ತುಳುನಾಡಿನ ಸಾಂಪ್ರದಾಯಿಕ ಆಚರಣೆ – ಆಟಿ ಅಮಾವಾಸ್ಯೆ

0

ಸತೀಶ್ಇರ್ದೆ ಕನ್ನಡ ಉಪನ್ಯಾಸಕರು , ಅಂಬಿಕಾ ವಿದ್ಯಾಲಯ ಪುತ್ತೂರು

ತುಳುನಾಡಿನಲ್ಲಿ ಪ್ರತಿಯೊಂದು ಆಚರಣೆಗೂ ಅದರದ್ದೇ ಆದ ಮಹತ್ವವನ್ನು ಕಾಣುತ್ತೆವೆ . ಒಂದೊಂದು ಐತಿಹ್ಯವಿದೆ. ಪ್ರತಿಯೊಂದು ಆಚರಣೆಯ ಹಿಂದೆಯು ಮುಂದೆಯೂ ಮಹತ್ವದ ಅಂಶವಿದೆ ಬಲವಾದ ನಂಬಿಕೆಯಿದೆ . ಇದರಲ್ಲಿ ನಾಗರ ಪಂಚಮಿ, ಕೆಡ್ಡಸ ಅಥವಾ ಆಟಿ ಅಮಾವಾಸ್ಯೆ ಇರಬಹುದು. ಈ ಎಲ್ಲಾ ಹಬ್ಬ ಹರಿದಿನಗಳಲ್ಲಿ ಕೆಲವೊಂದು ವಿಶೇಷತೆಗಳನ್ನು ಕಾಣಬಹುದು. ಅಂದ ಹಾಗೆ ನಾನು ಹೇಳ ಹೊರಟಿರುವುದು ಈ ತಿಂಗಳ (ಆಟಿ ತಿಂಗಳ) ಆಟಿ *ಅಮಾವಾಸ್ಯೆ ಯ ಬಗ್ಗೆ. ತುಳುನಾಡಿನ ಜನರು ಬದುಕಿನಲ್ಲಿ ಅವರ ಬದುಕಿನ ಪುಟಗಳನ್ನು ತೆರೆದು ಅವಲೋಕನ ಮಾಡಿದಾಗ ಅಲ್ಲಿ ಆಟಿಗೆ ತುಂಬಾ ಮಹತ್ವದ ಸ್ಥಾನವನ್ನು ನೀಡಿದ್ದಾರೆ. ಆಷಾ ಢ ತಿಂಗಳು ಅಂದರೆ ಅರ್ಥಾತ್ ಆಟಿ ತಿಂಗಳು ಬಹಳ ಕಷ್ಟದ ತಿಂಗಳು. ತುಳುವಿನ ಮಾತೊಂದು ಇದೆ ಹೀಗೆ… “ಆಟಿದ ದೊಂಬುಗು ಆನೆದ ಬೆರಿ ಪುಡಾವು ” ಬೈತರಿ ಇತ್ತಿ ನಾಯೆ ಆಟಿಡ್ ಕಾರ್ ಪಿದಾಯಿ ದೀವಯೆ ” ಇವು ನಮ್ಮ ಹಿರಿಯವರು ಕಟ್ಟಿದ ಗಾದೆಗಳು. ಈ ತಿಂಗಳಲ್ಲಿ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ರಜಾ ತಿಂಗಳು ಎಂಬುದಾಗಿ ಅರ್ಥ.ಆಟಿಯ ವಿಶೇಷ ವನ್ನು ಪಟ್ಟಿ ಮಾಡುತ್ತಾ ಹೋದರೆ ಬಹಳಷ್ಟು ವಿಷಯಗಳು ತೆರೆದುಕೊಳ್ಳುತ್ತದೆ. ಇದು ಕಷ್ಟದ ತಿಂಗಳು ಅಂತ ಹೇಳಲು ಅನೇಕ ಕಾರಣಗಳಿವೆ. ವಿಪರೀತ ಮಳೆ ಬರುವ ಸಮಯ ಮನೆಯಿಂದ ಹೊರಬರಲು ಅಸಾಧ್ಯ, ಕೆಲಸ ಮಾಡಲು ಅಸಾಧ್ಯ. ಜನರಲ್ಲಿ ಹಣದ ಓಡಾಟ ತೀರಾ ಕಡಿಮೆ. ಈ ತಿಂಗಳಲ್ಲಿ ಯಾರು ಕೂಡ ಕೆಲಸ ಮಾಡಿಸುವುದಿಲ್ಲ. ಈ ಎಲ್ಲಾ ಕಾರಣಗಳಿಂದ ಆಟಿ ತಿಂಗಳು ಕಷ್ಟದ ತಿಂಗಳು ಅಂತಲೇ ಬಿಂಬಿತವಾಗಿದೆ.ಹೀಗಿದ್ದರೂ ಒಂದು ಕಡೆಯಿಂದ ನಮ್ಮ ಹಿರಿಯರು ಈ ತಿಂಗಳನ್ನು ಅನಿಷ್ಟದ ತಿಂಗಳು ಎಂಬುದಾಗಿ ಹೇಳಿದರೂ ಅವರೇ ಮಾಡಿಕೊಂಡಿರುವ ಕೆಲವು ಅರ್ಚನೆಗಳು ಈ ಕಷ್ಟದ ತಿಂಗಳನ್ನು ಕಳೆಯಲು ಅನುಕೂಲ ಮಾಡಿಕೊಡುತ್ತದೆ.


