ಅಮಾಯಕ ಹಿಂದು, ಮುಸ್ಲಿಂ ಯುವಕರ ಹತ್ಯೆಗಳ ರಾಜಕೀಯವನ್ನು ಅರ್ಥ ಮಾಡಿಕೊಳ್ಳದಿದ್ದರೆ ಜೀವನವಿಡೀ ದ್ವೇಷದಲ್ಲಿ, ಭಯದಲ್ಲಿ ನರಳಬೇಕಾಗುತ್ತದೆ, ಗುಲಾಮರಾಗಿ ಬದುಕಬೇಕಾಗುತ್ತದೆ

  • ನೆಮ್ಮದಿಯ, ಬದುಕಿಗಾಗಿ ಎಲ್ಲಾ ಸಮುದಾಯದವರು ಪ್ರೀತಿ ವಿಶ್ವಾಸದಿಂದ ಬದುಕುವ ಅವಶ್ಯಕತೆ ಇದೆ

ದೇಶದಲ್ಲಿ ಎಲ್ಲಾ ರಂಗದಲ್ಲಿ ಪ್ರಮುಖ ಸ್ಥಾನದಲ್ಲಿರುವ ಬುದ್ಧಿವಂತರ ಜಿಲ್ಲೆಯಾದ ನಮ್ಮ ದ.ಕ. ಜಿಲ್ಲೆ ಕೋಮು ದ್ವೇಷ ಹರಡುವಿಕೆಯಲ್ಲಿ, ಕೋಮು ಗಲಭೆಗಳಲ್ಲಿ ಪ್ರಮುಖ ಸ್ಥಾನವನ್ನು ಪಡೆಯುತ್ತಿರುವುದು ನಮ್ಮ ಜಿಲ್ಲೆಗೆ ತಟ್ಟಿದ ಶಾಪವೆಂದೇ ಹೇಳಬೇಕು. ಇದರಲ್ಲಿ ಹಿಂದುಗಳು, ಮುಸ್ಲಿಂಮರು ಎಂದು ಬೇಧ ಮಾಡಬೇಕಾಗಿಲ್ಲ. ಒಬ್ಬರನ್ನೊಬ್ಬರು ಮೀರಿಸಲು ಪ್ರಯತ್ನಿಸುತ್ತಿರುವುದು ನಮ್ಮ ಶೋಚನೀಯ ಸ್ಥಿತಿಗೆ ಕಾರಣ. ಹೀಗೇ ಮುಂದುವರಿದರೆ ಜಗತ್ತಿನ, ದೇಶದ ಯಾಕೆ ರಾಜ್ಯದ ಬೇರೆ ಬೇರೆ ಭಾಗಗಳಿಂದ ಈ ಜಿಲ್ಲೆಗೆ ಬರುವವರು ಕಡಿಮೆಯಾಗುವುದು ಮಾತ್ರವಲ್ಲ. ಇಲ್ಲಿಯ ಜನರು ಹಳ್ಳಿ ಹಳ್ಳಿಗಳಲ್ಲಿ ಹಿಂದು ಮುಸ್ಲಿಂ ಎಂದು ವಿಂಗಡಿತರಾಗಿ ಪರಸ್ಪರ ದ್ವೇಷದ ವಾತಾವರಣದಲ್ಲಿ ಎಂದು ಏನಾಗುತ್ತದೆ ಎಂಬ ಭಯದಲ್ಲಿ ಬದುಕುವ ಕಾಲ ಬರುವುದು ಮಾತ್ರವಲ್ಲ, ಅದರ ಲಾಭ ಪಡೆದು ಎಲ್ಲಾ ಪಕ್ಷಗಳ ನಾಯಕರು, ಸಂಘಟನೆಗಳ ಮುಖ್ಯಸ್ಥರುಗಳು, ಜನಪ್ರತಿನಿಧಿಗಳು, ತಮ್ಮ ತಮ್ಮ ಸ್ಥಾನಮಾನದಿಂದ ರಕ್ಷಣೆ ಪಡೆದು ಇಲ್ಲಿಯ ಜನರನ್ನು ಕೋಮು ಭಾವನೆಗಳಲ್ಲಿ ವಿಂಗಡಿಸಿ ಶಾಶ್ವತ ನಾಯಕರಾಗುವುದು ಖಂಡಿತ.


