ಸಾಯಂಕಾಲ 6 ರಿಂದ ಬೆಳಿಗ್ಗೆ 6ರ ತನಕ ಅಂಗಡಿ, ಮುಂಗಟ್ಟು ಬಂದ್

0
  • ಜು.29-ಆ.1 ರ ತನಕ ಜಾರಿ
  • ಅವಶ್ಯವಿಲ್ಲದಿದ್ದರೆ ವಸತಿ ಸಮುಚ್ಛಯದಿಂದ ಹೊರಬರಬೇಡಿ
  • ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಮಾತ್ರ ವಾಹನ ಬಳಕೆ
  • ಅನಗತ್ಯ ವಾಹನಗಳ ಓಡಾಟಕ್ಕಿಲ್ಲ ಅವಕಾಶ
  • ಸಭೆ, ಸಮಾರಂಭ, ಉತ್ಸವ ಮುಂದೂಡಿ
  • ನಿಗದಿಯಾದ ಖಾಸಗಿ ಕಾರ್ಯಕ್ರಮವೂ ಬೇಡ

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಜು.೨೯ರಿಂದ ಆ.೧ರ ತನಕ ಸಾಯಂಕಾಲ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆ ತನಕ ಎಲ್ಲಾ ಅಂಗಡಿ, ಮುಂಗಟ್ಟುಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಅವರು ಆದೇಶ ಹೊರಡಿಸಿದ್ದಾರೆ.

ದ.ಕ.ಜಿಲ್ಲೆಯಲ್ಲಿ ಸಂಭವಿಸಿದ ಅಹಿತಕರ ಘಟನೆಗಳಿಂದಾಗಿ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದ್ದು ಉದ್ವಿಗ್ನತೆಯಿಂದ ಕೂಡಿದೆ ಹಾಗೂ ಕಾನೂನು ಸುವ್ಯವಸ್ಥೆಗೆ ತೊಂದರೆಯುಂಟಾಗುವ ಸಾಧ್ಯತೆ ಇರುವುದರಿಂದ ಈಗಾಗಲೇ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿ ಹಾಗೂ ದ.ಕ.ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಭಾರತೀಯ ದಂಡ ಸಂಹಿತೆ ೧೯೭೩ರ ಕಲಂ ೧೪೪ರನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.ಈ ಹಿನ್ನೆಲೆಯಲ್ಲಿ ಇತ್ತೀಚಿನ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿರುವ ಹಿನ್ನೆಲೆಯಲ್ಲಿ ಈ ಆದೇಶ ಹೊರಡಿಸಲಾಗಿದೆ.ಜು.೨೯ರಿಂದ ಆಗಸ್ಟ್ ೧ರವರೆಗೆ ಸಂಜೆ ೬ ಗಂಟೆಯಿಂದ ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.

ಯಾವುದಕ್ಕಿದೆ-ಯಾವುದಕ್ಕಿಲ್ಲ ಅವಕಾಶ: ಸಾಯಂಕಾಲ ೬ ಗಂಟೆ ಬಳಿಕ ಆಸ್ಪತ್ರೆಗಳು, ಔಷಧಿ ಅಂಗಡಿಗಳು ಹಾಗೂ ಇತರ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಂಗಡಿಗಳು, ವಾಣಿಜ್ಯ ಸಂಕೀರ್ಣಗಳನ್ನು,ಮಾಲ್, ಚಿತ್ರಮಂದಿರಗಳನ್ನು ಮುಚ್ಚಬೇಕು.
ಸಾರ್ವಜನಿಕರು ತುರ್ತು ಮತ್ತು ಅವಶ್ಯಕ ಕಾರ್ಯಗಳನ್ನು ಹೊರತುಪಡಿಸಿ ಇನ್ಯಾವುದೇ ಕಾರಣಗಳಿಗೆ ವಸತಿ ಸಮುಚ್ಛಯದಿಂದ ಹೊರಬರುವುದನ್ನು ಕಡ್ಡಾಯವಾಗಿ ನಿಬಂಧಿಸಲಾಗಿದೆ.

