ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ-ಹಲವೆಡೆ ಹಾನಿ ಮನೆ ಕುಸಿದು ಇಬ್ಬರು ಮಕ್ಕಳು ಮಣ್ಣುಪಾಲು

0

 • ತುಂಬಿ ಹರಿಯುತ್ತಿರುವ ದರ್ಪಣ ತೀರ್ಥ ನದಿ
 • ದೇಗುಲಕ್ಕೂ ನುಗ್ಗಿರುವ ನೀರು
 • ಎಸ್.ಡಿ.ಆರ್.ಎಫ್., ಎನ್ .ಡಿ.ಆರ್.ಎಫ್. ತಂಡಗಳು ದೌಡು
 • ರಸ್ತೆ ಬ್ಲಾಕ್ ಆಗಿ ಪರಿಹಾರ ಕಾರ್ಯಕ್ಕೆ ಅಡ್ಡಿ
 • ದೇಗುಲ ಭೇಟಿ ಮುಂದೂಡಲು ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ ಸೂಚನೆ

ಪುತ್ತೂರು:ಕಡಬ ತಾಲೂಕು ಸುಬ್ರಹ್ಮಣ್ಯದಲ್ಲಿ ನಿರಂತರ ಧಾರಾಕಾರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ.ಕುಮಾರಧಾರದಲ್ಲಿ ಗುಡ್ಡ ಜರಿದು ಮನೆ ಕುಸಿತಗೊಂಡು ಮಕ್ಕಳಿಬ್ಬರು ಮಣ್ಣುಪಾಲಾಗಿರುವ ದಾರುಣ ಘಟನೆ ನಡೆದಿದೆ.ಭಾರೀ ಮಳೆಯಿಂದಾಗಿ ರಸ್ತೆಗಳು ಬ್ಲಾಕ್ ಆಗಿ ಪರಿಹಾರ ಕಾರ್ಯಗಳಿಗೆ ಅಡ್ಡಿಯಾಗಿದೆ.ಮಳೆಯಿಂದಾಗಿ ಸುಬ್ರಹ್ಮಣ್ಯ ದರ್ಪಣತೀರ್ಥ ನದಿಯು ತುಂಬಿ ಹರಿಯುತ್ತಿದ್ದು ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿದೆ.ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠಕ್ಕೂ ನೀರು ನುಗ್ಗಿರುವುದಾಗಿ ವರದಿಯಾಗಿದೆ.ಹಲವು ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವು ಪ್ರವೇಶಿಸಿದೆ.
ಬೆಳಿಗ್ಗಿನಿಂದಲೇ ಇಲ್ಲಿ ಮಳೆ ಸುರಿಯಲಾರಂಭಿಸಿತ್ತು.ಭಾರೀ ಮಳೆಯಿಂದಾಗಿ ಎಲ್ಲೆಲ್ಲೂ ನೆರೆ ಕಂಡು ಬಂದಿದೆ.ಕುಕ್ಕೆ ಸುಬ್ರಹ್ಮಣ್ಯ ದೇವಳದ ಸಮೀಪ ಇರುವ ದರ್ಪಣ ತೀರ್ಥ ನದಿಯ ಸ್ನಾನ ಘಟ್ಟವೂ ಮುಳುಗಡೆಗೊಂಡಿದೆ.ದರ್ಪಣತೀರ್ಥ ನದಿಯು ತುಂಬಿ ಹರಿದ ಕಾರಣ ರುದ್ರಪಾದ ಸೇತುವೆ ಜಲಾವೃತಗೊಂಡಿದೆ.ದರ್ಪಣ ತೀರ್ಥದಲ್ಲಿನ ಪ್ರವಾಹದಿಂದ ಸುಬ್ರಹ್ಮಣ್ಯ-ಪಂಜ ರಾಜ್ಯ ಸಂಪರ್ಕ ರಸ್ತೆಯ ಸೇತುವೆಯು ಮುಳುಗಡೆ ಭೀತಿ ಎದುರಿಸುತ್ತಿದೆ.ಸುಬ್ರಹ್ಮಣ್ಯದಲ್ಲಿ ಸುರಿಯುತ್ತಿರುವ ಮಹಾಮಳೆಯಿಂದ ತುಂಬಿ ಹರಿಯುತ್ತಿರುವ ದರ್ಪಣ ತೀರ್ಥದಿಂದ ನದಿ ತಟದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿದೆ.

