ಐತ್ತೂರು ಗ್ರಾ.ಪಂ. ಸಾಮಾನ್ಯ ಸಭೆ;ಪಂಚಾಯತ್ ಸಿಬ್ಬಂದಿ ಪಂಚಾಯತ್ ವಿರುದ್ದ ಹೂಡಿದ್ದ ದಾವೆಯ ತೀರ್ಪಿನ ವಿಚಾರ

0

  • ಅಧ್ಯಕ್ಷೆ/ಉಪಾಧ್ಯಕ್ಷರ ಮಧ್ಯೆ ಚರ್ಚೆ, ಅಧಿಕೃತ ಕೋರ್ಟ್ ಆದೇಶ ಬಂದ ಬಳಿಕ ತುರ್ತು ಸಭೆ ಕರೆಯುವಂತೆ ಉಪಾಧ್ಯಕ್ಷರ ಆಗ್ರಹ

ಕಡಬ: ಈ ಹಿಂದಿನ ಅವಧಿಯಲ್ಲಿ ಪಂಚಾಯತ್ ಸಿಬ್ಬಂದಿಯೋರ್ವರನ್ನು ವಜಾಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ, ಸಿಬ್ಬಂದಿ ಪಂಚಾಯತ್ ವಿರುದ್ದ ದಾವೆ ಹೂಡಿದ್ದು ಈ ದಾವೆಯ ಅಂತಿಮ ತೀರ್ಪು ಬಂದಿದೆ ಎನ್ನಲಾಗಿದ್ದು ಈ ವಿಚಾರವಾಗಿ ಅಧ್ಯಕ್ಷೆ/ ಉಪಾಧ್ಯಕ್ಷರ ನಡುವೆ ಚರ್ಚೆ ನಡೆದ ಘಟನೆ ಐತ್ತೂರು ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆದಿದೆ.

 


ಸಭೆಯು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ಅವರ ಅಧ್ಯಕ್ಷತೆಯಲ್ಲಿ ಜು.30ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಉಪಾಧ್ಯಕ್ಷ ರೋಹಿತ್, ಸದಸ್ಯರಾದ ಮನಮೋಹನ ಗೊಳ್ಯಾಡಿ, ವಿ.ಯಂ. ಕುರಿಯನ್, ಈರೇಶ್, ವತ್ಸಲ,ಉಷಾ, ನಾಗೇಶ್ ಕೋಕಳ, ಜಯಲಕ್ಷ್ಮೀ, ಧನಲಕ್ಷ್ಮೀ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಸುಜಾತ ಸ್ವಾಗತಿಸಿ, ಸಿಬ್ಬಂದಿ ದೇವಿಕಾ ವಂದಿಸಿದರು.

ಕಳೆದ ಅವಧಿಯಲ್ಲಿ ಗ್ರಾ.ಪಂ. ಸಿಬ್ಬಂದಿಯೋರ್ವರನ್ನು ವಜಾಗೊಳಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಸಿಬ್ಬಂದಿ ಪ್ರವೀಣ ಎಂಬವರು ಪಂಚಾಯತ್ ವಿರುದ್ಧ   ಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಈ ದಾವೆಯ ಅಂತಿಮ ತೀರ್ಪು ಬಂದಿದೆ ಎನ್ನಲಾಗಿದ್ದರೂ ಅಧಿಕೃತ ಆದೇಶ ಇನ್ನು ಬಂದಿಲ್ಲ, ಈ ಮಧ್ಯೆ ಪಂಚಾಯತ್ ಪರ ವಕೀಲರನ್ನು ಬದಲಾಯಿಸಬೇಕೆಂದು ವರ್ಷದ ಹಿಂದೆ ಗ್ರಾ.ಪಂ.ನಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಈ ಬೆಳವಣಿಗಳ ಬಳಿಕ ಈ ಹಿಂದೆ ಇದ್ದ ಪಂಚಾಯತ್ ಪರ ವಕೀಲರನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡುವುದಕ್ಕೆ ನಮ್ಮ ವಿರೋಧ ಇದೆ ಎಂದು ಜೂ.30ರಂದು ಪಂಚಾಯತ್‌ನ ಒಂಬತ್ತು ಸದಸ್ಯರು ಪಂಚಾಯತ್‌ಗೆ ಪತ್ರ ನೀಡಿದ್ದರು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆದು 6 ತಿಂಗಳ ಕಳೆದ ಬಳಿಕ ನಿರ್ಣಯವನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂದು ಈ ಬಗ್ಗೆ ಸದಸ್ಯರ ಅಭಿಪ್ರಾಯವನ್ನು ತಾ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯವರಿಗೆ ಕಳುಹಿಸುವುದಾಗಿ ನಿರ್ಣಯಿಸಲಾಗಿತ್ತು. ಇದೇ ವಿಚಾರವಾಗಿ ಈ ಸಾಮಾನ್ಯ ಸಭೆಯಲ್ಲಿ ಭಾರಿ ಚರ್ಚೆ ನಡೆದಿದೆ.

