ಕಾವು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹುಕ್ರಪ್ಪ ನಾಯ್ಕರಿಗೆ ವಿದಾಯ ಸಮಾರಂಭ

0

  • ಸರಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಅಭಿನಂದನಾರ್ಹ: ಕಾವು ಹೇಮನಾಥ ಶೆಟ್ಟಿ

ಪುತ್ತೂರು: ಯಾವುದೇ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆತರೆ ಮಾತ್ರ ಅಂಥಹ ಶಾಲೆಗಳಿಗೆ ಪೋಷಕರುನ ಮಕ್ಕಳನ್ನು ಕಳುಹಿಸುತ್ತಾರೆ, ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿರುವುದು ಅಭಿನದಂನಾರ್ಹ ಸಂಗತಿಯಾಗಿದೆ , ಕಾವು ಶಾಲೆ ರಾಜ್ಯಕ್ಕೆ ಮಾದರಿಯಾಗಿದೆ ಎಂದು ಪುತ್ತೂರು ಶ್ರೀರಾಮಕೃಷ್ಣ ಪ್ರೌಢ ಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.

 

ಅವರು ಕಾವು ಸರಕಾರಿ ಉಹಿಪ್ರಾಶಾಲೆಯಲ್ಲಿ ಕಳೆದ ಏಳು ವರ್ಷಗಳಿಂದ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಹುಕ್ರಪ್ಪ ನಾಯ್ಕ ಬಿ ಅವರಿಗೆ ಜು.೩೧ ರಂದು ಸೇವಾ ನಿವೃತ್ತಿಹೊಂದಿದ್ದು ಅವರಿಗೆ ಶಾಲಾ ವಠಾರದಲ್ಲಿ ವಿದಾಯ ಕೂಟ ಸಮಾರಂಭದಲ್ಲಿ ಅಭಿನದಂನಾ ಭಾಷಣ ಮಾಡಿದರು.

ಕಳೆದ ಏಳು ವರ್ಷಗಳ ಹಿಂದೆ ಶತಮಾನ ಕಂಡ ಕಾವು ಸರಕಾರಿ ಹಿಪ್ರಾಶಾಲೆಯನ್ನು ದತ್ತು ತೆಗೆದುಕೊಂಡಿದ್ದೆ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು, ಬಡವರ ಮಕ್ಕಳೂ ಇಂಗ್ಲೀಷ್ ಕಲಿಯಬೇಕು ಎಂಬ ಉದ್ದೇಶದಿಂದ ಶಾಲೆಗೆ ಬೇಕಾದ ಎಲ್ಲಾ ಮೂಲಭೂತ ವ್ಯವಸ್ಥೆಗಳನ್ನು ವಿದ್ಯಾಭಿಮಾನಿಗಳ ನೆರವಿನಿಂದ , ಜಿಪಂ ಹಾಗೂ ಸರಕಾರದ ಅನುದಾನದಿಂದ ಒದಗಿಸಲಾಗಿದೆ. ಯಾವುದೇ ಶಾಲೆಯಲ್ಲಿ ವ್ಯವಸ್ಥೆಗಳನ್ನು ಮಾತ್ರ ಮಾಡಿದರೆ ಉತ್ತಮ ಶಿಕ್ಷಣ ದೊರೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ ಶಾಲೆಯಲ್ಲಿರುವ ಶಿಕ್ಷಕರು ಉತ್ತಮ ಕಲಿಕಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಕಾವು ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಹುಕ್ರಪ್ಪ ನಾಯ್ಕ ಮತ್ತು ಅವರ ತಂಡದ ಕಾರ್ಯ ಕಾವು ಶಾಲೆಯನ್ನು ಇಂದು ರಾಜ್ಯಮಟ್ಟದಲ್ಲೇ ಮಾದರಿ ಶಾಲೆ ಎಂಬಂತೆ ಗುರುತಿಸುವಂತೆ ಮಾಡಿದೆ.