 • ಮನೆ ಕುಸಿದು ಮಕ್ಕಳು ಮಣ್ಣುಪಾಲು: ಸುಬ್ರಹ್ಮಣ್ಯದಲ್ಲಿ ಮಳೆಯ ನಡುವೆಯೇ ಭಾರೀ ದುರಂತವೊಂದು ಸಂಭವಿಸಿದೆ.ಕುಮಾರಧಾರ ಬಳಿಯಲ್ಲಿ ಗುಡ್ಡ ಜರಿದು ಮನೆಯೊಂದು ಕುಸಿದು ಬಿದ್ದಿದ್ದು ಮನೆಯೊಳಗಿನ ಇಬ್ಬರು ಮಕ್ಕಳು ಮಣ್ಣಲ್ಲಿ ಹೂತು ಹೋಗಿದ್ದಾರೆ.ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದೆ.
  ಮೂಲತಹ ಪಂಜದ ಕುಸುಮಾಧರ ಕರಿಮಜಲು ಎಂಬವರ ಮನೆ ಕುಮಾರಧಾರ ಸಮೀಪದಲ್ಲಿದ್ದು, ಮನೆ ಕುಸಿತಗೊಂಡಿದ್ದು ಅವರ ಇಬ್ಬರು ಹೆಣ್ಣುಮಕ್ಕಳು ಮಣ್ಣು ಪಾಲಾಗಿದ್ದಾರೆ.ಕುಸುಮಾಧರ ಅವರಿಗೆ ಪರ್ವತಮಕ್ಕಿಯಲ್ಲಿ ಅಂಗಡಿ ಇದ್ದು ಅವರು ಅಂಗಡಿಯಲ್ಲಿದ್ದರು.ಪತ್ನಿ ಮತ್ತು ಸಣ್ಣ ಮಗಳು ಕೂಡಾ ಹೊರಗಿದ್ದರು.ಇಬ್ಬರು ಹೆಣ್ಣುಮಕ್ಕಳು ಮನೆಯಲ್ಲಿದ್ದ ವೇಳೆ ಮನೆ ಕುಸಿದು ಅವರ ಮೇಲೆ ಬಿದ್ದಿದ್ದರಿಂದ ಅವರು ಮಣ್ಣಿನಲ್ಲಿ ಹೂತು ಹೋಗಿದ್ದಾರೆ ಎಂದು ತಿಳಿದು ಬಂದಿದೆ.ಜೆಸಿಬಿ ತರಿಸಿ ದೇಹಗಳನ್ನು ಹೊರತೆಗೆಯುವ ಪ್ರಯತ್ನ ನಡೆಯುತ್ತಿದೆ.
 • ಪರಿಹಾರ ಕಾರ್ಯಕ್ಕೂ ಅಡ್ಡಿ: ಕುಮಾರಧಾರಾದಿಂದ ಪಂಜ ಕಡೆಗೆ ಹೋಗುವ ರಸ್ತೆ ನೆರೆ ನೀರಲ್ಲಿ ಪೂರ್ಣ ಮುಳುಗಿರುವುದರಿಂದ ಮತ್ತು ಮರ ಕೂಡ ಬಿದ್ದಿರುವುದರಿಂದ ರಸ್ತೆ ಬಂದ್ ಆಗಿದ್ದು ಪರಿಹಾರ ಕಾರ್ಯಕ್ಕೆ ತೊಂದರೆ ಉಂಟಾಗಿದೆ.

 • ಕಲ್ಲಾಜೆ ಸೇತುವೆ ಜಲಾವೃತ: ಭಾರೀ ಮಳೆಗೆ ಸುಳ್ಯ- ಸುಬ್ರಹ್ಮಣ್ಯ ಸಂಪರ್ಕಿಸುವ ಕಲ್ಲಾಜೆ ಸೇತುವೆಯು ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿದೆ.ಕಲ್ಲಾಜೆ ಹೊಳೆಯಲ್ಲಿ ಭಾರೀ ಪ್ರವಾಹ ಹರಿದು ಬಂದು ಸೇತುವೆ ಮುಳುಗಿತ್ತು.ಇದರಿಂದಾಗಿ ಕಲ್ಲಾಜೆ- ಕುಜುಂಬಾರು ಸಂಪರ್ಕ ರಸ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.ಕಲ್ಮಕಾರಿಗೂ ಕೂಡಲೇ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ತಂಡಗಳನ್ನು ಕಳುಹಿಸಲು ಸಚಿವರು ಸೂಚಿಸಿದ್ದಾರೆ.
 • ರಸ್ತೆಯಲ್ಲಿ ನೀರು ನಿಂತು ಬಾಕಿಯಾದ ಜನ: ಕೊಲ್ಲಮೊಗ್ರು, ಕಲ್ಮಕಾರು ಭಾಗದಲ್ಲಿ ಮೇಘ ಸ್ಪೋಟದಿಂದ ಸುರಿದ ರಣಭೀಕರ ಮಳೆಯಿಂದಾಗಿ ಹರಿಹರ ಪೇಟೆ ಬಳಿ ನೆರೆ ನೀರು ರಸ್ತೆಗೆ ನುಗ್ಗಿ ರಸ್ತೆ ಬಂದ್ ಆಗಿದೆ.ಸುಮಾರು ಐವತ್ತಕ್ಕೂ ಅಧಿಕ ಮಂದಿ ಇದರಿಂದಾಗಿ ಕೊಲ್ಲಮೊಗ್ರು ಹೋಗಲಾರದೆ ಹರಿಹರದಲ್ಲಿಯೇ ಬಾಕಿಯಾಗಿದ್ದಾರೆ.ಅವರಿಗೆ ಹರಿಹರ ದೇಗುಲದಲ್ಲಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
 • ಕ್ಷೇತ್ರ ಸಂದರ್ಶನ ಮುಂದೂಡಲು ಸಚಿವ ಸುನಿಲ್ ಕುಮಾರ್,ಡಿಸಿ ಮನವಿ : ದ.ಕ ಜಿಲ್ಲೆಯ ವಿವಿಧ ಭಾಗಗಳಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಕಲ್ಮಕಾರು, ಕೊಲ್ಲಮೊಗ್ರು,ಹರಿಹರ,ಬಾಳುಗೋಡು ಆಸುಪಾಸಿನ ಕಡೆಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ.ಈ ಭಾಗದಲ್ಲಿ ಮುಂಜಾಗ್ರತಾ ಕ್ರಮವಹಿಸಲು ಎಸ್‌ಡಿಆರ್‌ಎಫ್ ಹಾಗೂ ಎನ್‌ಡಿಆರ್‌ಎಫ್ ತಂಡವನ್ನು ಆ ಭಾಗಕ್ಕೆ ಈಗಾಗಲೇ ಕಳುಹಿಸಿಕೊಡಲಾಗುತ್ತಿದೆ.ಸಂಬಂಧಿಸಿದ ಅಧಿಕಾರಿಗಳಿಗೂ ಕಟ್ಟೆಚ್ಚರ ವಹಿಸಿ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಲಾಗಿದೆ.ನೆರೆ ಸಂದರ್ಭ ಸಾರ್ವಜನಿಕರು ಸಹಕರಿಸಿ, ಸುರಕ್ಷತೆ ಕಡೆ ಹೆಚ್ಚಿನ ಗಮನಹರಿಸಬೇಕು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರು ಒಂದೆರಡು ದಿನಗಳು ಕಾದು ಮಳೆ ಕಡಿಮೆಯಾದ ಬಳಿಕ ಕ್ಷೇತ್ರ ಸಂದರ್ಶಿಸುವಂತೆ ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.ದೇಗುಲ ಭೇಟಿ ಮುಂದೂಡುವಂತೆ ಜಿಲ್ಲಾಧಿಕಾರಿಗಳೂ ಸೂಚನೆ ನೀಡಿದ್ದಾರೆ.

 

LEAVE A REPLY

Please enter your comment!
Please enter your name here