ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ:ಇಬ್ಬರು ಆರೋಪಿಗಳ ಬಂಧನ

0
  •  ಪ್ರಮುಖ ಆರೋಪಿಗಳಿಗೆ ನೆರವು ನೀಡಿದ ಆರೋಪ 
  • 14 ದಿನದ ನ್ಯಾಯಾಂಗ ಬಂಧನ

 

 

ಪುತ್ತೂರು:ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.


ಸವಣೂರು ಮಾಂತೂರಿನ ಹನೀಫ್ ಎಂಬವರ ಮಗ ಝಾಕಿರ್ ಮತ್ತು ಬೆಳ್ಳಾರೆಯ ಇಬ್ರಾಹಿಂ ಎಂಬವರ ಮಗ ಶಫೀಕ್ ಬಂಧಿತ ಆರೋಪಿಗಳು. ಪ್ರಕರಣದ ಬಳಿಕ ತಲೆಮರೆಸಿಕೊಂಡಿದ್ದ ಇವರನ್ನು ಕಾಸರಗೋಡಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಪ್ರಕರಣದ ಪ್ರಮುಖ ಆರೋಪಿಗಳಿಗೆ ಸಹಕಾರ ನೀಡಿರುವ ಆರೋಪ ಬಂಧಿತರ ಮೇಲಿದೆ.

ಬಂಧಿತ ಆರೋಪಿಗಳನ್ನು ತೀವ್ರವಾಗಿ ತನಿಖೆಗೊಳಪಡಿಸಿರುವ ಪೊಲೀಸರು ಹಂತಕರ ಕುರಿತು ಮಹತ್ವದ ಮಾಹಿತಿಯನ್ನು ಕಲೆ ಹಾಕಿ ತನಿಖೆ ಮುಂದುವರಿಸಿದ್ದು ಶೀಘ್ರ ಪ್ರಮುಖ ಆರೋಪಿಗಳ ಬಂಧನವಾಗುವ ನಿರೀಕ್ಷೆಯಲ್ಲಿದ್ದಾರೆ.

ಹೆಚ್ಚಿನ ತನಿಖೆ-ಎಡಿಜಿಪಿ: ಜು.೨೭ರಂದು ಸಂಜೆ ಆರೋಪಿಗಳನ್ನು ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಲಾಗಿದೆ.ಪ್ರಕರಣದಲ್ಲಿ ಅವರ ಇನ್‌ವಾಲ್‌ಮೆಂಟ್ ಇದ್ದುದು ಖಚಿತವಾಗಿರುವುದರಿಂದ ದಸ್ತಗಿರಿ ಮಾಡಲಾಗಿದೆ.ಆರೋಪಿಗಳು ಈ ಹಿಂದೆ ಯಾವ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ಯಾವ ಸಂಘಟನೆ ಜೊತೆ ಅವರು ನಂಟು ಹೊಂದಿದ್ದಾರೆ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗಿದೆ.ಆರೋಪಿಗಳಿಗೆ ಪಿಎಫ್‌ಐ ನಂಟು ಇರುವ ಬಗ್ಗೆಯೂ ಸಂಶಯ ಇದ್ದು ಈ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮಾಹಿತಿ ನೀಡಿದ್ದಾರೆ.

ಆರೋಪಿಗಳಿಗೆ ನ್ಯಾಯಾಂಗ ಬಂಧನ: ಬಂಧಿತ ಆರೋಪಿಗಳಾದ ಝಾಕೀರ್ ಮತ್ತು ಶಫೀಕ್‌ರನ್ನು ಬೆಳ್ಳಾರೆ ಪೊಲೀಸರು ಜು.೨೮ರಂದು ಸಂಜೆ ಗಂಟೆ ೬ಕ್ಕೆ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶ ಗೌಡ ಆರ್.ಪಿ ಅವರು ಆದೇಶ ಮಾಡಿದರು.

ಆರೋಪಿಗಳನ್ನು ಬೆಳ್ಳಾರೆ ಎಸ್.ಐ.ರುಕ್ಮ ನಾಯ್ಕ್ ಹಾಗೂ ಸಿಬ್ಬಂದಿಗಳು ಬೆಳ್ಳಾರೆಯಿಂದ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಅವರಿಗೆ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿದ ಬಳಿಕ ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ನ್ಯಾಯಾಲಯದ ಆವರಣದಲ್ಲಿ ಪೊಲೀಸ್ ಬಂದೋಬಸ್ತ್: ಆರೋಪಿಗಳಿಬ್ಬರನ್ನು ನ್ಯಾಯಾಲಯಕ್ಕೆ ಕರೆ ತರುವಾಗ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ನ್ಯಾಯಾಲಯದ ಬಳಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.ರಾಜ್ಯ ಸಶಸ್ತ್ರ ಮೀಸಲು ಪಡೆಯನ್ನು ನ್ಯಾಯಾಲಯದ ಆವರಣದಲ್ಲಿ ನಿಯೋಜಿಸಲಾಗಿತ್ತು.

