ಹತ್ಯೆಗೀಡಾದ ಬಿಜೆಪಿ ಯುವನಾಯಕ‌ ಪ್ರವೀಣ್ ನೆಟ್ಟಾರ್ ಕುಟುಂಬಕ್ಕೆ ಒಂದು ಲಕ್ಷ ರೂ ನೆರವು | ಕೋಡಿಂಬಾಡಿ ಅಶೋಕ್ ಕುಮಾರ್ ರೈ ಘೋಷಣೆ

0

ಪುತ್ತೂರು: ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್ ನೆಟ್ಟಾರ್(34ವ)ರವರ ಮನೆಯವರಿಗೆ ವೈಯುಕ್ತಿಕ ನೆಲೆಯಲ್ಲಿ ಒಂದು ಲಕ್ಷ ರೂಪಾಯಿ ನೆರವು ನೀಡಲಾಗುವುದು ಎಂದು ಕೋಡಿಂಬಾಡಿ ರೈ ಎಸ್ಟೇಟ್ ಮಾಲಕ ಅಶೋಕ್ ಕುಮಾರ್ ರೈ ಘೋಷಿಸಿದ್ದಾರೆ.


ಸುಳ್ಯ ತಾಲೂಕು ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರೂ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಬಿಜೆಪಿ ಯುವಮೋರ್ಛಾದ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದ ಯುವ ಉದ್ಯಮಿ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯವಾಗಿದೆ. ಈ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆದು ಹಂತಕರನ್ನು ಕೂಡಲೇ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೊಳಪಡಿಸಬೇಕಿದೆ ಎಂದು ಪ್ರತಿಕ್ರಿಯೆ ನೀಡಿರುವ ಕೋಡಿಂಬಾಡಿಯ ಶ್ರೀ ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರೂ, ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕರೂ ಆಗಿರುವ ಉದ್ಯಮಿ ಅಶೋಕ್ ಕುಮಾರ್ ರೈಯವರು ಪ್ರವೀಣ್ ನೆಟ್ಟಾರುರವರ ಮನೆಯವರಿಗೆ ಸಾಂತ್ವನ ಹೇಳುವುದರ ಜತೆಗೆ ಅವರಿಗೆ ನೆರವು ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕೂಡಲೇ ಪ್ರವೀಣ್ ಅವರ ಪತ್ನಿಗೆ ಒಂದು ಲಕ್ಷ ರೂಪಾಯಿ ನೆರವು ನೀಡುತ್ತೇನೆ. ಮುಂದೆ ಅವರಿಗೆ ಬೇಕಾದ ನೆರವು ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಪ್ರವೀಣ್ ನೆಟ್ಟಾರು ಅವರ ಕುಟುಂಬಕ್ಕೆ ನೆರವು ನೀಡುವಂತೆ ಹಿಂದೂ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಒತ್ತಾಯಿಸಿದ್ದರು. ಆದರೆ, ಸರಕಾರವಾಗಲೀ, ಜನಪ್ರತಿನಿಧಿಗಳಾಗಲೀ ಇದುವರೆಗೆ ನೆರವು ಘೋಷಿಸಿಲ್ಲ.‌ ಈ ನಿಟ್ಟಿನಲ್ಲಿ ಪ್ರವೀಣ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಆರಂಭವಾಗಿದೆ. ಅಶೋಕ್ ರೈಯವರು ತಕ್ಷಣ ಸ್ಪಂದಿಸಿ ನೆರವು ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here