ಸುದ್ದಿ-ಮಾಧ್ಯಮದ ಮೊದಲ ಆದ್ಯತೆ ಪ್ರಜೆಗಳಿಗೆ ಸ್ವತಂತ್ರವಾಗಿರಲು ಮತ್ತು ಸ್ವಯಂ ಆಡಳಿತ ನಡೆಸಲು ಬೇಕಾದಂತಹ ಮಾಹಿತಿ ಕೊಡುವುದಾಗಿದೆ

0

ಪ್ರಪಂಚದಲ್ಲಿ ಎರಡು ಪ್ರಮುಖ ಸಾರ್ವಜನಿಕ ಸಂಸ್ಥೆಗಳಿವೆ. ಇವೆರಡೂ ಸಂಸ್ಥೆಗಳು ಯಾವುದೇ ವ್ಯಕ್ತಿಯ ಸಂಸ್ಥೆಯ, ದೇಶದ ಯಾವುದೇ ಸಿದ್ಧಾಂತ, ರಾಜಕೀಯ ಪಕ್ಷ ಇಲ್ಲವೇ ಇಂಟರ್‌ನ್ಯಾಷನಲ್ ಕಾರ್ಪೋರೇಟ್ ಕಂಪೆನಿಯ ಕೊಡುಗೆಗಳಲ್ಲ ಜನಜೀವನದಲ್ಲಿ ಅತಿಪ್ರಭಾವಿ ಪಾತ್ರ ವಹಿಸುವ ಇವೆರಡು ಸಂಸ್ಥೆಗಳು ಸೃಷ್ಠಿಯಾಗುವುದು ಜನಸಮುದಾಯಗಳ ನಡುವೆ ಮತ್ತು ಜನತೆಗೋಸ್ಕರ. ಇವುಗಳು ಇನ್ನಾವುದೂ ಅಲ್ಲ. ಪತ್ರಿಕೋದ್ಯಮ ಮತ್ತು ಪ್ರಜಾಪ್ರಭುತ್ವ ನಿರೂಪಿತಗೊಂಡರು ಮಾನವ ಸಮುದಾಯಗಳ ಸಬಲೀಕರಣಕ್ಕೆ ಮತ್ತು ನಾಗರೀಕತೆಯ ಬೆಳವಣಿಗೆಗಾಗಿ ಹಾಗೂ ಸ್ವಯಂ ಆಡಳಿತ, ಸಂರಕ್ಷಣೆ, ಸುಧಾರಣೆಗಾಗಿ ಎಂಬುದನ್ನು ಇವೆರಡೂ ಪವಿತ್ರ ಸಮುದಾಯ ಸಂಸ್ಥೆಗಳ 350 ವರ್ಷಗಳನ್ನು ಮೀರಿದ ಇತಿಹಾಸ ಹೇಳುತ್ತದೆ.

ಮುಕ್ತ ಮಾಹಿತಿ ಸಂವಹನದಿಂದ ಶಕ್ತಿಶಾಲಿಗಳಾದ ಲಕ್ಷಾಂತರ ಜನತೆ ಸ್ವಯಂ ಆಡಳಿತದ ಹೊಸ ಸರ್ಕಾರದ ರಚನೆಯಲ್ಲಿ ನೇರವಾಗಿ ಪಾಲುಗೊಳ್ಳುತ್ತಾರೆ. ಹಾಗು ತಮ್ಮ ತಮ್ಮ ರಾಜ್ಯಗಳ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬದುಕನ್ನು ಹೊಸ ನೀತಿ ನಿರೂಪಣೆಯನ್ನೂ ಮಾಡಿಕೊಳ್ಳುತ್ತಾರೆ. ಅದನ್ನು ಸಮರ್ಥವಾಗಿ ಮುನ್ನಡೆಸಲು ಬೇಕಾದಂತಹ ಮುಕ್ತ ಚಿಂತನೆ, ಮಾಹಿತಿ ವಿನಿಮಯಕ್ಕಾಗಿ ಅವರು ಸತ್ಯಪರ, ಯಾವುದೇ ರೀತಿಯಲ್ಲಿ ಸುದ್ದಿ ತಿವುಚದೆ, ನಿರಂತರವಾಗಿ ಪೂರೈಸುವ ಪತ್ರಿಕೋದ್ಯಮವನ್ನು ನಿರೀಕ್ಷಿಸುತ್ತಾರೆ. ಅದಕ್ಕಾಗಿ ಕಾಲಕಾಲಕ್ಕೆ ಬೇಕಾದಂತಹ ಒತ್ತಡವನ್ನೂ ತರುತ್ತಿರುತ್ತಾರೆ.