ಈ ಸಲ ಬೆಳ್ಳಾರೆಯಲ್ಲಿ ಮಸೂದ್ ಎಂಬ ಮುಸ್ಲಿಂ ಯುವಕನ ಮೇಲೆ ಜಗಳದ ಕಾರಣದಿಂದ ನಡೆದ ಹಲ್ಲೆಯಿಂದಾಗಿ ಆತ ಮೃತನಾಗಿದ್ದಾನೆ. ಹಲ್ಲೆ ಮಾಡಿದ ಹಿಂದು ಯುವಕರು ಕಂಬಿಯೊಳಗಿದ್ದಾರೆ. ಅದು ಎಲ್ಲರೂ ಖಂಡಿಸಬೇಕಾದ ಕೃತ್ಯ. ಸಾಮಾನ್ಯವಾಗಿ ಹಲ್ಲೆ, ಹತ್ಯೆಯಾದರೆ ಅದಕ್ಕೆ ಪ್ರತೀಕಾರವಾಗಿ ಹತ್ಯೆ ಮಾಡಿದವರನ್ನು ಹುಡುಕಿ ಹತ್ಯೆ ಮಾಡಲಾಗುತ್ತದೆ. ಪುತ್ತೂರಿನ ಕಾರ್ತಿಕ್ ಮೇರ್ಲ ಎಂಬ ಯುವಕನ ಹತ್ಯೆ ಮಾಡಿದ ಪ್ರತೀಕಾರವಾಗಿ ಆತನ ಸ್ನೇಹಿತರು ಕೊಳ್ತಿಗೆಯಲ್ಲಿ ಚರಣ್‌ರಾಜ್ ರೈ ಎಂಬ ಯುವಕನ ಹತ್ಯೆ ಮಾಡಿದ್ದಾರೆ. ಎಲ್ಲಾ ಸಮುದಾಯದಲ್ಲೂ ಅದು ಸಾಮಾನ್ಯವಾಗಿ ನಡೆಯುತ್ತಾ ಇರುತ್ತದೆ. ಆದರೆ ಇಲ್ಲಿ ಮಸೂದ್‌ನ ಹತ್ಯೆಗೆ ಕಾರಣರಾದವರನ್ನು ಪ್ರತೀಕಾರವಾಗಿ ಕೊಂದುದಲ್ಲ. ಅವರು ಜೈಲಿನಲ್ಲಿದ್ದಾರೆ. ಆ ಘಟನೆಗೆ ಸಂಬಂಧ ಪಡದ ಪ್ರವೀಣ್ ನೆಟ್ಟಾರು ಎಂಬ ಅಮಾಯಕ ಯುವಕನನ್ನು ಹೊಂಚು ಹಾಕಿ ಹತ್ಯೆ ಮಾಡಲಾಗಿದೆ ಯಾಕೆ? ಅದೇ ರೀತಿ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಅಮಾಯಕ ಯುವಕನ ಹತ್ಯೆಯಾಗಿದೆ ಯಾಕೆ? ಅವನಿಗೂ ಪ್ರವೀಣ್ ನೆಟ್ಟಾರು ಹತ್ಯೆಗೂ ಯಾವುದೇ ಸಂಬಂಧವಿಲ್ಲ. ಇದರ ಉzಶಗಳೇನು? ಒಬ್ಬ ಹತ್ಯೆಯಾದರೆ ಅದಕ್ಕೆ ಕಾರಣಕರ್ತರನ್ನು ಶಿಕ್ಷೆಗೊಳಿಸುವುದು, ಅವರ ಮೇಲೆ ಪ್ರತೀಕಾರ ತೀರಿಸಿಕೊಳ್ಳುವುದು ದ್ವೇಷದಲ್ಲಿ ಎಂದು ಇಟ್ಟುಕೊಳ್ಳುವ. ಆದರೆ ಇಲ್ಲಿ ಯಾವುದೇ ಕಾರಣಕ್ಕೆ ಮುಸ್ಲಿಂ ಯುವಕನ ಹತ್ಯೆಯಾದರೆ ಏನೂ ಅರಿಯದ ಹಿಂದು ಯುವಕನ ಹತ್ಯೆ. ಹಾಗೆಯೇ ಹಿಂದು ಯುವಕನ ಹತ್ಯೆಗೆ ಅದಕ್ಕೆ ಸಂಬಂಧಿಸದ ಮುಸ್ಲಿಂ ಯುವಕನ ಹತ್ಯೆ ಜನರನ್ನು ಬೆಚ್ಚಿ ಬೀಳಿಸಿದೆ. ನಾವು ಯಾವುದೇ ಅಂತಹ ಕಾರ್ಯದಲ್ಲಿ ಭಾಗಿಯಾಗಿರದಿದ್ದರೂ ತಮ್ಮನ್ನು ಹಿಂದು ಅಥವಾ ಮುಸ್ಲಿಂ ಎಂದು ಮಾತ್ರ ಪರಿಗಣಿಸಿ ಹತ್ಯೆ ಮಾಡುತ್ತಾರೆ ಎಂದರೆ ಅದರ ಉzಶವೇನು? ಹಿಂದುಗಳು ತಮ್ಮೊಂದಿಗೆ ಬದುಕುತ್ತಿರುವ ಮುಸ್ಲಿಂರನ್ನು, ಮುಸ್ಲಿಂಮರು ತಮ್ಮೊಂದಿಗೆ ಬದುಕುತ್ತಿರುವ ಹಿಂದುಗಳನ್ನು ಸಂಶಯದಿಂದ ನೋಡಿ, ದ್ವೇಷದಿಂದ ಪರಸ್ಪರರ ಸಾವನ್ನು ಬಯಸುತ್ತಾ ಹೆದರಿಕೆಯಿಂದ ಬದುಕುವಂತೆ ಮಾಡುವುದೇ ಆಗಿದೆಯಲ್ಲವೇ. ಆ ಮೂಲಕ ನಿರಂತರವಾಗಿ ತಮ್ಮ ತಮ್ಮ ನಾಯಕರ ರಕ್ಷಣೆಯಲ್ಲಿ ಅವರ ಗುಲಾಮರಂತೆ ಬದುಕುವಂತೆ ಮಾಡುವುದೇ ಉzಶವಲ್ಲವೇ. ಈ ಅಮಾಯಕರ ಹತ್ಯೆಗಳಿಗೆ ಅದೇ ಕಾರಣವೆಂದು ತಮಗೆನಿಸುವುದಿಲ್ಲವೇ?.

