ಮುರಿದು ಬಿದ್ದ ಸೇತುವೆ: ತಪ್ಪಿದ ಅನಾಹುತ ಪಂಚೋಡಿ-ಮಯ್ಯಳ ಸಂಪರ್ಕ ಕಡಿತ

0

ಚಿತ್ರ: ಯೂಸುಫ್ ರೆಂಜಲಾಡಿ

 

ಪುತ್ತೂರು: ಈಶ್ವರಮಂಗಲ ಸಮೀಪದ ಪಂಚೋಡಿ ಕುದ್ರೋಳಿಯಾಗಿ ಮಯ್ಯಳ, ದೇಲಂಪಾಡಿ ಸಂಪರ್ಕಿಸುವ ಸೇತುವೆಯ ಒಂದು ಭಾಗ ಕುಸಿದು ಬಿದ್ದ ಪರಿಣಾಮ ಕೇರಳ-ಕರ್ನಾಟಕ ಸಂಪರ್ಕ ರಸ್ತೆ ಕಡಿತಗೊಂಡಿದೆ. ಜು.29ರಂದು ರಾತ್ರಿ ವೇಳೆ ಸೇತುವೆ ಮುರಿದು ಬಿದ್ದಿದ್ದು ಸದ್ಯಕ್ಕೆ ಸ್ಥಳೀಯರೇ ಸೇರಿಕೊಂಡು ತಾತ್ಕಾಲಿಕವಾಗಿ ಅಡಿಕೆ ಮರದ ಪಾಲ ನಿರ್ಮಿಸಿ ನಡೆದುಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಸಂಪರ್ಕ ಕಡಿತದಿಂದ ವಾಹನ ಸಂಚಾರ ನಿಂತ ಪರಿಣಾಮ ವಿದ್ಯಾರ್ಥಿಗಳು, ಸಾರ್ವಜನಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ.

 

ತಪ್ಪಿದ ಅನಾಹುತ:
ಇದೇ ಸೇತುವೆಯಾಗಿ ದಿನ ನಿತ್ಯ ನೂರಾರು ವಾಹನಗಳ ಓಡಾಟ ಇರುತ್ತಿದ್ದು ಜನ ಸಂಚಾರವೂ ಹೆಚ್ಚಿಗೆ ಇರುವ ಸೇತುವೆಯಾಗಿದೆ. ರಾತ್ರಿ ವೇಳೆ ವಾಹನ ಸಂಚಾರ, ಜನ ಸಂಚಾರ ಇಲ್ಲದ ಸಂದರ್ಭದಲ್ಲಿ ಸೇತುವೆ ಮುರಿದು ಬಿದ್ದ ಕಾರಣ ಯಾವುದೇ ಅನಾಹುತ ಸಂಭವಿಸಿಲ್ಲ.

 

ಗಡಿಭಾಗದ ಸೇತುವೆ:
ಈ ಸೇತುವೆಯ ಒಂದು ಭಾಗ ಕರ್ನಾಟಕಕ್ಕೆ ಸೇರಿದರೆ ಇನ್ನೊಂದು ಭಾಗ ಕೇರಳಕ್ಕೆ ಸೇರುತ್ತದೆ. ಹಾಗಾಗಿಯೇ ಈ ಸೇತುವೆಯನ್ನು ಹೊಸದಾಗಿ ನಿರ್ಮಿಸುವ ಗೋಜಿಗೆ ಯಾರೂ ಹೋಗಿಲ್ಲ ಎನ್ನುವ ಅಭಿಪ್ರಾಯ ಕೇಳಿ ಬಂದಿದೆ.
ಕರ್ನಾಟಕ ಮತ್ತು ಕೇರಳ ಎರಡೂ ರಾಜ್ಯದ ಜನರಿಗೆ ಇದು ಉಪಯುಕ್ತವಾದ ಸೇತುವೆಯಾಗಿದ್ದು ಇನ್ನಾದರೂ ಇದನ್ನು ಅಭಿವೃದ್ಧಿಪಡಿಸಿ ಎನ್ನುವ ಆಗ್ರಹ ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಸುತ್ತು ಬಳಸಿ ಹೋಗಬೇಕಾದ ಅನಿವಾರ್ಯತೆ:
ಸೇತುವೆ ಕುಸಿತದಿಂದಾಗಿ ದೇಲಂಪಾಡಿ, ಮಯ್ಯಳ ಭಾಗದಿಂದ ಈಶ್ವರಮಂಗಲ, ಪುತ್ತೂರು ಕಡೆಗೆ ಬರುವವರು ಹಾಗೂ ಪುತ್ತೂರು, ಈಶ್ವರಮಂಗಲ ಭಾಗದಿಂದ ಆ ಕಡೆ ಹೋಗುವವರು ಮೇನಾಲ ಮೆನಸಿನಕಾನ ಮೂಲಕ ಸಂಚರಿಸಬೇಕಾಗಿದ್ದು ಸುಮಾರು ೬ರಿಂದ ೭ ಕಿ.ಮೀ,ನಷ್ಟು ಹೆಚ್ಚುವರಿಯಾಗಿ ಸುತ್ತಬಳಸಿ ಹೋಗಬೇಕಾದ ಅನಿವಾರ್ಯತೆ ಉಂಟಾಗಿದೆ.

