ಆದಾಯಕ್ಕಿಂತ ಅಧಿಕ ಆಸ್ತಿ ಹೊಂದಿದ್ದ ಪ್ರಕರಣ: ಮಂಗಳೂರು ಕೋರ್ಟ್ ತೀರ್ಪು ಉಪ್ಪಿನಂಗಡಿಯ ಓಂಪ್ರಕಾಶ್ ಹೆಗ್ಡೆಗೆ 4 ವರ್ಷ ಜೈಲು ಶಿಕ್ಷೆ, 1 ಕೋಟಿ ರೂ ದಂಡ

0

ಪುತ್ತೂರು: ಆದಾಯಕ್ಕಿಂತ ಅಧಿಕ ಪ್ರಮಾಣದ ಆಸ್ತಿ ಹೊಂದಿದ ಪ್ರಕರಣದಲ್ಲಿ ತಾಲೂಕು ಕಛೇರಿಯ ಪ್ರಥಮ ದರ್ಜೆ ಸಹಾಯಕನಿಗೆ ಮಂಗಳೂರಿನ ನ್ಯಾಯಾಲಯ 4 ವರ್ಷಗಳ ಸಾದಾ ಸಜೆ ವಿಧಿಸಿ 1 ಕೋಟಿ ರೂ ದಂಡ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿದ್ದ ಉಪ್ಪಿನಂಗಡಿ ಕಾಲೇಜು ಬಳಿಯ ನಿವಾಸಿ ಯು.ಓಂಪ್ರಕಾಶ್ ಹೆಗ್ಡೆ ಶಿಕ್ಷೆಗೊಳಗಾದ ಆರೋಪಿ. ಈತ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಆಸ್ತಿ ಹೊಂದಿದ ಬಗ್ಗೆ2014ರ ಜ. 28 ರಂದು ಕರ್ನಾಟಕ ಲೋಕಾಯುಕ್ತ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಆತನ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು. ಇದೀಗ ವಿಚಾರಣೆ ಪೂರ್ಣಗೊಳಿಸಿದ ಮಂಗಳೂರಿನ ೩ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿರವರು ಯು. ಓಂಪ್ರಕಾಶ್ ಹೆಗ್ಡೆಗೆ ೪ ವರ್ಷಗಳ ಸಾದಾ ಸಜೆ ಮತ್ತು 1  ಕೋಟಿ ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಒಂದು ವೇಳೆ ದಂಡ ಕಟ್ಟಲು ವಿಫಲನಾದರೆ ಮತ್ತೆ 1 ವರ್ಷ ಸಾದಾ ಸಜೆ ಶಿಕ್ಷೆ ವಿಧಿಸಿ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಮಂಗಳೂರು ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾಗಿದ್ದು ಸದ್ಯ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿರುವ ಪುತ್ತೂರು ಉರ್ಲಾಂಡಿ ಮೂಲದ ಎಸ್. ವಿಜಯಪ್ರಸಾದ್‌ರವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಕರ್ನಾಟಕ ಲೋಕಾಯುಕ್ತ ಮಂಗಳೂರಿನ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನಿಪ್ಪಾಡಿ ಸರಕಾರದ ಪರವಾಗಿ ವಾದ ಮಂಡಿಸಿದ್ದರು. ಅಪರಾಧಿ ಯು.ಓಂಪ್ರಕಾಶ್ ಹೆಗ್ಡೆ ಸದ್ಯ ಮಂಗಳೂರಿನ ಜಿಲ್ಲಾ ಕಾರಾಗೃಹದಲ್ಲಿದ್ದಾನೆ.

ಲೋಕಾಯುಕ್ತ ದಾಳಿ ನಡೆದಿತ್ತು:
ಬಂಟ್ವಾಳ ತಾಲ್ಲೂಕು ಕಚೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿದ್ದ ಉಪ್ಪಿನಂಗಡಿ ಕಾಲೇಜು ಬಳಿಯ ನಿವಾಸಿ ಓಂಪ್ರಕಾಶ್ ಹೆಗ್ಡೆ ಮನೆಗೆ 2014ರ ಜ. 29ರಂದು ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳ ತಂಡ ಹಠಾತ್ ಧಾಳಿ ನಡೆಸಿತ್ತು ಓಂಪ್ರಕಾಶ್ ಹೆಗ್ಡೆಯವರು ತನ್ನ ಆದಾಯಕ್ಕಿಂತ ಇಮ್ಮಡಿಯಾಗಿ ಆಸ್ತಿ ಹೊಂದಿರುವುದನ್ನು ಅಂದು ಪತ್ತೆ ಹಚ್ಚಿದ್ದ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ನಸುಕಿನ ವೇಳೆ 5 ಗಂಟೆಗೆ ಲೋಕಾಯುಕ್ತ ಡಿವೈಎಸ್ಪಿ ವಿಠಲದಾಸ ಪೈ ನೇತೃತ್ವದ 11 ಮಂದಿಯ ತಂಡ ಬಂಟ್ವಾಳ ತಾಲೂಕು ಕಛೇರಿಯಲ್ಲಿ ಪ್ರಥಮ ದರ್ಜೆ ಗುಮಾಸ್ತನಾಗಿರುವ ಓಂಪ್ರಕಾಶ್ ಹೆಗ್ಡೆಯವರ ಉಪ್ಪಿನಂಗಡಿಯ ಪದವಿಪೂರ್ವ ಕಾಲೇಜ್ ಬಳಿಯಿರುವ ಮನೆಗೆ ಧಾಳಿ ನಡೆಸಿದ್ದರಲ್ಲದೆ ರಾತ್ರಿ 7 ಗಂಟೆಯ ತನಕ ನಿರಂತರವಾಗಿ ತನಿಖೆ ನಡೆಸಿ ಅವರ ಬ್ಯಾಂಕ್ ಖಾತೆ, ಆಸ್ತಿಗಳ ವಿವರವನ್ನು ಸಂಗ್ರಹಿಸಿದ್ದರು. ಒಟ್ಟು 1317 ಗ್ರಾಂ ಚಿನ್ನಾಭರಣ, ಸುಮಾರು 10 ಲಕ್ಷ ರೂಪಾಯಿ ಸೇರಿದಂತೆ ಹೆಗ್ಡೆಯವರು ಇತರ ಸೈಟ್ ಮತ್ತು ವಾಹನಗಳನ್ನು ಅಕ್ರಮವಾಗಿ ಹೊಂದಿರುವುದನ್ನು ಲೋಕಾಯುಕ್ತ ಅಧಿಕಾರಿಗಳು ಆ ವೇಳೆ ಪತ್ತೆ ಹಚ್ಚಿದ್ದರು.

