ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ:ತನಿಖೆಯ ಜವಾಬ್ದಾರಿ ಎನ್.ಐ.ಎ.ಗೆ -ಸಿ.ಎಂ ಘೋಷಣೆ

0

ಪುತ್ತೂರು: ಜುಲೈ ೨೬ರಂದು ರಾತ್ರಿ ೮.೩೫ರ ವೇಳೆಗೆ ಬೆಳ್ಳಾರೆಯಲ್ಲಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು (೩೪ವ)ರವರ ಬರ್ಬರ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲು ಸರಕಾರ ತೀರ್ಮಾನಿಸಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಿಸಿದ್ದಾರೆ.
ಹಿಂದೂ ಸಂಘಟನೆಗಳ ಪ್ರಬಲ ಆಗ್ರಹಕ್ಕೆ ಮಣಿದ ಸರಕಾರ: ಯುವವಾಹಿನಿಯ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ, ಯುವವಾಹಿನಿ ಸುಳ್ಯ ಘಟಕದ ಮಾಜಿ ಅಧ್ಯಕ್ಷರೂ, ಬಿಜೆಪಿ ಯುವಮೋರ್ಛಾ ಜಿಲ್ಲಾ ಘಟಕದ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದು ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿ ತೊಡಗಿಸಿಕೊಂಡಿದ್ದ ಬೆಳ್ಳಾರೆ ನೆಟ್ಟಾರಿನ ಪ್ರವೀಣ್‌ರವರನ್ನು ಬೆಳ್ಳಾರೆಯಲ್ಲಿ ಅವರ ಮಾಲಕತ್ವದ ಅಕ್ಷಯ ಚಿಕನ್ ಸೆಂಟರ್ ಮುಂಭಾಗದಲ್ಲಿ ಕೊಚ್ಚಿ ಕೊಲೆ ಮಾಡಿದ ಘಟನೆ ದೇಶಾದ್ಯಂತ ಕಿಚ್ಚು ಹಚ್ಚಿತ್ತು. ಪ್ರವೀಣ್‌ರವರನ್ನು ಪುತ್ತೂರು ಪ್ರಗತಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆ ತಂದಾಗ ನಡೆದಿದ್ದ ಪ್ರತಿಭಟನೆ, ಮರುದಿನ ಮರಣೋತ್ತರ ಪರೀಕ್ಷೆ ನಡೆದು ಪುತ್ತೂರು ಸರಕಾರಿ ಸಾರ್ವಜನಿಕ ಆಸ್ಪತ್ರೆಯಿಂದ ಬೆಳ್ಳಾರೆಗೆ ಸಾವಿರಾರು ಮಂದಿಯ ಸಮ್ಮುಖದಲ್ಲಿ ನಡೆದ ಪ್ರವೀಣ್‌ರವರ ಶವಯಾತ್ರೆ, ಬೆಳ್ಳಾರೆಯ ಜಂಕ್ಷನ್ ಬಳಿ ಪ್ರವೀಣ್‌ರವರ ಮೃತದೇಹದ ಅಂತಿಮ ದರ್ಶನದ ವೇಳೆ ಭೇಟಿ ನೀಡಿದ್ದ ಬಿಜೆಪಿಯ ರಾಜ್ಯಾಧ್ಯಕ್ಷರೂ ಆಗಿರುವ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್, ಸಚಿವರಾದ ಎಸ್.ಅಂಗಾರ, ವಿ.ಸುನೀಲ್ ಕುಮಾರ್, ಶಾಸಕ ಸಂಜೀವ ಮಠಂದೂರು, ಆರ್‌ಎಸ್‌ಎಸ್ ಹಿರಿಯ ನಾಯಕ ಡಾ. ಪ್ರಭಾಕರ ಭಟ್ ಕಲ್ಲಡ್ಕ ಸಹಿತ ಘಟಾನುಘಟಿ ನಾಯಕರ ವಿರುದ್ಧ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿರುವುದು, ನಳಿನ್ ಕುಮಾರ್‌ರವರ ಕಾರಿನ ಮೇಲೆ ಮುಗಿಬಿದ್ದು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವುದು, ಕರಾವಳಿಯ ಇತಿಹಾಸದಲ್ಲಿಯೇ ಪ್ರಥಮ ಬಾರಿ ಸಂಘ ಪರಿವಾರದ ಕಾರ್ಯಕರ್ತರು ಬಿಜೆಪಿ ವಿರುದ್ಧ ತಿರುಗಿ ಬಿದ್ದಿರುವುದು ಮುಂತಾದ ಘಟನೆಗಳು ರಾಷ್ಟ್ರವ್ಯಾಪಿ ಸುದ್ದಿಯಾಗಿತ್ತು. ಪ್ರತೀ ಚುನಾವಣೆಯಲ್ಲಿಯೂ ಬಿಜೆಪಿಯ ಗೆಲುವಿಗೆ ಕಾರಣರಾಗುತ್ತಿರುವ ಹಿಂದೂ ಸಂಘಟನೆಯ ಕಾರ್ಯಕರ್ತರು ತಮ್ಮದೇ ಸರಕಾರ ಮತ್ತು ಮುಖ್ಯಮಂತ್ರಿಯಾದಿಯಾಗಿ ಜನಪ್ರತಿನಿಧಿಗಳ ವಿರುದ್ಧ ರೋಷಾವೇಶ ಪ್ರದರ್ಶಿಸಿರುವುದು ಬಹು ದೊಡ್ಡ ಚರ್ಚೆಯ ವಿಷಯವಾಗಿತ್ತು. ಪುತ್ತೂರು ಸಹಿತ ರಾಜ್ಯದೆಲ್ಲೆಡೆ ಬಿಜೆಪಿಯ ಹಲವು ಪದಾಧಿಕಾರಿಗಳು ತಮ್ಮ ಹುದ್ದೆಗೆ ರಾಜೀನಾಮೆ ನೀಡುತ್ತಿರುವುದು ಕೂಡ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿತ್ತು. ಈ ಮಧ್ಯೆ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲೇಬೇಕು ಎಂದು ಹಿಂದೂ ಸಂಘಟನೆಗಳಿಂದ ಪ್ರಬಲ ಆಗ್ರಹ ವ್ಯಕ್ತವಾಗಿತ್ತು. ಈ ನಿಟ್ಟಿನಲ್ಲಿ ಇದೀಗ ಸಂಘಟನೆಗಳ ಮನವಿಗೆ ಮಣಿದಿರುವ ರಾಜ್ಯ ಸರಕಾರ ರಾಷ್ಟ್ರೀಯ ತನಿಖಾದಳಕ್ಕೆ ಕೊಲೆ ಪ್ರಕರಣದ ತನಿಖಾ ಹೊಣೆ ಹೊರಿಸಿದೆ. ಪ್ರವೀಣ್ ಕೊಲೆಯಲ್ಲಿ ಕೇರಳದವರೂ ಭಾಗಿಯಾಗಿರುವ ಶಂಕೆಯ ನಿಟ್ಟಿನಲ್ಲಿ ರಾಷ್ಟ್ರೀಯ ತನಿಖಾ ದಳಕ್ಕೆ ಹೊಣೆ ಹೊರಿಸಲಾಗಿದೆ.

