ದುಷ್ಕರ್ಮಿಗಳಿಂದ ಬಲಿಯಾದ ಪ್ರವೀಣ್ ನೆಟ್ಟಾರುರವರಿಗೆ ಬಿಲ್ಲವ ಸಂಘದಿಂದ ಶ್ರದ್ಧಾಂಜಲಿ ಸಭೆ

0

  • ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ, ಕುಟುಂಬಕ್ಕೆ ರೂ.1ಕೋಟಿ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಗೆ ಮನವಿ

 


ಪುತ್ತೂರು:ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಛಾ ರಾಜ್ಯಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರುರವರಿಗೆ ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದಿಂದ ಶ್ರದ್ದಾಂಜಲಿ ಸಭೆ ಹಾಗೂ ಪ್ರವೀಣ್ ಪತ್ನಿಗೆ ಸರಕಾರಿ ಉದ್ಯೋಗ ನೀಡುವುದು ಹಾಗೂ ಕುಟುಂಬಕ್ಕೆ ರೂ.1ಕೋಟಿ ಆರ್ಥಿಕ ನೆರವು ನೀಡುವಂತೆ ಆಗ್ರಹಿಸಿ ಸಹಾಯಕ ಆಯುಕ್ತರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.


ಶ್ರದ್ಧಾಂಜಲಿ ಸಭೆಯನ್ನು ಉದ್ದೇಶಿಸಿ, ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ನಮ್ಮ ಸಮಾಜದ ಕ್ರೀಯಾಶೀಲ ಯುವಕನಾಗಿದ್ದ ಪ್ರವೀಣ್ ದುಷ್ಕರ್ಮಿಗಳಿಗೆ ಬಲಿಯಾಗಿದ್ದಾರೆ. ಸಂಘದ ವತಿಯಿಂದ ಪ್ರವೀಣ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಕುಟುಂಬಕ್ಕೆ ಸಂಘದಿಂದ ರೂ.50ಸಾವಿರ ಆರ್ಥಿಕ ನೆರವು ನೀಡಲಾಗುವುದು. ಸಮಾಜದ ವತಿಯಿಂದ ಅವರಿಗೆ ಮನೆ ಕಟ್ಟಿಕೊಡುವ ನಿರ್ಧಾರವನ್ನು ಕೈಗೊಂಡಿದಲ್ಲದೆ ಕುಟುಂಬಸ್ಥರಿಗೆ ಸಂಘ ಮತ್ತು ಸಮಾಜದಿಂದ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ವಿಳಂಬ ಮಾಡಿದರೆ ಪ್ರತಿಭಟನೆ:
ಪ್ರವೀಣ್ ಹಂತಕರನ್ನು ಬಂಧಿಸಬೇಕು. ಈ ಷಡ್ಯಂತ್ರದ ಹಿಂದಿರುವ ದೊಡ್ಡ ಜಾಲವನ್ನು ಪತ್ತೆಮಾಡಿ ಕಠಿಣ ಕ್ರಮಕೈಗೊಳ್ಳಬೇಕು. ಪ್ರವೀಣ್ ಕುಟುಂಬ ತೀರಾ ಸಂಕಷ್ಟದಲ್ಲಿದ್ದು ತಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದಾರೆ. ತಾಯಿ ಅನಾರೋಗ್ಯದಲ್ಲಿದ್ದಾರೆ. ಕುಟುಂಬ ನಿರ್ವಹಣೆಗೆ ಪ್ರವೀಣ್ ಪತ್ನಿ ಮಾತ್ರವೇ ಇದ್ದು ವಿದ್ಯಾವಂತರಾಗಿರುವ ಅವರಿಗೆ ಸರಕಾರಿ ಉದ್ಯೋಗ ನೀಡುವುದಲ್ಲದೆ ಸರಕಾರದಿಂದ ರೂ.೧ ಕೋಟಿ ಆರ್ಥಿಕ ನೆರವು ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿದೆ. ಇದಕ್ಕೆ ವಿಲಂಭಮಾಡಿದರೆ ಸಮಾಜದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಎಚ್ಚರಿಸಿದ್ದಾರೆ.

