ಪುತ್ತೂರು ಪತ್ರಕರ್ತರ ಸಂಘದ ಚುನಾವಣೆಗೆ ಬಿಗ್ ಟ್ವಿಸ್ಟ್

0

ಅನಧಿಕೃತವಾಗಿ ಅರ್ಜಿ ಸ್ವೀಕರಿಸಿದ್ದ ಸಂಶುದ್ದೀನ್ ಸಂಪ್ಯಗೆ ತಿರುಗೇಟು ನೀಡಿದ ಶ್ರವಣ್

ಪುತ್ತೂರು: ಆಗಸ್ಟ್ 6ರಂದು ನಡೆಸಲು ಉದ್ದೇಶಿಸಲಾಗಿದ್ದ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಚುನಾವಣಾಧಿಕಾರಿ ಸುಧಾಕರ ಪಡೀಲ್ ಅವರು ರದ್ದುಗೊಳಿಸಿದ್ದರೂ ಅದನ್ನು ಉಲ್ಲಂಸಿ ಪತ್ರಕರ್ತರ ಸಂಘದ ಸದಸ್ಯ ಸಂಶುದ್ದೀನ್ ಸಂಪ್ಯರವರು ಆರು ಮಂದಿಯಿಂದ ಅರ್ಜಿ ಸ್ವೀಕರಿಸಿ ಚುನಾವಣೆಗೆ ಕಣ ಸಿದ್ಧಪಡಿಸಿದ್ದ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ.

ಈ ಮೂಲಕ ಪುತ್ತೂರಿನ ಸರಕಾರಿ ಸಾರ್ವಜನಿಕ ಆಸ್ಪತ್ರೆ ಬಳಿಯ ಸರಕಾರಿ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ‘ಪತ್ರಿಕಾ ಭವನ’ದಲ್ಲಿ ನಡೆಯುತ್ತಿರುವ ಹೈಡ್ರಾಮ ಮುಂದುವರಿಯುತ್ತಲೇ ಇದೆ. ಹೇಗಾದರೂ ಮಾಡಿ ಪತ್ರಕರ್ತರ ಸಂಘದ ಅಧಿಕಾರ ಹಿಡಿಯಲೇ ಬೇಕು ಎಂದು ಪಣತೊಟ್ಟಿದ್ದ ಸಂಶುದ್ದೀನ್ ಸಂಪ್ಯ ಮತ್ತು ಅನೀಶ್ ಕುಮಾರ್ ತಂಡಕ್ಕೆ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳರವರು ’ತಿರುಗೇಟು’ ನೀಡಿರುವುದು ಸಂಘದೊಳಗಿನ ಹೊಸ ವಿದ್ಯಮಾನವಾಗಿದೆ. ಈ ಮಧ್ಯೆ ಚುನಾವಣೆ ರದ್ದು ಪಡಿಸಲು ಚುನಾವಣಾಧಿಕಾರಿ ಅಥವಾ ಪತ್ರಕರ್ತರ ಸಂಘದ ಅಧ್ಯಕ್ಷರಿಗೆ ಅವಕಾಶ ಇಲ್ಲ, ಆದ್ದರಿಂದ ಯಥಾ ರೀತಿಯಲ್ಲಿ ಪತ್ರಕರ್ತರ ಸಂಘದ ಚುನಾವಣೆ ನಡೆಸಲು ಅವಕಾಶ ನೀಡಬೇಕು ಸಂಶುದ್ದೀನ್ ಸ್ವೀಕರಿಸಿದ ಅರ್ಜಿಗಳನ್ನು ಪರಿಗಣಿಸಿ ಸಂಘಕ್ಕೆ ಪದಾಧಿಕಾರಿಗಳನ್ನು ಘೋಷಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಲು ಸಿದ್ಧವಾಗಿದ್ದ ಮೇಘಾ ಪಾಲೆತ್ತಾಡಿ ಮತ್ತು ಸುಧಾಕರ್ ಸುವರ್ಣರವರ ಅನೀಶ್ ತಂಡದ ಪ್ರಯತ್ನಕ್ಕೆ ಬಹುತೇಕ ಹಿನ್ನಡೆಯಾಗಿದೆ. ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರುರವರ ಮೂಲಕ ಶ್ರವಣ್ ಕುಮಾರ್ ನಾಳರವರು ನ್ಯಾಯದ ’ದಾಳ’ ಉರುಳಿಸಿರುವುದು ಇದಕ್ಕೆ ಕಾರಣವಾಗಿದೆ. ಈ ಎಲ್ಲಾ ಬೆಳವಣಿಗೆಗಳಲ್ಲಿ ಶ್ರಾವಣ ಮಾಸ ಆರಂಭದ ವೇಳೆ ಶ್ರವಣ್ ಕುಮಾರ್ ಮತ್ತೆ ಕಿಂಗ್ ಅಥವಾ ಕಿಂಗ್ ಮೇಕರ್ ಆಗುವ ಲಕ್ಷಣ ಕಾಣಿಸುತ್ತಿದೆ.