ಕೇರಳದ `ಮರ್ಡರ್ ಎಕ್ಸ್‌ಪರ್ಟ್’ಗಳು ಈ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿ: ಈಗಾಗಲೇ ಕರ್ನಾಟಕ ಪೊಲೀಸ್ ಇಲಾಖೆಯ ಡಿ.ಜಿ ಮತ್ತು ಕೇರಳ ಪೊಲೀಸ್ ಇಲಾಖೆಯ ಡಿ.ಜಿ.ರವರು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡಿದ್ದಾರೆ. ಕರ್ನಾಟಕದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್, ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಮತ್ತು ಪುತ್ತೂರು ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಸಮಗ್ರ ತನಿಖೆ ನಡೆದು ಕೊಲೆಗೆ ಸಹಕರಿಸಿದ ಆರೋಪದಡಿ ಸವಣೂರು ಮಾಂತೂರಿನ ಹನೀಫ್ ಎಂಬವರ ಪುತ್ರ ಝಾಕಿರ್ ಮತ್ತು ಬೆಳ್ಳಾರೆಯ ಇಬ್ರಾಹಿಂ ಎಂಬವರ ಪುತ್ರ ಶಫೀಕ್ ಎಂಬವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜತೆಗೆ ಪ್ರಮುಖ ಹಂತಕರಿಗಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ. ಕೇರಳದ `ಮರ್ಡರ್ ಎಕ್ಸ್‌ಪರ್ಟ್’ಗಳು ಈ ಕೊಲೆ ಕೃತ್ಯದಲ್ಲಿ ನೇರವಾಗಿ ಭಾಗಿಯಾಗಿರುವುದು ಪೊಲೀಸ್ ತನಿಖೆಯ ಮೇಲ್ನೋಟದಲ್ಲಿ ಸಾಬೀತಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ಮಾತ್ರವಲ್ಲದೆ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿಯೂ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ವಿಶೇಷ ಮುತುವರ್ಜಿ ವಹಿಸಿರುವ ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ.ಯವರು ಮುನ್ನೆಚ್ಚರಿಕಾ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕ ವ್ಯಾಪ್ತಿಯ ಪುತ್ತೂರು, ಸುಳ್ಯ, ಬೆಳ್ತಂಗಡಿ, ಕಡಬ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಆಗಸ್ಟ್ ೬ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ವಿಸ್ತರಿಸಿ ಆದೇಶ ನೀಡಿದ್ದಾರೆ. ಆಗಸ್ಸ್ ೧ರ ಬೆಳಿಗ್ಗೆ ೮ ಗಂಟೆಯವರೆಗೆ ಎಲ್ಲಾ ಮಾದರಿಯ ಮದ್ಯದಂಗಡಿಗಳನ್ನು ಬಂದ್ ಮಾಡುವಂತೆಯೂ ಆದೇಶ ನೀಡಿರುವ ಜಿಲ್ಲಾಧಿಕಾರಿಯವರು ಜುಲೈ ೨೯ರಿಂದ ಆಗಸ್ಟ್ ೧ರವರೆಗೆ ಎಲ್ಲಾ ವ್ಯವಹಾರಗಳನ್ನು ಸಂಜೆ ೬ ಗಂಟೆಯಿಂದ ಬೆಳಿಗ್ಗೆ ೬ ಗಂಟೆ ತನಕ ನಿರ್ಬಂಧಿಸಿ ಆದೇಶ ನೀಡಿದ್ದಾರೆ.

