ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ-ಮನೆಯವರಿಗೆ ಸಾಂತ್ವನ

0

  • ಸರಕಾರದಿಂದ 25 ಲಕ್ಷ ರೂ.ಪರಿಹಾರ ವಿತರಿಸಿದ ಬಸವರಾಜ ಬೊಮ್ಮಾಯಿ

ಪುತ್ತೂರು:ಜು.26ರಂದು ರಾತ್ರಿ ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರುರವರ ಮನೆಗೆ ಜು.28ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭೇಟಿ ನೀಡಿ,ಪ್ರವೀಣ್‌ರವರ ಪತ್ನಿ ನೂತನ ಕುಮಾರಿ ಹಾಗೂ ಅವರ ಮನೆಯವರಿಗೆ ಸಾಂತ್ವನ ಹೇಳಿದರು.ಸರಕಾರದ ವತಿಯಿಂದ ಪರಿಹಾರವಾಗಿ ರೂ.25 ಲಕ್ಷವನ್ನು ಮೃತನ ಕುಟುಂಬಕ್ಕೆ ಮುಖ್ಯಮಂತ್ರಿ ವಿತರಿಸಿದರು.ಈ ವೇಳೆ ಪ್ರವೀಣ್ ಪತ್ನಿ ನೂತನ ಕುಮಾರಿಯವರು ಮುಖ್ಯಮಂತ್ರಿಯವರ ಜೊತೆ ಮಾತನಾಡುತ್ತಾ,ನನ್ನ ಗಂಡನನ್ನು ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆ ಆಗಬೇಕು ಅಥವಾ ಅವರನ್ನು ಎನ್‌ಕೌಂಟರ್ ಮಾಡಿದರೆ ನನಗೆ ತೃಪ್ತಿ ಹಾಗೂ ನನ್ನ ಗಂಡನ ಆತ್ಮಕ್ಕೆ ಶಾಂತಿ ಎಂದು ಹೇಳಿದರು.ಮನೆಯೊಳಗೆ ಹೋದ ಮುಖ್ಯಮಂತ್ರಿ ಬೊಮ್ಮಾಯಿಯವರು ಮೃತ ಪ್ರವೀಣ್ ನೆಟ್ಟಾರು ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಕೈ ಮುಗಿದರು.