ಪತ್ರಕರ್ತರ ಪಟ್ಟಿ ಸಿದ್ಧ: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದೊಂದಿಗೆ ಸಂಯೋಜಿಸಲ್ಪಟ್ಟಿರುವ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಗಾಗಿ ಆಗಸ್ಟ್ 6ರಂದು ಪತ್ರಿಕಾ ಭವನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದ ಚುನಾವಣಾ ಪ್ರಕ್ರಿಯೆಯನ್ನು ಸಂಘದ ಸದಸ್ಯರ ಪ್ರಬಲ ಆಕ್ಷೇಪಣೆಯ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಸುಧಾಕರ ಪಡೀಲ್‌ರವರು ಮುಂದೂಡಿದ್ದರೂ ಪತ್ರಕರ್ತರ ಸಂಘದಿಂದ ಉಚ್ಚಾಟಿಸಲ್ಪಟ್ಟಿದ್ದ ಅನೀಶ್ ಕುಮಾರ್ ಮತ್ತು ಆತನ ಕಾರ್ಯ ಚಟುವಟಿಕೆಗಳಿಗೆ ಸದಾ ಬೆಂಬಲ ನೀಡುತ್ತಿರುವ ಮತ್ತು ಆತನಿಂದ ಪ್ರಯೋಜನ ಪಡೆಯುತ್ತಿರುವ ತಂಡದವರು ಪತ್ರಕರ್ತರ ಸಂಘವನ್ನು ವಶಕ್ಕೆ ಪಡೆಯಲು ಹುನ್ನಾರ ನಡೆಸಿರುವ ಘಟನೆಗೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿದೆ. ಸರಿಯಾದ ಮಾರ್ಗಸೂಚಿಯಂತೆ ಚುನಾವಣಾ ಪ್ರಕ್ರಿಯೆ ನಡೆಯದೇ ಇರುವುದರಿಂದ ಚುನಾವಣೆ ನಡೆಸುವುದಕ್ಕೆ ತಡೆ ನೀಡಬೇಕು ಎಂದು ಸಂಘದ ಸದಸ್ಯರಾದ ಉದಯ ಕುಮಾರ್ ಯು.ಎಲ್, ದೀಪಕ್ ಉಬಾರ್ ಮತ್ತು ನಝೀರ್ ಕೊಯಿಲರವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ನಾಮಪತ್ರ ಸ್ವೀಕಾರ ಮುಂತಾದ ಪ್ರಕ್ರಿಯೆಯನ್ನು ಚುನಾವಣಾಽಕಾರಿ ಸುಧಾಕರ ಪಡೀಲ್‌ರವರು ರದ್ದುಗೊಳಿಸಿದ್ದರೂ ಪತ್ರಕರ್ತರ ಸಂಘದ ಸದಸ್ಯ ಸಂಶುದ್ದೀನ್ ಸಂಪ್ಯರವರು ಅನಽಕೃತವಾಗಿ ಆರು ಮಂದಿಯಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಸ್ವೀಕರಿಸಿದ್ದಾಗ ಇನ್ನೇನು ಚುನಾವಣಾ ಪ್ರಕ್ರಿಯೆ ಅವಿರೋಧವಾಗಿ ಆಯ್ಕೆಯಾಗುತ್ತದೆ, ಆ ಮೂಲಕ ಪತ್ರಿಕಾ ಭವನ ದುರುಪಯೋಗ ಪಡಿಸಿಕೊಳ್ಳುತ್ತಿರುವ ಅನೀಶ್ ಕುಮಾರ್ ನೇತೃತ್ವದ ತಂಡ ಅಧಿಕಾರಕ್ಕೆ ಬರುತ್ತದೆ ಎಂದು ಹೇಳಲಾಗುತ್ತಿತ್ತು. ಚುನಾವಣಾಽಕಾರಿಯವರು ಚುನಾವಣೆ ಮುಂದೂಡಿದ್ದರೂ ನಾವು ಚುನಾವಣೆ ನಡೆಸುತ್ತೇವೆ, ಆಗಸ್ಟ್ 6ರಂದು ಫಲಿತಾಂಶ ಘೋಷಿಸುತ್ತೇವೆ. ಆಗ ಹೈಡ್ರಾಮ ನೋಡಿ ಎಂದು ಹೇಳುತ್ತಿದ್ದವರ ಲೆಕ್ಕಾಚಾರ ಇದೀಗ ಬುಡಮೇಲು ಆಗುವಂತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದಿರುವ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಪತ್ರಕರ್ತರನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಸೇರ್ಪಡೆ ಮಾಡಲಾಗಿದೆ ಮತ್ತು ಸೇರ್ಪಡೆಗೊಂಡಿರುವ ಈ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಿ ಚುನಾವಣಾ ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ಅಧ್ಯಕ್ಷ ಶ್ರವಣ್ ಕುಮಾರ್ ಘೋಷಿಸಿರುವುದು ಅನಽಕೃತ ವ್ಯವಹಾರ ನಡೆಸುತ್ತಿದ್ದವರಿಗೆ ಹಿನ್ನಡೆಯಾಗಲು ಕಾರಣವಾಗಿದೆ.

ಹೊಸ ಪಟ್ಟಿ ಸಿದ್ಧ-ಕೆಲವರಲ್ಲಿ ತಳಮಳ : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಈಗಾಗಲೇ ಸದಸ್ಯತ್ವ ಪಡೆದಿರುವ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಪತ್ರಕರ್ತರನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನಾಗಿಸಿ, ಅವರನ್ನು ಮತದಾರರನ್ನಾಗಿಸಿದ ಬಳಿಕವೇ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಸುವಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರು ನಿರ್ದೇಶನ ನೀಡಿರುತ್ತಾರೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕರ್ತರ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಪತ್ರಕರ್ತರನ್ನು ಈ ಕೂಡಲೇ ಜಾರಿಗೆ ಬರುವಂತೆ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನಾಗಿಸಿ ಸೇರ್ಪಡೆಗೊಳಿಸಲಾಗಿದೆ ಮತ್ತು ಈ ಹೊಸದಾಗಿ ಸೇರ್ಪಡೆಗೊಂಡಿರುವ ಸದಸ್ಯರನ್ನು ಒಳಗೊಂಡ ಮತದಾರರ ಪಟ್ಟಿ ರಚಿಸಿ ನಮ್ಮ ಸಂಘದ ಚುನಾವಣೆ ನಡೆಸಲಾಗುವುದು ಎಂದು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅವರು ಪ್ರಕಟಣೆ ಹೊರಡಿಸಿರುವುದು ಕೆಲವರಲ್ಲಿ ತಳಮಳ ಉಂಟು ಮಾಡಿದೆ. ಇದು ಭಾರೀ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.