ಪ್ರವೀಣ್ ನೆಟ್ಟಾರು ಹತ್ಯೆಯ ದುಃಖದಲ್ಲಿರುವ ಅವರ ಹೆಂಡತಿ ನೂತನ ಹಾಗೆಯೇ ಅವರ ತಾಯಿ, ತಂದೆ ಪ್ರವೀಣನ ಹತ್ಯೆ ಮಾಡಿದವರಿಗೆ ಗಲ್ಲು ಶಿಕ್ಷೆಯಾಗಬೇಕು, ಎನ್‌ಕೌಂಟರ್ ಆಗಬೇಕು ಎಂದಿದ್ದಾರೆ. ಅದೇ ರೀತಿ ಸುರತ್ಕಲ್‌ನಲ್ಲಿ ಕೊಲೆಯಾದ ಫಾಝಿಲ್‌ರವರ ತಂದೆ ನನಗೆ ಪರಿಹಾರದ ಹಣ ಬೇಡ. ನನ್ನ ಮಗನ ಹತ್ಯೆಗೆ ಕಾರಣರಾದವರನ್ನು ಗುರುತಿಸಿ ಶಿಕ್ಷೆಗೆ ಗುರಿಪಡಿಸಿ ಎಂದು ಆಗ್ರಹಿಸಿದ್ದಾರೆ. ಆದರೆ ಇಲ್ಲಿಗೆ ಬಂದ ಹೆಚ್ಚಿನ ನಾಯಕರುಗಳು ಪರಸ್ಪರ ವಿಶ್ವಾಸದಲ್ಲಿ, ಪ್ರೀತಿಯಲ್ಲಿ ಬದುಕಿ ಎಂದು ಹೇಳುವ ಬದಲು ದ್ವೇಷವನ್ನು ವೃದ್ಧಿಸುವ, ಪರಸ್ಪರ ವಿಶ್ವಾಸವನ್ನು ಹಾಳು ಮಾಡುವ, ಕೋಮು ದ್ವೇಷ ಹರಡುವ ಮಾತುಗಳನ್ನಾಡಿ ಹೋಗುತ್ತಿದ್ದಾರೆ. ಸ್ಥಳೀಯ ಅನ್ಯ ಸಮುದಾಯದವರನ್ನು ನಂಬುವುದು ಹೇಗೆ ಎಂಬ ಅಭಿಪ್ರಾಯದ ಮಾತು ಕೆಲವರಿಂದ, ಜನ ಸಾಮಾನ್ಯರಿಗೆ ರಕ್ಷಣೆ ಕೊಡಲು ಸಾಧ್ಯವಿಲ್ಲ ಎಂಬ ಮಾತು ತೇಜಸ್ವಿ ಸೂರ್ಯ ಎಂಬ ಸಂಸದ ದೇಶದ ನಾಯಕರಿಂದ ಬಂದಿದೆ. ಅದು ಜನರನ್ನು ಇನ್ನೂ ಹೆಚ್ಚು ಭಯಕ್ಕೆ ದೂಡಿದಂತಾಗಿದೆ. ಆ ಮೂಲಕ ಊರಿನಲ್ಲಿರುವ ಹಿಂದುಗಳನ್ನು ಮುಸ್ಲಿಂಮರು, ಮುಸ್ಲಿಂಮರನ್ನು ಹಿಂದುಗಳು ದ್ವೇಷಿಸಿ ಹೆದರಿ ಪರಸ್ಪರ ನಾಶಕ್ಕೆ ಪ್ರಯತ್ನಿಸಿ ಬದುಕುವಂತಹ ವಾತಾವರಣ ಸೃಷ್ಠಿ ಮಾಡುತ್ತಿದ್ದಾರೆ. ಅದನ್ನು ಜಿಲ್ಲೆಗೂ, ರಾಜ್ಯಕ್ಕೂ, ದೇಶಕ್ಕೂ ಹರಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅಂತಹ ಮಾತುಗಳನ್ನು ಹೇಳುವ ನಾಯಕರು ತಮ್ಮ ಹಿಂದೆ ಮುಂದೆ ರಕ್ಷಣೆಯನ್ನು