ಮೃತ ಪ್ರವೀಣ್ ಭಾವಚಿತ್ರಕ್ಕೆ ಸಿಎಂ ನಮನ

ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಹೊರಟು ಮಂಗಳೂರಿಗೆ ಆಗಮಿಸಿ ಬಳಿಕ ರಸ್ತೆ ಮಾರ್ಗವಾಗಿ ಸಂಜೆ ಸುಮಾರು 5.30ರ ವೇಳೆಗೆ ನೆಟ್ಟಾರು ಪ್ರವೀಣರ ಮನೆಗೆ ಆಗಮಿಸಿದ ಮುಖ್ಯಮಂತ್ರಿಯವರು ಸುಮಾರು 10 ನಿಮಿಷಗಳ ಕಾಲ ಮನೆಯೊಳಗಿದ್ದು, ಮನೆಯವರಿಗೆ ಸಾಂತ್ವನ ಹೇಳಿದರು.ಬಳಿಕ ಮನೆಯಿಂದ ಹೊರ ಬಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.“ನಮ್ಮ ಕಾರ್ಯಕರ್ತ ಪ್ರವೀಣ್ ಹತ್ಯೆ ಖಂಡನೀಯ.ಇದೊಂದು ಪೂರ್ವ ಯೋಜಿತ ಕೃತ್ಯ ಎಂದು ಮೇಲ್ನೋಟಕ್ಕೆ ತಿಳಿಯುತ್ತದೆ.ಮೊನ್ನೆ ನಡೆದ ಪ್ರವೀಣ್ ಹತ್ಯೆ ಪ್ರಕರಣ ಖಂಡನೀಯ.ಕಳೆದ ಹತ್ತು ವರ್ಷಗಳಲ್ಲಿ ಈ ಭಾಗದಲ್ಲಿ ಇಂತಹ ಚಟುವಟಿಕೆಗಳು ನಡೆಯುತ್ತಿವೆ.ಸಮಾಜಘಾತುಕ ಶಕ್ತಿಗಳು ಬೆಂಬಲ ನೀಡಿರುವುದರಿಂದ ಈ ಘಟನೆಯನ್ನು ನಡೆಸಲಾಗಿದೆ.ಇದನ್ನು ನಾವು ಕೊಲೆ ಪ್ರಕರಣವಾಗಿ ನೋಡುತ್ತಿಲ್ಲ.ದೇಶವನ್ನು ಛಿದ್ರ ಮಾಡುವ ಯೋಜನಾ ಬದ್ಧವಾದ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿದೆ.ತನಿಖೆ ಪ್ರಾರಂಭವಾಗಿದೆ.ಆರೋಪಿಗಳು ರಾಜ್ಯದ ಗಡಿ ದಾಟಿರಬಹುದು ಎಂಬ ಸಂಶಯವಿದೆ.ಈ ಎಲ್ಲ ಆಯಾಮದಲ್ಲಿ ತನಿಖೆ ಮಾಡಲಾಗುತ್ತಿದೆ, ಕೆಲವರನ್ನು ವಶಕ್ಕೆ ತೆಗೆದುಕೊಂಡು,ಅವರಿಂದ ಪಡೆದ ಮಾಹಿತಿಯಿಂದ ತನಿಖೆ ಮುಂದುವರೆಯಲಿದೆ.ಅತಿ ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂಬ ವಿಶ್ವಾಸವಿದೆ.ಎಡಿಜಿಪಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.ಕಳೆದ ಹಲವಾರು ವರ್ಷಗಳಿಂದ ದುಷ್ಕೃತ್ಯಗಳಲ್ಲಿ ತೊಡಗಿಕೊಂಡಿರುವ ಸಮಾಜಘಾತುಕ ಶಕ್ತಿಗಳ ಜಾಡು ಹಿಡಿದು, ಈ ದಿಸೆಯಲ್ಲಿಯೂ ತನಿಖೆ ಕೈಗೊಂಡು ಹಿಂದಿರುವ ಸಂಘಟನೆಗಳನ್ನು ಗಮನಿಸುತ್ತಿದ್ದೇವೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಸರಕಾರದಿಂದ 25 ಲಕ್ಷ ರೂ ಪರಿಹಾರ:
ಈ ಕುಟುಂಬಕ್ಕೆ ಪ್ರವೀಣರವರೇ ಆಧಾರವಾಗಿದ್ದರು.ಇದೆಲ್ಲವನ್ನು ಗಮನಿಸಿಕೊಂಡು ಆ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರವನ್ನು ಸರಕಾರ ಕೊಟ್ಟಿದೆ.ಇನ್ನು ನಮ್ಮ ಪಕ್ಷದ ಕಡೆಯಿಂದ ರೂ.25ಮಂತ್ರಿಗಳು, ಪ್ರವೀಣರನ್ನು ಹತ್ಯೆ ಗೈದವರನ್ನು ಬಂಧಿಸಿ ಮೃತರ ಆತ್ಮಕ್ಕೆ ಶಾಂತಿ ಕೊಡುವ ಕೆಲಸವೂ ಆಗುತ್ತದೆ ಎಂದು ಹೇಳಿದರು.

