ಕುರಿಕ್ಕಾರದಲ್ಲಿ ಛಾವಣಿ ಕುಸಿಯುವ ಭೀತಿಯಲ್ಲಿರುವ ಮನೆಗೆ ಅಶೋಕ್ ಕುಮಾರ್ ರೈ ನೇತೃತ್ವದ ನಿಯೋಗ ಭೇಟಿ

0

  • ಮನೆಯ ಛಾವಣಿ, ಮುಂಭಾಗದ ಮಾಡು ದುರಸ್ತಿಗೊಳಿಸಿಕೊಡುವುದಾಗಿ ಭರವಸೆ

ಚಿತ್ರ: ಯೂಸುಫ್ ರೆಂಜಲಾಡಿ

 

ಪುತ್ತೂರು: ಛಾವಣಿ ಕುಸಿದು ಬೀಳುವ ಭೀತಿಯಲ್ಲಿರುವ ಬಡ ಕುಟುಂಬದ ಮನೆಯೊಂದಕ್ಕೆ ತೆರಳಿದ ಉದ್ಯಮಿ, ರೈ ಎಸ್ಟೇಟ್ ಎಜುಕೇಶನಲ್ ಟ್ರಸ್ಟ್‌ನ ಮುಖ್ಯ ಪ್ರವರ್ತಕರಾದ ಅಶೋಕ್ ಕುಮಾರ್ ರೈ ನೇತೃತ್ವದ ನಿಯೋಗ ಮನೆಯನ್ನು ದುರಸ್ತಿಗೊಳಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

 


ಕೆದಂಬಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುರಿಕ್ಕಾರ ಎಂಬಲ್ಲಿ ವಾಸವಾಗಿರುವ ಲಕ್ಷ್ಮೀ ಎಂಬವರ ಮನೆಯ ಒಂದು ಭಾಗದ ಮಾಡು ಶಿಥಿಲಗೊಂಡು ಕುಸಿಯುವ ಭೀತಿಯಲ್ಲಿರುವ ಬಗ್ಗೆ ಮಾಹಿತಿ ಪಡೆದುಕೊಂಡ ಅಶೋಕ್ ರೈ ಅವರು ಬಂಟರ ಸಂಘದ ಅಧ್ಯಕ್ಷರು, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕರೂ ಆದ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿಯವರೊಂದಿಗೆ ಜು.30ರನದು ಸ್ಥಳಕ್ಕೆ ತೆರಳಿ ಮನೆಯ ಪರಿಶಿಲನೆ ನಡೆಸಿದರು.

ಮನೆಯ ಯಜಮಾನಿಯಾಗಿರುವ ಲಕ್ಷ್ಮೀ ಅವರೊಂದಿಗೆ ಅಶೋಕ್ ರೈಯವರು ಮಾತುಕತೆ ನಡೆಸಿದರು. ಈ ವೇಳೆ ತಮ್ಮ ಅಳಲು ತೋಡಿಕೊಂಡ ಲಕ್ಷ್ಮೀ ಅವರು ಮನೆಯ ಶಿಟುಗಳು ಮುರಿದು ಬೀಳುತ್ತಿದ್ದು ಶೌಚಾಲಯದ ಶೀಟು ಕೂಡಾ ಮುರಿದು ಬೀಳುವ ಸ್ಥಿತಿಯಲ್ಲಿದೆ, ನನಗೆ ಆರೋಗ್ಯ ಸರಿಯಿಲ್ಲ. ನಡೆದಾಡಲೂ ಪ್ರಯಾಸಪಡುತ್ತಿದ್ದೇನೆ. ಮನೆಯ ಪರಿಸ್ಥಿತಿಯೂ ಚೆನ್ನಾಗಿಲ್ಲದ ಕಾರಣ ಬಹಳ ತೊಂದರೆ ಅನುಭವಿಸುತ್ತಿದ್ದೇನೆ ಎಂದು ತಮ್ಮ ನೋವು ತೋಡಿಕೊಂಡರು.

ಮನೆಯ ಒಳಭಾಗ ಮತ್ತು ಹೊರಭಾಗವನ್ನು ವೀಕ್ಷಿಸಿದ ಅಶೋಕ್ ರೈ ಅವರು ಮನೆಯ ಹಿಂಭಾಗದಲ್ಲಿ ಬೀಳುವ ಸ್ಥಿತಿಯಲ್ಲಿರುವ ಶೀಟ್, ಕಂಬಗಳನ್ನು ಬದಲಾಯಿಸಿ ಹೊಸ ರಾಡ್, ಶೀಟ್‌ಗಳನನ್ನು ಅಳವಡಿಸುವ ಮೂಲಕ ಮನೆಯನ್ನು ಸುಸ್ಥಿತಿಗೊಳಿಸಿಕೊಡುತ್ತೇನೆ ಎಂದು ಭರವಸೆ ನೀಡಿದರು.

ಬಂಟರ ಸಂಘದಿಂದ ಮುಂಭಾಗದ ಮಾಡು ನಿರ್ಮಾಣ-ಬಾಲ್ಯೊಟ್ಟು
ಮನೆಯ ಮುಂಭಾಗದ ಹಂಚಿನ ಮಾಡು ಕುಸಿಯುವ ಹಂತದಲ್ಲಿರುವುದನ್ನು ಗಮನಿಸಿದ ಬಂಟರ ಸಂಘದ ಮುಖಂಡರು ಮುಂಭಾಗದ ಮಾಡನ್ನು ಬಂಟರ ಸಂಘದ ವತಿಯಿಂದ ದುರಸ್ತಿ ಮಾಡಿಕೊಡುತ್ತೇವೆ ಎಂದು ಬಂಟರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಹಾಗೂ ಪ್ರ.ಕಾರ್ಯದರ್ಶಿ ರಮೇಶ್ ರೈ ಡಿಂಬ್ರಿ ಭರವಸೆ ನೀಡಿದರು. ಇದಕ್ಕಾಗಿ ತಗಲುವ ವೆಚ್ಚ ರೂ.10 ಸಾವಿರವನ್ನು ನಾವು ನೀಡುವುದಾಗಿ ಶಶಿಕುಮಾರ್ ರೈ ತಿಳಿಸಿದರು

ಮುಂದುವರಿದ ಅಶೋಕ್ ರೈ ಜನಸೇವೆ:
ಅಶೋಕ್ ಕುಮಾರ್ ರೈ ಅವರ ಸಮಾಜ ಸೇವೆ ಮುಂದುವರಿದಿದ್ದು ಗ್ರಾಮಾಂತರ ಪ್ರದೇಶದ ಅನೇಕ ಬಡ ಕುಟುಂಬಗಳ ಕಣ್ಣೀರೊರೆಸುವ ಕಾರ್ಯವನ್ನು ಇತ್ತೀಚೆಗೆ ನಿರಂತರವಾಗಿ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವ ಕುಟುಂಬಗಳ ಮನೆಗೆ ಖುದ್ದು ಭೇಟಿ ನೀಡುವ ಅಶೋಕ್ ರೈ ಅವರು ಮನೆಯವರೊಂದಿಗೆ ಮಾತುಕತೆ ನಡೆಸಿ ಅವರಿಗೆ ನೆರವು ನೀಡುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನೂ ಮಾಡುತ್ತಿದ್ದು ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗುತ್ತಿದ್ದಾರೆ.

LEAVE A REPLY

Please enter your comment!
Please enter your name here