೪೦೦ ಮಕ್ಕಳಿದ್ದಾರೆ..ಅದ್ಬುತ..!
ಕಾವು ಪರಿಸರದ ಸುತ್ತಲೂ ವಿವಿಧ ಶಾಲೆಗಳಿದ್ದರೂ ಕಾವು ಸರಕಾರಿ ಶಾಲೆಯಲ್ಲಿ ೪೦೦ ಮಕ್ಕಳಿರುವುದು ಅತ್ಯಂತ ಸಂತೋಷದ ಸಂಗತಿಯಾಗಿದೆ. ಪೋಷಕರು ಮಕ್ಕಳ ಶಿಕ್ಷಣಕ್ಕೆ ಕಾವು ಸರಕಾರಿ ಶಾಲೆಯನ್ನು ಆಯ್ಕೆ ಮಾಡಿರುವುದರ ಹಿಂದಿನ ಪರಿಶ್ರಮ ಇಲ್ಲಿನ ಶಿಕ್ಷಕರಿಗೆ ಸಲ್ಲಬೇಕು. ಉತ್ತಮ ಶಿಕ್ಷಣ ದೊರೆಯುವ ಕಾರಣಕ್ಕೆ ಕಾವು ಶಾಲೆಯನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಶಾಲೆಯಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಹೆಚ್ಚಿಸುವ ಮೂಲಕ ಮಕ್ಕಳ ಸಂಖ್ಯೆಯನ್ನು ವೃದ್ದಿಸುವಲ ಕೆಲಸ ನಡೆಯಬೇಕಿದೆ. ಶಾಲೆಯಲ್ಲಿ ಏಳು ವರ್ಷಗಳಿಂದ ಮುಖ್ಯ ಗುರುಗಳಗಿ ಕೆಲಸ ಮಾಡುತ್ತಿರುವ ಹುಕ್ರಪ್ಪ ನಾಯ್ಕರ ಮೇಲೆ ಯಾವುದೇ ದೂರುಗಳು ಇದುವರೆಗೂ ಬಂದಿಲ್ಲ, ಉಳಿದ ಶಿಕ್ಷಕರ ಬಗ್ಗೆಯೂ ಆಕ್ಷೇಪಗಳಿಲ್ಲದೆ ಶಾಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದೊಂದೇ ಶಿಕ್ಷಕರ ಗುರಿಯಾದರೆ ಶಾಲೆ ತನ್ನಿಂತಾನೆ ಅಭಿವೃದ್ದಿಯಾಗುತ್ತದೆ, ಪೋಷಕರ ಮೆಚ್ಚುಗೆಗೂ ಪಾತ್ರವಾಗುತ್ತದೆ ಎಂಬುದನ್ನು ಶಿಕ್ಷಕ ವರ್ಗ ತೋರಿಸಿಕೊಟ್ಟಿದೆ ಇದಕ್ಕೆ ನಾನು ಅಭಿನಂದನೆ ಸಲ್ಲಿಸುವುದಾಗಿ ಹೇಮನಾಥ ಶೆಟ್ಟಿ ಕಾವು ಹೇಳಿದರು.
ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ತಾನು ಸೇವೆಯಲ್ಲಿದ್ದ ಎಲ್ಲಾ ಶಾಲೆಗಳನ್ನು ಅಭಿವೃದ್ದಿ ಮಾಡಿದ್ದಾರೆ: ಶಶಿಕುಮಾರ್ ರೈ ಬಾಲ್ಯೊಟ್ಟು
ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದು ನಿವೃತ್ತಗೊಂಡ ಹುಕ್ರಪ್ಪ ನಾಯ್ಕರವರು ಈ ಹಿಂದೆ ಯಾವ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ್ದಾರೋ ಆ ಶಾಲೆಗಳೆಲ್ಲವೂ ಅಭಿವೃದ್ದಿಯಾಗಿದೆ, ಮಕ್ಕಳ ಸಂಖ್ಯೆಯೂ ಹೆಚ್ಚಿದೆ ಇದು ಹುಕ್ರಪ್ಪ ಅವರು ಉತ್ತಮ ಶಿಕ್ಷಕ ಎಂಬುದಕ್ಕೆ ದೊಡ್ಡ ಸಾಕ್ಷಿಯಾಗಿದೆ ಎಂದು ಹೇಳಿದರು. ತನ್ನ ೩೯ ವರ್ಷಗಳ ಸೇವಾ ಅವಧಿಯಲ್ಲಿ ಸಾವಿರಾರು ಉತ್ತಮ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಅರ್ಪಿಸುವ ಮೂಲಕ ದೇಶಕ್ಕೆ ಸಾವಿರಾರು ಉತ್ತಮ ಪ್ರಜೆಗಳನ್ನು ಸಮರ್ಪಿಸಿದ್ದಾರೆ.ಯಾವುದೇ ಶಾಲೆಯ ಶಿಕ್ಷಕ ಉತ್ತಮ ಕೆಲಸ ಮಾಡಿದರೆ ಪೋಷಕರು ಬೆನ್ನುತಟ್ಟುತ್ತಾರೆ ಎಂಬುದಕ್ಕೆ ಹುಕ್ರಪ್ಪ ಅವರ ವಿದಾಯ ಕೂಟಕ್ಕೆ ನೆರದಿರುವ ಪೋಷಕರೇ ಸಾಕ್ಷಿಯಾಗಿದ್ದಾರೆ. ತನ್ನ ವೃತ್ತಿ ಜೀವನದಲ್ಲಿ ಮಾಡಿದ ಪುಣ್ಯವನ್ನು ನಿವ್ರತ್ತು ಜೀವನದಲ್ಲಿ ಅನುಭವಿಸುವ ಭಾಗ್ಯ ಎಲ್ಲರಿಗೂ ದೊರೆಯುವುದಿಲ್ಲ ಎಂದು ಹೇಳಿದರು.

