- ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿ ಇದೆ: ಒಡಿಯೂರು ಶ್ರೀ
ವಿಟ್ಲ: ಸಮಾಜದಲ್ಲಿ ಮನುಷ್ಯ ಸಂತೋಷ, ಶಾಂತಿ, ನೆಮ್ಮದಿಗೆ ಬಯಸುವ ಕಾಲ ಬಂದಿದೆ. ದುರ್ಘಟನೆ ನಡೆಯದಂತೆ ಸರಕಾರದ ಜೊತೆಗೆ ನಾವೆಲ್ಲರೂ ಜಾಗರೂಕರಾಗಬೇಕು ಎಂದು ಒಡಿಯೂರು ಶ್ರೀಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಹೇಳಿದರು.

ಅವರು ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿಯ ವತಿಯಿಂದ ಆ.8ರಂದು ನಡೆಯಲಿರುವ ಜನ್ಮದಿನೋತ್ಸವ – ಗ್ರಾಮೋತ್ಸವ- ಗುರುವಂದನೆ ಅಂಗವಾಗಿ ನಡೆದ ಆಟೋಟ ಸ್ಪರ್ಧೆಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು. ಅಂತರಂಗದ ಬಾಗಿಲು ತೆರೆಯಬೇಕು.ಅಲ್ಲಿ ಆನಂದದ ಸೆಲೆ ಇರುತ್ತದೆ. ಆಧ್ಯಾತ್ಮದ ಬಾಗಿಲು ತೆರೆಯಬೇಕು ಎಂದ ಅವರು ಸ್ಪರ್ಧೆ ಎಲ್ಲಾ ಕ್ಷೇತ್ರಗಳಲ್ಲಿ ಇದೆ. ಆತ್ಮವಿಶ್ವಾಸವನ್ನು ಹೆಚ್ಚಿಸುವ ಕಾರ್ಯ ನಡೆಯಬೇಕು. ಧೈರ್ಯದಿಂದ ಭಾಗವಹಿಸಿದರೆ ಯಶಸ್ಸು ಸಾಧ್ಯ ಎಂದರು.
ಸಾಧ್ವಿ ಮಾತಾನಂದಮಯೀ ದಿವ್ಯ ಸಾನಿಧ್ಯ ವಹಿಸಿದ್ದರು. ಒಡಿಯೂರು ಶ್ರೀಗಳ ಜನ್ಮ ದಿನೋತ್ಸವ ಸಮಿತಿ ಕೋಶಾಧಿಕಾರಿ ಸುರೇಶ್ ರೈ, ವಿದ್ಯಾಪೀಠದ ಸಂಚಾಲಕ ಗಣಪತಿ ಭಟ್ ಸೇರಾಜೆ, ಕಿರಣ್ ಉರ್ವ, ಒಡಿಯೂರು ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತದ ಉಪಾಧ್ಯಕ್ಷ ಲಿಂಗಪ್ಪ ಗೌಡ ಪನೆಯಡ್ಕ, ರವಿರಾಜ್ ಶೆಟ್ಟಿ ಒಡಿಯೂರು, ಸಾಯಿನಾರಾಯಣ ಕಲ್ಮಡ್ಕ, ತೀರ್ಪುಗಾರರಾದ ದೈಹಿಕ ಶಿಕ್ಷಣ ಶಿಕ್ಷಕ ಅವಿನಾಶ್ ಶೆಟ್ಟಿ, ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಯಶವಂತ ವಿಟ್ಲ ಸ್ವಾಗತಿಸಿದರು. ಮಾಂತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.