ಪ್ರವೀಣ್ ನೆಟ್ಟಾರು ಮನೆಗೆ ಕಾಂಗ್ರೆಸ್ ಮುಖಂಡರ ಭೇಟಿ ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸುರಕ್ಷತೆಯಿಲ್ಲ-ಪಿ.ಬಿ ಹರಿಪ್ರಸಾದ್

0

 
ಬೆಳ್ಳಾರೆ: ದುಷ್ಕರ್ಮಿಗಳಿಂದ ಹತ್ಯೆಯಾದ ಪ್ರವೀಣ್ ನೆಟ್ಟಾರು ಮನೆಗೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಹಾಗೂ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಜು.31ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.
ಬಿ.ಕೆ ಹರಿಪ್ರಸಾದ್ ಮಾತನಾಡಿ “ನಿಮಗೆಷ್ಟು ದುಃಖವಿದೆಯೋ ಅಷ್ಟೇ ದುಃಖ ನಮಗೂ ಇದೆ.ಅದಕ್ಕೆ ನಮ್ಮ ಕಡೆಯಿಂದ ಏನೆಲ್ಲ ಸಹಕಾರ ಮಾಡಬಹುದು ಅದನ್ನೆಲ್ಲಾ ಮಾಡಲು ನಾವು ಬದ್ದರಿದ್ದೇವೆ.ನಾವಿಲ್ಲಿ ರಾಜಕೀಯ ಮಾಡಲು ಬಂದಿಲ್ಲ,ಸರಕಾರವು ಎನ್.ಐ.ಎಗೆ ಈ ಪ್ರಕರಣವನ್ನು ನೀಡಿದೆ.ಇದರ ಹೊರತಾಗಿಯೂ ಸರಕಾರದ ಮೇಲೆ ಪ್ರಕರಣದ ನಿಜಾಂಶ ಹೊರಬರಲು ಒತ್ತಡ ಹಾಕಲಾಗುವುದು.ನಿಮ್ಮ ದುಃಖದಲ್ಲಿ ನಾವುಗಳೂ ಭಾಗಿಗಳು ಎಂಬುದನ್ನು ತಿಳಿಸಲು ನಾವು ಬಂದಿದ್ದೇವೆ.ನಿಮ್ಮೊಂದಿಗೆ ನಾವಿದ್ದೇವೆ” ಎಂದರು
ಪ್ರವೀಣ್ ಪತ್ನಿ ನೂತನ ಮಾತನಾಡಿ “ಸಮಾಜದಲ್ಲಿ ಎಲ್ಲರೂ ಒಳ್ಳೆಯದಾಗಬೇಕು.ಯಾರೂ ಇಲ್ಲದ ವೇಳೆ ಹಿಂದಿನಿಂದ ಬಂದು ದಾಳಿ ನಡೆಸುವುದು ನಡೆಯಬಾರದು.ಆ ರೀತಿ ಮಾಡುವವರಿಗೆ ಶಿಕ್ಷೆಯಾಗಬೇಕು,ಆಗುತ್ತದೆ ಕೂಡ.ಮುಂದೆ ಈ ರೀತಿಯವರನ್ನು ಬೆಳೆಯಲು ಅವಕಾಶ ಮಾಡಿಕೊಡಬಾರದು.ಎಲ್ಲರೊಂದಿಗೆ ಜಗಳ ಆಡುವವರಿಗಾದರೆ ಹೌದು ಆದರೆ ಯಾರ ವಿಷಯಕ್ಕೂ ಹೋಗಾದ ಸಾಮಾನ್ಯರಿಗೆ ಈ ರೀತಿ ಆಗಬಾರದು” ಎಂದರು.