ಎಲ್ಲಾ ಸರಕಾರಿ ಶಾಲೆಗೆ ಮಾದರಿಯಾಗಿದೆ: ನನ್ಯ
ಕಾವು ಸರಕಾರಿ ಹಿಪ್ರಾಶಾಲೆ ಎಲ್ಲಾ ಸರಕಾರಿ ಶಾಲೆಗಳಿಗೂ ಮಾದರಿ ಎಂಬಂತೆ ತಲೆ ಎತ್ತಿ ನಿಂತಿದೆ, ಇದಕ್ಕೆ ಇಲ್ಲಿನ ಶಿಕ್ಷಕರ , ವಿದ್ಯಾಭಿಮಾನಿಗಳ, ದಾನಿಗಳ ಸಹಕಾರವೇ ಕಾರಣವಾಗಿದೆ ಎಂದು ಕಾವು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನನ್ಯ ಅಚ್ಚುತ್ತಮೂಡಿತ್ತಾ ಹೇಳಿದರು.
ಅನೇಕ ಸರಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚಿದೆ, ಕೆಲವು ಮುಚ್ಚುವ ಹಂತದಲ್ಲಿದೆ ಆದರೆ ಕಾವು ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಸಂಖ್ಯೆಯಲ್ಲಿದೆ. ಇಲ್ಲಿನ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಕಾವು ಹೇಮನಾಥ ಶೆಟ್ಟಿಯವರು ಶಾಲೆಯಲ್ಲಿ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸುವ ಮೂಲಕ ಬಡವರ್ಗದ ಜನತೆಗೂ ಆಂಗ್ಲ ಮಾಧ್ಯಮದಲ್ಲಿ ಕಲಿಕೆಗೆ ಅವಕಾಶ ಒದಗಿಸಿದ್ದಾರೆ. ಗುಣಮಟ್ಟದ ಶಿಕ್ಷಣ ಕಾವು ಶಾಲೆಯಲ್ಲಿ ದೊರೆಯುತ್ತಿರುವ ಕಾರಣಕ್ಕೆ ಮಕ್ಕಳ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಿದರು. ಹುಕ್ರಪ್ಪರಂತ ಶಿಕ್ಷಕರನ್ನು ಶಾಲೆಗೆ ದೊರಕಿರುವುದು ಸೌಭಾಗ್ಯವಾಗಿದೆ ಎಂದು ಹೇಳಿದರು.

