ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್ ಮರ್ಡರ್ ಕೇಸ್-ತನಿಖೆಯ ಫೀಲ್ಡ್‌ಗಿಳಿದ ಎನ್‌ಐಎ ದಕ್ಷ ಅಧಿಕಾರಿಗಳ ತಂಡ

0

  • ರಾಷ್ಟ್ರೀಯ ತನಿಖಾ ದಳದ ಸಂಪೂರ್ಣ ಮಾಹಿತಿ ಇಲ್ಲಿದೆ
  •  ಎನ್.ಐ.ಎ.ಯಲ್ಲಿ ದಕ್ಷ, ನಿಷ್ಣಾತ ಅಧಿಕಾರಿಗಳ ತಂಡ
  • ದೇಶಾದ್ಯಂತ 277  ಪ್ರಕರಣಗಳ ತನಿಖೆ ನಡೆಸಿರುವ ಎನ್‌ಐಎ
  •  ಕರ್ನಾಟಕ ರಾಜ್ಯದಲ್ಲಿ 12  ಅಪರಾಧ ಪ್ರಕರಣಗಳ ತನಿಖೆ
  •  ೩೨೯ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ
  • ಬೆಂಗಳೂರು ಸಹಿತ ದೇಶದ 19  ಸ್ಥಳಗಳಲ್ಲಿ ಎಎನ್‌ಐ ಕಛೇರಿ

ಪುತ್ತೂರು: ಜುಲೈ 26 ರಂದು ರಾತ್ರಿ 8.35ರ ವೇಳೆಗೆ ಸುಳ್ಯ ತಾಲೂಕಿನ ಬೆಳ್ಳಾರೆಯಲ್ಲಿ ನಡೆದಿದ್ದ ಬಿಜೆಪಿ ಯುವನಾಯಕ ಪ್ರವೀಣ್ ನೆಟ್ಟಾರ್(34ವ)ರವರ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟೀಯ ತನಿಖಾ ದಳ ಕೈಗೆತ್ತಿಕೊಂಡಿದೆ. ಈ ಮೂಲಕ ರಾಷ್ಟ್ರೀಯ ತನಿಖಾ ದಳದ ವಿಚಾರಣೆಯತ್ತ ಎಲ್ಲರ ಚಿತ್ತ ಹರಿದಿದೆ. ಕರ್ನಾಟಕ ಪೊಲೀಸ್ ಇಲಾಖೆ ನಡೆಸುತ್ತಿರುವ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ಹಸ್ತಾಂತರಿಸಬೇಕಾದರೆ ತನಿಖಾ ದಳದ ವಿಶೇಷತೆ ಏನು, ಅದರ ಇತಿಹಾಸ ಏನು ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ. ಅದಕ್ಕಾಗಿ ರಾಷ್ಟ್ರೀಯ ತನಿಖಾ ದಳದ ವಿವರ ಇಲ್ಲಿ ನೀಡಲಾಗಿದೆ.

ದಕ್ಷ ಅಧಿಕಾರಿಗಳ ತಂಡ:
ರಾಷ್ಟ್ರೀಯ ತನಿಖಾ ದಳದಲ್ಲಿ ದಕ್ಷ ಅಧಿಕಾರಿಗಳ ತಂಡ ಇರುತ್ತದೆ. ಕಾನೂನಿನ ಆಳವಾದ ಜ್ಞಾನ ಹೊಂದಿರುವ ಮತ್ತು ಕ್ರೈಂ ಲೋಕದ ಅಧ್ಯಯನ ಮಾಡಿರುವ ಅಧಿಕಾರಿಗಳು ರಾಷ್ಟ್ರೀಯ ತನಿಖಾ ದಳದಲ್ಲಿರುತ್ತಾರೆ. ಸಮರ್ಪಕ ದಾಖಲೆ ಸಂಗ್ರಹ, ಸಾಕ್ಷಿ ಸಂಗ್ರಹ ಮಾಡುವುದರಲ್ಲಿ ಇವರು ನಿಷ್ಣಾತರಾಗಿರುತ್ತಾರೆ. ವೈಜ್ಞಾನಿಕ ವಿಚಾರದ ಅನುಭವದಲ್ಲಿಯೂ ಅಧಿಕಾರಿಗಳು ಪಳಗಿರುತ್ತಾರೆ. ಹಾಗಾಗಿ ಅಪರಾಧಿಕ ಕೃತ್ಯವನ್ನು ಭೇದಿಸುವುದರಲ್ಲಿ ಈ ತಂಡ ಎಕ್ಸ್‌ಪರ್ಟ್ ಆಗಿರುತ್ತದೆ. ಕ್ರಿಮಿನಲ್‌ಗಳಿಂದ ಕರಾರುವಕ್ ಆಗಿ ಮಾಹಿತಿ ಪಡೆಯುವುದರಲ್ಲಿ ಇವರು ಎತ್ತಿದ ಕೈ ಆಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಗಂಭೀರ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಲಾಗುತ್ತದೆ. ದೇಶಾದ್ಯಂತ ರಾಷ್ಟ್ರೀಯ ತನಿಖಾ ದಳ ಇದುವರೆಗೆ ೨೭೭ ಪ್ರಕರಣಗಳ ತನಿಖೆ ನಡೆಸಿದೆ.