ತುರ್ತು ಸಂದರ್ಭದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಅವಶ್ಯಕವೆಂದು ಕಂಡು ಬಂದಲ್ಲಿ ಮಾತ್ರ ಬಸ್ಸು, ಅಟೋರಿಕ್ಷಾ ಮತ್ತು ಟ್ಯಾಕ್ಸಿ ವಾಹನಗಳ ಸಂಚಾರಕ್ಕೆ ಅವಶ್ಯಕವಿರುತ್ತದೆ.ಸಾರ್ವಜನಿಕ ಸಂಚಾರ ಮತ್ತು ಯಾರಾದರೂ ಬೇರೆ ಊರುಗಳಿಗೆ ಪ್ರಯಾಣಿಸುವವರಿದ್ದರೆ ಅಂತವರು ಸೂಕ್ತ ಟಿಕೆಟ್ ಹಾಗೂ ದಾಖಲೆಗಳನ್ನು ತಪಾಸಣಾ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪೊಲೀಸ್ ಸಿಬ್ಬಂದಿಗಳಿಗೆ ತೋರಿಸಿ ಪ್ರಯಾಣಿಸಲು ಅವಕಾಶವಿದೆ.ಅವಶ್ಯಕ ವಸ್ತುಗಳ ಸಾಗಾಣಿಕೆಗೆ ಮಾತ್ರ ವಾಹನಗಳನ್ನು ಬಳಸಲು ಅವಕಾಶ ನೀಡಲಾಗಿದೆ.ಅನಗತ್ಯ ವಾಹನಗಳ ಸಂಚಾರಕ್ಕೆ ಅವಕಾಶವಿರುವುದಿಲ್ಲ.

ಎಲ್ಲಾ ಸಭೆ, ಸಮಾರಂಭಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿದ ಉತ್ಸವ, ಜಾತ್ರೆಗಳನ್ನು ಮುಂದೂಡಬೇಕು.ಈಗಾಗಲೇ ನಿಗದಿಯಾಗಿರುವ ಖಾಸಗಿ ಸಮಾರಂಭಗಳನ್ನೂ ಮುಂದೂಡಬೇಕು.ಜಿಲ್ಲೆಯ ಎಲ್ಲ ಸಂಧ್ಯಾ ಕಾಲೇಜುಗಳಿಗೆ ೨ ದಿನ ರಜೆ ಘೋಷಿಸಲಾಗಿದೆ.ಆದರೆ ಜಿಲ್ಲೆಯಾದ್ಯಂತ ಎಲ್ಲಾ ಶಾಲೆ,ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸುವುದು.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಗಸ್ತು ವ್ಯವಸ್ಥೆಯನ್ನು ಮಾಡಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಡಾ.ರಾಜೇಂದ್ರ ಕೆ.ವಿ.ಅವರು ಆದೇಶ ಹೊರಡಿಸಿದ್ದಾರೆ.

ಗುಪ್ತಚರ ಇಲಾಖೆಯ ವರದಿಗಳು ಮತ್ತು ಪೊಲೀಸ್ ಇಲಾಖೆಯ ಮಾಹಿತಿಗಳ ಆಧಾರದಲ್ಲಿ ಮುಂದಿನ ಮೂರು ದಿನಗಳು ತುಂಬಾ ಸೂಕ್ಷ್ಮವಾಗಿರುವುದರಿಂದ ಈ ಕಟ್ಟುನಿಟ್ಟಿನ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಯವರು ತಿಳಿಸಿದ್ದಾರೆ.

ಪರಿಸ್ಥಿತಿ ನಿಂತ್ರಣದಲ್ಲಿದೆ ಜನರ ಸಹಕಾರ ಅತ್ಯವಶ್ಯ: ಜಿಲ್ಲೆಯಲ್ಲಿ ಸದ್ಯಕ್ಕೆ ಉದ್ವಿಗ್ನ ಸ್ಥಿತಿ ಇದ್ರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ.ಈ ಸರಣಿ ಹತ್ಯೆಗಳನ್ನು ತಡೆಯಲು ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತು ಜಿಲ್ಲೆಯ ಉಳಿದೆಡೆಗಳಲ್ಲಿ ಪೊಲೀಸರು ಎಲ್ಲಾ ಪ್ರಯತ್ನಗಳನ್ನು ಮಾಡ್ತಾ ಇದ್ದಾರೆ.ಆದಷ್ಟು ಕೆ.ಎಸ್.ಆರ್.ಪಿ. ಬೆಟಾಲಿಯನ್‌ಗಳನ್ನು ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜಿಸುವ ಮೂಲಕ ಸೂಕ್ತ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಂಡು ಈ ಮೂಲಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಪೊಲೀಸ್ ಇಲಾಖೆ ಸರ್ವ ಪ್ರಯತ್ನವನ್ನು ಮಾಡ್ತಾ ಇದೆ.ಇನ್ನು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಸಾರ್ವಜನಿಕರ ಸಹಕಾರವೂ ಅತ್ಯಗತ್ಯವಾಗಿದೆ.ಹಾಗಾಗಿ ಸಾರ್ವಜನಿಕರು ಅನಗತ್ಯ ಓಡಾಟ ನಡೆಸುವುದನ್ನು ತಪ್ಪಿಸುವ ಮೂಲಕ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದ್ದಾರೆ.