ಸಭೆ ಪ್ರಾರಂಭವಾದ ಕೂಡಲೇ ಅಜೆಂಡ ಪ್ರಕಾರ ಸಭೆ ಮುಂದುವರಿಸುವ ಎಂದು ಪಿಡಿಒರವರು ಹೇಳಿದಾಗ ಅದಕ್ಕೆ ಒಪ್ಪದ ಉಪಾಧ್ಯಕ್ಷರು, ಕಳೆದ ತಿಂಗಳು ನಾವು 9 ಜನ ಸದಸ್ಯರು ಹಾಲಿ ಇರುವ ವಕೀಲರಾದ ರಾಜಶೇಖರ ಅವರನ್ನೆ ಮುಂದುವರಿಸಬೇಕೆನ್ನುವ ಬಗ್ಗೆ ಪತ್ರ ನೀಡಿದ್ದೇವು, ಈ ವಿಚಾರ ಏನಾಯಿತು, ಎರಡನೆಯದಾಗಿ ಪಂಚಾಯತ್ ನ ಈ ಹಿಂದಿನ ನಿರ್ಣಯದ ಹಿನ್ನಲೆಯಲ್ಲಿ ಪಂಚಾಯತ್ ಪರ ವಕೀಲರಿಗೆ ವಾದ ಮಾಡಲು ಅವಕಾಶ ಇಲ್ಲದಂತಾಗಿ ಪ್ರವೀಣ್ ಅವರಿಗೆ ಜಯವಾಗಿದೆ ಎಂದು ಬೇರೊಂದು ಮೂಲಗಳಿಂದ ನಮಗೆ ತಿಳಿದು ಬಂದಿದೆ, ಈ ವಿಚಾರ ಏನಾಗಿದೆ ನಿಮಗೆ ಏನಾದರೂ ಅಧಿಕೃತ ಮಾಹಿತಿ ಬಂದಿದೆಯಾ,  ಅಥವಾ  ಏನಾದರೂ ಪತ್ರಗಳು ಬಂದಿದೆಯಾ ಎಂದು ಉಪಾಧ್ಯಕ್ಷರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲ, ಮಾಹಿತಿ ಬಾರದೆ ಈಗ ಏನನ್ನು ಹೇಳಲಾಗದು ಎಂದರು. ಇದಕ್ಕೆ ಉಪಾಧ್ಯಕ್ಷರು ಏನಾದರೂ ಪತ್ರಗಳು ಬಂದಿದೆಯಾ ಎಂದು ಪ್ರಶ್ನಿಸಿದರು ಈ ವೇಳೆ ಪಂಚಾಯತ್ ವತಿಯಿಂದ ರಾಜಶೇಖರ ವಕೀಲರನ್ನು ಬದಲಾವಣೆ ಮಾಡುವ ಪಂಚಾಯತ್ ನಿರ್ಣಯದ ಬಗ್ಗೆ ರಾಜಶೇಖರ ವಕೀಲರಿಗೆ ಅಂಚೆ ಮೂಲಕ ಕಳುಹಿಸಲಾದ ಪತ್ರವನ್ನು ಅವರು ಸ್ವೀಕರಿಸದೆ ಇರುವುದರಿಂದ ಆ ಪತ್ರ ವಾಪಾಸು ಬಂದಿತ್ತು, ಈ ಪತ್ರವು ಅಧ್ಯಕ್ಷರ ಬಳಿಯಲ್ಲಿಯೇ ಇದ್ದು ಅದನ್ನು ಉಪಾಧ್ಯಕ್ಷರು ಆಗ್ರಹಿಸುತ್ತಿದ್ದ ವೇಳೆ ಬ್ಯಾಗಿನಿಂದ ತೆಗೆದು ಕೊಟ್ಟರು. ಈ ಬಗ್ಗೆ ಉಪಾಧ್ಯಕ್ಷರು ಮಾತನಾಡಿ, ಪಂಚಾಯತ್‌ನಿಂದ ಕಳುಹಿಸಲಾದ ಪತ್ರವು ವಾಪಾಸು ಬಂದಿದ್ದು ಇದನ್ನು ಅಧ್ಯಕ್ಷರು ಖಾಸಗಿಯಾಗಿ ಇಟ್ಟುಕೊಂಡು ಯಾಕೆ ಮುಚ್ಚಿಟ್ಟಿದ್ದಿರಿ, ಇದು ಸರಿಯಾ ಇದಕ್ಕೆ ನಾವು ನಿಮ್ಮ ಮೇಲೆ ವಿಶ್ವಾಸ ಇಲ್ಲ ಅಂತ ಈ ಮೊದಲು ಹೇಳಿದ್ದು ಎಂದೆಲ್ಲ ಉಪಾಧ್ಯಕ್ಷರು ಮಾತಿಗಿಳಿದರು. ಈ ಬಗ್ಗೆ ಚರ್ಚೆ ನಡೆಯಿತು. ಸದಸ್ಯ ವಿ.ಯಂ. ಕುರಿಯನ್ ಮಾತನಾಡಿ, ಕೋರ್ಟ್ ತೀರ್ಪು ಬಗ್ಗೆ ಅಧಿಕೃತವಾಗಿ ಏನಾದರೂ ಬಂದಿದೆಯಾ, ಇಲ್ವಲ್ಲ ಮತ್ಯಾಕೆ ಈಗ ಚರ್ಚೆ, ಪಂಚಾಯತ್ ಸಿಬ್ಬಂದಿ ಪ್ರವೀಣ ಅವರಿಗೆ ಪಂಚಾಯತ್‌ನಿಂದ ಹಣ ಪಾವತಿ ಏನಾದರೂ ಇದ್ದರೆ ನಮಗೆ ಕಷ್ಟವಾಗಬಹುದು ಎಂದರು. ಇದಕ್ಕೆ ಪಿಡಿಒ ಅವರು ಉತ್ತರಿಸಿ ಅಂತದೇನಿಲ್ಲ ಅವರಿಗೆ ಉದ್ಯೋಗ ಮಾತ್ರ ನೀಡಿದರೆ ಸಾಕು ಹಣ ಕೇಳುವುದಿಲ್ಲ ಎಂದು ಭರವಸೆ ನೀಡಿದರು.

