ಬ್ಲಾಕ್ ಕಾಂಗ್ರೆಸ್ ಸುದ್ದಿಗೋಷ್ಠಿ

0

  • ನಾಯಕರ ಉಗ್ರ ಭಾಷಣ, ಸವಾಲುಗಳೇ ಕಾರಣ-ಎಂ.ಬಿ ವಿಶ್ವನಾಥ ರೈ
  • ಪ್ರವೀಣ್ ಶವವಿಟ್ಟು ರಾಜಕಾರಣ ಮಾಡಲು ಬಿಜೆಪಿಯಿಂದ ಸುತ್ತು ಬಳಸಿ ಶವಯಾತ್ರೆ-ಅಮಲ

 

ಪುತ್ತೂರು:ದುಷ್ಕರ್ಮಿಗಳಿಂದ ಹತ್ಯೆಯಾದ ಬಿಜೆಪಿ ಯುವ ಮೋರ್ಛಾದ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪ್ರವೀಣ್ ನೆಟ್ಟಾರುರವರ ಶವವನ್ನು ಇಟ್ಟುಕೊಂಡು ರಾಜಕಾರಣ ಮಾಡುವ ಉದ್ದೇಶದಿಂದ ಬಿಜೆಪಿಯವರು ಸುತ್ತು ಬಳಸಿ ಶವಯಾತ್ರೆ ನಡೆಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮಲ ರಾಮಚಂದ್ರ ಆರೋಪಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರವೀಣ್ ನೆಟ್ಟಾರುರವರು ರಾತ್ರಿ ವೇಳೆ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ.ತಮ್ಮದೇ ಪಕ್ಷದ ಯುವ ನಾಯಕನನ್ನು ಕಳೆದುಕೊಂಡರೂ ಯಾವೊಬ್ಬ ಬಿಜೆಪಿ ನಾಯಕರು ಆಸ್ಪತ್ರೆಗೆ ಭೇಟಿ ನೀಡಿಲ್ಲ.ಪ್ರವೀಣ್ ಕುಟುಂಬಸ್ಥರು ಶವವನ್ನು ಆಸ್ಪತ್ರೆಯಿಂದ ಮನೆಗೆ ತೆಗೆದುಕೊಂಡುವ ಹೋಗುವ ಸಿದ್ದತೆಯಲ್ಲಿರುವಾಗ, ಇನ್ನೇನು ಕೆಲ ಹೊತ್ತಿನಲ್ಲಿ ಶಾಸಕರು ಬರುತ್ತಾರೆ.ಬಳಿಕ ಕೊಂಡುಹೋಗುವ ಎಂದು ಹೇಳಿದಾಗ ಮನೆಯವರು ಪ್ರತಿರೋಧ ವ್ಯಕ್ತಪಡಿಸಿದ್ದಾರೆ.ಇಷ್ಟೇ ಅಲ್ಲದೆ ಪ್ರವೀಣ್ ಮನೆಯವರು ಮೃತ ದೇಹದ ಅಂತಿಮ ಸಂಸ್ಕಾರ ಮಾಡುವ ತರಾತುರಿಯಲ್ಲಿದ್ದರೂ ಶವಯಾತ್ರೆಯನ್ನು ಸುತ್ತುಬಳಸಿ ಮಾಡಲಾಗಿದೆ.ಕುಂಬ್ರ ರಸ್ತೆಯ ಮೂಲಕ ಬೆಳ್ಳಾರೆಗೆ ತೆರಳಲು ಹತ್ತಿರದ ರಸ್ತೆಯಾಗಿದ್ದರೂ, ಕಾಣಿಯೂರು, ನಿಂತಿಕಲ್ಲು ಮಾರ್ಗವಾಗಿ ಮೃತ ಪ್ರವೀಣ್ ಶವಯಾತ್ರೆಯನ್ನು ನಡೆಸಿ, ಅಲ್ಲಲ್ಲಿ ಜನರನ್ನು ಸೇರಿಸಿಕೊಂಡು ಜನರಲ್ಲಿ ರೋಷದ ಭಾವನೆ ಮೂಡುವಂತೆ ಮಾಡಿದ್ದಾರೆ.ತಮ್ಮ ಪಕ್ಷದ ಕಾರ್ಯಕರ್ತ ಪ್ರವೀಣ್ ಮೇಲೆ ಪ್ರೀತಿಯಿರುತ್ತಿದ್ದರೆ ಘಟನೆಯಾದಾಗ ಅವರು ಎಲ್ಲೇ ಇದ್ದರೂ ತಕ್ಷಣವೇ ನಾಯಕರು ಆಗಮಿಸಬೇಕಿತ್ತು.ಆದರೆ ಅವರು ಬಂದಿಲ್ಲ.ಪ್ರವೀಣ್ ಸುಳ್ಯ ಕ್ಷೇತ್ರದವರಾಗಿದ್ದು ಕನಿಷ್ಠ ಅವರ ಮೃತದೇಹವನ್ನು ಬಿಜೆಪಿ ಕಚೇರಿಗಾದರೂ ಕೊಂಡುಹೋಗಿಲ್ಲ ಎಂದು ಅಮಲ ಆರೋಪಿಸಿದರು.