ಇಟ್ಟುಕೊಂಡು ಬದುಕುತ್ತಾರೆ ಮಾತ್ರವಲ್ಲ ಹೆಚ್ಚಿನ ನಾಯಕರುಗಳು ಎಲ್ಲಾ ಸಮುದಾಯದವರಲ್ಲಿ ಸ್ನೇಹಿತರಾಗಿರುತ್ತಾರೆ. ವ್ಯವಹಾರದಲ್ಲೂ ಪಾಲುದಾರರಾಗಿರುತ್ತಾರೆ. ತಮ್ಮ ತಮ್ಮ ಲಾಭಕ್ಕಾಗಿ ಹಳ್ಳಿ ಹಳ್ಳಿಗಳಲ್ಲಿ ಜನರನ್ನು ಒಡೆದು ಪರಸ್ಪರ ದ್ವೇಷ ಉಂಟು ಮಾಡಿ ಅವರ ಭವಿಷ್ಯತ್ತಿಗೆ, ಜೀವನಕ್ಕೆ ಕೊಳ್ಳಿ ಇಡುತ್ತಾರೆ ಎಂಬುದನ್ನು ಅರ್ಥ ಮಾಡಿಕೊಂಡು ಅವರಂತೆ ಹೊಂದಾಣಿಕೆಯಿಂದ ಬದುಕಿದರೆ ನಾವು ನೆಮ್ಮದಿಯಿಂದ ಹೆದರಿಕೆ ಇಲ್ಲದೆ ಬದುಕು ಸಾಗಿಸಬಹುದು. ಇಲ್ಲದಿದ್ದರೆ ಈ ಸಲ ಆದ ಮೂರು ಘಟನೆಗಳಂತೆ ಯಾರೋ ಮಾಡಿದ ತಪ್ಪಿಗೆ ಅವರಿಗೆ ಶಿಕ್ಷೆಯಾಗುವುದು ಬಿಟ್ಟು ಜಿಲ್ಲೆ ಇಡೀ ಬಂದ್, ಕರ್ಫ್ಯೂಗೆ ಒಳಗಾಗಿ ಕಾರ್ಯಕ್ರಮ ರದ್ದುಪಡಿಸಿಕೊಂಡು ನಷ್ಟಕ್ಕೆ ಒಳಗಾಗಿ, ಪೊಲೀಸರ ನಿಯಂತ್ರಣದಲ್ಲಿ ಬದುಕಬೇಕು. ಎಲ್ಲಿ ಯಾವಾಗ ತಮ್ಮ ಅಂಗಡಿಗಳಿಗೆ, ವಾಹನಗಳಿಗೆ ಕಲ್ಲು ಬೀಳುತ್ತದೋ ಜೀವ ಹೋಗಬಹುದೇ ಎಂಬ ಹೆದರಿಕೆಯಿಂದ ಸದಾ ಬದುಕಬೇಕಾಗಿ ಬರಬಹುದಲ್ಲವೇ? ಅದನ್ನು ಎದುರಿಸಲಿಕ್ಕಾಗಿ ನಾವು ಅಂತಹ ಕೋಮು ಸಂಘರ್ಷಕ್ಕೆ ಎಡೆಕೊಡದೆ ಗ್ರಾಮ ಗ್ರಾಮಗಳಲ್ಲಿ ತಮ್ಮ ತಮ್ಮವರನ್ನು ರಕ್ಷಿಸಿ, ಸೌಹಾರ್ದತೆಯಿಂದ ಎಲ್ಲಾ ಸಮುದಾಯವದರು ಬದುಕಿ ಎಲ್ಲರೂ ಸೇರಿ ಅನ್ಯಾಯ ಮಾಡಿದವರನ್ನು ಜಾತಿ, ಧರ್ಮ, ಪಕ್ಷ ನೋಡದೆ ಶಿಕ್ಷಿಸುವ ತೀರ್ಮಾನವನ್ನು ಕೈಗೊಳ್ಳಬೇಕು. ಆ ಮೂಲಕ ನೆಮ್ಮದಿಯ ವಿಶ್ವಾಸದ ಬದುಕನ್ನು ಕಟ್ಟಿಕೊಂಡು ಹಿಂದು, ಮುಸ್ಲಿಂ ಎಂದು ನಮ್ಮನ್ನು ಒಡೆದು ಆಳಿ ನಾಯಕರಾಗುವವರ ಹುನ್ನಾರವನ್ನು ತಡೆಯಬಹುದು.

