ರಾಮಕುಂಜ ಮಹಾವಿದ್ಯಾಲಯದಲ್ಲಿ ಭಾಷಾಂತರ ಕಮ್ಮಟ

0

ರಾಮಕುಂಜ: ಭಾಷೆಯನ್ನು ಬದಲಾಯಿಸುವಾಗ ಪದ ಹಾಗೂ ವಾಕ್ಯಗಳ ಮೂಲ ಭಾವಕ್ಕೆ, ಅರ್ಥಕ್ಕೆ, ಸಂದರ್ಭಕ್ಕೆ ವಿರೋಧವಾಗದಂತೆ ಎಚ್ಚರಿಕೆ ವಹಿಸಬೇಕು. ಭಾಷೆಗಳ ನಡುವೆ ಉತ್ತಮ ಬಾಂಧವ್ಯಕ್ಕೆ ಭಾಷಾಂತರ ಕಲೆ ಸಹಕಾರಿ. ಹೆಚ್ಚು ಭಾಷೆಗಳನ್ನು ಕಲಿತು ಭಾಷೆಯನ್ನು ಬೆಳೆಸಿರಿ ಎಂದು ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಚಂದ್ರಶೇಖರ ದಾಮ್ಲೆ ಹೇಳಿದರು.

ಅವರು ಕರ್ನಾಟಕ ಸರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಜಂಟಿ ಆಶ್ರಯದಲ್ಲಿ ರಾಮಕುಂಜ ಮಹಾವಿದ್ಯಾಲಯದಲ್ಲಿ ನಡೆದ “ಭಾಷಾಂತರ ಕಮ್ಮಟ”ದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಂಗಳೂರು ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ. ಅಜಕ್ಕಳ ಗಿರೀಶ್ ಭಟ್‌ರವರು ಮಾತನಾಡಿ, ಭಾಷೆಯ ಅರಿವು ಮೂಡಿಸುವುದು ಅಗತ್ಯ. ಭಾಷಾಂತರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಗಮನಾರ್ಹವಾದುದು. ಭಾಷಾಂತರ ಕಲೆಯ ಬಗ್ಗೆ ಪ್ರಾಧಿಕಾರದ ವತಿಯಿಂದ ಆನ್ಲೈನ್ ತರಬೇತಿ ನೀಡುವ ವ್ಯವಸ್ಥೆ ಇದೆ. ಲೇಖನಗಳನ್ನು ಪುಸ್ತಕಗಳನ್ನು ಭಾಷಾಂತರಿಸುವ ಆಸಕ್ತರ ಸಂಖ್ಯೆ ಇನ್ನೂ ಹೆಚ್ಚಾಗಬೇಕಾಗಿದೆ. ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ತೊಡಗಿಸಿಕೊಳ್ಳಿ ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲ ಗಣರಾಜ ಕುಂಬ್ಳೆ ಅಧ್ಯಕ್ಷತೆ ವಹಿಸಿದ್ದರು.

ಕಾಲೇಜಿನ ಉಪನ್ಯಾಸಕವೃಂದದವರು, ವಿದ್ಯಾರ್ಥಿಗಳು, ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಉಪನ್ಯಾಸಕರು, ನೆಲ್ಯಾಡಿ ಕಾಲೇಜಿನ ವಿದ್ಯಾರ್ಥಿಗಳು, ಶ್ರೀ ರಾಮಕುಂಜೇಶ್ವರ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ಅದಿತಿ ಪ್ರಾರ್ಥಿಸಿದರು. ಉಪನ್ಯಾಸಕ ಗುರುಕಿರಣ್ ಶೆಟ್ಟಿ ಸ್ವಾಗತಿಸಿ, ಉಪನ್ಯಾಸಕಿ ಸುರಕ್ಷಿತಾ ಶೆಟ್ಟಿ ವಂದಿಸಿದರು. ಉಪನ್ಯಾಸಕಿ ಜಯಶ್ರೀ ಕಾರ್ಯಕ್ರಮ ನಿರೂಪಿಸಿದರು.

ಭಾಷಾಂತರ ತರಬೇತಿ:
ಸಂಪನ್ಮೂಲ ವ್ಯಕ್ತಿಯಾಗಿದ್ದ ಪುತ್ತೂರು ಅಂಬಿಕಾ ವಿದ್ಯಾಲಯದ ಉಪನ್ಯಾಸಕ ಡಾ.ವಿನಾಯಕ ಭಟ್ಟ ಗಾಳಿಮನೆಯವರು ಕನ್ನಡ ಮತ್ತು ಸಂಸ್ಕೃತ ಪದ್ಯ ಹಾಗೂ ಗದ್ಯಗಳನ್ನು ಭಾಷಾಂತರಿಸುವ ತರಬೇತಿ ನೀಡಿ, ಸಂಸ್ಕೃತ ಜಾಗತಿಕ ಮಟ್ಟದಲ್ಲಿ ಮಾನ್ಯತೆಯುಳ್ಳ ಭಾಷೆ, ಅದರೊಂದಿಗೆ ಕನ್ನಡ ಹಾಗೂ ಭಾರತೀಯ ಭಾಷೆಗಳ ಮಧುರ ಮೈತ್ರಿಯಿದೆ. ಸಂಸ್ಕೃತದ ಜ್ಞಾನ ರಾಶಿ ಕನ್ನಡಕ್ಕೆ ಹರಿದು ಬರಲಿ ಎಂದರು. ಇನ್ನೋರ್ವ ಸಂಪನ್ಮೂಲ ವ್ಯಕ್ತಿ ತುಮಕೂರು ವಿವಿಯ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಸಿಬಂತಿ ಪದ್ಮನಾಭ ಕೆ.ವಿ.ಯವರು, ಭಾಷಾಂತರ ತರಬೇತಿಯನ್ನು ನೀಡಿ, ಸಂಹನವು ಸುಂದರ ಕಲೆ. ಅದಕ್ಕೆ ಭಾಷೆಯ ಸ್ವರೂಪ ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಪ್ರತಿಯೊಂದು ಭಾಷಾ ಸಮುದಾಯದಲ್ಲೂ ಆಯಾ ಭಾಷಾ ಪದಗಳಿಗೆ ಪ್ರತ್ಯೇಕ ಅರ್ಥಗಳಿರುತ್ತದೆ. ಆದ್ದರಿಂದ ಪ್ರಯೋಗದ ಸಂದರ್ಭ ರೂಢಿ ನುಡಿಗಟ್ಟು ವ್ಯಾಕರಣ ಇತ್ಯಾದಿಗಳಲ್ಲಿ ಕೌಶಲವನ್ನು ಸಾಧಿಸುತ್ತಾ ಭಾಷಾಂತರ ಕಲೆಯನ್ನು ಕರಗತ ಮಾಡಿಕೊಳ್ಳುವುದು ಸೂಕ್ತ. ಇಂದು ಬಹು ಬೇಡಿಕೆ ಇರುವ ಈ ಕಲೆ ಅನಂತ ಔದ್ಯೋಗಿಕ ಔದ್ಯಮಿಕ ಸಾಧ್ಯತೆಗಳನ್ನು ಸೃಷ್ಟಿಸಿದೆ ಎಂದರು.

LEAVE A REPLY

Please enter your comment!
Please enter your name here