ಕ್ಷಣ ಕಾಲ ಚರ್ಚೆ-ಪ್ರತಿಭಟನೆಯ ಕೂಗು
ಮನೆಯ ಒಳಗೆ ಪ್ರವೀಣ್ ತಂದೆ,ತಾಯಿ ಹಾಗೂ ಪತ್ನಿಯನ್ನು ಮಾತನಾಡಿಸುತ್ತಿರುವಾಗ ಪ್ರವೀಣ್ ಚಿಕ್ಕಪ್ಪ ಜಯರಾಮ ಅವರು ರಮನಾಥ.ರೈಯವರನ್ನು ಉದ್ದೇಶಿಸಿ”ನೀವು ಮೊನ್ನೆ ಯಾಕೆ ಬಂದಿಲ್ಲ,ನೀವೊಬ್ಬ ಜಿಲ್ಲಾ ಮಟ್ಟದ ಪ್ರಮುಖ ಕಾಂಗ್ರೆಸ್ ನಾಯಕ.ಆದರೂ ಹತ್ಯೆಯಾದಾಗ ಯಾಕೆ ಆಗಮಿಸಿಲ್ಲ,ಈಗ ಯಾಕೆ ಆಗಮಿಸುತ್ತಿದ್ದೀರಿ” ಎಂದರು.ಆಗ ರಮಾನಾಥ.ರೈ ‘ನೀವು ಸುಮ್ಮನಿರಿ,ಅವರು(ಪ್ರವೀಣ್ ತಂದೆ,ತಾಯಿ,ಪತ್ನಿ)ಮಾತನಾಡಲಿ’ ಎನ್ನುತ್ತಾರೆ.ಇದರಿಂದ ಸಿಡಿಮಿಡಿಗೊಂಡ ಜಯರಾಮ “ಮೊನ್ನೆಯಿಂದ ಮನೆಯವರೊಂದಿಗೆ ಇರುವುದು ನಾನು,ಅವರ ಪರವಾಗಿ ನಾನು ಮಾತನಾಡಿದ್ದೇನೆ ನನ್ನನ್ನು ಮಾತನಾಡಬೇಡಿ ಎಂದರೆ ಹೇಗೆ” ಎಂದರು.ಬಳಿಕ ಮನೆಯ ಅಂಗಳಕ್ಕೂ ಬಂದು ಅದೇ ರೀತಿಯ ಮಾತುಗಳನ್ನಾಡಿದರು.ಇದನ್ನು ಕೇಳಿ ನೆರೆದಿದ್ದ ಕೆಲವು ಯುವಕರು”ನಾಡಿದ್ದು ಕೊಲೆಗಾರರಿಗೆ ಜಾಮೀಣು ನೀಡುವವರೂ ಇವರೇ ಈಗ ಇಲ್ಲಿಗೆ ಯಾಕೆ ಬಂದಿದ್ದಾರೆ”ಎಂಬಿತ್ಯಾದಿಯಾಗಿ ಮಾತನಾಡುತ್ತಾರೆ.ಕಾಂಗ್ರಸ್ ನಾಯಕರೊಬ್ಬರು ಶೂ ಹಾಕಿ ಹೋಗಿದ್ದು ಯಾರು, ಇವರಿಗೆ ಸಂಸ್ಕೃತಿ ಉಂಟಾ? ಇದುವೆಯ ನಿಮ್ಮ ಸಂಸ್ಕ್ರತಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.ಕಾಂಗ್ರೆಸ್ ಮುಖಂಡರು ತೆರಳುವ ಸಂದರ್ಭದಲ್ಲಿ ಧಿಕ್ಕಾರ ಹಾಕಿದ ಘಟನೆಗಳೂ ಸ್ಥಳದಲ್ಲಿ ನಡೆಯಿತು.


ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯದಲ್ಲಿ ಸುರಕ್ಷತೆಯಿಲ್ಲ-ಪಿ.ಬಿ ಹರಿಪ್ರಸಾದ್
ವಿಧಾನಪರಿಷತ್ ವಿಪಕ್ಷ ನಾಯಕ ಪಿ.ಬಿ ಹರಿಪ್ರಸಾದ್ ಮಾಧ್ಯಮದೊಂದಿಗೆ ಮಾತನಾಡಿ”ಪ್ರವೀಣ್ ಹತ್ಯೆಯಿಂದಾಗಿ ನಾವೆಲ್ಲಾ ತಲೆತಗ್ಗಿಸುವಂತೆ ಆಗಿದೆ.ಈ ಪ್ರಕರಣವನ್ನು ಈಗಾಗಲೇ ಸರಕಾರ ಎನ್.ಐ.ಎಗೆ ನೀಡಿದ್ದಾರೆ.ದಕ್ಷಿಣ ಕನ್ನಡ ಜಿಲ್ಲೆ ಅತ್ಯಂತ ಸೂಕ್ಷ್ಮ ಪ್ರದೇಶ,ಕರ್ನಾಟಕ ರಾಜ್ಯದಲ್ಲಿರುವ ಇಂಟಲಿಜೆನ್ಸಿ ಡಿಪಾರ್ಟ್ಮೆಂಟ್ ಸಂಪೂರ್ಣವಾಗಿ ವಿಫಲವಾಗಿದೆ.ಇಲ್ಲಿ ನಡೆಯುತ್ತಿರುವ ಘರ್ಷಣೆಗಳು ಏನು ಎಂಬುದು ಎಲ್ಲರಿಗೂ ಗೊತ್ತಿರುವಂತದ್ದು.ನಡೆಯುತ್ತಿರುವ ಘಟನೆಗಳನ್ನು ನೋಡಿದಾಗ ಇಂಟೆಲಿಜೆನ್ಸ್ ಸಂಪೂರ್ಣ ವಿಫಲವಾಗಿದೆ ಆದ್ದರಿಂದ ಇದನ್ನು ಎನ್.ಐ.ಎಗೆ ಕೊಟ್ಟಿದ್ದಾರೆ ಎಂದು ತಿಳಿಯುತ್ತದೆ.ರಾಜಸ್ಥಾನದ ಉದಯಪುರ ದಲ್ಲಿ ನಡೆದ ಘಟನೆಯಲ್ಲಿ ಎರಡು ದಿನದಲ್ಲಿ ಅಪರಾಧಿಗಳ ಬಂಧನವಾಗುತ್ತದೆ.