ಭ್ರಷ್ಟಾಚಾರವಿಲ್ಲದೆ ಕ್ಷೇತ್ರ ಶಿಕ್ಷಣ ಕ್ಷೇತ್ರ:ಅಮೃತಕಲಾ
ಶಿಕ್ಷಣ ಸಂಯೋಜಕಿ ಅಮೃತಕಲಾ ಮಾತನಾಡಿ ಭ್ರಷ್ಟಾಚಾರವಿಲ್ಲದ ಕ್ಷೇತ್ರವಿದ್ದರೆ ಅದು ಶಿಕ್ಷಣ ಕ್ಷೇತ್ರವಾಗಿದೆ. ಶಿಕ್ಷಕರು ನಿವೃತ್ತರಾಗುವ ವೇಳೆ ಅವರಿಗೆ ವಿದಾಯಕೂಟವನ್ನು ಏರ್ಪಡಿಸಿ ಗೌರವಿಸುತ್ತಾರೆ. ಶಿಕ್ಷಕರಿಗೆ ಊರಿನ ಜನರು, ಪೋಷಕರು ನೀಡುವ ಗೌರವ ಅತ್ಯಂತ ಪವಿತ್ರವಾದದ್ದು, ೩೯ ವರ್ಷ ಸೇವೆ ಸಲ್ಲಿಸಿ ಕಳಂಕ ರಹಿತವಾಗಿ ಸೇವೆಯಿಂದ ನಿವೃತ್ತರಾಗುತ್ತಿರುವ ಹುಕ್ರಪ್ಪರಂತ ನೂರಾರು ಶಿಕ್ಷಕರು ಇಂದು ಸಮಾಜಕ್ಕೆ ಶಿಕ್ಷಣ ಧಾರೆ ಎರೆಯುವ ಮೂಲಕ ಸಮಾಜದ ಪ್ರೀತಿಗೆ ಪಾತ್ರರಾಗುತ್ತಿದ್ದಾರೆ. ಕಾವು ಶಾಲೆಯಲ್ಲಿ ಅತೀ ಹೆಚ್ಚು ಮಕ್ಕಳನ್ನು ಹೊಂದಿರುವುದು ಅಭಿನಂದನಾರ್ಹ ವಿಚಾರವಾಗಿದ್ದು ಶಾಲೆಯ ಜೊತೆ ಪೋಷಕರು, ಗ್ರಾಮಸ್ಥರು ನಿಕಟ ಸಂಪರ್ಕ ಹೊಂದಿರುವುದೇ ಇದಕ್ಕೆಲ್ಲಾ ಕಾರಣವಾಗಿದೆ ಎಂದು ಹೇಳಿದರು.

ಬೆದ್ರಾಡಿ ಪದ್ಮನಾಭರ ಕಾರಣಕ್ಕೆ ನಾನು ಶಿಕ್ಷಕನಾದೆ: ಹುಕ್ರಪ್ಪ ನಾಯ್ಕ
ಅಭಿನಂದನೆ ಸ್ವೀಕರಿಸಿ ಮಾತನಡಿದ ಕಾವು ಶಾಲಾ ನಿವೃತ್ತ ಮುಖ್ಯಗುರು ಹುಕ್ರಪ್ಪ ನಾಯ್ಕ ರವರು ಮಾತನಾಡಿ ಏಳನೇ ತರಗತಿ ಕಲಿತು ಶಾಲೆ ನಿಲ್ಲಿಸಿದ್ದ ನನ್ನನ್ನು ಬೆದ್ರಾಡಿ ಪದ್ಮನಾಭ ರೈ ಯವರು ಪ್ರೌಢ ಶಿಕ್ಷಣಕ್ಕೆ ಆ ಬಳಿಕ ಶಿಕ್ಷಕ ವೃತ್ತಿ ಕೋರ್ಸು ಮಾಡುವಂತೆ ಸಲಹೆ, ಸಹಕಾರವನ್ನು ಕೊಟ್ಟಿದ್ದರು. ಅವರ ಕಾರಣಕ್ಕೆ ನಾನು ಇಂದು ೩೯ ಶಿಕ್ಷಕ ವೃತ್ತಿ ಮಾಡಿ ನಿವೃತ್ತನಾಗುತ್ತಿದ್ದೇನೆ. ಬಡತನ , ಜಾತಿ ಪದ್ದತಿ ಇದ್ದ ಅಂದಿನ ಕಾಲದಲ್ಲಿ ಶಿಕ್ಷಣ ಕಲಿಯವುದೇ ದೊಡ್ಡ ಸವಲಾಗಿತ್ತು. ಎಲ್ಲಾ ಸವಾಲುಗಳನ್ನು ಮೆಟ್ಟಿನಿಂತು ಇಂದು ಈ ಸ್ಥಿತಿಗೆ ಬಂದಿದ್ದೇನೆ ಎಂದು ಹೇಳಿ ತನ್ನ ಹಳೆಯ ಕಾಲದ ಕಷ್ಟದ ಜೀವನವನ್ನು ಮೆಲುಕು ಹಾಕಿದರು.
ಎಲ್ಲರ ಸಹಕಾರದಿಂದ ಕಾವು ಶಾಲೆ ಉತ್ತರೋತ್ತರ ಅಭಿವೃದ್ದಿ ಹೊಂದಿದೆ, ಶಾಲೆಯನ್ನು ದತ್ತು ತೆಗೆದುಕೊಂಡ ಕಾವು ಹೇಮನಾಥ ಶೆಟ್ಟಿ, ಅನುದಾನ ಒದಗಿಸಿದ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ಪವನರಾಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್‌ಕುಂಜತ್ತಾಯ ಸೇರಿದಂತೆ ಕಾವು ಪರಿಸರದ ದಾನಿಗಳು, ಪೋಷಕರನ್ನು ಹುಕ್ರಪ್ಪರವರು ನೆನಪಿಸಿ ಕೃತಜ್ಞತೆ ಸಲ್ಲಿಸಿದರು. ಊರಿನವರ ಸಹಕಾರ ಇದ್ದಲ್ಲಿ ಯಾವುದೇ ಶಾಲೆಯನ್ನು ಅಭಿವೃದ್ದಿ ಮಾಡಲು ಸಾಧ್ಯ ಎಂಬುದನ್ನು ಕಾವಿನ ಜನ ಮಾಡಿತೋರಿಸಿದ್ದಾರೆ ಇದು ಎಲ್ಲರಿಗೂ ಮಾದರಿಯಾಗಿದೆ ಎಂದು ಹೇಳಿದರು. ಇದೇ ವೇಳೆ ಶಾಲೆಗೆ ಪೋಡಿಯಂ ಹಾಗೂ ಕುಕ್ಕರ್ ನ್ನು ಕೊಡುಗೆಯಾಗಿ ನೀಡಿದರು. ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್‌ಕುಂಜತ್ತಾಯರವರು ಶಾಲೆಗ ಬೇಕಾದ ಪಾತ್ರೆಗಳನ್ನು ಕೊಡುಗೆಯಾಗಿ ನೀಡಿದರು.