ಅಧಿಕೃತ ಕೋರ್ಟ್ ಆದೇಶ ಬಂದ ಬಳಿಕ ತುರ್ತು ಸಭೆ ಕರೆಯುವ ಭರವಸೆ, ಬಳಿಕ ಹಾಜರಿ ಪುಸ್ತಕಕ್ಕೆ ಸಹಿ ಹಾಕಿದ ಆರು ಸದಸ್ಯರು

ಕೋರ್ಟ್ ವಿಚಾರವಾಗಿ ಸಭೆಯಲ್ಲಿ ಚರ್ಚೆ ನಡೆಯಿತಾದರೂ ಸಭೆಯಲ್ಲಿ ಇತರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕು, ಕ್ರಿಯಾ ಯೋಜನೆ ತಯಾರಿಸಬೇಕು, ಅಜೆಂಡ ಪ್ರಕಾರ ಸಭೆ ನಡೆಸುವ ಎಂದು ಪಿಡಿಒ ಒತ್ತಾಯಿಸಿದರು. ಸರಿ ಅಜೆಂಡ ಪ್ರಕಾರ ಮುಂದುವರಿಸುವ ಎಂದು ಉಪಾಧ್ಯಕ್ಷರು ಹಾಗೂ ಇತರ ಸದಸ್ಯರು ಒಪ್ಪಿಗೆ ಸೂಚಿಸಿ ಅಜೆಂಡ ಪ್ರಕಾರ ಸಭೆ ಮುಂದುವರಿಯಿತು. ಕೊನೆಗೆ ಇತರ ವಿಚಾರಗಳ ಚರ್ಚೆ ಸಮಯ ಬಂದಾಗ ಉಪಾಧ್ಯಕ್ಷರು ಪುನಃ ಪ್ರಶ್ನಿಸಿದರು. ಅಧಿಕೃತ ಆದೇಶ ಬಂದ ವಾರದೊಳಗೆ ತುರ್ತು ಸಭೆ ಕರೆಯಬೇಕು, ನಾವು ಪ್ರವೀಣ ಅವರ ಪರ ಅಥಾವ ವಿರುದ್ದ ಮಾತನಾಡುತ್ತಿಲ್ಲ, ಇಲ್ಲಿ ಅಧ್ಯಕ್ಷರು ಯಾಕೆ ನಮಗೆ ವಂಚನೆ ಮಾಡುತ್ತಿದ್ದಾರೆ, ವಕೀಲರು ಪತ್ರ ಸ್ವೀಕರಿಸದಿರುವ ಹಿನ್ನಲೆಯಲ್ಲಿ ಪತ್ರ ವಾಪಾಸು ಬಂದ ವಿಚಾರ ಯಾಕೆ ಹೇಳಲಿಲ್ಲ, ನಾವು ಸಹಿ ಹಾಕಬೇಕಾದರೆ ಈ ಬಗ್ಗೆ ತಿರ್ಮಾನ ಆಗಬೇಕೆಂದರು. 6 ಮಂದಿ ಸದಸ್ಯರು ಸಹಿ ಮಾಡದಿರುವ ವಿಚಾರ ಪಿಡಿಒ ಅವರಿಗೆ ತಿಳಿಯುತ್ತಿದ್ದಂತೆ ಆಕ್ರೋಶಗೊಂಡ ಅವರು, ಉಪಾಧ್ಯಕ್ಷರೇ ನೀವು ಈ ರೀತಿ ಮಾಡುವುದು ಸರಿಯಲ್ಲ, ಸಹಿ ಹಾಕುವುದಿಲ್ಲವಾದರೆ ನಾನು ಸಭೆಯೇ ಮಾಡುತ್ತಿರಲಿಲ್ಲ ಎಂದು ಹೇಳಿ ಸಹಿ ಹಾಕದಿರುವ ಬಗ್ಗೆ ಮಾಹಿತಿಯನ್ನು ನೀಡದಿರುವ ಸಿಬ್ಬಂದಿ ದೇವಿಕಾ ಅವರನ್ನು ತರಾಟೆಗೆ ತೆಗೆದುಕೊಂಡರು, ನಿಮ್ಮ ಮೇಲೆ ಮೇಲಾಧಿಕಾರಿಗಳಿಗೆ ವರದಿ ಮಾಡುತ್ತೇನೆ, ನೀವು ಪ್ರಮೋಷನ್ ಆಗುವುದು ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಚರ್ಚೆ ನಡೆದು ಪಂಚಾಯತ್ ವಿರುದ್ದ ಸಿಬ್ಬಂದಿ ಪ್ರವೀಣ ಅವರು ಹೂಡಿದ ದಾವೆಯ ತೀರ್ಪಿನ ಅಧಿಕೃತ ಆದೇಶ ಕೋರ್ಟ್‌ನಿಂದ ಬಂದ ಬಳಿಕ ತುರ್ತು ಸಭೆ ನಡೆಸಬೇಕು ಎಂದು ಉಪಾಧ್ಯಕ್ಷರ ಆಗ್ರಹದ ಮೇರೆಗೆ ಸಭೆ ನಡೆಸುವ ಎಂದು ಅಧ್ಯಕ್ಷರು ಹಾಗೂ ಪಿಡಿಒ ಒಪ್ಪಿದ ಬಳಿಕ ಆರು ಮಂದಿ ಸದಸ್ಯರು ಸಹಿ ಹಾಕಿದರು.

