ನೂಜಿಬಾಳ್ತಿಲ ಗ್ರಾ.ಪಂ. ಸಾಮಾನ್ಯ ಸಭೆ: ಬೆಳಕು ಯೋಜನೆಯಲ್ಲಿ ಅವ್ಯವಹಾರ ಆರೋಪದ ಬಗ್ಗೆ ಗ್ರಾ.ಪಂ.ಗೆ ದೂರು ಹಿನ್ನಲೆ:  ಗ್ರಾ.ಪಂ. ಅಧ್ಯಕ್ಷರ ಪತ್ರಿಕಾಗೋಷ್ಠಿ, ನಿರ್ಣಯ ಬರೆದ ವಿಚಾರದಲ್ಲಿ ಸದಸ್ಯರೊಳಗೆ ಚರ್ಚೆ

0

ಕಡಬ: ನೂಜಿಬಾಳ್ತಿಲ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರೋರ್ವರು ಬೆಳಕು ಯೋಜನೆಯಲ್ಲಿ ಫಲಾನುಭವಿಯೋರ್ವರಿಂದ ಹಣ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿ ಗ್ರಾ.ಪಂ.ಗೆ ದೂರು ಬಂದಿದ್ದು, ಇದೇ ವಿಚಾರಕ್ಕೆ ಸಂಬಂಧಿಸಿ ಗ್ರಾ.ಪಂ. ಅಧ್ಯಕ್ಷರು ಪತ್ರಿಕಾಗೋಷ್ಠಿ ನಡೆಸಿರುವುದು ಮತ್ತು ನಿರ್ಣಯ ಬರೆದಿರುವ ವಿಚಾರದಲ್ಲಿ ಅಧ್ಯಕ್ಷೆ, ಉಪಾಧ್ಯಕ್ಷ ಸದಸ್ಯರೊಳಗೆ ತೀವ್ರ ಚರ್ಚೆ ನಡೆದ ಘಟನೆ ನೂಜಿಬಾಳ್ತಿಲ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.


ಸಭೆಯು ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಅವರ ಅಧ್ಯಕ್ಷತೆಯಲ್ಲಿ ಜು.೨೯ರಂದು ಗ್ರಾ.ಪಂ.ನಲ್ಲಿ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ಇಮಾನ್ಯುವೆಲ್ ಪಿ.ಜೆ, ಪ್ರಭಾರ ಅಭಿವೃದ್ದಿ ಅಧಿಕಾರಿ ಗುರುವ ಎಸ್. ಹಾಗೂ ಸದಸ್ಯರಾದ ಶ್ರೀಧರ ಗೋಳ್ತಿಮಾರ್, ಚಂದ್ರಶೇಖರ ಹಳೆನೂಜಿ, ವಸಂತ ಕೆ. ಪಿ.ಜೆ.ಜೋಸೆಫ್, ಭವಾನಿ, ವಿನಯ ಕುಮಾರಿ, ಚಂದ್ರಾವತಿ, ಮೀನಾಕ್ಷಿ, ವಿಜಯಲಕ್ಷ್ಮೀ, ಉಮೇಶ್ ಎಸ್.ಜೆ., ಉಷಾ ಅವರುಗಳು ಉಪಸ್ಥಿತರಿದ್ದರು.

