ಅಮರ ಗಾಯಕ ಮೊಹಮ್ಮದ್ ರಫಿ: ಒಂದು ನೆನಪು

1935 ನೇ ಇಸವಿ. ಸ್ವಾತಂತ್ರಪೂರ್ವ ಸಮಯವದು. ಲಾಹೋರಿನಲ್ಲಿ ನಡೆಯಬೇಕಾಗಿದ್ದ,ಪ್ಯಾರೆಲಾಲ್ ಅವರ ಸಂಗೀತ ಸಮಾರಂಭದಲ್ಲಿ, ಖ್ಯಾತ ಗಾಯಕ ಕುಂದನ್ ಲಾಲ್ ಸೈಗಲ್ ಹಾಡಬೇಕಾಗಿತ್ತು. ಸರಿಯಾದ ಸಮಯಕ್ಕೆ ಅವರು ಬಾರದ ಕಾರಣ, ಕಿಕ್ಕಿರಿದು ತುಂಬಿದ ಸಭೆಯಲ್ಲಿ ಗದ್ದಲ ಪ್ರಾರಂಭವಾಯಿತು. ಸಂಪೂರ್ಣ ಸಭೆಯು ಗದ್ದಲದಿಂದ ಚಡ ಗುಟ್ಟುತ್ತಿತ್ತು. ಕಾರ್ಯಕ್ರಮದ ಆಯೋಜಕರು, ಸಭಿಕರ ರೋಷದಿಂದ ಪಾರಾಗಲು ಯೋಚಿಸುತ್ತಿರುವಾಗ, ಮಹನೀಯರೊಬ್ಬರು, ಗುಂಡಗಿನ, ತುಸು ಕೆಂಪು ಬಿಳಿ ಬಣ್ಣದ, ಯುವಕನೋರ್ವನನ್ನು ವೇದಿಕೆಗೆ ಕರೆದು ತಂದು, ಹಾಡಲು ಆದೇಶಿಸಿದರು. ಅಷ್ಟರವರೆಗೆ, ಆ ಯುವಕನನ್ನು ಕಾಣದ, ಯುವಕನ ಬಗ್ಗೆ ತಿಳಿಯದ, ಸಭಿಕರು ಕುಂದನ್ ಲಾಲ್ ಸೈಗಲ್ ಗಾಗಿ ಧ್ವನಿ ಏರಿಸಿದರು. ಕುಂದನ್ ಲಾಲ್ ಗಾಗಿ ಕಾಯುತ್ತಿದ್ದ ಜನರು ರೊಚ್ಚಿಗೆದ್ದು, ಸಂಘಟಕರನ್ನು ನಿಂದಿಸತೊಡಗಿದರು. ಆದರೆ ಆ ಯುವಕ, ಅದ್ಯಾವುದನ್ನು ಗಮನಿಸದೆ, ಧೃಡ ಚಿತ್ತದಿಂದ ಯಾವುದೇ ಸ್ಪೀಕರ್ ನ ಸಹಾಯವಿಲ್ಲದೆ ಪಂಜಾಬಿ ಹಾಡೊಂದನ್ನು ಹಾಡತೊಡಗಿದ. ಅಲೆ ಅಲೆಯಾಗಿ ಹೊರಹೊಮ್ಮುತ್ತಿದ್ದ ಆ ಸುಂದರ ಕಂಠಕ್ಕೆ,ಸಭೆ ಶಾಂತವಾಯಿತು. ಏನೋ ಪವಾಡದಂತೆ ರೊಚ್ಚಿಗೆದ್ದ ಸಭೆ ಮಂತ್ರಮುಗ್ಧರಾಗಿ, ಹಾಡನ್ನು ಆಲಿಸತೊಡಗಿ,ಹಾಡು ಮುಗಿಯುತ್ತಿದ್ದಂತೆ ಸಭಿಕರ ಹರ್ಷೋದ್ಗಾರ ಮುಗಿಲು ಮುಟ್ಟಿತು. ಆಗತಾನೆ ಸಭೆಗೆ ಆಗಮಿಸಿದ ಕುಂದನ್ ಲಾಲ್ ಸೈಗಲ್ ರವರು ಆ ಯುವಕನನ್ನು ಆಲಿಂಗಿಸಿ, ತುಂಬು ಹೃದಯದಿಂದ ಪ್ರಶಂಸಿಸಿ, ‘ನೀನು ಒಂದು ದಿನ ಮಹಾನ್ ಗಾಯಕನಾಗುತ್ತಿ’ ಎಂದು ಆಶೀರ್ವದಿಸಿದರು. ಆ ಯುವಕನೇ ಮುಂದೆ ಸಂಗೀತ ಸಾಮ್ರಾಜ್ಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ ಮಹಾನ್ ಗಾಯಕ ಮೊಹಮ್ಮದ್ ರಫಿ.

