ವಿಶ್ವದ ಟಾಪ್ 1000 ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಪುತ್ತೂರಿನ ಡಾ. ಪ್ರದೀಪ್ ಮಿನೇಜಸ್

0

ಪುತ್ತೂರು: ಅಮೆರಿಕದ ಪ್ರತಿಷ್ಠಿತ ರಿಸರ್ಚ್ ಡಾಟ್ ಕಾಂ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದ ಟಾಪ್ 1000 ಮೆಕ್ಯಾನಿಕಲ್ ಮತ್ತು ಏರೋಸ್ಪೇಸ್ ವಿಜ್ಞಾನಿಗಳ ಪಟ್ಟಿಯಲ್ಲಿ ಪುತ್ತೂರು ಪರ್ಲಡ್ಕ ಕಲ್ಲಿಮಾರಿನ ಡಾ. ಪ್ರದೀಪ್ ಮಿನೇಜಸ್ ಸ್ಥಾನ ಪಡೆಯುವ ಮೂಲಕ ಪುತ್ತೂರಿನ ಹೆಸರನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವ ಸಾಧನೆ ಮಾಡಿದ್ದಾರೆ. ಇವರು ಕಳೆದ ವರ್ಷ ಸ್ಟ್ಯಾನ್ಬೋರ್ಡ್ ವಿಶ್ವವಿದ್ಯಾನಿಲಯ ನಡೆಸಿದ ಸಮೀಕ್ಷೆಯಲ್ಲಿ ಜಾಗತಿಕ ಮಟ್ಟದ ಟಾಪ್ 2% ವಿಜ್ಞಾನಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರು.

ಡಾ. ಪ್ರದೀಪ್ ಮಿನೇಜಸ್ ಅವರು ಪ್ರಸ್ತುತ ಅಮೆರಿಕದ ನೆವಾಡಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಅಸೋಸಿಯೆಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಪಿ.ಎಚ್‌ಡಿ ಪಡೆದಿರುತ್ತಾರೆ, ಅಲ್ಲದೆ ಇವರು “Surface Engineering and Tribology” ವಿಭಾಗದಲ್ಲಿ “areas of Advanced Manufacturing,” ವಿಷಯದಲ್ಲಿ ವಿಶೇಷ ಸಂಶೋಧನೆಗಳನ್ನು ಮಾಡಿರುತ್ತಾರೆ. ಇವರ 200ಕ್ಕೂ ಮಿಕ್ಕಿ ಸಂಶೋಧನಾ ಲೇಖನಗಳು ವಿಜ್ಞಾನಕ್ಕೆ ಸಂಬಂಧಿಸಿದ ವಿವಿಧ ನಿಯತಕಾಲಿಕೆಗಳಲ್ಲಿ ಪ್ರಕಟಗೊಂಡಿದೆ. ಇವರು ಅಮೆರಿಕದ ಪ್ರತಿಷ್ಠಿತ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗಳಾದ ನಾಸಾ ((NASA), ನ್ಯಾಷನಲ್ ಸೈನ್ಸ್ ಫೌಂಡೇಶನ್ (NSF) ಹಾಗೂ ಡಿರ್ಪಾಮೆಂಟ್ ಆಫ್ ಎರ್ನಜಿ (DOE) ಇವುಗಳಿಂದ ತಮ್ಮ ಸಂಶೋಧನೆಗಳಿಗಾಗಿ ಸುಮಾರು 3 ಮಿಲಿಯನ್ ಡಾಲರ್ ಮೊತ್ತದ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. ಭಾರತದಲ್ಲಿನ ಐಐಟಿಗಳು, ವಿಟಿಯು ಹಾಗೂ ಗುಜರಾತ್ ವಿವಿಯ ಸಂಶೋಧನಾ ವಿಷಯಗಳ ರಿವ್ಯೂವರ್ ಆಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಅಮೆರಿಕದಲ್ಲಿ 8 ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಮಾರ್ಗದರ್ಶಕರಾಗಿರುತ್ತಾರೆ . ಇವರ 7 ಪುಸ್ತಕಗಳು ಪ್ರಕಟಗೊಂಡಿದೆ ಹಾಗೂ ಆಂಧರಿಗಾಗಿ ಮಾರುಕಟ್ಟೆಯಲ್ಲಿರುವ “ಸ್ಮಾರ್ಟ್ ಶೂ” ಮೇಲೆ ಒಂದು ಯುಸ್ ಪೇಟೆಂಟ್ ಅನ್ನು ಹೊಂದಿದ್ದಾರೆ.

ಈ ಸಾಧನೆಗೈದ ಪುತ್ತೂರಿನ ಹೆಮ್ಮೆಯ ಯುವ ವಿಜ್ಞಾನಿಯಾದ ಡಾ. ಪ್ರದೀಪ್ ಮಿನೇಜಸ್, ಪುತ್ತೂರು ಪರ್ಲಡ್ಕ, ಕಲ್ಲಿಮಾರಿನ ದಿ. ಫೆಡ್ರಿಕ್ ಮಿನೇಜಸ್ ಮತ್ತು ಸಿಸಿಲಿಯಾ ಮಿನೇಜಸ್ ದಂಪತಿಯ ಪುತ್ರ. ಪುತ್ತೂರಿನ ಮಾಯಿದೆ ದೇವುಸ್ ಪ್ರಾಥಮಿಕ ಶಾಲೆ, ಸಂತ ಫಿಲೋಮಿನಾ ಪೌಢಶಾಲೆ ಹಾಗೂ ಸಂತ ಫಿಲೋಮಿನಾ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿರುತ್ತಾರೆ. ಇವರ ಸಹೋದರರಾದ ಡಾ. ಪ್ರಶಾಂತ್ ಮಿನೇಜಸ್ ಮತ್ತು ಡಾ. ಪ್ರಮೋದ್ ಮಿನೇಜಸ್ ಕೂಡ ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಅನ್ವಯಿಕ ರಸಾಯನ ಶಾಸ್ತ್ರ ವಿಭಾಗದಲ್ಲಿ ವಿಜ್ಞಾನಿಗಳಾಗಿ ಸಂಶೋಧನಾ ಕಾರ್ಯದಲ್ಲಿದ್ದು, ಈ ಮೂಲಕ ಮೂವರು ಸಹೋದರರು ವಿಶ್ವಮಟ್ಟದ ಯುವ ವಿಜ್ಞಾನಿಗಳಾಗಿ ನಮ್ಮ ನಾಡಿಗೆ ಹೆಸರನ್ನು ತರುವ ಕಾರ್ಯದಲ್ಲಿ ನಿರತರಾಗಿದ್ದಾರೆ.

LEAVE A REPLY

Please enter your comment!
Please enter your name here