ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಪುತ್ತೂರು ಪೇಟೆ, ಗ್ರಾಮೀಣ ಭಾಗದಲ್ಲಿ ಸ್ವಯಂ ಪ್ರೇರಿತ ಬಂದ್‌ಗೆ ಮನವಿ | ಪೊಲೀಸ್ ಬಿಗಿ ಬಂದೋಬಸ್ತ್

0

ಪುತ್ತೂರು : ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಕೊಟ್ಟಿರುವ ಸ್ವಯಂಪ್ರೇರಿತ ಬಂದ್ ಕರೆಗೆ ಪುತ್ತೂರು ಪೇಟೆ ಭಾಗಶಃ ಬಂದ್‌ ಆಗಿದ್ದು, ಗ್ರಾಮೀಣ ಭಾಗದಲ್ಲಿ ಹಿಂದೂ ಸಮುದಾಯದ ವ್ಯಾಪಾರಸ್ಥರು ಅಂಗಡಿ, ವ್ಯಾಪಾರ ಮಳಿಗೆಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಿದ್ದಾರೆ. ಆಸ್ಪತ್ರೆಗಳು, ಪತ್ರಿಕಾ ಕಛೇರಿಗಳು, ಮೆಡಿಕಲ್‌ಗಳು ಹಾಗೂ ಇತರ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿದೆ.

ವಿಟ್ಲದೆಲ್ಲೆಡೆ ಬಿಗು ಪೊಲೀಸ್ ಬಂದೋಬಸ್ತ್ ಸಂಘ ಪರಿವಾರ, ಬಿಜೆಪಿ ಕಾರ್ಯಕರ್ತರಿಂದ ಅಂಗಡಿ ಮುಚ್ಚುವಂತೆ ಮನವಿ:

ವಿಟ್ಲಪೇಟೆಯಲ್ಲಿನ ಹಿಂದೂ ಸಮುದಾಯದ ಅಂಗಡಿಗಳಿಗೆ ತೆರಳಿ ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು. ಅದರಂತೆ ವಿಟ್ಲಪೇಟೆಯಲ್ಲಿ ಕೆಲವೊಂದು ಅಂಗಡಿಗಳು ಮುಚ್ಚಲ್ಪಟ್ಟಿದ್ದು, ಸ್ವಯಂಪ್ರೇರಿತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುನ್ನೆಚ್ಚರಿಕೆಯಾಗಿ ಕೆಲವೊಂದು ಶಾಲೆಗಳಿಗೆ ರಜೆ ನೀಡಲಾಗಿದೆ. ಆದರೆ ಬಸ್ಸು, ಆಟೋ ರಿಕ್ಷಾಗಳು ಈ ವರೆಗೆ ಎಂದಿನಂತೆ ಓಡಾಟ ನಡೆಸಿವೆ. ಜನಸಂಚಾರ ವಿರಳವಾಗುದ್ದು, ವಿಟ್ಲ ಠಾಣಾ ಇನ್ಸ್‌ಪೆಕ್ಟರ್ ಹೆಚ್.ಈ. ನಾಗರಾಜ್ ರವರ ನೇತೃತ್ವದ ಪೊಲೀಸರ ತಂಡದಿಂದ ಎಲ್ಲೆಡೆ ಬಿಗು ಬಂದೋಬಸ್ತು ಏರ್ಪಡಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದೆ.

ಗ್ರಾಮೀಣ ಭಾಗದ ಬೆಟ್ಟಂಪಾಡಿ, ಪಾಣಾಜೆಯಲ್ಲಿ ಅಂಗಡಿ ಮುಂಗಟ್ಟು ಸ್ವಯಂಪ್ರೇರಿತ ಬಂದ್:

ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಹಿಂದು ಸಂಘಟನೆಗಳು ಕೊಟ್ಟಿರುವ ಸ್ವಯಂಪ್ರೇರಿತ ಬಂದ್ ಕರೆಗೆ ಗ್ರಾಮೀಣ ಪ್ರದೇಶವಾದ ಬೆಟ್ಟಂಪಾಡಿ, ಪಾಣಾಜೆಯಲ್ಲಿ ಅಂಗಡಿಗಳು ಮುಚ್ಚಿದ್ದು ಬಹುತೇಕ ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದಲೇ ತೆರೆದಿರಲಿಲ್ಲ. ಹಾಗಾಗಿ ಜನಸಂಚಾರವೂ ವಿರಳವಾಗಿದೆ. ರೆಂಜ ಶ್ರೀರಾಮನಗರ, ರೆಂಜ ಸರ್ಕಲ್, ಬೆಟ್ಟಂಪಾಡಿಯವರೆಗೂ ಹೆಚ್ಚಿನ ಎಲ್ಲಾ ಅಂಗಡಿಗಳು ಮುಚ್ಚಿದ್ದು, ರೆಂಜ ಮೇಲಿನಪೇಟೆ ಮಸೀದಿ ಬಳಿಯ ಅಂಗಡಿ ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು, ಜನರು ಮತ್ತು ವಾಹನಗಳ ಸಂಚಾರ ಎಂದಿನಂತೆ ಕಂಡುಬಂದಿದೆ.

