ಪ್ರವೀಣ್ ನೆಟ್ಟಾರು ಮರ್ಡರ್ ಕೇಸ್: ತನಿಖೆ ಚುರುಕು

0

ಮಸೂದ್ ಹತ್ಯೆಗೆ ಪ್ರತೀಕಾರವೇ? ಹಲಾಲ್ ವಿವಾದ ಕೊಲೆಗೆ ಕಾರಣವೇ?
ವೈಯುಕ್ತಿಕ ವಿಚಾರದಲ್ಲಿ ಬಲಿಯಾದರೇ? ಪೊಲೀಸರ ತನಿಖೆ

ಬೆಳ್ಳಾರೆಯಲ್ಲಿ ಬಾಡಿಗೆ ಮನೆ ಪಡೆದಿದ್ದ ಹಂತಕರು: ಕೊಲೆಗೆ ಮುಂಚೆ 40 ನಿಮಿಷ ಹೊಂಚು ಹಾಕಿದ್ದರು

ಪುತ್ತೂರು: ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ 8.35ರ ವೇಳೆಗೆ ತನ್ನದೇ ಮಾಲಕತ್ವದ ಅಕ್ಷಯ ಚಿಕನ್ ಸೆಂಟರ್ ಮುಂಭಾಗದಲ್ಲಿ ಬರ್ಬರವಾಗಿ ಕೊಲೆಗೀಡಾಗಿರುವ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು(34ವ)ರವರ ಹತ್ಯೆಯ ತನಿಖೆ ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸಿರುವಂತೆಯೇ ಕರ್ನಾಟಕ ಪೊಲೀಸರ ತನಿಖೆ ಚುರುಕು ಪಡೆದಿದೆ. ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ, ಯುವವಾಹಿನಿ ಸುಳ್ಯ ಘಟಕದ ಮಾಜಿ ಅಧ್ಯಕ್ಷರೂ ಬಿಜೆಪಿ ಯುವಮೋರ್ಛಾ ದ.ಕ. ಜಿಲ್ಲಾ ಕಾರ್ಯಕಾರಿಣಿ ಸದಸ್ಯರೂ ಆಗಿದ್ದ ಬೆಳ್ಳಾರೆ ಸಮೀಪದ ನೆಟ್ಟಾರಿನ ಪ್ರವೀಣ್ ಅವರ ಹಂತಕರ ಪತ್ತೆಗೆ ಈಗಾಗಲೇ ಎಡಿಜಿಪಿ ಅಲೋಕ್ ಕುಮಾರ್ ಮಾರ್ಗದರ್ಶನದಲ್ಲಿ ಪೊಲೀಸರ ತಂಡ ರಚಿಸಲಾಗಿದೆ. ಹಂತಕರಿಗಾಗಿ ಬಲೆ ಬೀಸಿರುವ ಪೊಲೀಸರ ತಂಡವೊಂದು ಈಗಾಗಲೇ ಕೇರಳದ ನಟೋರಿಯಸ್ ಗಳಿಗೆ ಬಲೆ ಬೀಸಿದೆ. ಇನ್ನೊಂದು ತಂಡ ಕೊಲೆಗೆ ಸಹಕರಿಸಿದ ಆರೋಪದಡಿ ಬಂಧಿತರಾಗಿ ಪೊಲೀಸ್ ಕಸ್ಟಡಿಯಲ್ಲಿರುವ ಸವಣೂರಿನ ಝಾಕೀರ್ ಮತ್ತು ಬೆಳ್ಳಾರೆಯ ಶಫೀಕ್ ಮೂಲಕ ಕೊಲೆ ಕೃತ್ಯದ ಮಾಹಿತಿ ಕಲೆ ಹಾಕುತ್ತಿದೆ. ಇನ್ನೊಂದು ತಂಡ ತಾಂತ್ರಿಕ ಮಾಹಿತಿ ಸಂಗ್ರಹ, ವಿಧಿವಿಜ್ಞಾನ ಪ್ರಯೋಗಾಲಯದ ಮಾಹಿತಿ ಸಂಗ್ರಹ ಇತ್ಯಾದಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದೆ. ಈ ಮಧ್ಯೆ ಕರ್ನಾಟಕ ರಾಜ್ಯಕ್ಕೆ ಸಂಬಂಽಸಿ ಬೆಂಗಳೂರಿನಲ್ಲಿ ಕಛೇರಿ ಹೊಂದಿರುವ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ಕುರಿತು ಪ್ರತ್ಯೇಕವಾಗಿ ಮಾಹಿತಿ ಕಲೆ ಹಾಕಲು ಆರಂಭಿಸಿದ್ದಾರೆ. ಪಶ್ಚಿಮ ವಲಯ ಐಜಿಪಿ ದೇವಜ್ಯೋತಿ ರೇ, ದ.ಕ.ಎಸ್ಪಿ ಹೃಷಿಕೇಶ್ ಸೋನಾವಣೆ ಮತ್ತು ಪುತ್ತೂರು ಡಿವೈಎಸ್ಪಿ ಡಾ.ಗಾನಾ.ಪಿ.ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸುತ್ತಿರುವ ಕರ್ನಾಟಕ ಪೊಲೀಸರಿಗೆ ಮಹತ್ವದ ಮಾಹಿತಿ ದೊರಕಿರುವುದಾಗಿ ಮಾಹಿತಿ ದೊರೆತಿದೆ.