ಇಂದು ಶಾಂತಿ ಸಭೆ: ಜು.೩೦ರಂದು ಹಿರಿಯ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಎಲ್ಲಾ ಸಮುದಾಯಗಳ, ಸಂಘಟನೆಗಳ ಮತ್ತು ಪಕ್ಷಗಳ ಹಿರಿಯರನ್ನು ಜಿಲ್ಲೆಯ ಪ್ರತೀ ಪೊಲೀಸ್ ಠಾಣಾ ವ್ಯಾಪ್ತಿಯಿಂದ ಕರೆಯಿಸಿಕೊಂಡು ಅವರೆಲ್ಲರ ಉಪಸ್ಥಿತಿಯಲ್ಲಿ ಶಾಂತಿ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ೧೧ ಗಂಟೆಗೆ ನಡೆಯಲಿದೆ.ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯವಾಗಿರುವ ಸಲಹೆ ಸೂಚನೆಗಳನ್ನು ಈ ಸಭೆಯಲ್ಲಿ ಪಡೆದುಕೊಳ್ಳಲಾಗುವುದು ಮತ್ತು ಜಿಲ್ಲಾಡಳಿತ ಇದುವರೆಗೆ ಕೈಗೊಂಡಿರುವ ಕ್ರಮಗಳ ಕುರಿತಾಗಿರುವ ಮಾಹಿತಿಯನ್ನು ಸಹ ಈ ಸಭೆಯಲ್ಲಿ ಹಂಚಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

 

ಆ.1 ರವರೆಗೆ ಮದ್ಯ ಮಾರಾಟ ಬಂದ್

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಪುತ್ತೂರು, ಕಡಬ, ಸುಳ್ಯ, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕು ವ್ಯಾಪ್ತಿಯಲ್ಲಿ ಆ.1 ರವರೆಗೆ ಎಲ್ಲ ರೀತಿಯ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆ ಮತ್ತು ಮದ್ಯ ಮಾರಾಟವನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಆ.6 ರ ಮಧ್ಯರಾತ್ರಿವರೆಗೆ ನಿಷೇಧಾಜ್ಞೆ ವಿಸ್ತರಣೆ

ದಕ್ಷಿಣ ಕನ್ನಡ ಪೊಲೀಸ್ ಘಟಕ ವ್ಯಾಪ್ತಿಯ ತಾಲೂಕುಗಳಲ್ಲಿ ಆ.6ರ ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಾಜ್ಞೆಯನ್ನು ವಿಸ್ತರಿಸಿ ಜಿಲ್ಲಾಧಿಕಾರಿಯವರು ಆದೇಶ ಮಾಡಿದ್ದಾರೆ.ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವುದು ಅತೀ ಅವಶ್ಯಕವಾಗಿರುವ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸೂಕ್ತ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಅಗತ್ಯವಿರುವುದರಿಂದ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144  ರನ್ವಯ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯಲ್ಲಿ ಬರುವ ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ಜು.29 ರ ರಾತ್ರಿ 12 ಗಂಟೆಯಿಂದ ಆಗಸ್ಟ್ 6 ರ ಮಧ್ಯರಾತ್ರಿ 12  ಗಂಟೆಯವರೆಗೆ ನಿಷೇಧಾಜ್ಞೆಯನ್ನು ಮುಂದುವರಿಸಲಾಗಿದೆ.

 

LEAVE A REPLY

Please enter your comment!
Please enter your name here