ಕರ್ನಾಟಕದಲ್ಲಿ12 ಪ್ರಕರಣಗಳ ತನಿಖೆ;
ಕರ್ನಾಟಕ ರಾಜ್ಯಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಒಟ್ಟು ೧೨ ಪ್ರಕರಣಗಳ ತನಿಖೆ ನಡೆಸುತ್ತಿದೆ. ಶಿವಮೊಗ್ಗದಲ್ಲಿ ನಡೆದ ಬಜರಂಗದಳ ಕಾಯಕರ್ತ ಹರ್ಷರವರ ಕೊಲೆ ಕೇಸು, ಬೆಂಗಳೂರಿನ ಡಿ.ಜೆ ಹಳ್ಳಿ, ಕೆ.ಜೆ ಹಳ್ಳಿ ಗಲಭೆ, ಆರ್‌ಎಸ್‌ಎಸ್ ಕಾರ್ಯಕರ್ತ ರುದ್ರೇಶ್ ಕೊಲೆ, ನಿಷೇಧಿತ ಐಸಿಸ್ ಸಂಘಟನೆ ಜತೆಗೂಡಿ ರಾಜ್ಯದ ವಿವಿದೆಡೆ ನಡೆದ ಉಗ್ರ ಚಟುವಟಿಕೆ, ಆಲ್‌ಹಿಂದ್ ಸಂಘಟನೆಯ ಜೆಹಾದಿ ಸಭೆಗಳಲ್ಲಿ ಪಾಲ್ಗೊಂಡ ಘಟನೆ, ಬೆಂಗಳೂರಿನಲ್ಲಿ ಲಷ್ಕರ್ ಇ ತೊಯ್ಬಾದ ಚಟುವಟಿಕೆ, ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟ ಪ್ರಕರಣ, ಜಮಾಅತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶಿ ಸದಸ್ಯರು ರಾಕೆಟ್ ಹಾರಿಸುವ ತರಬೇತಿ, ಭಯೋತ್ಪಾದಕ ಕೃತ್ಯಗಳ ಬಳಕೆಗಾಗಿ ಡಕಾಯಿತಿ ನಡೆಸಿದ ಘಟನೆ, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳಿಂದ ಮಾನವ ಕಳ್ಳ ಸಾಕಾಣಿಕೆ, ೨೦೧೨ರಲ್ಲಿ ಪತ್ರಕರ್ತರಾಗಿದ್ದ ಹಾಲಿ ಮೈಸೂರು ಸಂಸದ ಪ್ರತಾಪಸಿಂಹರವರ ಕೊಲೆಗೆ ಸಂಚು ಪ್ರಕರಣ, ಫೇಕ್ ಇಂಡಿಯನ್ ಕರೆನ್ಸಿ ನೋಟ್ ಚಲಾವಣೆ ಪ್ರಕರಣ ಸಹಿತ ೧೨ ಪ್ರಕರಣಗಳ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ ಕರ್ನಾಟಕದಲ್ಲಿ ನಡೆಸುತ್ತಿದೆ.

329 ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಕೆ:
ಕರ್ನಾಟಕ ರಾಜ್ಯಾದ್ಯಂತ ೨೦೧೨ರಿಂದ ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ೩೨೯ ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ದಳವು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದೆ. ಕೆಲವು ಪ್ರಕರಣಗಳಲ್ಲಿ ವಿಚಾರಣೆ ಮುಕ್ತಾಯಗೊಂಡು ೨೨ ಮಂದಿ ಅಪರಾಧಿಗಳಿಗೆ ಶಿಕ್ಷೆಯಾಗಿದೆ. ಒಟ್ಟು ೧೦೯ ಆರೋಪಿಗಳು ಜೈಲಿನಲ್ಲಿದ್ದಾರೆ. ೨೧೯ ಮಂದಿ ಜಾಮೀನು ಪಡೆದುಕೊಂಡಿದ್ದಾರೆ. ೧೪ ಮಂದಿ ತಲೆ ಮರೆಸಿಕೊಂಡಿದ್ದಾರೆ. ರಾಜ್ಯದಲ್ಲಿ ನಡೆದ ಅಪಘಾತ ಕೃತ್ಯಗಳಿಗೆ ಸಂಬಂಧಿಸಿ ದೆಹಲಿ, ಕೊಲ್ಕತ್ತಾ, ಚೆನ್ನೈ ಮತ್ತು ಸೇಲಂ ಜೈಲಿನಲ್ಲಿಯೂ ಆರೋಪಿಗಳಿದ್ದಾರೆ. ಇಂಡಿಯನ್ ಪೀನಲ್ ಕೋಡ್‌ನ ವಿವಿಧ ಸೆಕ್ಷನ್‌ಗಳು ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ನಿರ್ಬಂಧ ಕಾಯ್ದೆ ೧೯೬೭ರ ವಿವಿಧ ಸೆಕ್ಷನ್‌ಗಳಡಿಯಲ್ಲಿ ಆರೋಪಿಗಳು ಬಂಧನದಲ್ಲಿದ್ದಾರೆ.