ಆದರೆ, ನಾವು ಸಾರ್ವಜನಿಕ ಸೇವೆ ಮಾಡುತ್ತಿದ್ದೇವೆ’ ಎಂಬ ಸರಳ ಪತ್ರಿಕ್ರಿಯೆಯಿಂದ ಸಮಾಧಾನವಾಗದಂತಹ ಪರಿಸ್ಥಿತಿಗೆ ಜನಸಾಮಾನ್ಯರು ಬಂದು ತಲುಪಿದ್ದಾರೆ. ಈಗೀಗಲಂತೂ, ಹೊಸ ಸಂವಹನ ತಂತ್ರಜ್ಞಾನದ ಲಭ್ಯತೆಯಿಂದಾಗಿ ಒಂದು ಮೋಡೆಮ್ ಹಾಗೂ ಕಂಪ್ಯೂಟರ್ ಇಟ್ಟುಕೊಂಡು ನಾವೂ ಪತ್ರಿಕೋದ್ಯಮ ಮಾಡಿ ಸಮಾಜಸೇವೆ ನಡೆಸುತ್ತಿದ್ದೇವೆ’ ಎನ್ನುವವರೂ ಸಿಕ್ಕುತ್ತಲಿರುತ್ತಾರೆ. ಜೊತೆಜೊತೆಗೆಯೇ, ಪ್ರಜಾಪ್ರಭುತ್ವದ ಬಗ್ಗೆ ಮೂಡಿರುವಂತಹುದೇ ಅಸಮಾಧಾನ ಜನರಲ್ಲಿ ಪತ್ರಿಕೋದ್ಯಮದ ಬಗ್ಗೆಯೂ ಮೂಡಿದೆ ಎಂಬುದನ್ನು ತಿಳಿಯಲು ಯಾರಿಂದಲೂ ಕವಡೆ ಹಾಕಿಸಬೇಕಿಲ್ಲ, ಕಣಿಯನ್ನು ಕೇಳಬೇಕಿಲ್ಲ.

ಅದಕ್ಕೆ ಕಾರಣವಿದೆ, ಹೊಸ ತಂತ್ರಜ್ಞಾನವು ಹೊಸ ಪತ್ರಿಕೋದ್ಯಮ ಆರ್ಥಿಕ ಸಂಘಟನೆಯನ್ನೂ ಸೃಷ್ಟಿಮಾಡಿದೆ. ಅದರೊಳಗೆ ಪತ್ರಿಕೋದ್ಯಮದ ಸಾಮಾನ್ಯ ತತ್ವಗಳು, ನೀತಿ ನಿರೂಪಣೆಗಳೂ ಎಲ್ಲ ಎಳೆದಾಡಲ್ಪಡುತ್ತಿವೆ. ಪುನರ್ ರೂಪಿತಗೊಳ್ಳುತ್ತಿವೆ. ಕೆಲವೊಮ್ಮ ತರ್ಪಣ ಬಿಡಲ್ಪಡುತ್ತಿವೆ. ಒಟ್ಟಿನಲ್ಲಿ ತಂತ್ರಜ್ಞಾನ ಮತ್ತು ಜಾಗತೀಕರಣದ ವ್ಯಾಪಾರ ಎಂಬುದು ಪತ್ರಿಕೋದ್ಯಮದ ಸ್ವರೂಪವನ್ನೇ ಸ್ಫೋಟಿಸಿ ಹಾಕುತ್ತಿದೆ ಎಂಬುದೂ ನಿಜ. ಆದರೆ, ಯಾವತ್ತೂ ನಾವು ಒಂದು ವಿಚಾರವನ್ನು ಮರೆಯುವ ತಪ್ಪು ಮಾಡಬಾರದು. ಅದೇನೆಂದರೆ ಪತ್ರಿಕೋದ್ಯಮ ಉದ್ದೇಶ, ಗುರಿಗಳನ್ನು ನಿಗದಿ ಮಾಡುವುದು ತಂತ್ರಜ್ಞಾನವಲ್ಲ. ಅಥವಾ ಪತ್ರಿಕೋದ್ಯಮಿಗಳೂ ಅಲ್ಲ. ಇಲ್ಲವೇ, ಪತ್ರಿಕೋದ್ಯಮಿಗಳು ಬಳಸುವ ಕಾರ್ಯತಂತ್ರಗಳೂ ಅಲ್ಲ, ಪತ್ರಿಕೋದ್ಯಮದ ಸಿದ್ಧಾಂತ, ಉದ್ದೇಶಗಳು ಏನಿರಬೇಕು ಮತ್ತು ಹೇಗಿರಬೇಕು ಎಂದು ನಿರೂಪಿಸುವುದು ಇನ್ನೂ ಮೂಲಭೂತವಾದ ವಿಚಾರ- ಸುದ್ದಿ,ಮಾಹಿತಿಗಳು ಜನ ಬದುಕಿನ ಮೇಲೆ ಎಂತಹ ಪರಿಣಾಮ ಬೀರುತ್ತವೆ ಎಂಬ ಪರಮ ಸತ್ಯ.