ಬಿಲ್ಲವ ಸಂಘದ ನಿಕಟಪೂರ್ವ ಅಧ್ಯಕ್ಷರು, ಗೆಜ್ಜೆಗಿರಿ ನಂದನ ಬಿತ್ತಿಲ್ ಇದರ ಗೌರವಾಧ್ಯಕ್ಷರಾಗಿರುವ ಜಯಂತ ನಡುಬೈಲು ಮಾತನಾಡಿ, ಪ್ರವೀಣ್ ನೆಟ್ಟಾರು ಸಾಮಾಜಿಕ ಯುವ ಸಂಘಟಕ. ಇಂತಹ ನಾಯಕನ್ನು ಕಳೆದುಕೊಂಡಿರುವುದು ನಮ್ಮ ಸಮಾಜ, ಸಂಘಟಗೆ ದೊಡ್ಡ ನಷ್ಟ. ಇಂತಹ ನಾಯಕ ಇನ್ನು ಮುಂದೆ ಹುಟ್ಟಿ ಬರಲು ಸಾಧ್ಯವಿಲ್ಲ. ಎಲ್ಲಾ ಧರ್ಮದವರೊಂದಿಗೆ ಬಹಳಷ್ಟು ಅನ್ಯೋನ್ಯತೆಯಿಂದ ಇದ್ದರು. ಗೆಜ್ಜೆಗಿರಿ ಬ್ರಹ್ಮಕಲಶೋತ್ಸವದಲ್ಲಿ ಪ್ರಸಾದ ವಿತರಣೆ ಹೊಣೆ ನೀಡಲಾಗಿದ್ದು ಯುವಕರನ್ನು ಸೇರಿಸಿಕೊಂಡು ಅದನ್ನು ಅತ್ಯಂತ ನಿಷ್ಠೆ ಹಾಗೂ ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಪ್ರಸಂಶೆಗೆ ಪಾತ್ರರಾಗಿದ್ದರು. ಯುವವಾಹಿನಿ ಸಮಾವೇಶದಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ಅವರು ಯುವವಾಹಿನಿ ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದರು. ರಾಜಕೀಯವಾಗಿಯೂ ಉನ್ನತ ಸ್ಥಾನ ಪಡೆಯುತ್ತಿದ್ದ. ಟ್ರಾವೆಲ್ ನಡೆಸುತ್ತಿದ್ದ ಪ್ರವೀಣ್‌ಗೆ ಕಳೆದ ಕೊರೋನಾ ಸಂದರ್ಭದಲ್ಲಿ ಆರ್ಥಿಕ ನಷ್ಟ ಎದುರಾದಾಗ ವಾಹನದ ಸಂಪೂರ್ಣ ಸಾಲ ಪಾವತಿಸಲು ನಾನು ನೆರವಾಗಿದ್ದೇನೆ. ರೂ.೯ಲಕ್ಷದಲ್ಲಿ ಅಕ್ಷಯ್ ಚಿಕನ್ ಸೆಂಟರ್‌ನ್ನು ಬೆಳ್ಳಾರೆಯಲ್ಲಿ ನಿರ್ಮಿಸಿ ಅದನ್ನು ಪ್ರವೀಣ್ ಕುಟುಂಬ ನಿರ್ವಹಣೆಗಾಗಿ ಉಚಿತವಾಗಿ ನೀಡಿದ್ದೇನೆ. ಅ ಋಣವನ್ನು ಉಳಿಸಿಕೊಂಡಿದ್ದ ಅವರು ನನ್ನ ತಮ್ಮನಂತೆ ಪ್ರಾಣ ಕೊಡುವಂತ ವ್ಯಕ್ತಿಯಾಗಿದ್ದರು ಎಂದರು.

ಕಾರ್ಯಕಾರಿ ಸಮಿತಿ ಸದಸ್ಯ ವಿಜಯ ಕುಮಾರ್ ಸೊರಕೆ ಮಾತನಾಡಿ, ನಮ್ಮ ಸಮಾಜದ ಉತ್ಸಾಹಿ ಯುವ ನಾಯಕ ದುಷ್ಕರ್ಮಿಗಳಿಂದ ಬಲಿಯಾಗಿದ್ದಾರೆ. ಇವರ ಸದ್ಗತಿಯ ಕಾರ್ಯಕ್ರಮಗಳಿಗೆ ಸಂಘದ ಸಭಾ ಭವನನ್ನು ಉಚಿತವಾಗಿ ನೀಡಬೇಕು ಎಂದರು. ಯುವಕರು ಸದಾ ಜಾಗೃತರಾಗಿರಬೇಕು. ತಮ್ಮ ಮನೆಯವರ ಕುರಿತು ಕಾಳಜಿಯರಬೇಕು. ನಮ್ಮ ಸುರಕ್ಷತೆಯನ್ನು ನಾವು ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಯುವವಾಹಿನಿಯ ಕಾರ್ಯದರ್ಶಿ ಜಯರಾಮ ಪೂಜಾರಿ ಮಾತನಾಡಿ, ಸಂಘಟನೆಯಲ್ಲಿ ಮುಂಚೂನಿಯಲ್ಲಿದ್ದ ಪ್ರವೀಣ್ ಯುವಕರಿಗೆ ಪ್ರೇರಕ ಶಕ್ತಿಯಾಗಿದ್ದರು. ನಿಷ್ಠಾವಂತ ಕಾರ್ಯಕರ್ತನಾಗಿ ಸಂಘದ ಅಭ್ಯುದಯಕ್ಕೆ ಶ್ರಮಿಸಿದ್ದರು ಎಂದರು.