`ಮೇಜರ್ ಸರ್ಜರಿ’ ನಡೆಸಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು: ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ವ್ಯಾಪಾರ, ವಹಿವಾಟುಗಳನ್ನು ಸಂಜೆ ೬ರ ಒಳಗೆ ಮುಕ್ತಾಯಗೊಳಿಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು ತನ್ನ ಈ ಎಲ್ಲಾ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧೀನ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಈ ನಡುವೆ ಮಸೂದ್ ಮರ್ಡರ್, ಪ್ರವೀಣ್ ಮರ್ಡರ್ ಸಹಿತ ಕೆಲವು ದಿನಗಳಿಂದ ಅಹಿತಕರ ಘಟನೆಗಳು ನಡೆದ ಹಿನ್ನೆಲೆ ಮತ್ತು ಪ್ರವೀಣ್ ಮೃತದೇಹದ ಅಂತಿಮ ದರ್ಶನದ ವೇಳೆ ಬೆಳ್ಳಾರೆಯಲ್ಲಿ ಲಾಠಿಚಾರ್ಜ್ ನಡೆಸಿರುವ ಹಿನ್ನೆಲೆಯಲ್ಲಿ `ಮೇಜರ್ ಸರ್ಜರಿ’ ನಡೆಸಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಬೆಳ್ಳಾರೆ ಎಸ್.ಐ. ರುಕ್ಮನಾಯ್ಕ ಮತ್ತು ಸುಬ್ರಹ್ಮಣ್ಯ ಎಸ್.ಐ. ಜಂಬೂರಾಜ್ ಮಹಾಜನ್‌ರವರನ್ನು ವರ್ಗಾವಣೆ ಮಾಡಿದ್ದಾರೆ. ಬೆಳ್ಳಾರೆಗೆ ಕುಂದಾಪುರದಲ್ಲಿ ಎಸ್.ಐ.ಯಾಗಿದ್ದ ಸುಹಾಸ್ ಮತ್ತು ಸುಬ್ರಹ್ಮಣ್ಯಕ್ಕೆ ವಿಟ್ಲದಲ್ಲಿ ಎಸ್.ಐ.ಯಾಗಿದ್ದ ಮುಂಜುನಾಥರವರನ್ನು ವರ್ಗಾವಣೆ ಮಾಡಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ನವೀನ್‌ಚಂದ್ರ ಜೋಗಿಯವರ ವರ್ಗಾವಣೆಗೂ ಒತ್ತಡ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರನ್ನೂ ವರ್ಗಾವಣೆ ನಡೆಸುವ ಕುರಿತು ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ ಅವರು ಎಸ್ಪಿ ಹೃಷಿಕೇಶ್ ಸೋನಾವಣೆಯವರೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಹಂತಕರಿಗೆ ಮುಂದುವರಿದ ಶೋಧ