ಆರೋಪಿಗಳಿಗೆ ಮುಸುಕು: ಆರೋಪಿಗಳಿಬ್ಬರಿಗೂ ಕಪ್ಪು ಬಣ್ಣದ ಮುಸುಕು ಹಾಕಲಾಗಿತ್ತು.ಕೈಗಳಿಗೆ ಬೇಡಿ ತೊಡಿಸಲಾಗಿತ್ತು.ಆರೋಪಿಗಳನ್ನು ಕರೆದುಕೊಂಡು ಪೊಲೀಸ್ ಜೀಪು ನೇರ ನ್ಯಾಯಾಲಯದ ಆವರಣಕ್ಕೆ ಪ್ರವೇಶ ಮಾಡಿ ಅಲ್ಲಿ ಆರೋಪಿಗಳನ್ನು ಜೀಪಿನಿಂದ ಇಳಿಸಿ ನ್ಯಾಯಾಲಯದ ಸಂಕೀರ್ಣಕ್ಕೆ ಕರೆದೊಯ್ದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು.

ಕಸ್ಟಡಿ ಕೇಳದ ಪೊಲೀಸರು: ಅರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು ತಮ್ಮ ಕಸ್ಟಡಿಗೆ ಪಡೆದುಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿತ್ತು.ಆದರೆ ಪೊಲೀಸರು ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಪೊಲೀಸ್ ಕಸ್ಟಡಿಗೆ ಕೇಳಿಲ್ಲ.ಅಗತ್ಯ ಬಿದ್ದರೆ ಮುಂದಿನ ನಾಲ್ಕೈದು ದಿನಗಳೊಳಗೆ ಪೊಲೀಸ್ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

40 ನಿಮಿಷ ಕಾದು ಕುಳಿತಿದ್ದ ಹಂತಕರು

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದ ಹಂತಕರು ಸುಮಾರು ೪೦ ನಿಮಿಷಗಳ ಕಾಲ ಕಾದು ಕುಳಿತು ಕೃತ್ಯ ಎಸಗಿದ್ದರು ಎನ್ನುವ ವಿಚಾರ ಪೊಲೀಸ್ ತನಿಖೆ ವೇಳೆ ಬೆಳಕಿಗೆ ಬಂದಿದೆ.ಬೈಕೊಂದು ಬಂದು ಪ್ರವೀಣ್ ಅವರ ಅಂಗಡಿ ಬಳಿ ಕಾಯುತ್ತಿದ್ದ ದೃಶ್ಯ ಸ್ಥಳೀಯ ಸಿಸಿ ಕ್ಯಾಮರಾದದಲ್ಲಿ ಸೆರೆಯಾಗಿದೆ.ಇದರ ಜಾಡು ಹಿಡಿದು ತನಿಖೆ ಮುಂದುವರಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಆರೋಪಿಗಳ ವಿಚಾರಣೆ ವೇಳೆ, ಪರಾಗಿಯಾಗಿರುವ ಪ್ರಮುಖ ಆರೋಪಿಗಳ ಬಗ್ಗೆ ಕೆಲವೊಂದು ಮಹತ್ವದ ಮಾಹಿತಿ ಪೊಲೀಸರಿಗೆ ಲಭ್ಯವಾಗಿದೆ.

 

ನನ್ನ ಗಂಡನನ್ನು ಅನಾವಶ್ಯಕವಾಗಿ ವಶಪಡಿಸಿಕೊಳ್ಳಲಾಗಿದೆ

ಆರೋಪಿ ಶಫೀಕ್ ಪತ್ನಿ ಅಂಸಿಫಾ ಮಾತನಾಡಿ ನಾವೆಲ್ಲರೂ ಅಜ್ಜಿ ಮನೆಯಲ್ಲಿ ಕಾರ್ಯ ಇದ್ದರಿಂದ ಅಲ್ಲಿಗೆ ತೆರಳಿದ್ದು ಗಂಡ ಅಲ್ಲಿಗೆ ಬಂದಿದ್ದರು ಆ ಬಳಿಕ ಅವರನ್ನು ಸುಮಾರು 12.30ಗಂಟೆಗೆ ಬಂದು ವಿಚಾರಣೆ ಇದೆ ಎಂದು ಕರೆದುಕೊಂಡು ಹೋದವರು ಮತ್ತೆ ಕಳಿಸಿಲ್ಲ.ಎಸ್.ಡಿ.ಪಿ.ಐನಲ್ಲಿ ಸೋಷಿಯಲ್ ವರ್ಕರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.ಈ ಮರ್ಡರ್ ವಿಷಯ ತಿಳಿದಾಗ ಅವರಿಗೇ ಶಾಕ್ ಆಗಿತ್ತು.ಪ್ರವೀಣ್ ಹತ್ಯೆಯಾಗಿದ್ದು ಅಂದಾಗ ಅವರಿಗೆ ಹೀಗಾಯ್ತ ಎಂದು ಅಚ್ಚರಿ ಪಟ್ಟಿದ್ದರು.ಅವರ ಕಣ್ಣಲ್ಲೂ ನೀರು ಬಂದಿತ್ತು ಪ್ರವೀಣ್ ಹತ್ಯೆ ಮಾಡಿದ್ದರೆ ಅವರು ಕಣ್ಣೀರಿಡುತ್ತಿದ್ರಾ?.ಅವರ ಗೆಳೆಯರು ಹೆಚ್ಚಿನವರು ನನ್ನ ಸ್ನೇಹಿತರು ಆದರೆ ಝಾಕಿರ್ ಬಗ್ಗೆ ತಿಳಿದಿಲ್ಲ.ನನ್ನ ಗಂಡನನ್ನು ಅನಾವಶ್ಯಕವಾಗಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here