ನೆಲ್ಯಾಡಿ ಗ್ರಾಮಸಭೆ:ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ಮಂಜೂರಾದ ಜಾಗಕ್ಕೆ ಇಲಾಖೆ ಅಡ್ಡಿ- ಆರೋಪ

0

  • ಕೆಸಿಡಿಸಿಯಿಂದ ಮರ ತೆರವಿಗೆ ಆಕ್ಷೇಪ; ಉಪವಲಯಾರಣ್ಯಾಧಿಕಾರಿ ಸ್ಪಷ್ಟನೆ

 

ನೆಲ್ಯಾಡಿ: ತೊಟ್ಟಿಲಗುಂಡಿ ಎಂಬಲ್ಲಿ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ಮೀಸಲಾಗಿರುವ ಜಾಗಕ್ಕೆ ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂದು ಆರೋಪಿಸಿದ ಗ್ರಾಮಸ್ಥರು ಮುಂದಿನ ಗ್ರಾಮ ಸಭೆಯೊಳಗೆ ಮಂಗಳೂರು ವಿವಿಗೆ ಜಾಗ ಬಿಟ್ಟುಕೊಡಬೇಕು. ಇಲ್ಲದೇ ಇದ್ದಲ್ಲಿ ಗ್ರಾಮಸಭೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ ಘಟನೆ ನೆಲ್ಯಾಡಿ ಗ್ರಾಮ ಸಭೆಯಲ್ಲಿ ನಡೆದಿದೆ. ಸದ್ರಿ ಜಾಗದಲ್ಲಿರುವ ಮರ ತೆರವಿಗೆ ಕೆಸಿಡಿಸಿ ಆಕ್ಷೇಪಿಸುತ್ತಿದೆ ಎಂದು ಉಪವಲಯಾರಣ್ಯಾಧಿಕಾರಿಯವರು ಗ್ರಾಮಸ್ಥರ ಆರೋಪಕ್ಕೆ ಸಭೆಯಲ್ಲಿ ಸ್ಪಷ್ಟನೆ ನೀಡಿದರು.