ಪತ್ರಿಕೋದ್ಯಮದ ಮುಖ ಬದಲಾಗಿರಬಹುದು, ಸುದ್ದಿ ಮಾಹಿತಿಯನ್ನು ಜನರಿಗೆ ತಲುಪಿಸುವ ವಿಧಾನಗಳು ಬದಲಾಗಿರಬಹುದು. ಆದರೆ, ಅದರ ಸಿದ್ಧಾಂತ, ಉದ್ದೇಶಗಳು ಪತ್ರಿಕೋದ್ಯಮ ಎಂಬ ಪದ ಪ್ರಯೋಗವಾದ ದಿನದಿಂದ ಇದುವರೆಗೆ ಬದಲಾಗಿಲ್ಲ. ಬದಲಾಗಬಾರದು ಕೂಡ. ಅಲ್ಲಲ್ಲಿ ಏರುಪೇರುಗಳಾದರೂ ಪರಿಣಾಮಕಾರಿಯಾಗಿ ಕೆಲಸಮಾಡುತ್ತಿಲ್ಲವೆಂಬ ದೂರು, ಅಸಮಾಧಾನಗಳಿದ್ದರೂ, ಮೂಲ ಉದ್ದೇಶಕ್ಕೆ ಚ್ಯುತಿ ಇಲ್ಲದಂತೆ ಈ ದೇಶದಲ್ಲಿ ಮುನ್ನಡೆದಿದೆ ಎಂದೂ ಹೇಳಬಹುದು, ಸ್ಪೀಡ್, ಟೆಕ್ನಿಕ್ ಹಾಗೂ ಮಾಹಿತಿ ಡೆಲಿವರಿ ಮೆಕಾನಿಸಂನಲ್ಲಿ ಅದ್ಭುತ ಬದಲಾವಣೆಗಳ ಹೊರತಾಗಿಯೂ, ಸುದ್ದಿ-ಮಾಹಿತಿಯ ಕರ್ತವ್ಯದಿಂದ ಹೊರಹೊಮ್ಮುವ ಪತ್ರಿಕೋದ್ಯಮದ ಕಲ್ಪನೆ ಮತ್ತು ಶಾಸ್ತ್ರಗಳು ಈ ಬಗ್ಗೆ ಸ್ಪಷ್ಟವಾಗಿಯೇ ಉಳಿದಿವೆ: ಉಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯಲೇಬೇಕು.

ಸುದ್ದಿ-ಮಾಧ್ಯಮದ ಮೊದಲ ಆದ್ಯತೆ ಪ್ರಜೆಗಳಿಗೆ ಸ್ವತಂತ್ರವಾಗಿರಲು ಮತ್ತು ಸ್ವಯಂ ಆಡಳಿತ ನಡೆಸಲು ಬೇಕಾದಂತಹ ಮಾಹಿತಿ ಕೊಡುವುದಾಗಿದೆ. ಸಮುದಾಯಗಳನ್ನು ನಿರೂಪಿಸಿಕೊಳ್ಳಲು, ಪರಸ್ಪರ ಸಂಪರ್ಕ ಬೆಸೆಯಲು ಕೂಡಾ ಮಾಧ್ಯಮದ ಕೊಡುಗೆ ಇದೆ.

ಸಮಾಜದ ಧ್ಯೇಯೋದ್ದೇಶಗಳನ್ನು, ಕಾರ್ಯಸಾಧನೆಯನ್ನು ಮಸುಕಾಗದಂತೆ ನೋಡಿಕೊಳ್ಳುವುದರೊಂದಿಗೆ ನಾಯಕರುಗಳು, ಖಳನಾಯಕರುಗಳು ಯಾರೆಂದು ಸಮಾಜ ನಿರ್ವಂಚನೆಯಿಂದ ಗುರುತಿಸಿಕೊಳ್ಳುವ ಕೆಲಸಕ್ಕೂ ನೆರವಾಗುತ್ತಲಿರಬೇಕಾಗುತ್ತದೆ.