ಕಾವು ಶಾಲೆ ಎಲ್ಲರ ಶಾಲೆಯಾಗಿದೆ: ಅನಿತಾ ಹೇಮನಾಥ ಶೆಟ್ಟಿ
ಕಾವು ಶಾಲೆ ಎಲ್ಲರ ಶಾಲೆ ಎಂಬಂತಾಗಿರುವುದೇ ಇಷ್ಟೊಂದು ಮಟ್ಟದಲ್ಲಿ ಅಭಿವೃದ್ದಿಹೊಂದಲು ಕಾರಣವಾಗಿದೆ. ಶಿಕ್ಷಕರ ಜೊತೆ ಪೋಷಕರ ಸಂಪರ್ಕ, ಶಾಲೆಯಲ್ಲಿ ಮೂಲಭೂತ ಸೌಕರ್ಯದ ಕೊರತೆ ಇಲ್ಲದೇ ಇರುವುದು, ಗುಣಮಟ್ಟದ ಶಿಕ್ಷಣ ಇವೆಲ್ಲವೂ ಇಂದು ಶಾಲೆಯನ್ನು ಎತ್ತರಕ್ಕೆ ತಂದು ನಿಲ್ಲಿಸಿದೆ. ಶಿಕ್ಷಕರ ಒಗ್ಗಟ್ಟು, ಪರಿಶ್ರಮ ಕೂಡಾ ಇದರ ಹಿಂದೆ ಕೆಲಸ ಮಾಡಿದೆ. ಶಾಲೆಯ ಬೆಳವಣಿಗೆಗೆ ಕಾರಣರಾದ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ಜಿಪಂ ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಹೇಳಿದರು.