ಸಭೆ ಜು.25ರಂದು ಗ್ರಾ.ಪಂ.ಅಧ್ಯಕ್ಷೆ ಚೇತನರವರ ಅಧ್ಯಕ್ಷತೆಯಲ್ಲಿ ನೆಲ್ಯಾಡಿ ಸರಕಾರಿ ಹಿ.ಪ್ರಾ.ಶಾಲೆಯಲ್ಲಿ ನಡೆಯಿತು. ಪಶುವೈದ್ಯಾಧಿಕಾರಿ ಡಾ.ಅಜಿತ್ ನೋಡೆಲ್ ಅಧಿಕಾರಿಯಾಗಿದ್ದರು. ತೊಟ್ಟಿಲಗುಂಡಿಯಲ್ಲಿ ಮಂಗಳೂರು ವಿವಿ ನೆಲ್ಯಾಡಿ ಘಟಕ ಕಾಲೇಜಿಗೆ ೨೪ ಎಕ್ರೆ ಜಾಗ ಮಂಜೂರುಗೊಂಡು ಆರ್‌ಟಿಸಿಯೂ ಆಗಿದೆ. ಆದರೆ ಅಲ್ಲಿ ಕಟ್ಟಡ ನಿರ್ಮಾಣ ಸಂಬಂಧ ಮರ ತೆರವುಗೊಳಿಸಲು ಅರಣ್ಯ ಇಲಾಖೆ ಅಡ್ಡಿಪಡಿಸುತ್ತಿದೆ ಎಂಬ ಮಾಹಿತಿ ಇದೆ. ನೆಲ್ಯಾಡಿಯಲ್ಲಿ ಪದವಿ ಕಾಲೇಜು ಆಗಬೇಕೆಂಬುದು ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿದೆ. ಇದಕ್ಕೆ ಅರಣ್ಯ ಇಲಾಖೆ ಸಹಕಾರ ನೀಡಬೇಕೆಂದು ಗ್ರಾಮಸ್ಥರು ಹೇಳಿದರು. ಪದವಿ ಕಾಲೇಜು ಇಲ್ಲಿಂದ ಕಡಬಕ್ಕೆ ಎತ್ತಂಗಡಿ ಆಗಲಿದೆ ಎಂಬ ಮಾಹಿತಿಯೂ ಇದೆ. ಯಾವುದೇ ಕಾರಣಕ್ಕೂ ನೆಲ್ಯಾಡಿಯಿಂದ ಕಾಲೇಜು ಸ್ಥಳಾಂತರಗೊಳ್ಳಬಾರದೂ ಎಂದು ಗ್ರಾಮಸ್ಥರು ಹೇಳಿದರು. ಗ್ರಾಮಸ್ಥರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಉಪವಲಯಾರಣ್ಯಾಧಿಕಾರಿ ಸುನಿಲ್‌ಕುಮಾರ್‌ರವರು, ಸದ್ರಿ ಜಾಗ ಅರಣ್ಯ ಇಲಾಖೆಯಿಂದ ಗೇರು ಅಭಿವೃದ್ಧಿ ನಿಗಮದವರು ಲೀಸ್‌ಗೆ ಪಡೆದುಕೊಂಡು ಅಲ್ಲಿ ಗೇರು ಗಿಡ ಬೆಳೆಸಿದ್ದಾರೆ. ಅರಣ್ಯ ಇಲಾಖೆಯಿಂದ ಯಾವುದೇ ಅಡ್ಡಿ ಮಾಡುತ್ತಿಲ್ಲ. ಗೇರು ಮರ ತೆರವಿಗೆ ಗೇರು ಅಭಿವೃದ್ಧಿ ನಿಗಮದವರಿಂದ ಆಕ್ಷೇಪಣೆ ಇದೆ ಎಂದರು. ಅಲ್ಲಿ ಜಾಗ ಒತ್ತುವರಿ ಆಗಿದೆ. ಇದಕ್ಕೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಈ ಬಗ್ಗೆ ಸಾಕಷ್ಟೂ ಚರ್ಚೆ ನಡೆದು ಮುಂದಿನ ಗ್ರಾಮಸಭೆಯೊಳಗೆ ಮಂಗಳೂರು ವಿವಿಯವರಿಗೆ ಜಾಗ ಬಿಟ್ಟುಕೊಡಬೇಕು. ಇಲ್ಲದೇ ಇದ್ದಲ್ಲಿ ಗ್ರಾಮಸಭೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು. ಗ್ರಾಮಸ್ಥರಾದ ವರ್ಗೀಸ್ ಮಾದೇರಿ, ಜಾನ್ ಪಿ.ಎಸ್., ಗಣೇಶ್ ಪೊಸೊಳಿಕೆ, ನಝೀರ್ ಎಂ.ಎನ್., ಅಬ್ದುಲ್ಲಾ ಮೊರಂಕಳ, ವೆಂಕಟ್ರಮಣ ಆರ್., ಅಣ್ಣಿ ಎಲ್ತಿಮಾರ್ ಮತ್ತಿತರರು ವಿಷಯ ಪ್ರಸ್ತಾಪಿಸಿದರು.

ಪಶುಚಿಕಿತ್ಸಾಲಯ ಮೇಲ್ದರ್ಜೆಗೇರಿಸಿ:
ನೆಲ್ಯಾಡಿಯಲ್ಲಿರುವ ಪಶು ಚಿಕಿತ್ಸಾಲಯದಲ್ಲಿನ ಹಿರಿಯ ಪಶು ಪರೀಕ್ಷಕರು ವರ್ಗಾವಣೆಗೊಂಡಿದ್ದಾರೆ. ಇಲ್ಲಿ ಬದಲಿ ಪಶು ಪರೀಕ್ಷಕರ ನೇಮಕ ಆಗಿಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಹೇಳಿದರು. ಈ ಬಗ್ಗೆ ಚರ್ಚೆ ನಡೆದು ನೆಲ್ಯಾಡಿಯಲ್ಲಿರುವ ಪ್ರಾಥಮಿಕ ಪಶು ಚಿಕಿತ್ಸಾಲಯವನ್ನು ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಲು ನಿರ್ಣಯಿಸಲಾಯಿತು.