ಆದರೆ ಇಲ್ಲಿ ಒಂದು ವಾರ ಆದರೂ ಬಂಧನ ಆಗಿಲ್ಲ.ಮುಂದಿನ ಹದಿನೈದು ದಿನಗಳಲ್ಲಿ ಅಪರಾಧಿಗಳ ಬಂಧನವಾಗಿಲ್ಲವೆಂದಾದರೆ ಇದರ ಬಗ್ಗೆ ತೀವ್ರವಾದ ಹೋರಾಟ ಮಾಡಬೇಕಾಗುತ್ತದೆ.ಸೂಕ್ಷ್ಮ ಪ್ರದೇಶದಲ್ಲಿ ಎಚ್ಚರವಹಿಸಬೇಕಾದ್ದು ಪೊಲೀಸರು,ಇಲ್ಲಿ ರಾಜಕೀಯ ಮಾಡಿಕೊಂಡಿದ್ದರೆ ಆಗುವುದಿಲ್ಲ.ಬಿಜೆಪಿ ಕಾಂಗ್ರೆಸ್ ಸರ್ಕಾರ ಇದ್ದಾಗ ದಿನಾಲು ಭಾಷಣ ಹೊಡಿತತಿದ್ರು.ಈಗ ಬಿಜೆಪಿ ಸರ್ಕಾರ,ಅವರದೇ ಗೃಹಮಂತ್ರಿ,ಆರ್.ಎಸ್.ಎಸ್ ಹಿನ್ನೆಲೆಯುಳ್ಳವರೇ ಇರುವುದು.ಆದ್ರೂ ಇನ್ನೂ ಯಾಕೆ ಅಪರಾಧಿಗಳ ಬಂಧನವಾಗಿಲ್ಲ.ಅವರದೇ ಆದ ಪಕ್ಷದ ಯುವಕನಿಗೆ ರಕ್ಷಣೆ ನೀಡಲಾಗದ ಬಿಜೆಪಿಯವರು ಉಳಿದವರಿಗೆ ಹೇಗೆ ರಕ್ಷಣೆ ಕೊಡುತ್ತಾರೆ.ನಾಲ್ಕು ವರ್ಷದ ಹಿಂದೆ ಮಂದಾರ್ಥಿಯಲ್ಲಿ ಮಂಡಲ ಅಧ್ಯಕ್ಷ ಪ್ರವೀಣ್ ಪೂಜಾರಿ ಕೊಲೆಯಾಗಿತ್ತು.ಇಂದು ಯುವ ಮೋರ್ಚಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ಕೊಲೆಯಾಗಿದೆ ಹೀಗೆ ಇವರ ಪಕ್ಷದವರಿಗೇ ರಕ್ಷಣೆ ಕೊಡದವರು ಬೇರೆಯವರಿಗೆ ಏನು ರಕ್ಷಣೆ ನೀಡುತ್ತಾರೆ.ಬಿಜೆಪಿ ಬಂದ ಮೇಲೆ ಯಾರೂ ಕೂಡ ಈ ರಾಜ್ಯದಲ್ಲಿ ಸುರಕ್ಷಿತರಾಗಿಲ್ಲ.ಧರ್ಮವನ್ನು ಕಾಪಾಡುವವರು,ಅಧಿಕಾರದಲ್ಲಿರುವವರು ತಮ್ಮ ಮಕ್ಕಳ ಕೈಯಲ್ಲಿ ಗನ್,ಪಿಸ್ತೂಲ್ ಕೊಟ್ಟು ಹೋರಾಡುವುದಕ್ಕೆ ಕಳುಹಿಸಲಿ.ಅಮಾಯಕರನ್ನು ಯಾಕೆ ಬಲಿ ತೆಗೆದುಕೊಳ್ಳುತ್ತಿದ್ದಾರೆ.ಭಷಣ ಮಾಡುವವರು,ವಿಧಾನಸೌಧದಲ್ಲಿದ್ದವರು ಕೊಲೆಯಗುವುದಿಲ್ಲ.ಕೊಲೆಯಾಗುತ್ತಿರುವುದು ಕುಗ್ರಾಮದಲ್ಲಿ ಜೀವನ ನಡೆಸುತ್ತಾ ಧರ್ಮದ ಮೇಲೆ ನಂಬಿಕೆಯಿರಿಸಿರುವವರ ಕೊಲೆ ಆಗುತ್ತಿರುವುದು ಇದು ನಿಲ್ಲಬೇಕು ಎಂದರು.
ಈ‌ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ,ಮಾಜಿ ಸಚಿವ ರಮಾನಾಥ.ರೈ,ಮಾಜಿ ಶಾಸಕಿ ಶಕುಂತಲಾ ಶೆಟ್ಟಿ,ಮಾಜಿ ಸಚಿವ ಅಭಯ ಚಂದ್ರ ಜೈನ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್,ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ,ಜಿಲ್ಲಾ ಯೂತ್ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್,ಡಾ.ರಘು, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ ವಿಶ್ವನಾಥ.ರೈ,ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ರಾಜಾರಾಂ.ಕೆ.ಬಿ,ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here