ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ರವರಿಂದ ಪಕ್ಷದ ಜವಾಬ್ದಾರಿಗೆ ರಾಜೀನಾಮೆ

0


ಪುತ್ತೂರು: ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ರಾಜ್ಯಾದ್ಯಂತ ಬಿಜೆಪಿ ಪದಾಧಿಕಾರಿಗಳ ರಾಜೀನಾಮೆ ಚಳವಳಿ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಹಲವೆಡೆ ಪದಾಧಿಕಾರಿಗಳು ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಇದೀಗ ಪುತ್ತೂರು ತಾಲೂಕಿನಲ್ಲಿಯೂ ಹಲವರು ಬಿಜೆಪಿಯ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿದ್ದಾರೆ. ಇದೀಗ ೩೪ನೇ ನೆಕ್ಕಿಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಶಾಂತ್ ಎನ್. ಅವರು ನೆಕ್ಕಿಲಾಡಿಯ ಬಿಜೆಪಿ ೩೫ನೇ ಬೂತ್ ಸಮಿತಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ೩೪ನೇ ನೆಕ್ಕಿಲಾಡಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಿಗೆ ರಾಜಿನಾಮೆ ಸಲ್ಲಿಸಿದ್ದಾರೆ. ಕಳೆದ ಬಾರಿಯ ಸಿದ್ದರಾಮಯ್ಯರವರ ಸರಕಾರದ ಅವಧಿಯಲ್ಲಿ ಹಿಂದೂ ಸಮಾಜದ ಮೇಲೆ ನಡೆದ ಅವ್ಯಾಹತ ಆಕ್ರಮಣಗಳಿಂದ ರಕ್ಷಣೆ ಬಯಸಿದ ಮತದಾರರಲ್ಲಿ ನಾಡಿನ ಸಮಸ್ತ ಜನತೆಯ ಹಿತ ಕಾಯುವ ಭರವಸೆಯನ್ನು ನೀಡಿ ಮತವನ್ನು ಯಾಚಿಸಿದ ಕಾರಣಕ್ಕೆ ಬಿಜೆಪಿ ರಾಜ್ಯದಲ್ಲಿ ಅತ್ಯಧಿಕ ಸ್ಥಾನವನ್ನು ಗೆಲ್ಲುವಂತಾಗಿ ಅಧಿಕಾರಕ್ಕೆ ಬಂದಿರುವುದು ತಮಗೆಲ್ಲರಿಗೂ ತಿಳಿದಿದೆ ಎನ್ನುವುದು ನಮ್ಮ ನಂಬಿಕೆ. ಆದರೆ ರಾಜ್ಯಾದ್ಯಂತ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಹತ್ಯೆಗೈಯುತ್ತಿದ್ದರೂ ಸರಕಾರ ದುಷ್ಕರ್ಮಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳದೇ ಬರಿಯ ಕಠಿಣ ಕ್ರಮ ಜರುಗಿಸಲಾಗುವುದು ಎಂಬ ಘೋಷ ವಾಕ್ಯವನ್ನು ಮಾತ್ರ ಘೋಷಿಸುತ್ತಿರುವುದರಿಂದ ಸಮಾಜದಲ್ಲಿ ಅಪಹಾಸ್ಯಕ್ಕೆ ತುತ್ತಾಗುವ ಸ್ಥಿತಿ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಪ್ರತಿ ಹಿಂದೂವಿನ ಸಾವಿನಲ್ಲಿ ತಮ್ಮ ತಮ್ಮ ರಾಜಕೀಯ ಹಿತಾಸಕ್ತಿಯನ್ನು ಮಾತ್ರ ಕಂಡುಕೊಳ್ಳುವ ನಾಯಕರ ಮನೋಸ್ಥಿತಿ ಸಮಾಜಕ್ಕೆ ಅರಿವಾಗಿದ್ದು, ಎಲ್ಲೆಡೆ ನಿಂದನಾತ್ಮಕ ನುಡಿಗಳಿಗೆ ಕಿವಿಗೊಡುವ ದುಸ್ಥಿತಿ ನಮಗೊದಗಿದೆ. ಈ ಹಿನ್ನೆಲೆಯಿಂದ ಪಕ್ಷದ ಬೂತ್ ಸಮಿತಿಯ ಅಧ್ಯಕ್ಷ ಸ್ಥಾನದಲ್ಲಿ ಅಲಂಕೃತನಾಗಿರಲು ನನ್ನ ಆತ್ಮ ಸಾಕ್ಷಿ ಒಪ್ಪದಿರುವ ಕಾರಣಕ್ಕೆ ನಾನು ೩೪ನೇ ನೆಕ್ಕಿಲಾಡಿ ಗ್ರಾಮದ ೩೫ನೇ ಬೂತ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ರಾಜ್ಯದೆಲ್ಲೆಡೆಯ ವಿದ್ಯಮಾನಗಳ ನಡುವೆ ನಮ್ಮ ಪರಿಸರದ ಕೆಲವೊಂದು ಘಟನೆಗಳನ್ನು ಈ ಸಂಧರ್ಭದಲ್ಲಿ ತಮ್ಮ ಅರಿವಿಗೆ ತರ ಬಯಸುತ್ತೇನೆ. ೨೦೨೧ರ ಅಗಸ್ಟ್ ೧೫ರಂದು ಪುತ್ತೂರು ತಾಲೂಕಿನ ಕಬಕದಲ್ಲಿ ಸ್ವಾತಂತ್ರ್ಯ ವೀರ ಸಾವರ್ಕರ್‌ರವರ ಭಾವ ಚಿತ್ರವನ್ನು ಅಳವಡಿಸಿದ ಮೆರವಣಿಗೆ ವೇಳೆ ದಾಳಿ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಿದ ಕ್ಷಣ ಮಾತ್ರದಲ್ಲಿ ಬಿಡುಗಡೆ ಹೊಂದುವಂತೆ ಪೊಲೀಸ್ ಇಲಾಖೆ ನೋಡಿಕೊಂಡಿತು. ಆಡಳಿತ ವ್ಯವಸ್ಥೆ ಈ ಬಗ್ಗೆ ಚಕಾರವೆತ್ತಿಲ್ಲ.