ಆರ್ಗನೈಸ್‌ಡ್ ಕ್ರೈಂ ಪ್ರಕರಣ

ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ ಆರ್ಗನೈಸ್‌ಡ್ ಕ್ರೈಂ ಪ್ರಕರಣವಾಗಿದ್ದು ಇದರ ಸಂಪೂರ್ಣ ಮಾಹಿತಿ ಪಡೆದುಕೊಂಡಿzನೆ.ಪ್ರಕರಣದ ತನಿಖೆ ತ್ವರಿತಗತಿಯಾಗಿ ನಡೆಯುತ್ತಿದೆ. ಈ ಪ್ರಕರಣ ಎರಡು ರಾಜ್ಯಕ್ಕೆ ಸಂಬಂಧಿಸಿದ್ದಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಕೇರಳ ಬಾರ್ಡರ್‌ನಲ್ಲಿ ಸಿಸಿಟಿವಿ ಅಳವಡಿಸಿ, ಚೆಕ್ ಪೋಸ್ಟ್ ಹಾಕಿ ಸರ್ವೈಲನ್ಸ್ ಮಾಡಲು ಸೂಚನೆ ನೀಡಲಾಗಿದೆ.ಜಿಲ್ಲೆಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಕ್ಯಾಂಪ್ ಮಾಡಲು ತಿಳಿಸಲಾಗಿದೆ.ಕೆಎಸ್‌ಆರ್‌ಪಿ ಬೆಟಾಲಿಯನ್(ತುಕಡಿ)ದಕ್ಷಿಣ ಕನ್ನಡದಲ್ಲಿ ನೇಮಕ ಮಾಡಲು ಸೂಚನೆ ನೀಡಲಾಗಿದೆ.ರಾತ್ರಿ ಹೊತ್ತು ಹೆಚ್ಚು ಗಸ್ತು ತಿರುಗಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.

ಮಸೂದ್ ಹತ್ಯೆಗೆ ಪ್ರತೀಕಾರ, ಮಾಂಸ ವ್ಯಾಪಾರಿಗಳ ಕೆಂಗಣ್ಣು? ಮರ್ಡರ್‌ಗೆ ವಿದೇಶದಲ್ಲಿ ಸ್ಕೆಚ್-ಹಂತಕರೊಂದಿಗೆ ಟೆಲಿಗ್ರಾಂ ಚಾಟ್

ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಪ್ರವೀಣ್ ನೆಟ್ಟಾರು ಕೊಲೆಗೆ ವಿದೇಶದಲ್ಲಿ ಕುಳಿತು ಸ್ಕೆಚ್ ಹಾಕಲಾಗಿದೆ. ಬೆಳ್ಳಾರೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ಮಸೂದ್ ಎಂಬವರ ಹತ್ಯೆಗೆ ಪ್ರತೀಕಾರವಾಗಿಯೇ ಪ್ರವೀಣ್ ಹತ್ಯೆ ನಡೆದಿದೆ ಮತ್ತು ವಿದೇಶದಲ್ಲಿ ಇರುವ ಸುಳ್ಯ ಪರಿಸರದವರು ಹಾಗೂ ಕೊಲೆ ಪಾತಕಿಗಳು ಪರಸ್ಪರ ಟೆಲಿಗ್ರಾಂ ಆಪ್ ಮೂಲಕ ಚಾಟಿಂಗ್ ನಡೆಸಿ ಮಾಹಿತಿ ವಿನಿಮಯ ಮಾಡಿಕೊಂಡು ಕೊಲೆಗೆ ಸಂಚು ರೂಪಿಸಿದ್ದಾರೆ ಎಂಬ ವಿಚಾರದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆಯ ಮೂಲಗಳು ತಿಳಿಸಿದೆ. ಪ್ರವೀಣ್ ನೆಟ್ಟಾರ್‌ರವರ ಪತ್ನಿ ನೂತನಾರವರು ಮಸೂದ್‌ರವರ ಹತ್ಯೆಗೆ ಪ್ರತೀಕಾರವಾಗಿ ನನ್ನ ಪತಿಯ ಕೊಲೆ ಆಗುವ ಸಾಧ್ಯತೆ ಇಲ್ಲ, ಆ ಕೊಲೆಯ ವಿಚಾರದಲ್ಲಿ ನನ್ನವರ ಯಾವುದೇ ಪಾತ್ರ ಇಲ್ಲ, ಮಾತ್ರವಲ್ಲದೆ ನಮ್ಮ ಅಂಗಡಿಯ ಅಕ್ಕಪಕ್ಕದ ಅಂಗಡಿಯ ಮುಸ್ಲಿಮರು ಸೇರಿದಂತೆ ಎಲ್ಲಾ ಮುಸ್ಲಿಮರೊಂದಿಗೂ ನನ್ನ ಪತಿ ಅನ್ಯೋನ್ಯತೆಯಿಂದ ಇದ್ದರು ಎಂದು ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈ ಮಧ್ಯೆ, ಬೆಳ್ಳಾರೆಯಲ್ಲಿ ಪ್ರವೀಣ್‌ರವರು ಕೋಳಿ ಅಂಗಡಿ ಆರಂಭಿಸಿದ ಬಳಿಕ ಮಾಂಸ ವ್ಯಾಪಾರದ ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದರು ಎಂದು ಹೇಳಲಾಗುತ್ತಿದ್ದು ಈ ಕುರಿತೂ ಪೊಲೀಸರ ತನಿಖೆ ನಡೆಯುತ್ತಿದೆ.

LEAVE A REPLY

Please enter your comment!
Please enter your name here