ಶಾಲೆಗೆ ಇನ್ನೂ ನೆರವು ನೀಡುವೆವು: ಪಾವನರಾಮ
ಪುತ್ತೂರು ಕಾವು ಲಯನ್ಸ್ ಕ್ಲಬ್ ಅದ್ಯಕ್ಷ ಪಾವನರಾಮ ಮಾತನಾಡಿ ಕಾವು ಶಾಲೆಯಲ್ಲಿ ಲಯನ್ಸ್ ವತಿಯಿಂದ ಸ್ಮಾರ್ಟ್ ಕ್ಲಾಸ್ ಆರಂಭ ಮಡಿ ಅದರಲ್ಲಿ ಜಯ ಸಾಧಿಸಿದ್ದೇವೆ. ಶಾಲೆಗೆ ಅಗತ್ಯವಾಗಿ ಬೇಕಾದ ಪರಿಕರಗಳನ್ನು ಲಯನ್ಸ್ ವತಿಯಿಂದ ನೀಡಲಾಗಿದೆ. ಮಕ್ಕಳ ಕಲಿಕಾ ಹಿತ ದೃಷ್ಟಿಯಿಂದ ನಾವು ಶಾಲೆಗೆ ಇನ್ನೂ ನೆರವು ನೀಡಲು ಸಿದ್ದರಿದ್ದೇವೆ ಎಂದು ಹೇಳಿದರು. ಲಯನ್ಸ್ ವಿತಿಯಿಂದ ಕಾವಿನಲ್ಲಿ ಲ್ಯಾಬೋರೇಟರಿ ಮತ್ತು ಚಿಕಿತ್ಸಾ ಸೌಲಭ್ಯವನ್ನು ಕಲ್ಪಿಸಲಾಗಿದೆ. ವಾರದಲ್ಲಿ ಎರಡು ದಿನ ಡಾ. ರಘುಅವರಿಂದ ಉಚಿತ ಚಿಕಿತ್ಸೆಯನ್ನು ನೀಡುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರ ಮೆಚ್ಚಿನ ಶಾಲೆ: ಸಾಂತ್ಯ
ನೆಟ್ಟಣಿಗೆ ಮುಡ್ನೂರು ಗ್ರಾಪಂ ಅಧ್ಯಕ್ಷ ರಮೇಶ್ ರೈ ಸಾಂತ್ಯ ಮಾತನಾಡಿ ಕಾವು ಸರಕಾರಿ ಶಾಲೆ ಗ್ರಾಮಸ್ಥರ ಮೆಚ್ಚಿನ ಶಾಲೆಯಾಗಿದೆ. ಇಲ್ಲಿನ ಶಿಕ್ಷಕರು, ಶಾಲೆಯ ಪೋಷಕರು, ದಾನಿಗಳು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸುವ ಕಾರಣ ಇಂದು ಕಾವು ಶಾಲೆ ಎಲ್ಲರಿಗೂ ಮದರಿ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ದಿಗೊಂಡು ಗ್ರಾಮದ ಬಡವರ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವಂತಾಗಬೇಕು ಎಂದು ಹೇಳಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ರಾಮಣ್ಣ ರೈ ಸಂಘದ ಪರವಾಗಿ ಶಿಕ್ಷಕ ಹುಕ್ರಪ್ಪ ಅವರನ್ನು ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು.

ಪೂರ್ಣ ಸಹಕಾರ: ಸೌಮ್ಯ ಬಾಲಸುಬ್ರಹ್ಮಣ್ಯ
ಕಾವು ಶಾಲೆಯಲ್ಲಿ ನಡೆಯುವ ಪ್ರತೀಯೊಂದು ಚಟುವಟಿಕೆಗೆ ಹಾಗೂ ಶಾಲೆಯ ಅಭಿವೃದ್ದಿ ವಿಚಾರದಲ್ಲಿ ಅರಿಯಡ್ಕ ಗ್ರಾಪಂ ಸಂಪೂರ್ಣ ಸಹಕಾರವನ್ನು ನೀಡಲಿದೆ. ನಿವೃತ್ತರಾಗುತ್ತಿರುವ ಮುಖ್ಯ ಶಿಕ್ಷಕರಾದ ಹುಕ್ರಪ್ಪ ನಾಯ್ಕ ಅವರಿಗೆ ಗ್ರಾಮಸ್ಥರ ಪರವಾಗಿ ಅಭಿನಂದನೆಯನ್ನು ಸಲ್ಲಿಸುವುದಾಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರಿಯಡ್ಕ ಗ್ರಾಪಂ ಅಧ್ಯಕ್ಷೆ ಸೌಮ್ಯ ಬಾಲಸುಬ್ರಹ್ಮಣ್ಯ ಹೇಳಿದರು.