ಪಾಣಾಜೆಯಲ್ಲಿಯೂ ಕೆಲವು ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಆದರೆ ಇಲ್ಲಿ ಜನಸಂಚಾರ ತೀರಾ ಕಡಿಮೆ ಕಂಡುಬಂದಿದೆ. ಉಭಯ ಗ್ರಾಮಗಳಲ್ಲಿ ಶಾಲಾ ಕಾಲೇಜುಗಳು, ಸರಕಾರಿ ಕಚೇರಿಗಳು, ವೈದ್ಯಕೀಯ ಸೇವಾ ಕೇಂದ್ರಗಳು ಎಂದಿನಂತೆ ತೆರೆದು ಕಾರ್ಯಾಚರಿಸುತ್ತಿವೆ.

ಉಪ್ಪಿನಂಗಡಿ: ಹಿಂದೂ ವರ್ತಕರ ಅಂಗಡಿಗಳು ಬಂದ್


ಉಪ್ಪಿನಂಗಡಿ: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿರುವುದನ್ನು ಖಂಡಿಸಿ ಹಿಂದೂಪರ ಸಂಘಟನೆಗಳ ಸ್ವಯಂಪ್ರೇರಿತ ಬಂದ್ ಕರೆಗೆ ಉಪ್ಪಿನಂಗಡಿಯಲ್ಲಿ ಹಿಂದೂ ವರ್ತಕರು ತಮ್ಮ ಅಂಗಡಿ – ಮುಂಗಟ್ಟುಗಳನ್ನೆಲ್ಲಾ ಬಂದ್ ಮಾಡಿದ್ದಾರೆ. ಹಿಂದೂ ವರ್ತಕರ ಅಂಗಡಿಗಳು ಬಂದ್ ಆಗಿರುವುದು ಬಿಟ್ಟರೆ, ಖಾಸಗಿ ವಾಹನ ಸಂಚಾರ, ಸಾರ್ವಜನಿಕರ ಓಡಾಟ ಎಂದಿನಂತಿವೆ. ಅಲ್ಲದೆ, ಕೆಎಸ್ಸಾರ್ಟಿಸಿ, ಖಾಸಗಿ ಬಸ್, ಜೀಪು, ರಿಕ್ಷಾ ಸಂಚಾರವೂ ಅಬಾಧಿತವಾಗಿವೆ.

ಕಡಬ ಪೇಟೆ ಬಹುತೇಕ ಸ್ವಯಂಪ್ರೇರಿತ ಬಂದ್

ಕಡಬ: ಕಡಬ ಪೇಟೆಯಲ್ಲಿ ಬಹುತೇಕ ಅಂಗಡಿ, ವ್ಯವಹಾರ ಮಳೆಗೆಗಳು ಸ್ವಯಂಪ್ರೇರಿತ ಬಂದ್ ಆಗಿದ್ದು, ಮುಸ್ಲಿಂ ಸಮುದಾಯದ ಅಂಗಡಿಗಳು ತೆರೆದಿದ್ದು, ಅವರು ಬಂದ್ ನಡೆಸುವಂತೆ ಹಿಂದೂ ಸಂಘಟನೆ ಹಾಗೂ ಬಿಜೆಪಿ ಪ್ರಮುಖರು ಅವರ ಅಂಗಡಿಗೆ ತೆರಳಿ ಮನವಿ ಮಾಡಿದ್ದಾರೆ. ಈಗಾಗಲೇ ಹೆಚ್ಚಿನ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿದೆ. ಅಹಿತಕರ ಘಟನೆ ನಡೆಯದಂತೆ ಎಸ್.ಐ.ಆಂಜನೇಯ ರೆಡ್ಡಿ ಹಾಗೂ ಸಿಬ್ಬಂದಿಗಳು ಬಂದೋಬಸ್ತ್ ಮಾಡಿದ್ದಾರೆ.

ಇಲ್ಲಿನ ಸೈಂಟ್ ಆನ್ಸ್ ಖಾಸಗಿ ಶಾಲೆಗೆ ರಜೆಯನ್ನು ಘೋಷಿಸಲಾಗಿದ್ದು, ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಶಾಲಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ

LEAVE A REPLY

Please enter your comment!
Please enter your name here