ಬೆಳ್ಳಾರೆಯಲ್ಲಿ ನಡೆದಿದ್ದ ಮಸೂದ್ ಎಂಬವರ ಕೊಲೆಗೆ ಪ್ರತೀಕಾರವಾಗಿ ಪ್ರವೀಣ್ ಹತ್ಯೆ ನಡೆಯಿತೇ, ಮಸೂದ್ ಕೊಲೆ ಆರೋಪದಡಿ ಬಂಧಿತರಾಗಿರುವ ಎಂಟು ಮಂದಿಗೆ ಜಾಮೀನು ದೊರಕಿಸಿ ಕೊಡುವುದಾಗಿ ಪ್ರವೀಣ್ ಹೇಳಿಕೊಂಡಿದ್ದರೆಂಬ ವಿಚಾರವೇ ಕೊಲೆಗೆ ಕಾರಣವಾಯಿತೇ, ಇತ್ತೀಚೆಗೆ ಶಿಕ್ಷಣ ಸಂಸ್ಥೆಗಳಿಗೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಬರುವ ವಿಚಾರಕ್ಕೆ ಸಂಬಂಧಿಸಿ ಕಲಹ ಉಂಟಾದಾಗ ಹಲಾಲ್ ವಿವಾದ ಉಂಟಾಗಿ ಮುಸ್ಲಿಮರ ಅಂಗಡಿಗಳಿಂದ ಹಿಂದೂಗಳು ಮಾಂಸ ಖರೀದಿಸದಂತೆ ಕೆಲವು ಸಂಘಟನೆಗಳು ತಾಕೀತು ಮಾಡಿದ್ದಾಗ ಪ್ರವೀಣ್ ಅವರ ಕೋಳಿ ಅಂಗಡಿಗೆ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ವೃತ್ತಿ ದ್ವೇಷದಿಂದ ಪ್ರವೀಣ್ ಕೊಲೆ ನಡೆಸಲಾಯಿತೇ ಅಥವಾ ಪ್ರವೀಣ್ ಅವರ ವೈಯುಕ್ತಿಕ ವಿಚಾರಗಳೇನಾದರೂ ಕೊಲೆಗೆ ಕಾರಣವೇ ಎಂಬುದೂ ಸೇರಿದಂತೆ ವಿವಿಧ ಆಯಾಮಗಳಲ್ಲಿ ಪೊಲೀಸರ ತನಿಖೆ ಮುಂದುವರಿದಿದೆ.