ಪ್ರತಿಯೊಂದು ಹಾಡಿಗೂ, ಜೀವ ತುಂಬಿ ಹಾಡುತ್ತಾ, ತನ್ನ ಧ್ವನಿಯ ಏರಿಳಿತದಿಂದ ಅಸಂಖ್ಯಾತ ಕೇಳುಗರ ಮನಸೂರೆಗೊಂಡಿದ್ದ ಮಹಾನ್ ಗಾಯಕ ಮೊಹಮ್ಮದ್ ರಫಿ ಯವರು, ಇಂದಿಗೆ ಸುಮಾರು 42 ವರ್ಷಗಳ ಹಿಂದೆ ಅಂದರೆ,1980 ಜುಲೈ 31ರಂದು, ತಟ್ಟನೆ ಸಾವಿನ ಅರಮನೆಗೆ ತೇಲಿ ಹೋದಾಗ, ಲಕ್ಷಾಂತರ ಅಭಿಮಾನಿಗಳು ಮೌನವಾಗಿ ಕಂಬನಿ ಮಿಡಿದಿದ್ದರು. ಗಾನಕೋಗಿಲೆಯ ಮಾಧುರ್ಯ ತುಂಬಿದ ಕಂಠ ಶಾಶ್ವತವಾಗಿ ಮರೆಯಾದದ್ದು, ಅಭಿಮಾನಿಗಳಿಗೆ ಸಹಿಸಲು ಸಾಧ್ಯವಾಗದೆ ಹೋಯಿತು. ಆದರೆ, ಅಸಂಖ್ಯಾತ ಅಭಿಮಾನಿಗಳ ಕಣ್ಣ ಮುಂದೆ ರಫಿಯವರು ಮರೆಯಾದರೂ, ತನ್ನ ಮಾಧುರ್ಯ ತುಂಬಿದ ಧ್ವನಿಯಿಂದಲೇ ಲಕ್ಷಾಂತರ ಮಂದಿ ಕೇಳುಗರ ಹೃದಯ ಸಾಮ್ರಾಜ್ಯದಲ್ಲಿ ಇನ್ನು ಕೂಡ ಜೀವಂತವಾಗಿದ್ದಾರೆ.

1924 ಇಸವಿ, ಡಿಸೆಂಬರ್ 24 ರಂದು ಕೋಟ ಸುಲ್ತಾನ್ ದಿಂಗ್ ನ ಮಲಗಾವ್ನಲ್ಲಿ (ಪ್ರಸ್ತುತ ಪಾಕಿಸ್ತಾನದಲ್ಲಿದೆ) ರಫಿಯವರ ಜನನವಾಯಿತು. ಸಣ್ಣ ಪ್ರಾಯದಿಂದಲೇ ಸಂಗೀತವೆಂದರೆ ಬಲು ಪ್ರೀತಿ. ಅವರ ಸಂಗೀತ ಪ್ರೇಮವನ್ನು ಕಂಡು ಅವರ ಅಣ್ಣ ಅವರನ್ನು, ಸಂಗೀತ ವಿದ್ವಾಂಸರಾದ ಉಸ್ತಾದ್ ಬರ್ಕತ್ ಅಲಿಖಾನ್ ಹಾಗೂ ಉಸ್ತಾದ್ ವಾoಕಿದ್ ಖಾನ್ ಬಳಿ ಸಂಗೀತ ಶಿಕ್ಷಣ ಕ್ಕಾಗಿ ಕಳುಹಿಸಿಕೊಟ್ಟರು. ಸಂಗೀತ ಶಿಕ್ಷಣದ ಸತ್ವವನ್ನು ಹೀರಿದ ರಫಿಯವರ ಬದುಕು, 1935 ರ ಲಾಹೋರ್ ಸಮಾರಂಭದ ನಂತರ, ಬದುಕಿನ ದಿಕ್ಕು ಬದಲಾಯಿತು.