ಮುಖ್ಯಮಂತ್ರಿಗಳ ಜತೆಗೆ ದ.ಕ.ಸಂಸದರೂ ಆಗಿರುವ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್,ಗೃಹ ಸಚಿವ ಅರಗ ಜ್ಞಾನೇಂದ್ರ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಒಳನಾಡು ಜಲಸಾರಿಗೆ ಸಚಿವರಾಗಿರುವ ಸುಳ್ಯದ ಶಾಸಕ ಎಸ್.ಅಂಗಾರ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ,ಶಾಸಕರುಗಳಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ಡಾ| ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದಿರೆ,ಯುವ ಬಿಜೆಪಿ ಜಿಲ್ಲಾಧ್ಯಕ್ಷ ಗುರುದತ್ ನಾಯಕ್, ಆರ್.ಎಸ್.ಎಸ್. ಪ್ರಮುಖರಾದ ಡಾ|ಕಲ್ಲಡ್ಕ ಪ್ರಭಾಕರ ಭಟ್ ಸೇರಿದಂತೆ ಪಕ್ಷದ ನಾಯಕರು, ಕಾರ್ಯಕರ್ತರು ಇದ್ದರು.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಟಿಎಪಿಸಿಎಂಎಸ್ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು, ಜಿಲ್ಲಾ ಬಿಜೆಪಿ ಹಿಂದುಳಿದ ಮೋರ್ಚಾದ ಅಧ್ಯಕ್ಷ ಆರ್.ಸಿ.ನಾರಾಯಣ ಸೇರಿದಂತೆ ಸ್ಥಳೀಯ ಹಲವು ಪ್ರಮುಖರೂ ಉಪಸ್ಥಿತರಿದ್ದರು.

ಕರ್ನಾಟಕಕ್ಕೆ ಎನ್ ಐ ಎ ಅಗತ್ಯವಿದೆ

ಕರ್ನಾಟಕ ರಾಜ್ಯಕ್ಕೆ ರಾಷ್ಟ್ರೀಯ ತನಿಖಾ ದಳವನ್ನು ಒದಗಿಸಲು ಕೋರಲಾಗಿದೆ.ವಿಶೇಷವಾಗಿ ಮಂಗಳೂರು ಭಾಗಕ್ಕೆ ಎನ್‌ಐಎ ಅವಶ್ಯಕತೆ ಇದೆ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ. ಪ್ರಾಥಮಿಕ ತನಿಖಾ ವರದಿಯ ಆಧಾರವಾಗಿ ಹೆಚ್ಚುವರಿ ತನಿಖೆಯ ಅವಶ್ಯಕತೆ ಇದ್ದಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗುವುದು.ಈ ಘಟನೆಗೆ ಬೆಂಬಲ ನೀಡಿರುವ ಬಗ್ಗೆಯೂ ತನಿಖೆ ನಡೆಸಿ,ಈ ಕುಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಜಾಲವನ್ನು ಭೇದಿಸಲಾಗುವುದು ಎಂದು ಹೇಳಿದ ಮುಖ್ಯಮಂತ್ರಿಯವರು, ಪಿಎಫ್‌ಐ ಬ್ಯಾನ್ ಮಾಡಲು ಕ್ರಮಗಳು ಪ್ರಾರಂಭವಾಗಿದೆ.ಈ ರೀತಿಯ ದುಷ್ಕೃತ್ಯಗಳು ಭಾರತದ ವಿವಿಧ ರಾಜ್ಯಗಳಲ್ಲಿ ನಡೆದಿದ್ದು, ದೇಶದ ಮಟ್ಟದಲ್ಲಿ ಸರಿಯಾದ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.ಪ್ರವೀಣ್‌ರ ಹತ್ಯೆಯ ವಿಚಾರದಲ್ಲಿ ಪ್ರಾಥಮಿಕ ತನಿಖೆಯಿಂದ ದೊರೆತಿರುವ ವಿಚಾರವನ್ನು ಆಧಾರವಾಗಿಟ್ಟುಕೊಂಡು ಹೆಚ್ಚುವರಿ ತನಿಖೆಗೆ ಎನ್‌ಐಎಗೆ ಕೊಡುವ ಚಿಂತನೆ ಮಾಡಲಾಗುವುದು.ಈ ಕೃತ್ಯವನ್ನು ದೊಡ್ಡ ಪ್ರಮಾಣದ ಜಾಲ ಇಲ್ಲದೆ ಮಾಡಲು ಸಾಧ್ಯವೇ ಇಲ್ಲ.ಆದ್ದರಿಂದ ಸಮಗ್ರ ತನಿಖೆ ನಡೆಸಲಾಗುವುದು ಎಂದು ಸಿಎಂ ಹೇಳಿದರು. “ಪ್ರವೀಣರ ಪತ್ನಿ ನೂತನರು,ನಾನು ಇದನ್ನು ಸಹಿಸಿಕೊಳ್ಳುವೆ.ಆದರೆ ಇನ್ನೊಂದು ಸಲ ಬೇರೆ ಯಾರಿಗೂ ಹೀಗೆ ಆಗಬಾರದೆಂದು ಆಕೆ ಹೇಳಿದ್ದಾರೆ.ಆ ರೀತಿಯ ಕ್ರಮ ಕೈಗೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.ಆಕೆ ಹೇಳಿದ ಮಾತಿನಂತೆ ಅಪರಾಧಿಗಳ ಪತ್ತೆಯಾಗುವವರೆಗೆ ಅಕ್ಷರಶ: ದಣಿವಿಲ್ಲದಂತೆ ಹಗಲು ರಾತ್ರಿ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದರು.

