಜಾರಿ ಮತ್ತು ರತ್ನಾವತಿ ದಂಪತಿಯ ಪುತ್ರರಾದ ಪ್ರವೀಣ್‌ರವರು ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರಲ್ಲದೆ ಸಮಾಜಮುಖಿ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದರು.‌

ಈಶ್ವರಮಂಗಲ ಮುಂಡ್ಯ ನಿವಾಸಿ ಬಾಲಕೃಷ್ಣ ಪೂಜಾರಿ ಮತ್ತು ಶಶಿಕಲಾ ದಂಪತಿಯ ಪುತ್ರಿ, ಪ್ರಸ್ತುತ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಗ್ರಂಥಪಾಲಕಿಯಾಗಿರುವ ನೂತನಾ ಅವರೊಂದಿಗೆ 2019ರ ಜನವರಿ 25ರಂದು ಮದುವೆಯಾಗಿದ್ದ ಪ್ರವೀಣ್ ಅವರು ಕೆಲ ಸಮಯದ ಹಿಂದೆಯಷ್ಟೇ ಬೆಳ್ಳಾರೆಯಲ್ಲಿ‌ ಕೋಳಿ ಅಂಗಡಿ ಆರಂಭಿಸಿದ್ದರು.

ಪ್ರವೀಣ್ ನೆಟ್ಟಾರ್ ಅವರ‌ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವುದಾಗಿ ತಿಳಿಸಿರುವ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಸಚಿವ ಸುನೀಲ್ ಕುಮಾರ್ ಮತ್ತಿತರ ಪ್ರಮುಖರು ಕೊಲೆಗಡುಕರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ. ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಕು. ಶೋಭಾ ಕರಂದ್ಲಾಜೆರವರು ಕೊಲೆ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ‌ ಒಪ್ಪಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾರವರಿಗೆ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ಎಲ್ಲೆಡೆ ಖಂಡನೆ, ಆಕ್ರೋಶ
ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದ ಮತ್ತು ಈ ಹಿಂದೆ ಪ್ರತಿಷ್ಠಿತ ಗೆಜ್ಜೆಗಿರಿ ಕ್ಷೇತ್ರದ ಬ್ರಹ್ಮಕಲಶೋತ್ಸವ ನಡೆದ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಪ್ರಸಾದ ಸಮಿತಿಯ ಸಂಚಾಲಕರಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ಪ್ರವೀಣ್ ನೆಟ್ಟಾರ್ ಅವರ ಕೊಲೆ ಪ್ರಕರಣ ಎಲ್ಲೆಡೆ ದಿಗ್ಬ್ರಮೆ ಮೂಡಿಸಿದೆ. ಕೊಲೆ ಕೃತ್ಯಕ್ಕೆ ಎಲ್ಲೆಡೆ ಖಂಡನೆ, ಆಕ್ರೋಶ ವ್ಯಕ್ತವಾಗುತ್ತಿದೆ. ರಾಜ್ಯ ಮಟ್ಟದ ಟಿ.ವಿ.ಚಾನೆಲ್ ಗಳಲ್ಲಿಯೂ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸರಕಾರ ಮತ್ತು‌ ಪಕ್ಷದ ನಾಯಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಯುವಕನ‌ ಬರ್ಬರ ಹತ್ಯೆಯಾದರೂ ಜನಪ್ರತಿನಿಧಿಗಳು ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಹಿಂದೂ ಸಂಘಟನೆಯ ಕಾರ್ಯಕರ್ತರಿಂದ ಆಕ್ರೋಶ ವ್ಯಕ್ತವಾಗುತ್ತಿದೆ.‌ ದ.ಕ.‌ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ರವರ ಸೂಚನೆಯಂತೆ ಸಹಾಯಕ ಆಯುಕ್ತ ಗಿರೀಶ್ ನಂದನ್, ಎಸ್.ಪಿ. ಹೃಷಿಕೇಶ್ ಸೋನಾವಣೆ, ಅಡಿಷನಲ್ ಎಸ್ಪಿ ಕುಮಾರಚಂದ್ರಯ್ಯ, ಡಿವೈಎಸ್ಪಿ ಡಾ.ಗಾನಾ ಪಿ. ಕುಮಾರ್ ನೇತೃತ್ವದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಕ್ರಮ ಕೈಗೊಳ್ಳಲಾಗಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಮುನ್ನೆಚ್ಚರಿಕೆ ವಹಿಸಲಾಗಿದೆ. ಪುತ್ತೂರಿನಿಂದ ಬೆಳ್ಳಾರೆಗೆ ಪ್ರವೀಣ್ ಮೃತದೇಹದ ಮೆರವಣಿಗೆ ನಡೆಸಲಾಗುತ್ತಿದೆ. ಬೆಳ್ಳಾರೆಯ ನೆಟ್ಟಾರಿನಲ್ಲಿರುವ ಪ್ರವೀಣರವರ ಮನೆಯ ಹಿಂಭಾಗದಲ್ಲಿ ಅಂತ್ಯ ಸಂಸ್ಕಾರ ನಡೆಸಲು ಸಿದ್ಧತೆ ನಡೆಸಲಾಗಿದೆ. ಕೊಲೆ ಕೃತ್ಯ ಖಂಡಿಸಿ ಸ್ವಯಂಪ್ರೇರಿತ ಬಂದ್ ಗೆ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಕರೆ ನೀಡಲಾಗಿದ್ದು ಬೊಳುವಾರಿನಲ್ಲಿ‌ ಪುತ್ತೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಗೆ ಕಲ್ಲು ತೂರಾಟ ನಡೆಸಿರುವುದನ್ನು ಹೊರತುಪಡಿಸಿದರೆ ಬೇರೆ ಅಹಿತಕರ ಘಟನೆಗಳು ನಡೆದಿಲ್ಲ. ಪ್ರವೀಣರವರ ಕೊಲೆ ಕೃತ್ಯ ಯಾವ ಕಾರಣಕ್ಕಾಗಿ ನಡೆಯಿತು ಎಂಬುದು ಇನ್ನೂ ಖಚಿತವಾಗಿಲ್ಲವಾದರೂ ಕೆಲವು ದಿನಗಳ ಹಿಂದೆಯಷ್ಟೇ ಬೆಳ್ಳಾರೆಯಲ್ಲಿ ನಡೆದ ಮಸೂದ್ ಎಂಬವರ ಕೊಲೆಗೆ ಪ್ರತೀಕಾರವಾಗಿ‌ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಪ್ರವೀಣರವರನ್ನು ಟಾರ್ಗೆಟ್ ಮಾಡಲಾಗಿರಬಹುದು ಎಂಬ ಬಲವಾದ ಸಂಶಯದಲ್ಲಿ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿದೆ.

LEAVE A REPLY

Please enter your comment!
Please enter your name here