ರಫಿಯವರು ಮೊತ್ತಮೊದಲನೆಯದಾಗಿ, ಪಂಡಿತ್ ಶಾಮಸುಂದರ್ ಅವರ ಸಂಗೀತ ನಿರ್ದೇಶನದಲ್ಲಿ, ಹಾಡಿದ ‘ಗುಲ್ ಬರೋದ’ ಪಂಜಾಬಿ ಹಾಡು ತುಂಬಾ ಜನಪ್ರಿಯವಾಗಿ, ಅವರ ಖ್ಯಾತಿ ಮುಂಬೈ ವರೆಗೆ ಹಬ್ಬಿತು. ಸುಮಾರು ಎಂಟು ಪಂಜಾಬಿ ಹಾಡುಗಳನ್ನು ಹಾಡಿ ಪ್ರಸಿದ್ಧಿಗೆ ಏರಿದಾಗ, ಮುಂಬೈ ಫಿಲಂ ಜಗತ್ತು ಅವರನ್ನು ಕೈಬೀಸಿ ಕರೆಯಿತು. 1941 ರಂದು ಮುಂಬೈಗೆ ಬಂದ ರಫಿಯವರು ಖ್ಯಾತ ಸಂಗೀತ ನಿರ್ದೇಶಕ ನೌಷದ್ ರವರ ‘ಗಾಂಗ್ ಗೋರಿ’ ಚಿತ್ರಕ್ಕೆ ಹಿಂದಿಯಲ್ಲಿ ಪ್ರಥಮವಾಗಿ ಹಾಡಿದರು. ಆ ಹಾಡಿನ ನಂತರ ಅವರು ತಿರುಗಿ ನೋಡಲೇ ಇಲ್ಲ.

ಮೊಹಮ್ಮದ್ ರಫಿಯವರ ಹಾಡುಗಳು, ಚಿತ್ರಸಂಗೀತ ಸ್ವರ್ಣಯುಗದ ಇತಿಹಾಸದಲ್ಲಿ ಉಜ್ವಲ ಪುಟಗಳನ್ನು ಕಾಣಬಹುದು.ಅವರು ಹಾಡಿದ ಕರುಳು ಮಿಡಿಯುವ ಶೋಕ ಗೀತೆಗಳು, ಕುಣಿದು ಕುಪ್ಪಳಿಸಬಹುದಾದ ರೋಮ್ಯಾಂಟಿಕ್ ಹಾಡುಗಳು, ಮನತುಂಬುವ ಅಂತರಾಳದ ಭಾವಪೂರ್ಣ ಗೀತೆಗಳು, ಅವರನ್ನು ಗಾಯನ ಪ್ರಪಂಚದ ಎಂದು ತುಂಬಲಾರದ ಗಾಯಕನ ಸ್ಥಾನಕ್ಕೆ ಏರಿಸಿ, ಗಾಯನ ಪ್ರಪಂಚದ ಸ್ವರ್ಣ ಸಿಂಹಾಸನದಲ್ಲಿ ಕುಳ್ಳಿರಿಸಿತು. ವಿನಯ ಸ್ವಭಾವದ ರಫಿ ಯವರು, ಯಾರನ್ನು ನೋಯಿಸಿದವರಲ್ಲ. ಬಡವರ ನಿರ್ಗತಿಕರ,ಅನಾಥರ, ಬಗ್ಗೆ ತೀವ್ರ ಕಾಳಜಿ ಇದ್ದ ಅವರು ಯಾರಿಗೂ ತಿಳಿಯದ ರೀತಿಯಲ್ಲಿ,ಸಹಾಯ ಮಾಡುತ್ತಿದ್ದರು. ಬಡ ನಿರ್ಮಾಪಕ ಹಾಗೂ ಶ್ರೀಮಂತ ನಿರ್ಮಾಪಕರನ್ನು ಒಂದೇ ರೀತಿಯಲ್ಲಿ ಕಂಡ ಅವರು, ನಿಷ್ಠೆಯಿಂದ ಪ್ರಾಮಾಣಿಕವಾಗಿ ದುಡಿದಿದ್ದರು. ಯಾವತ್ತೂ ಮುಖ ಸಿಂಡರಿಸಿದೆ, ಸದಾ ನಗುಮುಖದಲ್ಲೇ ರಾರಾಜಿಸುತ್ತಿದ್ದ ರಫಿಯವರು ವಿರಹಗೀತೆ ಇರಲಿ, ಸಂತೋಷದ ಗೀತೆಯಿರಲಿ, ಯಾವುದೇ ಒತ್ತಡವಿಲ್ಲದೆ ಸಾವಧಾನವಾಗಿ ಶಾಂತಚಿತ್ತರಾಗಿ ಹಾಡುತ್ತಾ,ಹಾಡಿನಲ್ಲಿ ತಲ್ಲೀನರಾಗುತ್ತಿದ್ದರು.ಜಗಳ, ದುಡುಕು, ದೊಡ್ಡ ಧ್ವನಿ ಅವರ ಜೀವನದಲ್ಲಿ ದಾಖಲಾಗಲಿಲ್ಲ. ಮಧ್ಯಪಾನ ಸೇವಿಸದ, ಧೂಮಪಾನ ಮಾಡದ, ಯಾರೊಡನೆ ಜಗಳ ಕಾಯದ, ರಫಿಯವರು ಸೌಜನ್ಯದ ಸಾಕಾರ ವಾಗಿದ್ದರು.