೨೦೨೧ರ ಡಿ.೬ರಂದು ಉಪ್ಪಿನಂಗಡಿಯಲ್ಲಿ ಹಿಂದೂ ಸಮಾಜದವರಿಂದ ನಡೆಸಿಕೊಂಡು ಬರಲಾಗುತ್ತಿದ್ದ ಮೀನು ಮಾರುಕಟ್ಟೆಗೆ ದಾಳಿ ನಡೆಸಿದ ಮುಸ್ಲಿಮ್ ಮತಾಂಧರ ತಂಡವನ್ನು ವಿಶೇಷ ಪೊಲೀಸ್ ತಂಡ ಗುರುತಿಸಿ ಈ ಪೈಕಿ ಮೂವರನ್ನು ಬಂಧಿಸಿತ್ತು. ಮತಾಂಧರ ಪ್ರತಿಭಟನೆಗೆ ಅಂಜಿದ ಪೊಲೀಸ್ ಇಲಾಖೆ ಉಳಿದ ೭ ಮಂದಿ ಆರೋಪಿಗಳ ಬಂಧನಕ್ಕೆ ಗಮನ ಹರಿಸದೆ ಅವರಿಗೆ ನ್ಯಾಯಾಲಯದಲ್ಲಿ ಜಾಮೀನು ದೊರಕುವಂತೆ ಮಾಡಿ ಇಂದಿಗೂ ಹಲ್ಲೆಕೋರರು ರಾಜಾರೋಷವಾಗಿ ಸಂಚರಿಸುವಂತೆ ಸಹಕರಿಸಿದೆ. ಆಡಳಿತ ವ್ಯವಸ್ಥೆ ಇದನ್ನೂ ಸಹಿಸಿಕೊಂಡು ಚಕಾರವೆತ್ತಿಲ್ಲ. ಘಟನೆ ನಡೆದು ಇಂದಿಗೆ ೨೩೪ ದಿನಗಳಾದವು.

೨೦೨೧ ರ ಡಿ.೧೪ರಂದು ಮೂವರು ಮತಾಂಧ ಹಲ್ಲೆಕೋರ ಆರೋಪಿಗಳನ್ನು ಬಂಧಿಸಿದರೆಂಬ ಕಾರಣಕ್ಕೆ ನೂರಾರು ಮಂದಿ ದಿನವಿಡೀ ರಸ್ತೆಯನ್ನು ಬಂದ್ ಮಾಡಿ ಪೊಲೀಸ್ ಠಾಣೆ ಮುಂಭಾಗ ಆಕ್ರಮಣಕಾರಿ ಹಾಗೂ ಭಯ ಮೂಡಿಸುವ ರೀತಿ ಪ್ರತಿಭಟನೆ ನಡೆಸಿ ರಾತ್ರಿ ವೇಳೆ ಪೊಲೀಸ್ ಠಾಣೆ ಮೇಲೆ ದಾಳಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ ಘಟನಾವಳಿ ನಡೆದಿದ್ದು, ಪ್ರಕರಣದ ಬಗ್ಗೆ ಅಮೂಲಾಗ್ರ ವಿಡಿಯೋ ರೆಕಾರ್ಡಿಂಗ್ ಪೊಲೀಸರ ಬಳಿ ಇದ್ದರೂ ಬೆರಳೆಣಿಕೆಯ ಆರೋಪಿಗಳನ್ನು ಬಂಧಿಸುವ ನಾಟಕವಾಡಿ ಬಳಿಕ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲು ಪೊಲೀಸ್ ಅಧಿಕಾರಿಗಳು ಸಹಕರಿಸಿದ್ದರು. ಹಾಗೂ ಉಳಿದ ಆರೋಪಿಗಳನ್ನು ಪ್ರಕರಣದಿಂದ ಕೈ ಬಿಟ್ಟು ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಮಂದಿಯನ್ನು ರಕ್ಷಿಸಲಾಯಿತು. ಈ ಕೃತ್ಯಕ್ಕೂ ಆಡಳಿತ ವ್ಯವಸ್ಥೆಯಿಂದ ನಿಗೂಢ ಒಪ್ಪಿಗೆ ದೊರೆಯಿತು. ದಾಂಧಲೆಕೋರರು ಯಾವುದೇ ಕಾನೂನು ಕ್ರಮಕ್ಕೆ ಸಿಲುಕದೇ ರಕ್ಷಣೆ ಪಡೆದರು. ಘಟನೆ ನಡೆದು ಇಂದಿಗೆ ೨೨೬ ದಿನಗಳಾದವು.