ರಾಜ್ಯಾದ್ಯಂತ ಹಲವೆಡೆ ಭ್ರಷ್ಟ ಅಧಿಕಾರಿಗನ್ನು ಬಲೆಗೆ ಕಡೆವಿದ್ದ ಲೋಕಾಯುಕ್ತ ಅಧಿಕಾರಿಗಳು ಓಂಪ್ರಕಾಶ್ ಹೆಗ್ಡೆಯವರನ್ನೂ ತಮ್ಮ ಬಲೆಗೆ ಕೆಡವಿದ್ದರು. ಓಂಪ್ರಕಾಶ್ ಹೆಗ್ಡೆಯವರು ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬ ದೂರು ಬಂದಿದ್ದ ಹಿನ್ನೆಲೆಯಲ್ಲಿ ಅವರ ಮನೆ, ಕಚೇರಿ, ಬ್ಯಾಂಕ್ ಲಾಕರ್‌ಗಳನ್ನು ಶೋಧಿಸಿದಾಗ ಮನೆಯಲ್ಲಿ 602 ಗ್ರಾಂ ಚಿನ್ನಾಭರಣ, ಬ್ಯಾಂಕ್ ಲಾಕರ್‌ನಲ್ಲಿ 715ಗ್ರಾಂ ಚಿನ್ನಾಭರಣ ಸೇರಿದಂತೆ ಒಟ್ಟು 1317 ಗ್ರಾಂ ಚಿನ್ನಾಭರಣ, ಅವರ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರೂಪಾಯಿ, ಉಪ್ಪಿನಂಗಡಿಯಲ್ಲಿ ಸುಮಾರು 20 ಲಕ್ಷ ರೂಪಾಯಿ ಮೌಲ್ಯದ ಮನೆ, ಲಕ್ಷ್ಮೀನಗರದಲ್ಲಿ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ ಅಪೂರ್ಣಗೊಂಡಿರುವ ಮನೆ, 2  ಸೈಟ್, 1  ಇನ್ನೋವಾ ಕಾರು, 1 ಮಾರುತಿ ಓಮ್ನಿ ಕಾರು, 1 ಹೊಂಡಾ ಆಕ್ಟಿವಾ, 1 ಯಮಹಾ ಬೈಕ್ ಪತ್ತೆಯಾಗಿತ್ತು. ಓಂಪ್ರಕಾಶ್ ಹೆಗ್ಡೆಯವರು ಆದಾಯಕ್ಕಿಂತ ಇಮ್ಮಡಿಯಾಗಿ ಅವರಲ್ಲಿ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಡಿ.ವೈ.ಎಸ್ಪಿ ವಿಠಲದಾಸ ಪೈ ಸುದ್ದಿಗಾರರಿಗೆ ಅಂದು ಮಾಹಿತಿ ನೀಡಿದ್ದರು. ನಸುಕಿನ 5 ಗಂಟೆಗೆ ಬಂದ ತಂಡ ಮನೆಯೊಳಗೆ ಪ್ರವೇಶ ಮಾಡಿ ಶೋಧನೆ ಆರಂಭಿಸಿದ್ದು ರಾತ್ರಿ 7 ಗಂಟೆಯ ತನಕ ತನಿಖೆ ನಡೆಸಿತ್ತು. ಈ ಮಧ್ಯೆ ಉಪ್ಪಿನಂಗಡಿ ಮತ್ತು ಆಸುಪಾಸಿನಲ್ಲಿರುವ 6 ಬ್ಯಾಂಕ್‌ಗಳಲ್ಲಿ ಅವರು ಹೊಂದಿರುವ ಖಾತೆ ಮತ್ತು ಲಾಕರ್‌ಗಳನ್ನು ಪರಿಶೀಲನೆ ನಡೆಸಿತ್ತು. ಮಾತ್ರವಲ್ಲದೆ ಬಂಟ್ವಾಳದಲ್ಲಿರುವ ಅವರ ಕಚೇರಿಗೆ ತೆರಳಿ ತನಿಖೆ ನಡೆಸಲಾಗಿತ್ತು. ಅಂದಿನ ಕಾರ್‍ಯಾಚರಣೆಯಲ್ಲಿ ಲೋಕಾಯುಕ್ತ ಇನ್ಸ್‌ಪೆಕ್ಟರ್ ವಿಜಯಪ್ರಸಾದ್, ಪೊಲೀಸ್ ಸಿಬ್ಬಂದಿಗಳಾದ ಸುದರ್ಶನ್, ಶರತ್, ಹರಿಶ್ಚಂದ್ರ, ಶಿವಪ್ರಸಾದ್, ಜಾರ್ಜ್, ರಾಜೇಶ್, ಪ್ರವೀಣ್ ಮತ್ತು ಸತ್ಯವತಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here