 

 

ಹೊಸ ಸೇತುವೆ ನಿರ್ಮಾಣಕ್ಕೆ ಆಗ್ರಹ:
ಪಂಚೋಡಿ-ಮಯ್ಯಳ ಸಂಪರ್ಕ ಸೇತುವೆಯನ್ನು ಹೊಸದಾಗಿ ಸುಸಜ್ಜಿತವಾಗಿ ನಿರ್ಮಾಣ ಮಾಡಬೇಕೆಂಬ ಕೂಗು ಅನೇಕ ಅರ್ವಗಳಿಂದ ಕೇಳಿ ಬರುತ್ತಿದ್ದರೂ ಇದುವರೆಗೂ ಅದು ಈಡೇರಿಲ್ಲ. ಗಡಿ ಪ್ರದೇಶದ ಸೇತುವೆಯಾದ ಕಾರಣ ನಿರ್ಲಕ್ಷ್ಯಕ್ಕೆ ಒಳಗಾಗಿ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬರುತ್ತಿದೆ. ಇದು ಕಿರಿದಾದ ಮತ್ತು ಕೆಳಮಟ್ಟದಲ್ಲಿರುವ ಸೇತುವೆಯಾಗಿದ್ದು ಯಾವುದೇ ತಡೆಬೇಲಿಯೂ ಈ ಸೇತುವೆಗಿಲ್ಲ. ಮಳೆಗಾಲದಲ್ಲಂತೂ ಈ ಸೇತುವೆ ತೀರಾ ಅಪಾಯಕಾರಿಯಾಗಿ. ಇದೀಗ ಸೇತುವೆಯ ಒಂದು ಭಾಗವೇ ಮುರಿದು ಬಿದ್ದ ಪರಿಣಾಮ ಹೊಸದಾದ ಸೇತುವೆ ನಿರ್ಮಾಣ ಇಲ್ಲಿಗೆ ಅನಿವಾರ್ಯವಾಗಿದೆ. ಹೊಸ ಸೇತುವೆ ನಿರ್ಮಾಣ ಮಾಡಿ ನಮ್ಮ ಬೇಡಿಕೆ ಈಡೇರಿಸಿ ಎಂದು ಈ ಭಾಗದ ಜನತೆ ಆಗ್ರಹಿಸುತ್ತಿದ್ದಾರೆ.

ವಿದ್ಯಾರ್ಥಿಗಳಿಗೆ ಹೆಚ್ಚಿನ ಸಮಸ್ಯೆ:
ಮಯ್ಯಳ, ದೇಲಂಪಾಡಿ ಭಾಗದಿಂದ ಹೆಚ್ಚಿನ ವಿದ್ಯಾರ್ಥಿಗಳು ಮೇನಾಲ, ಈಶ್ವರಮಂಗಲ, ಕಾವು, ಪುತ್ತೂರು ಭಾಗದಲ್ಲಿರುವ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು ಪ್ರಸ್ತುತ ಸೇತುವೆ ಕುಸಿತದಿಂದ ಸಮಸ್ಯೆಗೆ ಸಿಲುಕಿದ್ದಾರೆ. ದೂರದ ಮಾರ್ಗವಾಗಿ ಹೋಗುವ ವೇಳೆ ಸಮಯಕ್ಕೆ ಸರಿಯಾಗಿ ಶಾಲೆಗೆ ತಲುಪಲು ಕಷ್ಟಸಾಧ್ಯ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here