ಈ ಮಧ್ಯೆ, ಪ್ರವೀಣ್ ಹತ್ಯೆಗೆ ಮೊದಲು ಆರೋಪಿಗಳು ಬೆಳ್ಳಾರೆ ಜಂಕ್ಷನ್ ಬಳಿಯಿಂದ 500 ಮೀಟರ್ ದೂರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದರು ಎಂದೂ ಮೂರು ತಿಂಗಳ ಹಿಂದೆ ಬಾಡಿಗೆ ಮನೆ ಪಡೆಯಲಾಗಿತ್ತು ಎಂದೂ ಈಗಾಗಲೇ ಪೊಲೀಸ್ ಕಸ್ಟಡಿಯಲ್ಲಿರುವ ಶಫೀಕ್ ಮತ್ತು ಝಾಕೀರ್ ಹಂತಕರಿಗೆ ಪ್ರವೀಣ್ ಕುರಿತು ಮಾಹಿತಿ ನೀಡಿದ್ದರೆಂದೂ ಕೊಲೆ ಮಾಡುವ ನಲ್ವತ್ತು ನಿಮಿಷಕ್ಕೆ ಮೊದಲು ಬೆಳ್ಳಾರೆ ಜಂಕ್ಷನ್ ಗೆ ಬಂದ ಹಂತಕರು ಪ್ರವೀಣ್ ಚಲನವಲನ ಗಮನಿಸಿದ್ದರೆಂದೂ ಪೊಲೀಸರ ತಂಡ ಮಾಹಿತಿ ಕಲೆ ಹಾಕಿದೆ. ಪ್ರವೀಣ್ ಹತ್ಯೆಗೂ ಮುನ್ನ ಹಂತಕರು ಬೀದಿ ದೀಪವನ್ನು ಆರಿಸುವಂತೆ ಮಾಡಿ ತಮ್ಮ ಚಹರೆ ಪತ್ತೆಯಾಗದಂತೆ ನೋಡಿಕೊಂಡಿದ್ದಾರೆ ಎಂದೂ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಬಾಡಿಗೆ ಮನೆ ನೀಡಿದ್ದ ವ್ಯಕ್ತಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಶಫೀಕ್ ಮನೆಯ ಶೋಧ ನಡೆಸಲಿದ್ದಾರೆ. ಅಲ್ಲದೆ, ತನಗೆ ಜೀವ ಬೆದರಿಕೆ ಇರುವ ಕುರಿತು ಪ್ರವೀಣ್ ಅವರು ಮಾಹಿತಿ ನೀಡಿದ್ದರೂ ಬೆಳ್ಳಾರೆ ಠಾಣಾ ಪೊಲೀಸರು ನಿರ್ಲಕ್ಷಿಸಿದ್ದರು ಎಂಬ ವಿಚಾರದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ಪ್ರವೀಣ್ ಹತ್ಯೆಯ ತನಿಖೆಯ ಕುರಿತು ಪೊಲೀಸರು ಯಾವುದೇ ಅಽಕೃತ ಮಾಹಿತಿ ನೀಡಿಲ್ಲ. ರಾಷ್ಟ್ರೀಯ ತನಿಖಾ ದಳದವರು ತನಿಖೆ ಆರಂಭಿಸಿದ ಬಳಿಕ ಕೊಲೆ ಪ್ರಕರಣಕ್ಕೆ ತಿರುವು ದೊರೆಯುವ ಸಾಧ್ಯತೆಗಳೂ ಇದೆ.

ಅಜ್ಞಾತ ಸ್ಥಳದಲ್ಲಿ ವಿಚಾರಣೆ-ಸ್ಫೋಟಕ ಮಾಹಿತಿ ಬಹಿರಂಗ?

ಪ್ರವೀಣ್ ನೆಟ್ಟಾರು ಹತ್ಯಾ ಪ್ರಕರಣದಲ್ಲಿ ಹಂತಕರಿಗೆ ಸಹಕರಿಸಿದ ಆರೋಪದಡಿ ಬಂಽತರಾಗಿರುವ ಸವಣೂರಿನ ಝಾಕೀರ್ ಮತ್ತು ಬೆಳ್ಳಾರೆಯ ಶಫೀಕ್ ಅವರನ್ನು ಪೊಲೀಸ್ ಅಧಿಕಾರಿಗಳ ತಂಡ ಅಜ್ಞಾತ ಸ್ಥಳದಲ್ಲಿ ತನಿಖೆ ನಡೆಸುತ್ತಿರುವುದಾಗಿ ಮಾಹಿತಿ ಲಭಿಸಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದ ಮರುದಿನ ಪುತ್ತೂರು ನ್ಯಾಯಾಲಯದ ಮೂಲಕ ಪೊಲೀಸರು ಐದು ದಿನ ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದರು. ಕಸ್ಟಡಿಯಲ್ಲಿ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ಸೋಟಕ ಮಾಹಿತಿ ಬಯಲಾಗುತ್ತಿರುವುದಾಗಿ ತಿಳಿದು ಬಂದಿದೆ. ಝಾಕೀರ್ ಮತ್ತು ಶಫೀಕ್ ಈ ಕೊಲೆ ಕೃತ್ಯದಲ್ಲಿ ನೇರವಾಗಿ ಪಾಲ್ಗೊಂಡಿಲ್ಲವಾದರೂ ಹಂತಕರಿಗೆ ನೆರವಾಗಿರುವುದು ಮಾತ್ರವಲ್ಲದೆ ಕೊಲೆಯ ಇಂಚಿಂಚೂ ಮಾಹಿತಿ ಅವರಿಗೆ ಗೊತ್ತಿದೆ ಮತ್ತು ಬಾಡಿಗೆ ಮನೆಯ ಸೂತ್ರಧಾರ ಶಫೀಕ್ ಎಂಬುದು ಗೊತ್ತಾಗಿದೆ.