ಮದುವೆಗೆ ಹೋದ ಹಾಗೆ ಒಟ್ಟಿಗೆ ಬಂದಿದ್ದಾರೆ: ಶವ ಯಾತ್ರೆಯಲ್ಲಿಯೂ ಸಚಿವರು, ಸಂಸದರು, ಶಾಸಕರು ಭಾಗವಹಿಸದೇ, ಶವ ಬೆಳ್ಳಾರೆ ಆಗಮಿಸಿದ ಬಳಿಕ ಬರುತ್ತಾರೆ.ಅಲ್ಲಿ ಜನ ಸಾಗರವನ್ನೇ ಸೇರಿಸಿಕೊಂಡು ಜನರಿಗೆ ತಪ್ಪು ಮಾಹಿತಿ ನೀಡುವ ಉದ್ದೇಶ ಅವರಲ್ಲಿತ್ತು.ಸಚಿವರು, ಸಂಸದರು, ಶಾಸಕರು ಮದುವೆಗೆ ಹೋದ ಹಾಗೆ ಒಟ್ಟಿಗೆ ಬಂದಿದ್ದಾರೆ.ಜನ ಸಾಗರವನ್ನೇ ಸೇರಿಸಿ ಒಗ್ಗರಣೆ ನೀಡಿ, ಗಲಭೆ ಎಬ್ಬಿಸುವುದೇ ಇವರ ಉದ್ದೇಶವಾಗಿತ್ತು ಎಂದು ಅಮಲ ರಾಮಚಂದ್ರ ಆರೋಪಿಸಿದರು.

ಕಾರ್ಯಕರ್ತರಿಗೆ ಲಾಠಿಚಾರ್ಜ್ ಆದಾಗಲೂ ತಡೆಯದ ನಾಯಕರು: ಬಿಜೆಪಿಯ ಸಾವಿನ ರಾಜಕಾರಣದ ಹುನ್ನಾರ ಜನರಿಗೆ ಅರ್ಥವಾಗಿದೆ.ಹೀಗಾಗಿಯೇ ನಾಯಕರು ಬಂದಾಗ ಜನರ ಆಕ್ರೋಶದ ಕಟ್ಟೆ ಒಡೆದುಹೋಗಿದೆ.ಪಕ್ಷದ ರಾಜ್ಯಾಧ್ಯಕ್ಷರ ಕಾರಿನ ತಳ್ಳಾಟ ನಡೆದಿದೆ.ಧಿಕ್ಕಾರ, ತಳ್ಳಾಟಗಳು ಆಕ್ರೋಶಗಳು ನಡೆದಿದೆ. ಅಂದು ಬಿಜೆಪಿಯ ಹುನ್ನಾರ, ನಾಟಕಗಳ ಬಗ್ಗೆ ತಿಳಿಸಿದಾಗ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುತ್ತಿದ್ದ ಕಾರ್ಯಕರ್ತರಿಗೆ ಈಗ ತಡವಾಗಿ ಅರ್ಥವಾಗಿದೆ.ಕಾರ್ಯಕರ್ತರ ಮೇಲೆ ಈ ನಾಯಕರಿಗೆ ನಿಜವಾದ ಪ್ರೀತಿ, ಸಿದ್ದಾಂತದ ಮೇಲೆ ನಂಬಿಕೆಯಿರುತ್ತಿದ್ದರೆ ಅವರು ಕದಲುತ್ತಿರಲಿಲ್ಲ.ನಾಯಕರು ವೀರರು, ಧೀರರೇ ಆಗಿರುತ್ತಿದ್ದರೆ ಜನರ ಆರೋಪ, ಆಕ್ರೋಶಗಳನ್ನು ಸಹಿಸಿಕೊಂಡು ನಿಲ್ಲಬೇಕಿತ್ತು. ಸ್ಥಳಕ್ಕೆ ಬಂದ ನಾಯಕರು ಯುದ್ದದಲ್ಲಿ ಕೌರವ ಸೇನೆ ನೋಡಿ ಓಡಿ ಹೋದ ಉತ್ತರ ಕುಮಾರನಂತೆ ಅವರು ಬೆಳ್ಳಾರೆಯಿಂದ ಓಡಿಹೋಗಿದ್ದಾರೆ.ಸಚಿವರು, ಸಂಸದರು, ಶಾಸಕರನ್ನು ರಕ್ಷಣೆ ಮಾಡಲು ಅವರ ಸಮ್ಮುಖದಲ್ಲೇ ಪೊಲೀಸರು ತಮ್ಮದೇ ಪಕ್ಷದ ಕಾರ್ಯಕರ್ತರಿಗೆ ಲಾಠಿಚಾರ್ಜ್ ಮಾಡಿದಾಗಲೂ ಅದನ್ನು ತಡೆಯುವ ಸೌಜನ್ಯವನ್ನು ನಾಯಕರು ತೋರಿಲ್ಲ,ಬಿಜೆಪಿಯ ಡೋಂಗಿ ರಾಜಕಾರಣ ಕಾರ್ಯಕರ್ತರಿಗೆ ಈಗ ಮನದಟ್ಟಾಗಿದೆ ಎಂದು ಅಮಲ ಹೇಳಿದರು.

