ಉಪ್ಪಿನಂಗಡಿ ಯುವ ವಾಹಿನಿ ಘಟಕದಿಂದ ಪ್ರವೀಣ್ ನೆಟ್ಟಾರಿಗೆ ನುಡಿನಮನ

0

ಉಪ್ಪಿನಂಗಡಿ: ಯುವ ವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ದುಷ್ಕರ್ಮಿಗಳ ದಾಳಿಗೆ ಬಲಿಯಾದ, ಸಮಾಜ ಸೇವಕ, ಧಾರ್ಮಿಕ ಮುಂದಾಳು, ರಾಜಕೀಯ ಮುಖಂಡ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ನೆಟ್ಟಾರಿಗೆ ನುಡಿನಮನ ಕಾರ್ಯಕ್ರಮವನ್ನು ಇಲ್ಲಿನ ಸಹಸ್ರ ಕೋಚಿಂಗ್ ಸೆಂಟರ್‌ನಲ್ಲಿ ನಡೆಸಲಾಯಿತು.

ನುಡಿನಮನ ಕಾರ್ಯಕ್ರಮದಲ್ಲಿ ಘಟಕದ ಗೌರವ ಸಲಹೆ ವರದರಾಜ್ ಎಂ. ಪ್ರವೀಣ್ ನೆಟ್ಟಾರು ಭಾವಚಿತ್ರದ ಮುಂದೆ ದೀಪ ಪ್ರಜ್ವಲಿಸಿದರು. ಮೌನ ಪ್ರಾರ್ಥನೆಯನ್ನು ಸಲ್ಲಿಸಿ, ಪ್ರವೀಣ್ ನೆಟ್ಟಾರು ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡಲಾಯಿತು.

ಕಾರ್ಯಕ್ರಮದಲ್ಲಿ ಯುವ ವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಮಾಜಿ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ. ಮಾತನಾಡಿ ಪ್ರತಿಯೊಬ್ಬರು ತಮ್ಮ ಸಂಘಟನೆಯ ಸಿದ್ಧಾಂತಗಳಿಗೆ ಬದ್ಧರಾಗಿ, ಕೆಲಸಗಳನ್ನು ಮಾಡುವಾಗ, ಮಾನವೀಯತೆ ಮತ್ತು ಸಮಾಜದ ಸಾಮರಸ್ಯವನ್ನು ಕಾಪಾಡಬೇಕು. ಈ ನಿಟ್ಟಿನಲ್ಲಿ ಪ್ರವೀಣ್ ನೆಟ್ಟಾರು ಮಾನವೀಯತೆಗೆ ಹೆಚ್ಚಿನ ಮಹತ್ವವನ್ನು ಕೊಟ್ಟವರು. ಇತ್ತೀಚೆಗೆ ಹಿರೇಬಂಡಾಡಿ ಗ್ರಾಮದ ಅನಡ್ಕ ದಿ. ರಜಾಕ್ ಮಾಸ್ಟರ ಇಬ್ಬರು ಮಕ್ಕಳು ಬೆಳ್ತಂಗಡಿಯಲ್ಲಿ ಅಪಘಾತಕ್ಕೆ ಒಳಗಾದಾಗ, ಅನ್ಯ ಕಾರ್ಯದ ನಿಮಿತ್ತ ಅದೇ ದಾರಿಯಲ್ಲಿ ದಂಪತಿ ಸಮೇತರಾಗಿ ಬಂದ ಪ್ರವೀಣ್ ನೆಟ್ಟಾರು ಕೂಡಲೇ ಅಪಘಾತಕ್ಕೆ ಒಳಗಾದವರನ್ನು ಆಸ್ಪತ್ರೆಗೆ ಸೇರಿಸಿ, ಅಪಘಾತಕ್ಕೆ ಒಳಗಾದವರ ವಿವರನ್ನು ಡ್ರೈವಿಂಗ್ ಲೈಸನ್ಸ್ ಮೂಲಕ ನನ್ನಿಂದ ಪಡೆದು ಕೊಂಡರು. ಅಪಘಾತಕ್ಕೆ ಒಳಗಾದವರನ್ನು ಬದುಕಿಸುವಲ್ಲಿ ಪ್ರವೀಣ್ ಸತತ ಪ್ರಯತ್ನಿಸಿದರು. ಕೆಲವು ದಿನಗಳ ನಂತರ ನನ್ನಮನೆಗೆ ಬಂದಾಗ ಅಪಘಾತದಲ್ಲಿ ಮರಣಕ್ಕೀಡಾದ ತಾಯಿ ಮತ್ತು ಸಹೋದರರು ಹೇಗಿದ್ದಾರೆಂದು ವಿಚಾರಿಸಿದ್ದಾರೆ. ಇಂತಹ ಮಾನವೀಯ ಗುಣದ ಪ್ರವೀಣ್ ನೆಟ್ಟಾರು ದುಷ್ಕರ್ಮಿಗಳ ದಾಳಿಗೆ ಬಲಿಯಾದದ್ದು ದುರಂತ. ಇನ್ನು ಮುಂದೆ ಯಾರಿಗೂ ಇಂತಹ ದು:ಸ್ಥಿತಿ ಬರಬಾರದೆಂದು ನುಡಿನಮನ ಸಲ್ಲಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿದರು.

ಘಟಕದ ಗೌರವ ಸಲಹೆ ಕರುಣಾಕರ ಸುವರ್ಣ, ಘಟಕದ ಮಾಜಿ ಅಧ್ಯಕ್ಷ ಲೋಕೇಶ್ ಬೆತ್ತೋಡಿ ಮಾತನಾಡಿ ಸರ್ಕಾರ ಕೊಲೆಗಡುಕರಿಗೆ ಕಠಿಣ ಶಿಕ್ಷೆಯನ್ನು ವಿಧಿಸಬೇಕು, ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ನಡೆಯದಂತೆ ಕಾನೂನು ರೂಪಿಸಬೇಕು, ದುಷ್ಕರ್ಮಿಗಳ ಅಟ್ಟಹಾಸ ಇಲ್ಲಿಗೆ ನಿಲ್ಲಬೇಕು ಎಂದರು.
ಘಟಕದ ಅಧ್ಯಕ್ಷ ಕುಶಾಲಪ್ಪ ಹತ್ತು ಕಲಸೆ, ಜತೆ ಕಾರ್ಯದರ್ಶಿ ಅನಿತಾ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಡಾ. ಸದಾನಂದ ಕುಂದರ್, ಕೇಂದ್ರ ಸಮಿತಿಯ ಮಾಜಿ ಕಾರ್ಯದರ್ಶಿ ಅಶೋಕ್ ಪಡ್ಪು, ಘಟಕದ ಮಾಜಿ ಅಧ್ಯಕ್ಷರುಗಳಾದ, ಗುಣಾಕರ ಆಗ್ನಾಡಿ, ಜಯವಿಕ್ರಂ ಕಲ್ಲಾಪು, ಡೀಕಯ್ಯ ಗೌಂಡತ್ತಿಗೆ, ಚಂದ್ರಶೇಖರ್ ಸನಿಲ್, ಕೃಷ್ಣಪ್ಪ ಪೂಜಾರಿ ಕಲ್ಲೇರಿ, ಅಜಿತ್ ಕುಮರ್ ಪಾಲೇರಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here