ಬಿಲ್ಲವ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಮುಕ್ವೆ ಮಾತನಾಡಿ, ಸಂಘದ ಸಕ್ರೀಯರಾಗಿದ್ದ ಉತ್ಸಾಹಿ ತರುಣ ಪ್ರವೀಣ್‌ರವರನ್ನು ಕಳೆದುಕೊಂಡಿರುವುದು ಸಂಘ ಹಾಗೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ವಸಂತ ಪೂಜಾರಿ ನೂಜಿಬಾಳ್ತಿಲ ಮಾತನಾಡಿ, ಬಿಲ್ಲವ ಸಮಾಜದವರನ್ನು ರಾಜಕೀಯವಾಗಿ ದುರ್ಬಳಕೆ ಮಾಡುತ್ತಿದ್ದಾರೆ. ಇದಕ್ಕಾಗಿ ನಾವು ಸಂಘಟಿತರಾಗಬೇಕು. ರಾಜಕೀಯವಾಗಿ ಹೆಚ್ಚು ಹೊಂದಿಕೊಳ್ಳಬಾರದು. ಮುಂದೆ ಇಂತಹ ಸ್ಥಿತಿ ಮರುಕಳಿಸಬಾರದು ಎಂದ ಅವರು, ವಿದ್ಯಾವಂತರಾಗಿರುವ ಪ್ರವೀಣ್ ಪತ್ನಿ ಉದ್ಯೋಗ ದೊರಕಿಸಿಕೊಡುವ ಕಾರ್ಯ ಸಂಘದ ಮುಖಾಂತರ ನಡೆಯಬೇಕು ಎಂದರು.

ಬಾಲಕೃಷ್ಣ ಪೂಜಾರಿ ಪಳ್ಳತ್ತಾರು ಮಾತನಾಡಿ, ಘನತೆ, ಗೌರವದಿಂದ ಇದ್ದ ಪ್ರವೀಣ್ ದುಷ್ಕರ್ಮಿಗಳಿಂದ ಬಲಿಯಾಗಿರುವುದು ಬಿಲ್ಲವ ಸಮಾಜ ಮಾತ್ರವಲ್ಲ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.

ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು, ಗುರುಮಂದಿರ ಪದಾಧಿಕಾರಿಗಳು, ವಿವಿಧ ವಲಯಗಳ ಪದಾಧಿಕಾರಿಗಳು, ಯುವ ವಾಹಿನಿಯ ಪದಾಧಿಕಾರಿಗಳು, ಹಾಗೂ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮುಖ್ಯಮಂತ್ರಿಗೆ ಮನವಿ:
ಶ್ರದ್ಧಾಂಜಲಿ ಸಭಾ ಕಾರ್ಯಕ್ರಮದ ಬಳಿಕ ಸಹಾಯಕ ಆಯುಕ್ತ ಕಚೇರಿಗೆ ತೆರಳಿ ಸಹಾಯಕ ಆಯುಕ್ತ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಸಂಘದ ವತಿಯಿಂದ ಮನವಿ ಮಾಡಲಾಯಿತು. ದುಷ್ಕರ್ಮಿಗಳಿಂದ ಹತ್ಯೆಯಾದ ನಮ್ಮ ಸಮಾಜದ ಯುವಕ ಒಬ್ಬನೇ ಮಗನಾಗಿದ್ದ ಕುಟುಂಬ ನಿರ್ವಹಣೆಯ ಹೊಣೆಹೊತ್ತಿದ್ದರು. ಇವರ ಕುಟುಂಬ ಪರಿಸ್ಥಿತಿ ಶೋಚನೀಯವಾಗಿದೆ. ತಂದೆ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರೆ ತಾಯಿಯೂ ಅನಾರೋಗ್ಯ ಪೀಡಿತರಾಗಿದ್ದು ಜೀವನ ನಿರ್ವಹಣೆಗೆ ದಿಕ್ಕೇ ತೋಚದಂತಾಗಿದೆ. ಪ್ರವೀಣ್ ಪತ್ನಿಯು ವಿದ್ಯಾವಂತಳಾಗಿದ್ದು ಖಾಯಂ ಸರಕಾರಿ ಉದ್ಯೋಗ ನೀಡಬೇಕು ಹಾಗೂ ಕುಟುಂಬಕ್ಕೆ ರೂ.೧ಕೋಟಿ ಆರ್ಥಿಕ ನೆರವು ನೀಡುವಂತೆ ಮನವಿಯಲ್ಲಿ ಆಗ್ರಹಿಸಿದ್ದಾರೆ.

ಪ್ರವೀಣ್ ಮನೆ ಭೇಟಿ-ಆರ್ಥಿಕ ನೆರವು:
ಮೃತ ಪ್ರವೀಣ್‌ರವರ ನೆಟ್ಟಾರಿನಲ್ಲಿರುವ ಮನೆಗೆ ಭೇಟಿ ನೀಡಿದ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಂಘದ ವತಿಯಿಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದರು.

LEAVE A REPLY

Please enter your comment!
Please enter your name here