ಡಿಸಿ ಗ್ರಾಮವಾಸ್ತವ್ಯಕ್ಕೆ ನಿರ್ಣಯ:
ಗ್ರಾಮ ಪಂಚಾಯತ್‌ನ ನಿರ್ಣಯಗಳಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ಇದು ನೋವಿನ ವಿಚಾರ ಆಗಿದೆ ಎಂದು ಗ್ರಾ.ಪಂ.ಸದಸ್ಯ ಜಯಾನಂದ ಬಂಟ್ರಿಯಾಲ್ ಹೇಳಿದರು. ನೆಲ್ಯಾಡಿ ಹೋಬಳಿ ಕೇಂದ್ರ ಆಗಬೇಕೆಂಬ ಬೇಡಿಕೆ ಹಲವು ಸಮಯದಿಂದ ಇದೆ. ನೆಲ್ಯಾಡಿಯಲ್ಲಿ ಸರಿಯಾದ ಬಸ್ ನಿಲ್ದಾಣ ಇಲ್ಲ. ಇಲ್ಲಿನ ಯಾವ ಬೇಡಿಕೆಗೂ ಸ್ಪಂದನೆ ಸಿಗುತ್ತಿಲ್ಲ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ನ್ಯಾಯವಾದಿ, ನೋಟರಿ ಇಸ್ಮಾಯಿಲ್ ನೆಲ್ಯಾಡಿಯವರು ನೆಲ್ಯಾಡಿಯಲ್ಲಿ ಜಿಲ್ಲಾಧಿಕಾರಿಯವರ ಗ್ರಾಮವಾಸ್ತವ್ಯ ಆಗಬೇಕು. ಇದರಿಂದ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಸಿಗಬಹುದು ಎಂದರು. ನೆಲ್ಯಾಡಿಯಲ್ಲಿ ಡಿಸಿ ಗ್ರಾಮ ವಾಸ್ತವ್ಯಕ್ಕೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಆಸ್ಪತ್ರೆಗೆ ಹೆಚ್ಚಿನ ಸೌಕರ್ಯ ನೀಡಿ:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಸವ ವಾರ್ಡ್, ಆಸ್ಪತ್ರೆಗೆ ಆಂಬುಲೆನ್ಸ್ ವ್ಯವಸ್ಥೆ ಆಗಬೇಕೆಂದು ಗ್ರಾಮಸ್ಥರು ಬೇಡಿಕೆ ಇಟ್ಟರು. ನೆಲ್ಯಾಡಿ ಆಸ್ಪತ್ರೆಗೆ ವಾರಕ್ಕೊಮ್ಮೆ ಮಕ್ಕಳ ತಜ್ಞರನ್ನು ಕರೆಸಬೇಕೆಂದೂ ಗ್ರಾಮಸ್ಥ ಗಣೇಶ್ ಪೊಸೊಳಿಕೆ ಒತ್ತಾಯಿಸಿದರು. ವೈದ್ಯರು, ಆರೋಗ್ಯ ಸಹಾಯಕಿಯರು, ಆಶಾ ಕಾರ್ಯಕರ್ತೆಯರು ಕೋವಿಡ್ ಸಂದರ್ಭದಲ್ಲಿ ಉತ್ತಮ ಕೆಲಸ ನಿರ್ವಹಿಸಿರುವುದಕ್ಕೆ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದರು.

ಹೊರರಾಜ್ಯದ ಕಾರ್ಮಿಕರ ಮೇಲೆ ನಿಗಾ ಇರಿಸಿ:
ನೆಲ್ಯಾಡಿ ಭಾಗದಲ್ಲಿ ಹೊರ ರಾಜ್ಯ, ಜಿಲ್ಲೆಗಳ ನೂರಾರು ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇಂತವರ ಮೇಲೆ ನಿಗಾ ಇರಿಸಬೇಕೆಂದು ಗ್ರಾಮಸ್ಥರು ಪೊಲೀಸ್ ಇಲಾಖೆಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ನೆಲ್ಯಾಡಿ ಹೊರಠಾಣಾ ಹೆಡ್‌ಕಾನ್ಸ್‌ಸ್ಟೇಬಲ್ ಬಾಲಕೃಷ್ಣರವರು, ಕಾರ್ಮಿಕರ ಆಧಾರ್ ಕಾರ್ಡ್ ನೀಡುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಕಾರ್ಮಿಕ ಕಾರ್ಡ್‌ಗೆ ಆಗ್ರಹ:
ರಬ್ಬರ್ ಟ್ಯಾಪಿಂಗ್ ಕಾರ್ಮಿಕರಿಗೂ ಕಾರ್ಮಿಕ ಕಾರ್ಡ್ ನೀಡುವ ಸಂಬಂಧ ಕ್ರಮ ಕೈಗೊಳ್ಳಬೇಕೆಂದು ಜಿ. ವರ್ಗೀಸ್ ಮಾದೇರಿ ಆಗ್ರಹಿಸಿದರು. ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕರು ಅತ್ಯಧಿಕ ಸಂಖ್ಯೆಯಲ್ಲಿ ಇದ್ದಾರೆ. ಈ ಕಾರ್ಮಿಕರಿಗೆ ಸರಕಾರದಿಂದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ. ಆದ್ದರಿಂದ ರಬ್ಬರ್ ಟ್ಯಾಪರ್‍ಸ್‌ಗಳಿಗೂ ಕಾರ್ಮಿಕ ಕಾರ್ಡ್ ನೀಡುವ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡುವುದೆಂದು ನಿರ್ಣಯಿಸಲಾಯಿತು.