ಈ ಮೇಲಿನ ಲೇಖನಕ್ಕೆ ಪೂರಕವಾಗಿ 26-03-2009ರಂದು ಕೋಮು ಗಲಭೆ ಮತ್ತು ಬಂದ್‌ಗಳ ಸಂದರ್ಭಗಳನ್ನು ಉಲ್ಲೇಖಿಸಿ ಪುತ್ತೂರು ದಿನಪತ್ರಿಕೆಯಲ್ಲಿ ಬರೆದ ವಿಷಯದ ಒಂದು ಪ್ಯಾರವನ್ನು ಈ ಕೆಳಗೆ ನೀಡುತ್ತಿದ್ದೇನೆ.

ಅಮಾಯಕರ ಮೇಲೆ ಹಲ್ಲೆ, ಅಂಗಡಿಗಳಿಗೆ ಬೆಂಕಿ ಕೋಮು ದಳ್ಳುರಿ ಹರಡಲು ನಡೆಸುವ ಹುನ್ನಾರ

ಬಹಳ ಹಿಂದೆ ಒಂದು ಸಿನೆಮಾ ನೋಡಿದ ನೆನಪು. ಅದರಲ್ಲಿ ಒಂದು ಸ್ಲಮ್‌ನಲ್ಲಿ ಹಿಂದೂ-ಮುಸ್ಲಿಮರು ಹೊಂದಾಣಿಕೆಯಲ್ಲಿ ಬದುಕಿ ಕೊಂಡಿದ್ದರು. ಆ ಸ್ಲಮ್‌ನ್ನು ವಶಕ್ಕೆ ತೆಗೆದು ಕೊಳ್ಳಲು ಬಯಸಿದ ಪಟ್ಟಭದ್ರ ಹಿತಾಸಕ್ತಿ ತಂಡ ಅದನ್ನು ಖಾಲಿ ಮಾಡಲು ಪ್ರಯತ್ನ ನಡೆಸಿತು. ಆದರೆ ಅಲ್ಲಿದ್ದ ಹಿಂದೂ-ಮುಸ್ಲಿಮರು ಎಲ್ಲರೂ ಒಗ್ಗಟ್ಟಾಗಿ ಅವರನ್ನು ವಿರೋಧಿಸಿ ಅಲ್ಲಿಗೆ ಕಾಲಿq ದಂತೆ ಮಾಡುತ್ತಾರೆ. ಇದರಿಂದ ಕಂಗೆಟ್ಟ ತಂಡ ವ್ಯವಸ್ಥಿತ ಸಂಚನ್ನು ರೂಪಿಸುತ್ತದೆ. ಕೆಲವು ಕಿಡಿಗೇಡಿ ಮುಸ್ಲಿಮ್ ಯುವಕರನ್ನು ಕರೆದು ಅವರಿಗೆ ಹಣ ನೀಡಿ ಸ್ಲಮ್‌ನಲ್ಲಿರುವ ಹಿಂದೂಗಳ ಮನೆಯ ಮುಂದೆ ದನಗಳ ರುಂಡವನ್ನು ಇರಿಸುವಂತೆ ಹೇಳುತ್ತದೆ. ಕಿಡಿಗೇಡಿ ಹಿಂದೂ ಯುವಕರನ್ನು ಕರೆದು ಅವರಿಗೂ ಸಾಕಷ್ಟು ಹಣ ನೀಡಿ ಸ್ಲಮ್‌ನ ಮುಸ್ಲಿಂ ಮನೆಗಳ ಮುಂದೆ ಹಂದಿಗಳ ರುಂಡವನ್ನು ಇರಿಸುವಂತೆ ಆದೇಶಿಸುತ್ತದೆ.