ಹಾಲೆಮರದಕಷಾಯ ಅಮೃತಪಾನ
ಆಟಿ ಅಮಾವಾಸ್ಯೆ ವಿಶೇಷ ವೆಂದರೆ ಹಾಲೆ ಮರದ ಹಾಲು. ತುಳುನಾಡಿನುದ್ದಕ್ಕೂ ಆಟಿಯಂದು ಮಾಡುವ ಹಾಲೆ ( ಪಾಲೇ ಮರದ )ಮರದ ತೊಗಟೆಯ ರಸ ಇಂದಿಗೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಬಹಳ ಹಿಂದಿನ ಕಾಲದಿಂದಲೇ ಆಟಿ ಅಮಾವಾಸ್ಯೆ ದಿನ ಹಾಲೆ ಮರದ ರಸ ( ಕಷಾಯ )ಕುಡಿಯುವ ಪದ್ಧತಿ ಬೆಳೆದುಕೊಂಡು ಬಂದಿದೆ ಎಂಬುದು ಹಿರಿಯರ ಮಾತು.ಅಮಾವಾಸ್ಯೆಯ ಹಿಂದಿನ ದಿನ ರಾತ್ರಿ ಹಾಲೆ ಮರವನ್ನು ಹುಡುಕಿ ಅದಕ್ಕೆ ಒಂದು ನೂಲನ್ನು, ಒಂದಿಷ್ಟು ಕಾಣಿಕೆಯನ್ನು ಇಟ್ಟು ನಾಳೆಯ ದಿವಸ ಬರುವಾಗ ಒಳ್ಳೆಯ ಔಷಧಿಯನ್ನು ನೀಡು ಎಂಬುದಾಗಿ ಪ್ರಾರ್ಥನೆ ಮಾಡಿ ಬರುವ ಪದ್ಧತಿಯನ್ನು ನಮ್ಮ ಹಿರಿಯರು ಮಾಡಿಕೊಂಡಿದ್ದರು. ಮರುದಿವಸ ಬೆಳಗ್ಗೆ ಬೇಗನೆ ಎದ್ದು ಯಾರು ಇಲ್ಲದ ವೇಳೆಯಲ್ಲಿ ಯಾವುದೇ ಆಯುಧಗಳನ್ನು ಬಳಸದೆ ಬೊಲ್ಲು ಕಲ್ಲು ಉಪಯೋಗಿಸಿ ಮರದ ಕೆತ್ತೆಯನ್ನು ಜಜ್ಜಿ ತಂದು ಬೆಳ್ಳುಳ್ಳಿ, ಒಳ್ಳೆಮೆಣಸು ಸೇರಿಸಿ ಸರಿಯಾಗಿ ರಸ ಬರುವಂತೆ ಜಜ್ಜಿ ದಾಗ ಅದರ ರಸ ಸಿಗುತ್ತದೆ ಆ ರಸ ಅರ್ಥಾತ್ ಕಷಾಯವನ್ನು ಬಿಸಿ ಮಾಡಲು ಕಾಯಿಸುವುದಕ್ಕಿಲ್ಲ. ಬದಲಾಗಿ ಬೆಳಗ್ಗೆಯೇ ಒಲೆಯ ಕೆಂಡದಲ್ಲಿ ಹಾಕಿದ ಕೆಂಪಾಗಿರುವ ಬೊಲ್ಲು ಕಲ್ಲನ್ನು ಕಷಾಯಕ್ಕೆ ಹಾಕಿದಾಗ ಅದರಲ್ಲಿರುವ ಶೀತದ ಅಂಶವೆಲ್ಲವೂ ಹೋಗಿ ಉಗುರು ಬೆಚ್ಚಗಾಗುವಷ್ಟು ಬಿಸಿಯಾಗುತ್ತದೆ. ಕಹಿ ಕಷಾಯ ವನ್ನು ಕುಡಿಯಲು ಒಮ್ಮೆಗೆ ಕಷ್ಟವಾದರೂ ನಂತರ ಮೆಂತೆ ಗಂಜಿ ತಿನ್ನುವುದಕ್ಕಿದೆ ಎನ್ನುವ ಖುಷಿ ಇನ್ನೊಂದೆಡೆ.