ಅಪೂರ್ಣ ಕಿಂಡಿ ಅಣೆಕಟ್ಟು;
ಮಾದೇರಿ-ತೋಟ ಎಂಬಲ್ಲಿನ ಕಿಂಡಿಅಣೆಕಟ್ಟು ಅಪೂರ್ಣವಾಗಿದೆ. ಅಲ್ಲಿಗೆ ಸರಿಯಾದ ದಾರಿಯೂ ಇಲ್ಲ, ಅದೊಂದು ನಿಷ್ಪ್ರಯೋಜಕ ಯೋಜನೆಯಾಗಿದೆ ಎಂದು ಚಂದ್ರಶೇಖರ ಭಟ್ ಮಾಪಲ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಆನಂದ ಗೌಡ ಪಿಲವೂರುರವರು, ಇದು ಕಿರು ನೀರಾವರಿ ಇಲಾಖೆಯವರ ಯೋಜನೆಯಾಗಿದೆ. ಇಲ್ಲಿ ದಾರಿಯ ಸಮಸ್ಯೆ ಇತ್ತು. ಕಂದಾಯ ಹಾಗೂ ಪಂಚಾಯತ್ ವತಿಯಿಂದ ಪರಿಶೀಲನೆ ನಡೆಸಿ ಸಮಸ್ಯೆ ಬಗೆಹರಿಸಲಾಗಿದೆ. ಮುಂದಿನ ಬೇಸಿಗೆಯ ವೇಳೆಗೆ ಯೋಜನೆ ಕಾರ್ಯಗತಗೊಳ್ಳಲಿದೆ ಎಂದು ಹೇಳಿದರು.

ಮೆಸ್ಕಾಂನಿಂದ ತಕ್ಷಣ ಸ್ಪಂದನೆ:
ನೆಲ್ಯಾಡಿ ಭಾಗದಲ್ಲಿ ಬೀಸಿದ ಭಾರೀ ಗಾಳಿ ಹಾಗೂ ಮಳೆಗೆ ಹಲವು ಕಡೆಗಳಲ್ಲಿ ವಿದ್ಯುತ್ ಕಂಬ, ತಂತಿಗಳಿಗೆ ಹಾನಿಯಾಗಿತ್ತು. ಇದಕ್ಕೆ ತಕ್ಷಣ ಸ್ಪಂದನೆ ನೀಡಿದ ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ರಮೇಶ್ ಕುಮಾರ್ ಹಾಗೂ ಸಿಬ್ಬಂದಿಗಳು ಗ್ರಾಹಕರಿಗೆ ತೊಂದರೆಯಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದಾರೆ. ಇದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಸದಸ್ಯ ಜಯಾನಂದ ಬಂಟ್ರಿಯಾಲ್ ಹೇಳಿದರು. ಮಳೆ,ಗಾಳಿಯಿಂದ ಅಡಿಕೆ, ರಬ್ಬರ್ ಬೆಳೆಗೆ ಸಾಕಷ್ಟು ಹಾನಿಯಾಗಿದೆ. ಇದಕ್ಕೆ ಹೆಚ್ಚಿನ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಕಂದಾಯ ಇಲಾಖೆಯನ್ನು ಆಗ್ರಹಿಸಿದರು.

ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಗೆ ಗ್ರಾಮ ಪಂಚಾಯತ್‌ನಿಂದ ಅನುದಾನ ನೀಡಬೇಕೆಂದು ಗ್ರಾಮಸ್ಥ ವೆಂಕಟ್ರಮಣ ಆರ್.,ಒತ್ತಾಯಿಸಿದರು. ರಾಮನಗರ ಬಲ್ಯದಲ್ಲಿ ಆನೆ ದಾಳಿ ತಡೆಗೆ ಸೋಲಾರ್ ಲ್ಯಾಂಪ್ ಅಳವಡಿಸಬೇಕೆಂದು ಸದಸ್ಯ ರವಿಪ್ರಸಾದ್‌ರವರು ಅರಣ್ಯ ಇಲಾಖೆಗೆ ಮನವಿ ಮಾಡಿದರು. ಬೆಥನಿ-ಪಡ್ಡಡ್ಕ ರಸ್ತೆ ದುರಸ್ತಿ, ಸರೋಳಿಕೆರೆ ರಸ್ತೆ ದುರಸ್ತಿಗೆ ಗ್ರಾಮಸ್ಥರು ಮನವಿ ಮಾಡಿದರು.