ಎರಡೂ ಕ್ರಿಯೆಗಳು ರಾತ್ರಿ ಯಶಸ್ವಿಯಾಗಿ ನಡೆಯುತ್ತವೆ. ಮಾರನೆ ದಿನ ಬೆಳಿಗ್ಗೆ ಎದ್ದು ತಮ್ಮ ತಮ್ಮ ಮನೆಗಳ ಮುಂದೆ ದನ ಮತ್ತು ಹಂದಿಗಳ ತಲೆಯನ್ನು ನೋಡಿದ ಹಿಂದೂ ಮತ್ತು ಮುಸ್ಲಿಮರು ರೊಚ್ಚಿಗೆದ್ದು ಯಾರು ಮಾಡಿರಬಹುದೆಂದು ಯೋಚಿಸದೆ ಹಿಂದೂಗಳು ಮುಸ್ಲಿಂ ಮನೆಗೆ, ಮುಸ್ಲಿಮರು ಹಿಂದೂಗಳ ಮನೆಗೆ ಬೆಂಕಿ ಕೊಡಲು ಮುಂದಾಗುತ್ತಾರೆ. ಅದನ್ನು ನಿಲ್ಲಿಸಿ ಸಮಾಧಾನ ಹೇಳಲು ಪ್ರಯತ್ನಿಸುವ ಎರಡೂ ಸಮುದಾಯದ ಹಿರಿಯರನ್ನು ಪಟ್ಟಭದ್ರ ಹಿತಾಸಕ್ತರಿಂದ ಮೊದಲೇ ನಿಯೋಜಿತರಾಗಿದ್ದ ಹಿಂದೂ ಮತ್ತು ಮುಸ್ಲಿಂ ಯುವಕರು ಹಲ್ಲೆ ನಡೆಸಿ ಸಾಯಿಸುತ್ತಾರೆ. ಇದರಿಂದ ನಿಯಂತ್ರಣ ಕಳೆದುಕೊಳ್ಳುವ ಎರಡೂ ಸಮುದಾಯ ಗಳು ಹೊಡೆದಾಡಿ, ಬೆಂಕಿ ಹಚ್ಚಿ ಪರಸ್ಪರ ಸಂಪೂರ್ಣ ನಾಶವಾಗುತ್ತಾರೆ. ಉಳಿದವರು ಹೆದರಿ ಅಲ್ಲಿಂದ ಸ್ಥಳ ಖಾಲಿ ಮಾಡುತ್ತಾರೆ. ಆ ನಂತರವೂ ಅಲ್ಲಿ ಉಳಿದವರ ಮೇಲೆ ಪಟ್ಟಭದ್ರ ಹಿತಾಸಕ್ತರು ಪೊಲೀಸರ ಮುಖಾಂತರ ಕೇಸು ದಾಖಲಿಸಿ ಜೈಲಿಗೆ ಕಳುಹಿಸುತ್ತಾರೆ. ಅಂದು ರಾತ್ರಿ ಗಲಭೆಗೆ ಕಾರಣರಾದ ಮುಸ್ಲಿಂ ಯುವಕರ ಮತ್ತು ಹಿಂದೂ ಯುವಕರ ತಂಡ ತಮ್ಮ ಬೇಟೆಯ ಮತ್ತು ಕಾರ್ಯದ ಯಶಸ್ಸಿನ ಬಗ್ಗೆ ಸಂಭ್ರಮ ಆಚರಿಸುತ್ತಾರೆ. ಪಟ್ಟಭದ್ರ ಹಿತಾಸಕ್ತರ ತಂಡ ಅವರನ್ನು ಮುಂದಿನ ಇಂತಹ ಕಾರ್ಯಗಳಿಗೆ ಅಗತ್ಯ ಬಿದ್ದಾಗ ಕರೆಯುತ್ತೇವೆ ಎಂದು ಹೇಳಿ ಆದರಿಸಿ ಕಳುಹಿಸುತ್ತಾರೆ.