ನಂಜು ನಿವಾರಕ ಗುಣ ಹೊಂದಿದ ಹಾಲೆ ( ಪಾಲೆ )ಮರದ ಕಷಾಯವು ವೈಜ್ಞಾನಿಕ ವಾಗಿಯೂ ಬಹಳಷ್ಟು ಬೇಡಿಕೆಯನ್ನು ಪಡೆದಿದೆ. ಮರದ ರಸದಲ್ಲಿ ನಂಜು ನಿವಾರಕವಾದ ರೋಗನಿರೋಧಕ ಶಕ್ತಿ ಇರುವುದನ್ನುನಮ್ಮ ಭಾರತೀಯ ವೈದ್ಯಲೋಕ ಪತ್ತೆ ಮಾಡಿದೆ. ಹಾಲೆ ಮರದ ರಸವು ( ಕಷಾಯವು) ಕಿಡ್ನಿ ಉತ್ತಮವಾಗಿ ಕೆಲಸ ಮಾಡುವಂತೆ ಮಾಡುತ್ತದೆ. ಇದು ಆರೋಗ್ಯ ವರ್ಧಕ, ಸೌoದರ್ಯ ವರ್ಧಕ ರಸವೆಂದು ಹೇಳಿದರೂ ತಪ್ಪಾಗಲಾರದು. ಆಟಿ ಅಮಾವಾಸ್ಯೆವ ದಿನ ಈ ಮರದ ರಸದಲ್ಲಿ ಬಹಳಷ್ಟು ಔಷಧೀಯ ಸತ್ವಗಳು ಸೇರಿಕೊಂಡಿರುತ್ತದೆ. ಈ ದಿನ ರಸ ಕುಡಿದರೆ ಆರೋಗ್ಯ ವೃದ್ಧಿಯಾಗುವುದು ಜೊತೆಗೆ ನಮ್ಮ ಸೌoದರ್ಯ ವು ವೃದ್ಧಿ ಯಾಗುತ್ತದೆ ಎಂಬುದು ಬಲ್ಲವರ ನುಡಿಯಾಗಿದೆ.( ಹಿಂದಿನ ದಿವಸ ರಾತ್ರಿ ಹಾಲೆ ಮರದ ಹತ್ತಿರ ಹೋಗಿ ಕಾಣಿಕೆಯನ್ನು ಇಟ್ಟು ದಾರ ಒಂದನ್ನು ಕಟ್ಟಿ ಬರುವ ಪದ್ಧತಿ ಹಾಗೂ ನಾಳೆ ಬರುವಾಗ ಒಳ್ಳೆ ಔಷಧಿಯನ್ನು ಕೊಡು ಎಂಬುದಾಗಿ ಪ್ರಾರ್ಥಿಸಿ ಬರುವ ಸಂಪ್ರದಾಯವು ಈಗಲೂ ಹಳ್ಳಿಗಳಲ್ಲಿ ಇದೆ ).ಹಾಲೆ ಮರದ ಕಷಾಯವನ್ನು ಅದರ ರಸವನ್ನು ಬೆಳಕು ಹರಿಯುವ ಮುನ್ನವೇ ತೆಗೆಯಬೇಕು. ಅಂದರೆ ಆ ಸಮಯದಲ್ಲಿ ಮರದಲ್ಲಿ ಔಷಧೀಯ ಗುಣಗಳು ಹೆಚ್ಚು ಇರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಗಮನಿಸಬಹುದು.ಮುಂಜಾನೆ ಹೊತ್ತಿನಲ್ಲಿ ಸೇವಿಸುವ ಹಾಲೆ ಮರದ ರಸ ಎಲ್ಲರ ಪಾಲಿಗೆ ಅಮೃತವಾಗಿ ಪರಿಣಾಮ ಬೀರಲಿ ಅಮೃತ ಪಾನವಾಗಲಿ, ಎಲ್ಲರ ಬಾಳನ್ನು ಬೆಳಗಲಿ.

 

 

LEAVE A REPLY

Please enter your comment!
Please enter your name here