ಮೊಹಮ್ಮದ್ ರಫಿ ಯವರು ತಮ್ಮ ಜೀವಿತಾವಧಿಯಲ್ಲಿ, ಸುಮಾರು 35 ಭಾಷೆಗಳಲ್ಲಿ 35000 ಕ್ಕಿಂತಲೂ ಅಧಿಕ ಹಾಡುಗಳನ್ನು ಹಾಡಿದರು. ಕೇಳುಗರ ಮನಸೂರೆಗೊಳ್ಳುವ ರಫಿಯವರ ಹಾಡಿನ ಶೈಲಿ, ಇಂದಿಗೂ ಚಿರನೂತನ ವಾಗಿದೆ. ಸಂಗೀತ ಪ್ರಪಂಚದಲ್ಲಿ ಹಲವಾರು ಮಹಾನ್ ಗಾಯಕರು ಉದಯಿಸಿದ್ದರೂ ರಫಿ ಯವರಿಂದ ಬರಿದಾದ ಸ್ಥಾನವನ್ನು ಇನ್ನು ಕೂಡ ಯಾರಿಂದಲೂ ತುಂಬಲು ಸಾಧ್ಯವಾಗಿಲ್ಲ. ರಫಿಯವರ ಹಾಡನ್ನು ಹಾಡಲು ತೊಡಗುವ ಅಭಿಮಾನಿಗಳ ಮನದಲ್ಲಿ ರಫಿಯವರು ಜೀವಂತವಾಗಿ, ಆ ಹಾಡಿನಿಂದ ಪಡೆಯುವ ಸಂತೋಷ ವಿವರಿಸಲು ಅಸಾಧ್ಯ. ರಫಿಯವರ ಹಾಡನ್ನು ಒಳಗೊಂಡ ಆಡಿಯೋಗಳು ವೀಡಿಯೊಗಳು ಇಂದು ಕೂಡ ಜನಪ್ರಿಯವಾಗಿದೆ. ರಫಿ ಯವರನ್ನು ಕಾಣದ, ಅವರ ಕಾಲದಲ್ಲಿ ಹುಟ್ಟಿರದ, ಜನರು ಇಂದು ರಫಿಯವರ ಧ್ವನಿಗೆ ಸೋಲುತ್ತಿರುವುದು, ಅವರ ಅಮರತ್ವಕ್ಕೆ ಜೀವಂತ ಸಾಕ್ಷಿಯಾಗಿದೆ ಓ ದೂರ್ ಕೆ ಮುಸಫಿರ್ ಹಮ್ಕೊ ಬಿ ಸಾತ್ ಲೇ ಲೇ….. ಹಮ್ಕೊ ಬಿಸಾತ್ ಲೇ ಲೇ…. ಹಮ್ ರಹೆಂಗೆ ಯೇ ಅಕೇಲೆ… ಎನ್ನುತ್ತಾ ಯಾತ್ರೆಗೆ ಹೊರಟುಹೋದ, ಮೊಹಮ್ಮದ್ ರಫಿ, ಸಂಗೀತ ಪ್ರಪಂಚದಲ್ಲಿ ಇನ್ನು ಕೂಡ ಮಿನುಗುವ ಧ್ರುವತಾರೆಯಾಗಿರುತ್ತಾರೆ.

 

ಸಾಲ್ಮರ ನೂರುದ್ದೀನ್

   ವಕೀಲರು.ನೋಟರಿ ಪುತ್ತೂರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.