ಮತದಾರರ ಗುರುತು ಚೀಟಿಗೆ ಆಧಾರ್ ದತ್ತಾಂಶ ಸಂಗ್ರಹಣೆ ಚಾಲನೆ: ತಾಲೂಕು ಆಡಳಿತ ಸೌಧದಲ್ಲಿ ಸಹಾಯಕ ಆಯಕ್ತರಿಂದ ಚಾಲನೆ

0

ಪುತ್ತೂರು:ಮತದಾರರ ಗುರುತು ಚೀಟಿಗೆ ಆಧಾರ್ ದತ್ತಾಂಶ ಜೋಡಿಸುವ ಮತ್ತು ದೃಡೀಕರಣಕ್ಕಾಗಿ ಸ್ವಯಂಪ್ರೇರಿತ ಆಧಾರದ ಮೇಲೆ ಮತದಾರರಿಂದ ಆಧಾರ್ ದತ್ತಾಂಶ ಸಂಗ್ರಹಣೆಗೆ ಆ.೧ರಂದು ಚಾಲನೆ ನೀಡಲಾಯಿತು.

ಚಾಲನೆ ನೀಡಿದ ಸಹಾಯಕ ಆಯುಕ್ತ ಗಿರೀಶ್ ನಂದನ್ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಮತದಾರರ ಗುರುತನ್ನು ದೃಢೀಕರಿಸಿ, ಅಧಿಕೃತಗೊಳಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದು ಆ.೧ರಿಂದ ಪ್ರಾರಂಭಗೊಂಡು ೨೦೨೩ರ ಮಾ.೩೧ರ ತನಕ ನಡೆಯಲಿದೆ. ಎಲ್ಲಾ ಮತದಾರರ ಚೀಟಿಯನ್ನು ಪರಿಶೀಲನೆ ನಡೆಸಲಾಗುವುದು. ಆಧಾರ್ ದತ್ತಾಂಶ ಸಂಗ್ರಹಣೆಗೆ ತಾಲೂಕು ಕಚೇರಿಯಲ್ಲಿ ಕೌಂಟರ್ ತೆರೆಯಲಾಗುವುದು. ಅಲ್ಲದೆ ಗ್ರಾಮ ಪಂಚಾಯತ್ ಹಾಗೂ ಬಿಎಲ್‌ಓಗಳ ಮೂಲಕ ಮಾಡಿಕೊಳ್ಳಬಹುದು ಎಂದರು.

ಆಧಾರ್ ಜೋಡಣೆ ಹೀಗೆ…!
ಮತದಾರರು ನಮೂನೆ ೬ರಲ್ಲಿ NVSP, VHA ಮತ್ತು ERONET ಮತ್ತು  GARUDA ಪೋರ್ಟಲ್/ಆಪ್‌ಗಳ ಮೂಲಕ ಆನ್‌ನಲೈನ್‌ನಲ್ಲಿ ಫಾರಂ ೬ಬಿಯನ್ನು ಭರ್ತಿಮಾಡಿ UIDAI ನಲ್ಲಿ ನೋಂದಾಯಿಸಲಾದ ಅವರ ಮೊಬೈಲ್ ಸಂಖ್ಯೆಗೆ ಓಟಿಪಿ ಬಳಸಿಕೊಂಡು ಆಧಾರ್ ಸ್ವಯಂ ದೃಡೀಕರಣಗೊಳಿಸಬಹುದು. ಆನ್‌ಲೈನ್‌ನಲ್ಲಿ
ಅಗತ್ಯ ದಾಖಲೆಗಳನ್ನು ಸಲ್ಲಿಸಿ ಫಾರಂ-೬ಬಿಯನ್ನು ಸಲ್ಲಿಸಿಯೂ ದೃಡೀಕರಣಗೊಳಿಸಬಹುದು ಎಂದರು.

ಆಧಾರ್ ಜೊತೆಗೆ ೧೧ ದಾಖಲೆಗಳಿಗೆ ಅವಕಾಶ:
ದೃಡೀಕರಿಸಲು ಮೂಲ ದಾಖಲೆಯಾಗಿ ಆಧಾರ್‌ನ್ನು ಬಳಸಲಾಗುವುದು. ಜೊತೆಗೆ ಉದ್ಯೋಗ ಖಾತರಿಯ ಉದ್ಯೋಗ ಚೀಟಿ, ಭಾವಚಿತ್ರವಿರುವ ಬ್ಯಾಂಕ್/ಪೋಸ್ಟ್ ಆಫೀಸ್ ಪಾಸ್‌ಬುಕ್, ಕಾರ್ಮಿಕ ಇಲಾಖೆಯ ಆರೋಗ್ಯ ವಿಮಾ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸನ್ಸ್, ಪ್ಯಾನ್ ಕಾರ್ಡ್, ಎನ್‌ಪಿಆರ್ ಅಡಿಯಲ್ಲಿ ಆರ್‌ಜಿಐ ಸ್ಮಾರ್ಟ್ ಕಾರ್ಡ್, ಪಾಸ್‌ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ರಾಜ್ಯ/ಪಿಎಸ್‌ಯು/ಸಾರ್ವಜನಿಕರಿಂದ ಉದ್ಯೋಗಿಗಳಿಗೆ ನೀಡುವ ಭಾವಚಿತ್ರವಿರುವ ಗುರುತಿನ ಚೀಟಿ, ಸಂಸದರು/ಶಾಸಕರು/ಎಂಎಲ್‌ಸಿಗಳಿಗೆ ನೀಡುವ ಅಧಿಕೃತ ಗುರುತಿನ ಚೀಟಿ, ಇಲಾಖೆ ಭಾರತ ಸರಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದಿಂದ ನೀಡುವ ವಿಶಿಷ್ಠ ಗುರುತಿನ ಚೀಟಿ(ಯುಡಿಐಡಿ) ಮೊದಲಾದ ೧೧ ದಾಖಲೆಗಳನ್ನು ಸಲ್ಲಿಸಿ ದೃಡೀಕರಣಗೊಳಿಸಬಹುದು ಎಂದು ಸಹಾಯಕ ಆಯುಕ್ತರು ಮಾಹಿತಿ ನೀಡಿದರು. ತಹಶೀಲ್ದಾರ್ ನಿಸರ್ಗಪ್ರಿಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು, ಕಂದಾಯ ಇಲಾಖಾಧಿಕಾರಿಗಳು ಹಾಗೂ ಸಿಬಂದಿಗಳನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪತಹಶೀಲ್ದಾರ್ ಸುಲೋಚನಾ ಪಿ.ಕೆ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here