ಅದಕ್ಕೇ ಪ್ರಜಾಪ್ರಭುತ್ವದ ಕಾವಲುನಾಯಿ ಅಥವಾ ವಾಚ್ ಡಾಗ್, ಫೋರ್ತ್ : ಎಸ್ಟೇಟ್ ಇಲ್ಲವೇ ನಾಲ್ಕನೆಯ ಸ್ಥಂಭ ಎಂದೂ ( ಈಗ ಐದನೆಯ ಸ್ಥಂಭವಾಗಿ ಸಿವಿಲ್ ಸೊಸೈಟಿ ಪ್ರವೇಶ ಮಾಡಿರುವುದು ಹೊಸಬೆಳವಣಿಗೆ, ಗೌರವದ ಉಪಮೆಗಳು ಪತ್ರಿಕೋದ್ಯಮಕ್ಕೆ ಸಂದಿವೆ. ಪ್ರಜೆಗಳನ್ನು ಅಲ್ಪತೃಪ್ತಿಯಿಂದ ಕುಲುಕಿಸುವುದು, ಕಡೆಗಣಿಸಲ್ಪಟ್ಟವರ ಧ್ವನಿಯಾಗುವುದು ಇತ್ಯಾದಿ ಪತ್ರಿಕೋದ್ಯಮದ ಹೊಣೆಗಾರಿಕೆಯಲ್ಲಿ ಸೇರಿರುವುದು ಇದುವೇ ಕಾರಣಕ್ಕಾಗಿ. ಪತ್ರಿಕೋದ್ಯಮ ಉಗಮವಾದುದೇ ಜನರ ನಡುವಣ ಸಂಭಾಷಣೆಯಿಂದಾಗಿ ಹಾಗೂ ಹೊಸ ಹೊಸ ಮಾಧ್ಯಮಗಳು ಅವಿಷ್ಕಾರಗೊಂಡಂತೆಯೇ ಪತ್ರಿಕೋದ್ಯಮ ಅದನ್ನು ಬಳಸಿಕೊಳ್ಳುತ್ತಾ ಮುಂದುವರಿಯಿತು. ಇಂದು ಡಿಜಿಟಲ್ ತಂತ್ರಜ್ಞಾನದ ವಿರಾಟ್ ಅವತಾರದಿಂದಾಗಿ ಪತ್ರಿಕೋದ್ಯಮ ಮತ್ತೆ ಜನರ ನಡುವೆಯೇ, ಅಂದರೆ ಸಂತೆ ಮಾರ್ಕೆಟ್ಟಿನ ಸಂಭಾಷಣೆಯ ಹಂತಕ್ಕೇ ಬಂದು ನಿಂತಿದೆ ಎಂಬುದನ್ನು ಪರಿಗಣಿಸಲೇ ಬೇಕು. ಜೊತೆಗೆ ಇದರಿಂದಾಗಿ ಸತ್ಯ, ಅಸತ್ಯಗಳ ನಡುವಣ ವ್ಯತ್ಯಾಸವನ್ನು ಜನರಿಗೆ ತಿಳಿಸುವ ಸೂಕ್ಷ್ಮ, ಕ್ಲಿಷ್ಟ ಹೊಣೆಗಾರಿಕೆಯೂ ಪತ್ರಿಕೋದ್ಯಮದ ಹೆಗಲಿಗೇರಿದೆ.