ಎನ್‌ಐಎಯಿಂದಲೂ ತನಿಖೆ ಆರಂಭ

ಮೂವರು ಅಧಿಕಾರಿಗಳ ತಂಡದಿಂದ ಬೆಳ್ಳಾರೆ, ಪುತ್ತೂರು, ಮಂಗಳೂರಿನಲ್ಲಿ ತನಿಖೆ

ಪುತ್ತೂರು: ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳವೂ ಆರಂಭಿಸಿದೆ ಎಂದು ತಿಳಿದುಬಂದಿದೆ. ಜು.29ಕ್ಕೆ ಬೆಳ್ಳಾರೆಗೆ ಆಗಮಿಸಿದ ಎನ್‌ಐಎ ತನಿಖಾಧಿಕಾರಿಗಳಿಬ್ಬರು ಪುತ್ತೂರು, ಮಂಗಳೂರು, ಬೆಳ್ಳಾರೆಯಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ ತಿಳಿದು ಬಂದಿದೆ. ಜು.26ರಂದು ರಾತ್ರಿ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಹತ್ಯೆ ನಡೆದಿತ್ತು. ಜು.27ರಂದು ಪ್ರವೀಣ್ ನೆಟ್ಟಾರು ಅವರ ಮೃತದೇಹದ ಅಂತಿಮ ಯಾತ್ರೆ ಸಂದರ್ಭ ಬೆಳ್ಳಾರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿಯಂತ್ರಣಕ್ಕಾಗಿ ಪೊಲೀಸರು ಲಾಠಿ ಚಾರ್ಚ್ ಸಹ ಮಾಡಿದ್ದರು. ಈ ಎಲ್ಲಾ ಬೆಳವಣಿಗೆ ಮತ್ತು ಕೊಲೆ ಪ್ರಕರಣಕ್ಕೆ ಕೇರಳ ಲಿಂಕ್ ಇರುವ ಹಿನ್ನೆಲೆಯಲ್ಲಿ ಜು.28ರಂದು ಪ್ರವೀಣ್ ನೆಟ್ಟಾರು ಮನೆಗೆ ಬಂದಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಈ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಒಪ್ಪಿಸುವಂತೆ ಮನವಿ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರವೀಣ್ ಹತ್ಯೆಯ ತನಿಖೆಯನ್ನು ರಾಜ್ಯ ಸರಕಾರ ಎನ್‌ಎಐಗೆ ಒಪ್ಪಿಸಿತ್ತು. ಇದೀಗ ಜು.29ರಂದು ಎನ್‌ಐಎಯ ಇಬ್ಬರು ಹಾಗೂ ಜು.30ರಂದು ಒಬ್ಬರು ಅಽಕಾರಿ ಬೆಳ್ಳಾರೆಗೆ ಬಂದು ಮಾಹಿತಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಎನ್‌ಐಎಯ ಮೂವರು ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮಫ್ತಿಯಲ್ಲಿ ಬೆಳ್ಳಾರೆ, ಸುಳ್ಯ, ಮಂಗಳೂರು ಮತ್ತು ಪುತ್ತೂರಿನಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಈ ಎಲ್ಲಾ ತನಿಖೆಯ ಜೊತೆಗೆ ಪುತ್ತೂರು ಡಿವೈಎಸ್ಪಿ ಡಾ.ಗಾನ ಪಿ.ಕುಮಾರ್‌ರವರ ನೇತೃತ್ವದಲ್ಲಿಯೂ ಕೊಲೆ ಆರೋಪಿಗಳ ಪತ್ತೆ ಕಾರ್ಯದ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here