ನನ್ನ ಗಂಡನಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು-ನೂತನಾ

0

ಪುತ್ತೂರು: ನನ್ನ ಗಂಡ ಸಮಾಜಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಅವರಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಆರೋಪಿಗಳ ವಿರುದ್ಧ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವ ವೈದ್ಯರಿಗೂ ನನ್ನ ಗಂಡನನ್ನು ಉಳಿಸಲು ಆಗಲಿಲ್ಲ ಎಂದು ದುಷ್ಕರ್ಮಿಗಳಿಂದ ಕೊಲೆಯಾದ ಬಿಜೆಪಿಯ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಪತ್ನಿ ನೂತನಾ ಹೇಳಿದ್ದಾರೆ.

ನೂತನಾ ಮತ್ತು ಪ್ರವೀಣರ ಇತ್ತೀಚಿಗಿನ ಭಾವಚಿತ್ರ

ನನ್ನ ಗಂಡನಂತೆಯೇ ಸಮಾಜಕ್ಕಾಗಿ ಶ್ರಮಿಸುವವರು ಎಷ್ಟೋ ಜನರಿದ್ದಾರೆ. ಅವರಿಗೆ ಆದ ಅನ್ಯಾಯ ಇನ್ಯಾರಿಗೂ ಆಗುವುದು ಬೇಡ. ನನ್ನ ಗಂಡನನ್ನು ಇನ್ಯಾರೂ ವಾಪಸ್ ಕೊಡುವುದಿಲ್ಲ. ಆದರೆ ಮುಂದೆ ಯಾರಿಗೂ ಹೀಗೆ ಆಗದಂತೆ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಪ್ರವೀಣ್ ಅವರ ಬೆಳ್ಳಾರೆ ನೆಟ್ಟಾರಿನ ಮನೆಯಲ್ಲಿ ಮಾಧ್ಯಮದ ಜತೆ ಮಾತನಾಡಿ ನೂತನಾ ತನ್ನ ನೋವು ಹಂಚಿಕೊಂಡರು. ಮೂರು ವರ್ಷಗಳ ಹಿಂದೆಯಷ್ಟೇ ಪ್ರವೀಣ್ ಅವರನ್ನು ಮದುವೆಯಾಗಿದ್ದ ಈಶ್ವರಮಂಗಲ ಸಮೀಪದ ಮುಂಡ್ಯ ನಿವಾಸಿ ನೂತನಾರವರು ನನ್ನ ಪತಿ ಹಗಲು ರಾತ್ರಿ ಸಮಾಜಕ್ಕಾಗಿ ದುಡಿಯುತ್ತಿದ್ದರು. ಎಷ್ಟೊತ್ತಿಗೆ ಯಾರು ಕರೆದರೂ ಹೋಗುತ್ತಿದ್ದರು. ನಾನು ಬೇಡ ಅಂದ್ರೂ, ಅವರ ಅಪ್ಪ, ಅಮ್ಮ ಬೇಡ ಅಂದ್ರೂ ಕೇಳುತ್ತಿರಲಿಲ್ಲ. ಇವತ್ತು ಅವರನ್ನು ಕಳೆದುಕೊಂಡಿದ್ದೇನೆ. ನನಗೆ ಅವರನ್ನು ಕೊಡುವವರು ಯಾರು. ಅವರು ಸಮಾಜಕ್ಕೆ ಏನೆಲ್ಲಾ ಮಾಡಿದರು. ಆದರೆ ಅವರಿಗೆ ಸಮಾಜ ಏನೂ ಮಾಡಲಿಲ್ಲ. ನನ್ನ ಗಂಡನ ಜೀವ ಉಳಿಸಲು ಯಾರಿಂದಲೂ ಆಗಲಿಲ್ಲ ಎಂದು ಕಣ್ಣೀರಿಟ್ಟರು.

ನನ್ನ ಪತಿಯಂತೆಯೇ ಎಷ್ಟೋ ಮಹಿಳೆಯರ ಗಂಡಂದಿರು ಸಮಾಜಕ್ಕಾಗಿ ದುಡಿಯುತ್ತಿದ್ದಾರೆ. ಅವರು ಒಬ್ಬರಿಗೆ ಮಗನಾಗಿರುತ್ತಾರೆ, ಒಬ್ಬರ ಅಪ್ಪನಾಗಿರುತ್ತಾರೆ. ನನ್ನ ಗಂಡನಿಗೆ ಆದ ರೀತಿ ಯಾರಿಗೂ ಆಗಬಾರದು. ಎಷ್ಟೋ ಜನ ಪಾಪದವರು ಸಮಾಜ ಸಮಾಜ ಎಂದು ದುಡಿಯುತ್ತಿದ್ದಾರೆ. ಅವರಿಗೆ ಅನ್ಯಾಯ ಆಗುವುದು ಬೇಡ. ಸರ್ಕಾರ ಹಾಗೆ ಏನಾದರೂ ಮಾಡಬೇಕು ಎಂದು ಅವರು ಕಣ್ಣೀರಿಡುತ್ತಲೇ ಒತ್ತಾಯಿಸಿದರು.

LEAVE A REPLY

Please enter your comment!
Please enter your name here