ಬೊಮ್ಮಾಯಿ ವರ್ಷಾಚರಣೆಗೆ ದೊಡ್ಡ ಗಿಫ್ಟ್: ರಾಜ್ಯದ ಮುಖ್ಯ ಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅಧಿಕಾರ ಸ್ವೀಕರಿಸಿ ಇಂದಿಗೆ ವರ್ಷ ಪೂರೈಸಿದ ಸಂದರ್ಭದಲ್ಲಿ ಇಲ್ಲಿನ ಕಾರ್ಯಕರ್ತರು ಇಡೀ ರಾಜ್ಯಕ್ಕೆ ದೊಡ್ಡ ಉಡುಗೊರೆ ನೀಡಿದ್ದಾರೆ. ಪ್ರಜ್ಞಾವಂತ ನಾಯಕರು ದಂಗು ಬಡಿಯವ ಹಾಗೆ ಮಾಡಿದ್ದಾರೆ.ದುಃಖ ಬರುವಂತೆ ಮಾಡಿದ್ದಾರೆ ಎಂದರು.

ಎಸ್‌ಡಿಪಿಐಕಾ ಸಾಥ್ ಬಿಜೆಪಿಕಾ ವಿಕಾಸ್: ಎಸ್‌ಡಿಪಿಐ ಹಾಗೂ ಬಿಜೆಪಿ ಎರಡು ಕೋಮುವಾದಿ ಪಕ್ಷಗಳು.ಬಿಜೆಪಿಯವರಿಗೆ ತಾಂಟಲು ಎಸ್‌ಡಿಪಿಐ ಬೇಕು.ಬಿಜೆಪಿಯವರದ್ದು ಸಬ್‌ಕಾ ಸಾಥ್, ಸಬ್‌ಕಾ ವಿಕಾಸ್ ಅಲ್ಲ.ಅವರದ್ದು ಎಸ್‌ಡಿಪಿಐಕಾ ಸಾಥ್, ಬಿಜೆಪಿಕಾ ವಿಕಾಸ್.ಅವರಿಗೆ ಅಭಿವೃದ್ಧಿಯ ರಾಜಕಾರಣ ಬೇಡ. ಕೋಮು, ಗಲಭೆಗಳೇ ಬೇಕಾಗಿದೆ.ಎಸ್‌ಡಿಪಿಐ ಹಾಗೂ ಬಿಜೆಪಿಯದ್ದು ಅನೈತಿಕ ಮೈತ್ರಿಯಾಗಿದೆ.ಈ ಕುರಿತು ಜನ ಎಚ್ಚೆತ್ತುಕೊಳ್ಳದಿದ್ದರೆ ನಿರಂತರವಾಗಿ ಮುಂದುವರಿಯಲಿದೆ ಎಂದ ಅವರು ಬೆಳ್ಳಾರೆಯಲ್ಲಿ ದುಷ್ಕರ್ಮಿಗಳಿಂದ ಬಲಿಯಾದ ಮಸೂದ್ ಹಾಗೂ ಪ್ರವೀಣ್ ನೆಟ್ಟಾರುರವರ ಹತ್ಯೆಯನ್ನು ತೀವ್ರವಾಗಿ ಖಂಡಿಸಿ, ಆರೋಪಿಗಳಿಗೆ ಕಠಿಣ ಶಿಕ್ಷ ನೀಡುವಂತೆ ಆಗ್ರಹಿಸಿದರು.