ಸಭೆಯು ಪ್ರಾರಂಭವಾದ ಕೂಡಲೇ ಸದಸ್ಯರಾದ ವಸಂತ ಕೆ. ಹಾಗೂ ಜೋಸೆಫ್ ಪಿ.ಜೆ.ಯವರು ಮಾತನಾಡಿ, ಬೆಳಕು ಯೋಜನೆಯಲ್ಲಿ ಗ್ರಾ.ಪಂ. ವ್ಯಾಪ್ತಿಯ ವಿದ್ಯುತ್ ಗುತ್ತಿಗೆದಾರರೋರ್ವರು ಅವ್ಯವಹಾರ ನಡೆಸಿದ್ದಾರೆಂದು ಫಲಾನುಭವಿ ಪಂಚಾಯತ್ ಗೆ ದೂರು ನೀಡಿದ್ದು ಯಾವಾಗ, ಇದೇ ವಿಚಾರಕ್ಕೆ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಗ್ರಾ.ಪಂ.ನಲ್ಲಿ ನಿರ್ಣಯ ಆಗಿದೆ ಎಂದು ಹೇಳಿದ್ದಿರಿ, ಆದರೆ ನಮಗೆ ತಿಳಿದೆ ಇಲ್ಲ, ಯಾವಾಗ ನಿರ್ಣಯ ಆಗಿರುವುದು, ನೀವು ನಿಮ್ಮ ಇಷ್ಟ ಪ್ರಕಾರ ನಿರ್ಣಯ ಬರೆದಿದ್ದಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸಿ ನಿರ್ಣಯ ಆಗಿದೆಯಲ್ಲ, ನೀವು ಸಭೆಯಲ್ಲಿ ಇದ್ದೆ ನಿರ್ಣಯ ಆಗಿದೆ ಎಂದು ಹೇಳಿದರು, ಈ ಬಗ್ಗೆ ವಸಂತ ಕೆ. ಹಾಗೂ ಜೋಸೆಫ್ ಪಿ.ಜೆ.ಯವರು ಮತ್ತೆ ಆಕ್ರೋಶಗೊಂಡಾಗ ಸದಸ್ಯರೊಳಗೆ ಮಾತಿನ ಚಕಮಕಿ ನಡೆಯಿತು. ಪತ್ರಿಕಾಗೋಷ್ಠಿಯಲ್ಲಿ ಅವರ ಅವ್ಯವಹಾರದ ಬಗ್ಗೆ ಇಂಧನ ಸಚಿವರಿಗೆ ದೂರು ನೀಡುವುದಾಗಿ ಹೇಳಿದ್ದಿರಿ ಈ ಬಗ್ಗೆ ನಿರ್ಣಯವೇ ಆಗಿಲ್ಲ, ಇಲ್ಲಿ ನಡೆಯದ್ದು ಎಲ್ಲ ನಿರ್ಣಯ ಆಗುತ್ತದೆ, ನಿಮ್ಮ ಇಷ್ಟಾನುಸಾರ ನಿರ್ಣಯ ಮಾಡಬಾರದು ಎಂದು ಜೋಸೆಫ್ ಪಿ.ಜೆ.ಯವರು ಹೇಳಿದರು. ಇದಕ್ಕೆ ಅಧ್ಯಕ್ಷರು ಉತ್ತರಿಸಿ, ನೀವು ಇದ್ದೆ ನಿರ್ಣಯ ಆಗಿರುವುದು, ಯಾವ ರೀತಿ ನಿರ್ಣಯ ಆಗಿದೆ ಎಂದು ಮೊದಲು ತಿಳಿದುಕೊಳ್ಳಿ ಎಂದು ಇಬ್ಬರು ಸದಸ್ಯರಿಗೆ ಹೇಳಿದರು. ಆಗ ನಿರ್ಣಯ ಓದುವಂತೆ ಹೇಳಲಾಗಿ ಓದಲಾಗಿ ಗ್ರಾ.ಪಂ. ವ್ಯಾಪ್ತಿಯಲ್ಲಿ ವಿದ್ಯುತ್ ಗುತ್ತಿಗೆದಾರರೋರ್ವರು ಬೆಳಕು ಯೋಜನೆಯಲ್ಲಿ ಫಲಾನುಭವಿಯಿಂದ ಹಣ ಪಡೆದುಕೊಂಡಿದ್ದಾರೆ ಎಂದು ಈ ಹಿಂದಿನ ಸಾಮಾನ್ಯ ಸಭೆಯಲ್ಲಿ ಸದಸ್ಯರೋರ್ವರು ಪ್ರಸ್ತಾಪಿಸಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಆ ಬಗ್ಗೆ ಲಿಖಿತ ದೂರು ಬಂದ ಬಳಿಕ ಕಾನೂನು ಕ್ರಮ ಕೈಗೊಳ್ಳುವ ಎಂದು ನಿರ್ಣಯ ಮಾಡಿರುವುದು ತಿಳಿದು ಬಂತು. ಇದಕ್ಕೆ ಪಿ.ಜೆ. ಜೋಸೆಫ್ ಮತ್ತು ವಸಂತ ಕೆ. ಅವರು ಆಕ್ಷೇಪ ವ್ಯಕ್ತಪಡಿಸಿ ಯಾವ ರೀತಿ ಕಾನೂನು ಕ್ರಮ ಎಂದು ಬರೆದಿಲ್ಲ, ಆ ನಿರ್ಣಯಕ್ಕೆ ನಾವು ಜವಾಬ್ದಾರಲ್ಲ, ನಾವು ಯಾಕೆ ಸುಮ್ಮನೆ ಕೋರ್ಟ್‌ಗೆ ಅಲೆದಾಡುವುದು ಎಂದು ಹೇಳಿದರು.