ಆದರೆ, ದೀರ್ಘ ಕಾಲದಿಂದ ಬೆಳೆದು ಬಂದಿರುವ ಪತ್ರಿಕೋದ್ಯಮದ ಇಂತಹ ಮೌಲ್ಯಗಳನ್ನೆಲ್ಲ ತಿವುಚುವ ಪ್ರಯತ್ನಗಳು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗುತ್ತಿದೆ. ಅಮೇರಿಕಾದಲ್ಲಿ ಮೊದಲಾಯಿತು, ಈಗ ನಮ್ಮ ದೇಶದಲ್ಲಿಯೂ ಅದುವೇ ದರ್ಶನ ತೊಡಗಿದೆ. ಇನ್‌ಫಾರ್ಮೇಶನ್ ಕಂಪೆನೀಸ್ ಎಂಬ ಆರ್ಥಿಕ ಸಂಘಟನೆಯನ್ನು ತಂತ್ರಜ್ಞಾನ ಸೃಷ್ಟಿಸಿದುದೇ ಇದಕ್ಕೆ ಹೇತು, ಪತ್ರಿಕೋದ್ಯಮವನ್ನೇ ಹೊಟ್ಟೆಗಿಳಿಸಿ ಅರಗಿಸ ಹೊರಟಿವೆ ಈ ಸಂಸ್ಥೆಗಳು. ಒಂದು ಕಾಲಕ್ಕೆ ಸ್ವತಂತ್ರ, ಜನಪರ ಪತ್ರಿಕೋದ್ಯಮಕ್ಕೆ ಅಪಾಯವಿರುವುದು ಸರ್ಕಾರಿ ಸೆನ್ಸಾರ್‌ಶಿಪ್ ನಿಂದಾಗಿ ಎಂದು ಚಿಂತನೆಯಿತ್ತು. ಈಗ ಹೊಸ ಗಂಡಾಂತರಕಾರಿ ಬೆಳವಣಿಗೆಯೆಂದರೆ ಸ್ವತಂತ್ರ ಪತ್ರಿಕೋದ್ಯಮವು ವಾಣಿಜ್ಯಿಕ ಸಂವಹನ ಮತ್ತು ಅವುಗಳ ಸ್ವ-ಪ್ರತಿಷ್ಠೆ ಪ್ರವರ್ಧನೆಯೆಂಬ ದ್ರಾವಣದಲ್ಲಿ ಕರಗಿಹೋಗಿ ಬಿಟ್ಟಿತೇ ಎಂಬ ಸಾಧ್ಯತೆ ಚರಿತ್ರೆಯಲ್ಲಿ ಮೊದಲಬಾರಿಗೆ ಸರ್ಕಾರಗಳ ಕೈವಾಡ ಇಲ್ಲದೆಯೇ ಪತ್ರಿಕಾ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತತೆಗೆ ಧಕ್ಕೆ ಬಂದೀತೆನ್ನುವ ಪರಿಸ್ಥಿತಿಯ ಹೊಸಲಲ್ಲಿ ಉದ್ಯಮವೀಗ ಬಂದು ನಿಂತಿದೆ. ಇದರಿಂದ ಜನತಾ ಸಾರ್ವಭೌಮತೆ ಉಳಿಸಿಕೊಳ್ಳಲು ಬೇಕಾದ ಸತ್ಯ ಮಾಹಿತಿಯನ್ನು ಒದಗಿಸುವಂತಹ ಪತ್ರಿಕೋದ್ಯಮದ ಪವಿತ್ರ ಉzಶಕ್ಕೆ ಅಡಚಣೆ ಆಗದಿರುತ್ತದೆಯೇ ಎಂಬ ಅನುಮಾನಗಳು ಸಹಜ. ಸದಾ ನೆನಪಿನಲ್ಲಿಡಬೇಕಾದ ತತ್ವ ಏನೆಂದರೆ- ಸತ್ಯ ಮಾಹಿತಿಯೆಂಬ ದೀಪವನ್ನು ಜನತೆಯ ಮುಂದಿಟ್ಟರೆ, ಅದರ ಬೆಳಕಿನಲ್ಲಿ ತಮ್ಮ ದಾರಿ ಕಂಡುಕೊಳ್ಳುವ ಜಾಣತನ ಜನತೆಗೆ ಸಾಂಪ್ರದಾಯಿಕ ಬುದ್ಧಿಮತ್ತೆಯಿಂದ ಬಂದಿರುತ್ತದೆ ಎಂಬ ಸತ್ಯ.

ಪುತ್ತೂರು ತಾಲೂಕಿನ ಪಾಣಾಜೆಯ ದೈತೋಟ ಮನೆಯ ಈಶ್ವರ ದೈತೋಟರವರು ಅಭಿವೃದ್ಧಿ ಪತ್ರಿಕೋಧ್ಯಮದ ಬಗ್ಗೆ ಹಾಗೂ ಪ್ರಸಕ್ತ ಆಸಕ್ತಿಯ ವಿಷಯಗಳ ಬಗ್ಗೆ ಸುದ್ದಿ ಪತ್ರಿಕೆಗೆ ಲೇಖನ ಬರೆಯಲಿದ್ದಾರೆ.

 

ಡಾ| ಈಶ್ವರ ದೈತೋಟ

 

 

 

LEAVE A REPLY

Please enter your comment!
Please enter your name here