ಕೋಮು ಗಲಭೆ ಹರಡುವ ಮೂಲಕ ಎರಡೂ ಸಮುದಾಯದ ಕಿಡಿಗೇಡಿಗಳು ತಮ್ಮ ಲಾಭವನ್ನು ಪಡೆಯುವುದು ಈ ದೇಶದಲ್ಲಿ ನಡೆಯುತ್ತಾ ಬಂದಿದೆ. ಕೋಮು ಭಾವನೆಯ ಲಾಭವನ್ನು ರಾಜಕೀಯ ಪಕ್ಷಗಳು ಪಡೆಯುತ್ತವೆ. ಇಲ್ಲಿ ನಡೆಯುತ್ತಿರುವುದೂ ಅದೇ. ತಮ್ಮ ಧರ್ಮದ ರಕ್ಷಕರೆಂಬ ಹೆಸರಿನಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವುದು, ಇತರ ಧರ್ಮಗಳ ಮೇಲೆ ಹಲ್ಲೆ ನಡೆಸಿ ಪರಸ್ಪರ ವಿಂಗಡಿಸಿ ತಮ್ಮ ಧರ್ಮದ ಅಮಾಯಕರನ್ನು, ದುರ್ಬಲರನ್ನು ಆಪತ್ತಿಗೆ ಸಿಲುಕಿಸುವುದು ಮತ್ತು ತಮ್ಮ ಬಳಿಗೆ ರಕ್ಷಣೆಗಾಗಿ ಬರುವಂತೆ ಮಾಡುವುದು ಅವರ ಯೋಜನೆ. ಇದರಿಂದ ಅವರು ಶಾಶ್ವತ ನಾಯಕರುಗಳಾಗಿ ಉಳಿಯುತ್ತಾರೆ. ಈ ನಾಯಕರುಗಳು ಹಿಂದಿನ ಕಾಲದ ರಾಜರುಗಳಂತೆ ಆಗುತ್ತಾರೆ. ಗಲಭೆಗಳಾದಾಗ ಸಾಯುವುದು, ತೊಂದರೆಗೊಳಗಾಗುವುದು ಕಾಲಾಳುಗಳು ಮತ್ತು ಅಮಾಯಕ ಜನತೆ ಮಾತ್ರ. ನಾಯಕರಿಗೆ ಏನೂ ಆಗುವುದಿಲ್ಲ. ಅವರು ಯಾವಾಗಲೂ ರಕ್ಷಿಸಲ್ಪಡುತ್ತಾರೆ. ಅದಕ್ಕಾಗಿ ಈ ಗಲಭೆಗೆ ಪ್ರಚೋದನೆ ನೀಡುವ ಎಲ್ಲಾ ಸಮುದಾಯದ ನಾಯಕರುಗಳನ್ನು, ತೊಂದರೆಗೆ ಕಾರಣಕರ್ತರಾದವರನ್ನು ಒಳಗೆ ಹಾಕಿ ಶಿಕ್ಷೆಗೆ ಗುರಿಪಡಿಸಬೇಕು. ಆಗ ಗಲಭೆಗಳು ತನ್ನಿಂತಾನೆ ನಿಂತು ಹೋಗುತ್ತವೆ. ಈಗ ಆಗುತ್ತಿರುವಂತೆ ಅಂತಹ ನಾಯಕರುಗಳಿಗೆ ಪ್ರಚಾರ ಮತ್ತು ರಕ್ಷಣೆ ನೀಡುವ ಮೂಲಕ ಸಮಾಜವನ್ನು ಒತ್ತೆ ಇಡುವುದು, ಸಾಮಾನ್ಯ ಜನತೆ ಜೀವ ಕೈಯಲ್ಲಿಟ್ಟು ಬದುಕುವಂತೆ ಮಾಡುವುದು ಎಷ್ಟಕ್ಕೂ ಸರಿಯಲ್ಲ. ಅಮಾಯಕರ ಜೀವನದ ರಕ್ಷಣೆಗಾಗಿ ಮತ್ತು ಪುತ್ತೂರಿನ ಸಾಮರಸ್ಯಕ್ಕಾಗಿ ಜನತೆ ನಿರ್ಣಾಯಕ ಕ್ರಮಕ್ಕೆ ಮುಂದಾಗುವುದು ಒಳಿತು.

ಡಾ| ಯು.ಪಿ. ಶಿವಾನಂದ

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.