ಬೆಂಗಳೂರು ಸಹಿತ 19 ಸ್ಥಳಗಳಲ್ಲಿ ಎಎನ್‌ಐ ಕಛೇರಿ:
ರಾಜ್ಯ ರಾಜಧಾನಿ ಬೆಂಗಳೂರು ಸಹಿತ ರಾಷ್ಟ್ರದ ೧೯ ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ದಳದ ಕಛೇರಿ ಇದೆ. ನವದೆಹಲಿಯಲ್ಲಿ ಪ್ರಧಾನ ಕಛೇರಿ ಹೊಂದಿರುವ ರಾಷ್ಟ್ರೀಯ ತನಿಖಾ ದಳವು ಹೈದರಾಬಾದ್, ಗುವಾಹಟಿ, ಇಂಪ್ಹಾಲ್, ಕೊಚ್ಚಿ, ಚೆನ್ನೈ, ಲಖನೌ, ಕೊಲ್ಕತ್ತಾ, ಜಮ್ಮು, ರಾಯಪುರ, ಚಂಡೀಗಢ, ರಾಂಚಿ, ಮುಂಬೈ, ಬೆಂಗಳೂರು, ಭೋಪಾಲ್, ಪಟನಾ, ಅಹಮದಾಬಾದ್, ಜೈಪುರ ಮತ್ತು ಭುವನೇಶ್ವರದಲ್ಲಿ ಕಛೇರಿಗಳನ್ನು ಹೊಂದಿದೆ.

2008ರಲ್ಲಿ ರಾಷ್ಟ್ರೀಯ ತನಿಖಾ ದಳ ಅಸ್ತಿತ್ವಕ್ಕೆ
2022ರಿಂದ ಬೆಂಗಳೂರಿನಲ್ಲಿ ಕಛೇರಿ ಆರಂಭ

ದೇಶದ ಆಂತರಿಕ ಭಯೋತ್ಪಾದನೆ ಹಾಗೂ ದೇಶ ವಿರೋಧಿ ಶಕ್ತಿಗಳನ್ನು ಮಟ್ಟ ಹಾಕುವ ಉದ್ದೇಶದಿಂದ ರಾಷ್ಟ್ರೀಯ ತನಿಖಾ ಸಂಸ್ಥೆ ಆರಂಭಿಸಲಾಗಿದೆ. ೨೦೦೮ರ ನವೆಂಬರ್ ೨೬ರಂದು ಮುಂಬೈನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯ ಬಳಿಕ ಎಚ್ಚೆತ್ತ ಅಂದಿನ ಕೇಂದ್ರ ಸರಕಾರ ರಾಷ್ಟ್ರೀಯ ತನಿಖಾ ದಳವನ್ನು ಸ್ಥಾಪಿಸಿದೆ. ಅದೇ ವರ್ಷ ಡಿಸೆಂಬರ್ ೩೧ರಿಂದ ದಳದ ಕಾರ್ಯಾರಂಭ ಆಗಿದೆ. ೨೦೨೨ರ ಜನವರಿಯಲ್ಲಿ ಕೇಂದ್ರ ಸರಕಾರ ಅನುಮತಿ ನೀಡಿದ ಬಳಿಕ ಬೆಂಗಳೂರಿನ ದೊಮ್ಮಲೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಶಾಶ್ವತ ಕಛೇರಿ ಕಾರ್ಯಾಚರಿಸುತ್ತಿದೆ. ಇದರ ಮೊದಲು ತನಿಖೆಗೆ ದೆಹಲಿ, ಚೆನ್ನೈ ಅಥವಾ ಬೇರೆ ನಗರಗಳಿಂದ ತನಿಖಾ ದಳದ ತಂಡ ಬರಬೇಕಿತ್ತು. ಈಗ ಬೆಂಗಳೂರಿನಲ್ಲಿಯೇ ಕಛೇರಿ ಇರುವುದು ತನಿಖೆಗೆ ಸಹಕಾರಿಯಾಗಿದೆ. ಇದೀಗ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿ ದಕ್ಷಿಣ ಕನ್ನಡಕ್ಕೆ ಭೇಟಿ ನೀಡಿದ್ದಾರೆ. ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿ ಹಾಗೂ ಕೇರಳದಲ್ಲಿ ಇವರ ತನಿಖಾ ಪ್ರಕ್ರಿಯೆ ಚುರುಕುಗೊಂಡಿದೆ.

LEAVE A REPLY

Please enter your comment!
Please enter your name here