ಸನ್ಮಾನ
ನಿವೃತ್ತರಾದ ಮುಖ್ಯ ಶಿಕ್ಷಕ ಹುಕ್ರಪ್ಪ ನಾಯ್ಕ ಅವರನ್ನು ಶಾಲೆಯ ಪರವಾಗಿ, ಎಸ್‌ಡಿಎಂಸಿ ವತಿಯಿಂದ, ಹಳೆ ವಿದ್ಯಾರ್ಥಿ ಸಂಘ, ಶಾಲಾ ಶಿಕ್ಷಕರಿಂದ, ವಿದ್ಯಾರ್ಥಿಗಳು ಸನ್ಮಾನ ಮಾಡಿದರು. ಶಾಲು ಹೊದಿಸಿ, ಸ್ಮರಣಿಕೆ ನೀಡಿ ಹುಕ್ರಪ್ಪ ನಾಯ್ಕ ಬಿ ಹಾಗೂ ಅವರ ಪತ್ನಿ ಪೇರಲ್ತಡ್ಕ ಶಾಲೆಯ ಮುಖ್ಯ ಶಿಕ್ಷಕಿ ಜಾನಕಿಯವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಶಾಲೆಯ ಅಭಿವೃದ್ದಿಗೆ ಸಹಕಾರ ನೀಡುತ್ತಿರುವ ಗ್ರಾಪಂ ಸದಸ್ಯ ಕಾವು ದಿವ್ಯನಾಥ ಶೆಟ್ಟಿ ದಂಪತಿಗಳನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಶಾಲೆಯಲ್ಲಿ ವಯೋ ನಿವೃತ್ತಿಹೊಂದಿದ ಅಕ್ಷರದಾಸೋಹ ಸಿಬಂದಿಗಳಾದ ಸರಸ್ವತಿ ಹಾಗೂ ಲೀಲಾವತಿಯವರನ್ನು ಶಾಲಾ ವತಿಯಿಂದ ಸನ್ಮಾನಿಸಲಾಯಿತು
.

ವೇದಿಕೆಯಲ್ಲಿ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಯತೀಶ್‌ಪೂಜಾರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರೀಶ್‌ಕುಂಜತ್ತಾಯ, ಅರಿಯಡ್ಕ ಗ್ರಾಪಂ ಸದಸ್ಯರುಗಳಾದ ಕಾವು ದಿವ್ಯನಾಥ ಶೆಟ್ಟಿ, ಅಬ್ದುಲ್‌ರಹಿಮಾನ್, ಪ್ರವೀಣ, ಸಲ್ಮಾ ಉಪಸ್ಥಿತರಿದ್ದರು.

ಕಾವು ಶಾಲಾ ಪ್ರಭಾರ ಮುಖ್ಯಗುರುಗಳಾದ ಸವಿತಾಕುಮಾರಿ ಸ್ವಾಗತಿಸಿದರು. ಶಿಕ್ಷಕ ಸಂತೋಷ್ ಎಂ ಎಸ್ ಅಭಿನಂದನಾ ಪತ್ರ ವಆಚಿಸಿದರು. ಶಿಕ್ಷಕ ಭಾಸ್ಕರ ಎನ್ ರವರು ಶಾಲಾ ಮುಖ್ಯಗುರುಗಳ ನಡುವಿನ ಶಿಕ್ಷಕರ ಒಡನಾಟದ ಬಗ್ಗೆ ವಿವರಿಸಿದರು. ಶಿಕ್ಷಕಿ ಸುಮಿತ್ರ ವಂದಿಸಿದರು, ಶಿಕ್ಷಕಿ ಪ್ರತಿಮಾ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕಿಯರಾದ ಅನಿತಾಡಿಸೋಜಾ, ವಸಂತಿ ಕೆ, ಶಮೀಮಾ, ಮಲ್ಲಿಕಾ ರವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಸಭಾ ಕಾರ್ಯಕ್ರಮದ ಬಳಿಕ ಕಾರ್ಕಳ ಜೇಸಿಸ್ ಆಂಗ್ಲ ಮಾದ್ಯಮ ಶಾಲೆಯ ಶಿಕ್ಷಕಿ ವಂದನಾ ರೈ ಅವರಿಂದ ಮಾಹಿತಿ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here