ರಾಜ್ಯ ಸಂಘದ ಸದಸ್ಯರಾಗಿರುವ ಪುತ್ತೂರಿನವರ ಸೇರ್ಪಡೆಗೆ ಅನೀಶ್ ತಂಡದ ವಿರೋಧ: ಸಂಘದ ಅಧ್ಯಕ್ಷ ಶ್ರವಣ ಕುಮಾರ್ ನಾಳರವರು ಪುತ್ತೂರಿನ ಸಂಘವನ್ನು ಬಲಿಷ್ಠ ಮಾಡಲು ಇಲ್ಲಿ ಸದಸ್ಯರಾಗದಿರುವ ಪುತ್ತೂರಿನ ಹಲವಾರು ಪತ್ರಕರ್ತರನ್ನು ಜಿಲ್ಲಾ ಪತ್ರಕರ್ತರ ಸಂಘದ ಮೂಲಕ ರಾಜ್ಯ ಸಂಘದ ಸದಸ್ಯರನ್ನಾಗಿ ಹಲವು ತಿಂಗಳುಗಳ ಹಿಂದೆಯೇ ಮಾಡಿದ್ದಾರೆ. ಆದರೆ ಆ ಸದಸ್ಯರನ್ನು ಸಂಘಕ್ಕೆ ಸೇರ್ಪಡಿಸುವ ಅವರ ಉದ್ದೇಶಕ್ಕೆ ಅನೀಶ್ ಕುಮಾರ್ ತಂಡದ ಸದಸ್ಯರಾದ ಸಂಶುದ್ದೀನ್, ಮೇಘ ಪಾಲೆತ್ತಾಡಿ, ಶಶಿಧರ್ ಕುತ್ಯಾಳ, ಪ್ರವೀಣ್ ಕುಮಾರ್, ಸೇರಿದಂತೆ ಸಂಘದ ಪದಾಽಕಾರಿಗಳಾಗಲು ಬಯಸಿದ್ದ ಅಜಿತ್ ಕುಮಾರ್, ಸಂದೀಪ್ ಕುಮಾರ್, ಪ್ರಸಾದ್ ಬಲ್ನಾಡುರವರು ತೀವ್ರ ವಿರೋಧ ವ್ಯಕ್ತ ಪಡಿಸಿದ್ದರು. ಚುನಾವಣೆ ಕಳೆದ ನಂತರವೇ ಆಯ್ಕೆಯಾಗುವ ಪದಾಽಕಾರಿಗಳ ನಿರ್ಣಯದಂತೆ ಹೊಸ ಸದಸ್ಯರ ಸೇರ್ಪಡೆ ತೀರ್ಮಾನ ಮಾಡುವುದಾಗಿ ಅವರು ಹೇಳಿಕೊಂಡಿದ್ದರು ಎಂದು ಹೇಳಲಾಗಿದೆ.

ರಾಜ್ಯ ಸಂಘದ ಸದಸ್ಯರಾಗಿರುವ ಪುತ್ತೂರಿನ ಪತ್ರಕರ್ತರನ್ನು ಪುತ್ತೂರಿನ ಪತ್ರಕರ್ತರ ಸಂಘಕ್ಕೆ ಸದಸ್ಯರನ್ನಾಗಿ ಸೇರ್ಪಡಿಸುವ ಮತ್ತು ಮುಂದಿನ ಸಂಘದ ಚುನಾವಣೆಗೆ ಮತದಾರರನ್ನಾಗಿ ಮಾಡುವ ರಾಜ್ಯಾಧ್ಯಕ್ಷರ ಆದೇಶ ಅನೀಶ್ ಕುಮಾರ್ ನೇತೃತ್ವದ ತಂಡಕ್ಕೆ ಬರಸಿಡಿಲು ಹೊಡೆದಂತಾಗಿದೆ. ಅನೀಶ್ ಕುಮಾರನ್ನು ಅವರ ಅವ್ಯವಹಾರಗಳಿಗೆ ಸಂಘದಿಂದ ಉಚ್ಚಾಟಿಸಿದ್ದ ಶ್ರವಣ ಕುಮಾರ್ ನಾಳರನ್ನು ಸಂಘದ ಅಧ್ಯಕ್ಷ ಸ್ಥಾನದಿಂದ ಇಳಿಸಿ ಅನೀಶ್ ಕುಮಾರ್‌ಗೆ ಮೊದಲಿನಂತೆ ತನ್ನ ಅವ್ಯವಹಾರಗಳನ್ನು ನಡೆಸಲು ಅವಕಾಶ ಮಾಡಿಕೊಡುವ ಮತ್ತು ಅದರ ಪ್ರಯೋಜನ ಪಡೆಯುವ ಉದ್ದೇಶದ ಅವರ ಬೆಂಬಲಿಗರಿಗೆ ಪುತ್ತೂರು ಪತ್ರಕರ್ತರ ಸಂಘದ ಪದಾಧಿಕಾರವನ್ನು ಹಿಡಿಯುವ ಅವಕಾಶ ಕೈ ತಪ್ಪಿದಂತಾಗಿ ಅವರ ಕನಸು ನುಚ್ಚು ನೂರಾಗಿದೆ. ಕೈಗೆ ಬಂದದ್ದು ಬಾಯಿಗೆ ಬರದಂತಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಿಂದ ನಿರ್ದೇಶನ-ಶ್ರವಣ್ ಕುಮಾರ್ ಪತ್ರ

ಸರ್ವ ಸದಸ್ಯರ ಗಮನಕ್ಕೆ..