ನಾಯಕರ ಉಗ್ರ ಭಾಷಣ, ಸವಾಲುಗಳೇ ಕಾರಣ-ಎಂ.ಬಿ ವಿಶ್ವನಾಥ ರೈ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಮಾತನಾಡಿ, ಈ ರೀತಿ ಕೊಲೆಯಾಗುವುದು ಬಡವರ ಮಕ್ಕಳೇ ಹೊರತು ರಾಜಕೀಯ ನಾಯಕರ ಮಕ್ಕಳು ಇರುವುದಿಲ್ಲ.ರಾಜಕೀಯ ನಾಯಕರ ಉಗ್ರ ಭಾಷಣ ಹಾಗೂ ತಾಕತ್ತಿದ್ದರೆ ನಮ್ಮ ಕಾರ್ಯಕರ್ತರನ್ನು ಮುಟ್ಟಿನೋಡಿ ಎಂಬ ಸವಾಲುಗಳೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ.ಆ ರೀತಿ ಹೇಳಿಕೆ ಕೊಡುವ ನಾಯಕರು ತಮ್ಮನ್ನು, ತಮ್ಮ ಮಕ್ಕಳನ್ನು ಮುಟ್ಟಿನೋಡಿ ಎಂದು ಎಲ್ಲಿಯೂ ಹೇಳಿಕೆ ಕೊಡುವುದಿಲ್ಲ.ಹೀಗಾಗಿ ಮುಟ್ಟುವುದು, ಕೊಲ್ಲುವುದು ನಡೆಯುತ್ತಲೇ ಇರುತ್ತದೆ.ಆ ಬಳಿಕ ರಾಜಕೀಯ ನಾಯಕರು ಯಾರಿಗೂ ಸಿಗುವುದಿಲ್ಲ.ಮಸೂದ್‌ರನ್ನು ಕೊಲೆ ಮಾಡಿದ 8 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು ಪ್ರವೀಣ್ ಹಂತಕರನ್ನು ಕೂಡಲೇ ಪತ್ತೆ ಮಾಡಿ ಬಂಧಿಸಿ, ಎರಡು ಬಡ ಕುಟುಂಬಗಳಿಗೆ ಸರಕಾರ ಸೂಕ್ತ ಪರಿಹಾರ ನೀಡಬೇಕು. ಪ್ರವೀಣ್‌ರನ್ನು ಹತ್ಯೆ ಮಾಡಿರುವುದು ಮಾತ್ರ ತಪ್ಪಲ್ಲ, ಮಸೂದ್‌ರನ್ನು ಹತ್ಯೆ ಮಾಡಿರುವುದೂ ತಪ್ಪೆ.ಪ್ರವೀಣ್ ಹಂತಕರಿಗೆ ನೀಡುವ ಶಿಕ್ಷೆಯ ಪ್ರಮಾಣವನ್ನೇ ಮಸೂದ್ ಹಂತಕರಿಗೂ ನೀಡಬೇಕು.ಜಾತಿ, ಧರ್ಮ, ಭೇದ ಬಿಟ್ಟು ಎಲ್ಲರೂ ಒಗ್ಗಟ್ಟಿನಿಂದ ಎದುರಿಸಿ ಹೋರಾಟ ನಡೆಸಿದಾಗ ಮಾತ್ರ ಈ ರೀತಿಯ ದುಷ್ಕೃತ್ಯಗಳ ನಿರ್ಮೂಲನೆ ಸಾಧ್ಯ ಹೊರತು ಧ್ವೇಷದ ರಾಜಕಾರಣ, ವಿರೋಧಿಗಳನ್ನು ದಮನಿಸುವ, ಮತ ಬ್ಯಾಂಕ್ ಮಾಡುವ ರಾಜಕಾರಣದಿಂದ ಸಮಾಜ ಘಾತುಕ ಶಕ್ತಿಗಳನ್ನು ನಿರ್ಮೂಲನೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು. ಸಾಮಾಜಿಕ ಜಾಲತಾಣದ ಮುಖ್ಯಸ್ಥ ಸಿದ್ದೀಕ್ ಸುಲ್ತಾನ್, ನಗರ ಕಾಂಗ್ರೆಸ್ ಕಾರ್ಯದರ್ಶಿ ವಿಕ್ಟರ್ ಪಾಯಸ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here