೨೦೨೨ರ ಮಾರ್ಚ್ ೨೦ರ ಆಸುಪಾಸು ಹಿಂದೂ ವರ್ತಕರ ಸಂಘವೆಂಬ ನಕಲಿ ಸಂಸ್ಥೆಯ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಸಾಧಿಸುವ ಸಂದೇಶವನ್ನು ವಾಟ್ಸಪ್ ಮೂಲಕ ಹರಿಯಬಿಟ್ಟು ಸಾಮಾಜಿಕ ಶಾಂತಿ ಕದಡುವ ಕೃತ್ಯವನ್ನು ಮತಾಂಧರು ನಡೆಸಿದ್ದರು. ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸಿ ಎಂದು ಪೊಲೀಸರಿಗೆ ದೂರು ನೀಡಿದರೂ ಘಟನೆ ನಡೆದು ೪ ತಿಂಗಳಾಗುತ್ತಾ ಬಂದರೂ ಆರೋಪಿಗಳನ್ನು ಬಂಧಿಸಲು ಪೊಲೀಸರು ಆಸಕ್ತಿ ತಾಳಲಿಲ್ಲ. ಅಡಳಿತ ವ್ಯವಸ್ಥೆ ಈ ಬಗ್ಗೆ ನಿಗಾ ವಹಿಸಲಿಲ್ಲ. ಘಟನೆ ನಡೆದು ಇಂದಿಗೆ ೧೩೦ ದಿನಗಳಾದವು ೨೦೨೨ರ ಜೂನ್ ೨ರಂದು ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ಘಟನಾವಳಿಗೆ ಸಂಬಂಧಿಸಿ ತಪ್ಪಿತಸ್ಥ ವಿದ್ಯಾರ್ಥಿನಿಯರನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿಯ ಸತ್ಯಾಸತ್ಯತೆಯನ್ನು ತಿಳಿಯಲು ಹೋದ ಪತ್ರಕರ್ತರ ಮೇಲೆ ಹಲ್ಲೆ, ದಿಗ್ಬಂಧನ, ಮೊಬೈಲ್ ಕಿತ್ತುಕೊಂಡು ಅದರಲ್ಲಿನ ರೆಕಾರ್ಡಿಂಗ್ ಗಳನ್ನು ಡಿಲಿಟ್ ಮಾಡಿ, ಜೀವ ಬೆದರಿಕೆಯೊಡ್ಡಿದ ಕೃತ್ಯ ಪೊಲೀಸರ ಸಮ್ಮುಖದಲ್ಲೇ ನಡೆದಿತ್ತು. ಈ ಎಲ್ಲಾ ಘಟನಾವಳಿಗಳನ್ನು ಪೊಲೀಸರು ಸ್ವತಃ ರೆಕಾರ್ಡಿಂಗ್ ಮಾಡಿದ್ದರೂ ತಪ್ಪಿತಸ್ಥ ಕಿಡಿಗೇಡಿಗಳ ವಿರುದ್ಧ ಕ್ರಮ ಜರುಗಿಸಲು ಪೊಲೀಸರಿಗೆ ದೂರು ನೀಡಿ ಇಂದಿಗೆ ೫೮ ದಿನಗಳು ಸಂದರೂ ಒಬ್ಬನೇ ಒಬ್ಬ ಆರೋಪಿಯ ಬಂಧನವಾಗಲಿಲ್ಲ.

ಈ ಎಲ್ಲಾ ವಿದ್ಯಮಾನಗಳಲ್ಲಿ ಆಡಳಿತ ವ್ಯವಸ್ಥೆಯ ನಿರ್ವೀರ್ಯತೆಯೇ ಪ್ರಬಲವಾಗಿ ಕಾಣುತ್ತಿದ್ದು, ಪ್ರಸಕ್ತ ಸ್ಥಿತಿಯಲ್ಲಿ ಬಿಜೆಪಿ ಕಾರ್ಯಕರ್ತನೆಂದು ಹೇಳಿಕೊಳ್ಳಲು ನಾಚಿಕೆಯಾಗುವ ದುಸ್ಥಿತಿಯನ್ನು ಪಕ್ಷದ ಆಡಳಿತಗಾರರು ತಂದಿರಿದ್ದಾರೆ. ಈ ಕಾರಣಕ್ಕೆ ನಾನು ಸಲ್ಲಿಸಿರುವ ಈ ರಾಜೀನಾಮೆ ಪತ್ರವನ್ನು ಸ್ವೀಕರಿಸಬೇಕು ಎಂದು ರಾಜೀನಾಮೆ ಪತ್ರದಲ್ಲಿ ಪ್ರಶಾಂತ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here