ನಮ್ಮ ಪುತ್ತೂರು ತಾಲೂಕು ಪತ್ರಕರ್ತರ ಸಂಘವು ಎಲ್ಲಾ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರ ಸಹಕಾರದಿಂದ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವುದು ತಮಗೆಲ್ಲಾ ತಿಳಿದಿದೆ.ರಾಜ್ಯದಲ್ಲಿಯೇ ಉತ್ತಮ ಪತ್ರಕರ್ತರ ಸಂಘ ಎಂದು ಹೆಸರು ಪಡೆದಿರುವ ಹೆಗ್ಗಳಿಕೆ ನಮ್ಮ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಇದೆ ಎಂಬುದು ನಮಗೆ ಅಭಿಮಾನದ ಸಂಗತಿಯಾಗಿದೆ.ಪ್ರಸ್ತುತ ನಮ್ಮ ಆಡಳಿತ ಮಂಡಳಿಯ ಅವಧಿಯಲ್ಲಿ ಪತ್ರಿಕಾ ಭವನವನ್ನು ಸುಸಜ್ಜಿತವಾಗಿ, ಆಕರ್ಷಣೀಯವನ್ನಾಗಿಸಲು ತಾವೆಲ್ಲರೂ ಸಹಕಾರ ನೀಡುತ್ತಿರುವುದನ್ನು ಗೌರವಪೂರ್ವಕವಾಗಿ ಸ್ಮರಿಸುತ್ತಿದ್ದೇನೆ. ಜನ ಸಾಮಾನ್ಯರ ಧ್ವನಿಯಾಗಿ ಪತ್ರಿಕಾ ಭವನ ಮತ್ತು ನಮ್ಮ ಪತ್ರಕರ್ತರ ಸಂಘ ಇನ್ನಷ್ಟು ಪ್ರಖರವಾಗಿ, ಬಲಿಷ್ಠವಾಗಿ, ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕೆಂಬುದು ನನ್ನ ಅಪೇಕ್ಷೆಯಾಗಿದೆ.ಅದಕ್ಕಾಗಿ ನಮ್ಮ ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಚುನಾವಣಾ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸಬೇಕಾಗಿದೆ.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಮಾರ್ಗಸೂಚಿಯಂತೆ ಮತ್ತು ಅದರ ಬೈಲಾದಂತೆ ನಮ್ಮ ಪುತ್ತೂರು ತಾಲೂಕು ಪತ್ರಕರ್ತರ ಸಂಘವೂ ಕಾರ್ಯ ನಿರ್ವಹಿಸಬೇಕಾಗಿದೆ.ಆದ್ದರಿಂದ ಸಣ್ಣ ಪುಟ್ಟ ಗೊಂದಲಗಳನ್ನು ಪರಿಹರಿಸಿಕೊಂಡು ನಮ್ಮ ಸಂಘದ ಚುನಾವಣಾ ಪ್ರಕ್ರಿಯೆ ನಡೆಸಬೇಕಾಗಿದೆ.ಈ ಬಗ್ಗೆ ಈಗಾಗಲೇ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ನನಗೆ ಸೂಚನೆ ನೀಡಿರುತ್ತಾರೆ.