ಮುಖ್ಯಮಂತ್ರಿ`ನ್ಯಾಯ ಕೊಡಿ ನ್ಯಾಯ ಕೊಡಿ’ ಎಂಬ ಆಕ್ರೋಶ


ಗಳು ತೆರಳುವ ವೇಳೆ ಕಾರ್ಯಕರ್ತರಿಂದ `ನ್ಯಾಯ ಕೊಡಿ, ನ್ಯಾಯ ಕೊಡಿ’ ಎಂಬ ಕೂಗೂ ವ್ಯಾಪಕವಾಗಿ ಕೇಳಿ ಬಂತು.ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ಹೋಗುತ್ತಿದ್ದಂತೆ ಸಂಸದ ನಳಿನ್ ಕುಮಾರ್ ಕಟೀಲ್‌ರವರಲ್ಲಿ ಪ್ರವೀಣ್ ಸಂಬಂಧಿಕರೊಬ್ಬರು ಅಳಲು ತೋಡಿಕೊಂಡರು.ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಸ್ಥಳೀಯರೊಬ್ಬರು `ಮುಖ್ಯಮಂತ್ರಿಗಳು ಬಂದಿದ್ದಾರಲ್ಲವೇ ಮತ್ತೆ ಮಾತನಾಡೋಣ’ ಎಂದು ಹೇಳಿದಾಗ,ಇದು ಕಾರ್ಯಕರ್ತರಿಗೆ ಅಸಮಾಧಾನವನ್ನುಂಟು ಮಾಡಿತು.`ನಮ್ಮ ನೋವನ್ನು ಈಗಲೇ ಹೇಳಬೇಕು.ಮತ್ತೆ ಮಾತನಾಡುವುದು ಯಾಕೆ?’ ಎಂದು ಕೆಲವು ಕಾರ್ಯಕರ್ತರು ಜೋರಾಗಿ ಕೇಳಿದರು.ಈ ವೇಳೆ ಅಲ್ಲಿ ಸೇರಿದ್ದ ನೂರಕ್ಕೂ ಹೆಚ್ಚು ಕಾರ್ಯಕರ್ತರು `ನ್ಯಾಯ ಕೊಡಿ ನ್ಯಾಯ ಕೊಡಿ’ ಎಂಬ ಘೋಷಣೆ ಕೂಗಿದರು.ಮುಖ್ಯಮಂತ್ರಿಯಾದಿಯಾಗಿ ಎಲ್ಲ ನಾಯಕರು ಪೊಲೀಸರ ರಕ್ಷಣೆಯಲ್ಲಿ ತಮ್ಮ ಕಾರು ಹತ್ತಿ ಅಲ್ಲಿಂದ ಮುಂದಕ್ಕೆ ಹೋದರು.

LEAVE A REPLY

Please enter your comment!
Please enter your name here