ಮೆಸ್ಕಾಂ ಜೆಇ ರಮೇಶ್‌ಕುಮಾರ್, ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿಶಿರ, ನೆಲ್ಯಾಡಿ ಹೊರಠಾಣೆ ಹೆಡ್ ಕಾನ್ಸ್‌ಸ್ಟೇಬಲ್ ಬಾಲಕೃಷ್ಣ, ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್ ಕೆ.ವಿ., ಉಪವಲಯಾರಣ್ಯಾಧಿಕಾರಿ ಸುನಿಲ್‌ಕುಮಾರ್, ಕೃಷಿ ಅಧಿಕಾರಿ ಭರಮಣ್ಣವರ್, ಗ್ರಾಮಕರಣಿಕರಾದ ಅಶ್ವಿನಿ, ಸಮಾಜ ಕಲ್ಯಾಣ ಇಲಾಖೆಯ ವಿಠಲ, ಜಿ.ಪಂ.ಇಂಜಿನಿಯರ್ ಎಸ್.ಎಸ್.ಹುಕ್ಕೇರಿಯವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷ ಅಬ್ದುಲ್ ಜಬ್ಬಾರ್, ಸದಸ್ಯರಾದ ಜಯಾನಂದ ಬಂಟ್ರಿಯಾಲ್, ರವಿಪ್ರಸಾದ್ ಶೆಟ್ಟಿ, ಮಹಮ್ಮದ್ ಇಕ್ಬಾಲ್, ಆನಂದ ಗೌಡ ಪಿಲವೂರು, ಪ್ರಕಾಶ್ ಕೆ., ಉಷಾ ಜೋಯಿ, ರೇಷ್ಮಾ ಶಶಿ, ಪುಷ್ಪಾ, ಜಯಲಕ್ಷ್ಮಿ, ಶ್ರೀಲತಾ ಸಿ.ಹೆಚ್., ಯಾಕುಬ್ ಯು ಯಾನೆ ಸಲಾಂ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಮಂಜುಳ ಎನ್.,ಸ್ವಾಗತಿಸಿ, ವರದಿ ಮಂಡಿಸಿದರು. ಸಿಬ್ಬಂದಿ ಶಿವಪ್ರಸಾದ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

ಸೇತುವೆ, ರಸ್ತೆ ದುರಸ್ತಿಗೊಳಿಸಿ:
ನೆಲ್ಯಾಡಿಯಿಂದ ಪಡುಬೆಟ್ಟು ಸಂಪರ್ಕಿಸುವ ರಸ್ತೆಯ ನೆಲ್ಯಾಡಿ ಬೈಲು ಎಂಬಲ್ಲಿರುವ ಸೇತುವೆ ತೀರಾ ನಾದುರಸ್ತಿಯಲ್ಲಿದೆ. ಇಲ್ಲಿ ರಸ್ತೆಯೂ ಕೆಟ್ಟು ಹೋಗಿದ್ದು ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿದೆ. ಇಲ್ಲಿ ಹೊಸ ಸೇತುವೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ನೆಲ್ಯಾಡಿ-ಪುತ್ಯೆ ರಸ್ತೆಯೂ ಹೊಂಡ,ಗುಂಡಿಗಳಿಂದ ಕೂಡಿದೆ. ಇದರ ದುರಸ್ತಿಗೆ ಕ್ರಮ ಕೈಗೊಳ್ಳಬೇಕೆಂದು ನಿವೃತ್ತ ಶಿಕ್ಷಣ ವೆಂಕಟ್ರಮಣರವರು ಆಗ್ರಹಿಸಿದರು. ಸೇತುವ ಹಾಗೂ ರಸ್ತೆ ವಿಚಾರವನ್ನು ಸಚಿವ ಎಸ್.ಅಂಗಾರ ಅವರ ಗಮನಕ್ಕೆ ತರಲಾಗಿದೆ. ಅನುದಾನ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ ಎಂದು ಸದಸ್ಯ ರವಿಪ್ರಸಾದ್ ಶೆಟ್ಟಿಯವರು ಹೇಳಿದರು.

LEAVE A REPLY

Please enter your comment!
Please enter your name here