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಈಗಾಗಲೇ ಸದಸ್ಯತ್ವ ಪಡೆದಿರುವ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಪತ್ರಕರ್ತರನ್ನು ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಸದಸ್ಯರನ್ನಾಗಿಸಿ ಮತ್ತು ಅವರನ್ನು ನಮ್ಮ ಪತ್ರಕರ್ತರ ಸಂಘದ ಚುನಾವಣೆಗೆ ಮತದಾರರನ್ನಾಗಿಸಿ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಚುನಾವಣೆ ನಡೆಸುವಂತೆ ರಾಜ್ಯಾಧ್ಯಕ್ಷರು ನಿರ್ದೇಶನ ನೀಡಿರುತ್ತಾರೆ. ಆದ್ದರಿಂದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕರ್ತರ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಪುತ್ತೂರು ತಾಲೂಕಿಗೆ ಸಂಬಂಧಿಸಿದ ಪತ್ರಕರ್ತರನ್ನು ಈ ಕೂಡಲೇ ಜಾರಿಗೆ ಬರುವಂತೆ ಪುತ್ತೂರು ತಾಲೂಕು ಪತ್ರನಿರತ ಪತ್ರಕರ್ತರ ಸಂಘದ ಸದಸ್ಯರನ್ನಾಗಿಸಿ ಸೇರ್ಪಡೆಗೊಳಿಸಲಾಗಿದೆ ಮತ್ತು ಈ ಹೊಸದಾಗಿ ಸೇರ್ಪಡೆಗೊಂಡಿರುವ ಸದಸ್ಯರನ್ನು ಒಳಗೊಂಡ ಮತದಾರರ ಪಟ್ಟಿ ರಚಿಸಿ ನಮ್ಮ ಸಂಘದ ಚುನಾವಣೆ ನಡೆಸಲಾಗುವುದು ಎಂದು ತಮ್ಮೆಲ್ಲರ ಗಮನಕ್ಕೆ ತರುತ್ತಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸದಸ್ಯತ್ವ ಪಡೆದಿರುವ ಮತ್ತು ಆ ಮೂಲಕ ಪುತ್ತೂರು ತಾಲೂಕು ಪತ್ರಕರ್ತರ ಸಂಘಕ್ಕೆ ಸೇರ್ಪಡೆಗೊಂಡಿರುವ ಪುತ್ತೂರು ತಾಲೂಕು ವ್ಯಾಪ್ತಿಯ ಪತ್ರಕರ್ತರ ಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು. ನೂತನ ಪಟ್ಟಿಯನ್ನು ಪತ್ರಿಕಾ ಭವನದ ನೊಟೀಸ್ ಬೋರ್ಡಿನಲ್ಲಿ ಪ್ರಕಟಿಸಲಾಗುವುದು ಮತ್ತು ಎಲ್ಲಾ ಪದಾಽಕಾರಿಗಳು ಹಾಗೂ ಸದಸ್ಯರ ವಾಟ್ಸಪ್‌ಗೆ ಕಳುಹಿಸಲಾಗುವುದು” ಎಂದು ಸಂಘದ ಅಧ್ಯಕ್ಷ ಶ್ರವಣ್ ಕುಮಾರ್ ನಾಳ ಅವರು ಸದಸ್ಯರ ಗಮನಕ್ಕೆ ತಂದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ಬೆಳವಣಿಗೆ ಕುರಿತು ಶಶಿಧರ ರೈ ಕುತ್ಯಾಳ, ಮೇಘ ಪಾಲೆತ್ತಡಿ ಮತ್ತು ಸುಧಾಕರ ಸುವರ್ಣ ತಿಂಗಳಾಡಿರವರ ನಡುವೆ ಬಿರುಸಿನ ಚರ್ಚೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here