ಇದಕ್ಕೆ ಉಪಾಧ್ಯಕ್ಷ ಇಮಾನ್ಯುವೆಲ್ ಅವರು ಉತ್ತರಿಸಿ, ನಿರ್ಣಯ ಬರೆದಿರುವುದನ್ನು ಸರಿಯಾಗಿ ನೋಡಿ, ನಾವು ಅದರಂತೆ ನಡೆದಿದ್ದೇವೆ, ಕಳೆದ ಸಭೆಯಲ್ಲಿ ಅವ್ಯವಹಾರ ನಡೆಸಿರುವ ಗುತ್ತಿಗೆದಾರರ ವಿರುದ್ದ ಲಿಖಿತ ದೂರು ಬಂದ ಮೇಲೆ ಕ್ರಮ ಕೈಗೊಳ್ಳಲು ವಸಂತ ಕೆ. ಅವರು ಕೂಡ ಆಗ್ರಹಿಸಿದ್ಧಾರೆ ಎಂದು ಹೇಳಿದರು.

ಸಾಮಾನ್ಯ ಸಭೆ ಜೂ.೩೦, ಅರ್ಜಿ ಬಂದಿರುವುದು ಜು.೨ ಮತ್ತೆ ಹೇಗೆ ನಿರ್ಣಯ ಆಗಿದೆ? ಪಿ.ಜೆ.ಜೋಸೆಫ್, ವಸಂತರವರ ಪ್ರಶ್ನೆ

ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಪಿ.ಜೆ.ಜೋಸೆಫ್ ಪ್ರಶ್ನಿಸಿ, ವಿದ್ಯುತ್ ಗುತ್ತಿಗೆದಾರರೋರ್ವರು ಬೆಳಕು ಯೋಜನೆಯಲ್ಲಿ ಹಣ ಪಡೆದುಕೊಂಡು ಕಾಮಗಾರಿ ನಿರ್ಮಿಸಿದ್ದಾರೆಂದು ಪಂಚಾಯತ್‌ಗೆ ಯಾವಾಗ ಲಿಖಿತ ದೂರು ಬಂದಿದೆ, ಮತ್ತೆ ಸಾಮಾನ್ಯ ಸಭೆ ಯಾವಾಗ ನಡೆದಿದೆ? ನೀವು ಪತ್ರಿಕಾಗೋಷ್ಠಿಯಲ್ಲಿ ಸಾಮಾನ್ಯ ಸಭೆ ಯಾವಾಗ ಎಂದು ನಡೆದದ್ದು ಎಂದು ಹೇಳಿದ್ದಿರಿ? ಎಲ್ಲದಕ್ಕೂ ಉತ್ತರ ನೀಡಿ ಎಂದು ಹೇಳಿದರು, ಇದಕ್ಕೆ ವಸಂತ ಕುಬಲಾಡಿ ಧ್ವನಿಗೂಡಿಸಿದರು. ಇದಕ್ಕೆ ಪಿಡಿಒ ಉತ್ತರಿಸಿ ಸಾಮಾನ್ಯ ಸಭೆ ಆಗಿರುವುದು ಜೂ.೩೦, ಪಂಚಾಯತ್‌ಗೆ ಲಿಖಿತ ದೂರು ಬಂದಿರುವುದು ಜು.೨ಕ್ಕೆ ಎಂದು ಹೇಳಿದರು. ಇದಕ್ಕೆ ಆಕ್ರೋಶಗೊಂಡ ಜೋಸೆಫ್ ಅವರು ಅದು ಹೇಗೆ ಜೂ.೩೦ಕ್ಕೆ ಸಾಮಾನ್ಯ ಸಭೆ ಆಗಿ, ಜು.೨ಕ್ಕೆ ಬಂದ ಅರ್ಜಿಯ ಬಗ್ಗೆ ನಿರ್ಣಯ ತೆಗೆದುಕೊಳ್ಳುತ್ತಿರಿ, ಅದು ಕೂಡ ಲಿಖಿತ ಅರ್ಜಿ ಬಂದ ಬಗ್ಗೆ ನಮ್ಮ ಗಮನಕ್ಕೆ ಬರಲಿಲ್ಲ, ನಿಮಗೆ ಬೇಕಾದ ಹಾಗೆ ನಿರ್ಣಾಯ ಬರೆದಿದ್ದಿರಾ ಎಂದು ಮರು ಪ್ರಶ್ನೆ ಹಾಕಿದರು. ಇದಕ್ಕೆ ಉತ್ತರಿಸಿದ ಉಪಾಧ್ಯಕ್ಷ ಇಮ್ಯಾನುವೆಲ್ ಪಿ.ಜೆ. ಅವರು, ನೀವು ನಿರ್ಣಾಯ ಸರಿ ಅರ್ಥ ಮಾಡಿಕೊಳ್ಳಿ ಎಂದಾಗ ಸದಸ್ಯರಾದ ಚಂದ್ರಶೇಖರ್ ಹಳೆನೂಜಿ ಅವರು ಮಾತನಾಡಿ, ಸಾಮಾನ್ಯ ಸಭೆಯ ನಿರ್ಣಯದಂತೆ ನಡೆದುಕೊಂಡಿದ್ದೇವೆ, ಎಲ್ಲಿಯೂ ತಪ್ಪಾಗಿಲ್ಲ, ಆದರೆ ಪತ್ರಿಕಾಗೋಷ್ಟಿಯಲ್ಲಿ ಸಾಮಾನ್ಯ ಸಭೆ ೨೬ಕ್ಕೆ ನಡೆದಿರುವುದು ಎಂದು ಹೇಳಿರುವುದು ತಪ್ಪಾಗಿದೆ ಎಂದು ಸಮಾಜಾಯಿಸಿಕೆ ನೀಡಿದರು. ಬಳಿಕ ಶ್ರೀಧರ್ ಗೋಳ್ತಿಮಾರ್ ಅವರು ಮಾತನಾಡಿ, ಕಳೆದ ಸಾಮಾನ್ಯ ಸಭೆಯಲ್ಲಿ ನಡೆದ ಸತ್ಯ ವಿಚಾರವನ್ನು ಹೇಳ್ತೆನೆ, ಕಳೆದ ಸಾಮಾನ್ಯ ಸಭೆಯಲ್ಲಿ ವಿದ್ಯುತ್ ಗುತ್ತಿಗೆದಾರರೋರ್ವರು ಬೆಳಕು ಯೋಜನೆಯಲ್ಲಿ ಹಣ ಪಡೆದುಕೊಂಡಿದ್ದಾರೆ ಎಂಬ ವಿಚಾರ ಪ್ರಸ್ತಾಪ ಬಂದಾಗ ಈ ಬಗ್ಗೆ ಲಿಖಿತ ದೂರು ಬಂದಾಗ ಆ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವುದೆಂದು ನಿರ್ಣಯ ಮಾಡಲಾಗಿದೆ ಇದು ನಿಜ, ಮತ್ತೆ ಕಾನೂನು ಕ್ರಮ ಯಾವುದೆಂದು ಅಧ್ಯಕ್ಷರು ಹಾಗೂ ಪಿಡಿಒ ಅವರು ತೀರ್ಮಾನಿಸಿದ್ದಾರೆ. ಈ ರೀತಿ ನಿರ್ಣಯ ಮಾಡಿದ್ದು ನಿಮ್ಮ ಗಮನಕ್ಕೆ ಬಂದಿದೆ, ಮತ್ತು ನಿರ್ಣಯ ಮಾಡಬೇಕೆಂದು ಹೇಳಿದವರೂ ನೀವೆ ಎಂದು ಶ್ರೀಧರ್ ಅವರು ಹೇಳಿದರು. ಇದಕ್ಕೆ ಜೋಸೆಫ್ ಪಿ.ಜೆ.ಯವರು ಮಾತನಾಡಿ, ಆದರೆ ಲಿಖಿತ ದೂರು ಬಂದ ಬಳಿಕ ನೀವು ಯಾಕೆ ನಮ್ಮ ಗಮನಕ್ಕೆ ತಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಭೆಯ ಹಾಜರಿ ಪುಸ್ತಕಕ್ಕೆ ಸಹಿ ಮಾಡದಿರುವುದಕ್ಕೆ ಆಕ್ಷೇಪ-ಚರ್ಚೆ
ಸಭೆಯಲ್ಲಿ ಚರ್ಚೆ ನಡೆಯುತ್ತಿದ್ದಂತೆ ಸದಸ್ಯ ಚಂದ್ರಶೇಖರ್ ಅವರು ಮಾತನಾಡಿ, ಸಭಾ ನಡಾವಳಿಯಂತೆ ಸಭೆಯಲ್ಲಿ ಮಾತನಾಡಬೇಕಾದರೆ ಹಾಜರಿ ಪುಸ್ತಕಕ್ಕೆ ಸಹಿ ಹಾಕಬೇಕು, ಸಹಿ ಹಾಕದಿದ್ದರೆ ಸಭೆಯಲ್ಲಿ ಉಪಸ್ಥಿತರಿರುವುದಕ್ಕೆ ಏನು ಅರ್ಥ ಇದೆ, ಈಗಾಗಲೇ ಪಿ.ಜೆ. ಜೋಸೆಫ್ ಮತ್ತು ವಸಂತರವರು ಸಹಿ ಮಾಡದಿರುವುದು ಗಮನಕ್ಕೆ ಬಂದಿದೆ, ಇನ್ನು ಸಹಿ ಮಾಡುವುದು ಬೇಡ, ಚರ್ಚೆ ಮಾಡುವುದು ಬೇಡ ಎಂದು ಹೇಳಿದರು. ಇದಕ್ಕೆ ಪಿ.ಜೆ.ಜೋಸೆಫ್ ಮತ್ತು ವಸಂತರವರು ಅಭಿಪ್ರಾಯ ವ್ಯಕ್ತಪಡಿಸಿ, ನಾವು ಮೊದಲು ಸಹಿ ಮಾಡಿದರೆ ಮತ್ತೆ ನೀವು ನಿಮಗೆ ಬೇಕಾದ ಹಾಗೆ ನಿರ್ಣಯ ಬರೆಯುತ್ತಿರಿ, ನಾವು ಮತ್ತೆ ನಿರ್ಣಾಯ ಓದಿದ ಬಳಿಕವೇ ಸಹಿ ಹಾಕುವುದು ಎಂದರು. ಇದಕ್ಕೆ ಇತರ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ ನೀವು ಸಭೆಯಲ್ಲಿ ಭಾಗವಹಿಸಬೇಕಾದರೆ ಹಾಜರಿ ಪುಸ್ತಕಕ್ಕೆ ಸಹಿ ಹಾಕಬೇಕು, ನಿಮಗೆ ನಿರ್ಣಾಯದಲ್ಲಿ ಏನಾದರೂ ವ್ಯತ್ಯಾಸ ಕಂಡರೆ ಅಥಾವ ಸಹಮತ ಇರದಿದ್ದರೆ ಅದರ ಎದುರು ಷರಾ ಬರೆಯಿರಿ, ಸಭೆಯಲ್ಲಿ ಮಾತನಾಡಬೇಕಾದರೆ ಸಹಿ ಹಾಕಲೇಬೇಕು ಎಂದು ಹೇಳಿದರು. ಇದಕ್ಕೆ ಪಿ.ಜೆ.ಜೋಸೆಫ್ ಮತ್ತು ವಸಂತರವರು ನಮಗೆ ಸಭೆಯ ಕೊನೆಯಲ್ಲಿ ನಿರ್ಣಾಯ ಮಾಡಿರುವ ಬಗ್ಗೆ ಮಾಹಿತಿ ಕೊಡಬೇಕು ಎಂದು ಹೇಳಿದರು.

LEAVE A REPLY

Please enter your comment!
Please enter your name here