ಸಭೆಯಲ್ಲಿ ಇತರ ವಿಷಯಗಳ ಚರ್ಚೆ ನಡೆಯಿತು. ನೆಲ್ಲಿಕಟ್ಟೆ-ಓಟೆಕಜೆ ರಸ್ತೆ ರಸ್ತೆಯ ದುರವಸ್ಥೆಗೆ ಗ್ರಾ.ಪಂ. ಸದಸ್ಯ ಮನಮೋಹನ ಗೊಳ್ಯಾಡಿಯವರೇ ಕಾರಣ ಎಂದು ಅಲ್ಲಿನ ನಿವಾಸಿ ಸುರೇಶ್ ಹಾಗೂ ಕಾಲೋನಿ ನಿವಾಸಿಗಳು ಸಾಮಾನ್ಯ ಸಭೆಗೆ ದೂರು ನೀಡಿದ್ದರು. ಈ ಬಗ್ಗೆ ಸಭೆಯಲ್ಲಿ ರಸ್ತೆಗೆ ಮಣ್ಣು ಹಾಕಿರುವುದು ಮನಮೋಹನ ಗೋಳ್ಯಾಡಿಯವರು ಅಲ್ಲ, ಅವರ ವಿರುದ್ದ ವೃಥಾ ಆರೋಪ ಮಾಡಲಾಗಿದೆ, ಅವರ ಜತೆ ನಾವಿದ್ದೇವೆ ಎಂದು ಕೆಲ ಸದಸ್ಯರು ಬೆಂಬಲ ವ್ಯಕ್ತಪಡಿಸಿದರು. ಕಾಮಗಾರಿಗಳ ಕ್ರಿಯಾ ಯೋಜನೆಗೆ ಸದಸ್ಯವಾರು ಅನುದಾನ ವಿಂಗಡಿಸಲಾಯಿತು. ಅಲ್ಲದೆ ಸಭೆಯಲ್ಲಿ ಇತರ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಿತು.

ಮಾಹಿತಿ ಹಕ್ಕು ಅರ್ಜಿಗಳು ಬರ್ತಾನೆ ಇದೆ, ಕೆಲಸ ಮಾಡಲು ಬಿಡುವುದಿಲ್ಲ-ಪಿಡಿಒ
ಸಭೆಯಲ್ಲಿ ಆಗಾಗ ಪಿಡಿಒ ಅವರು ತನ್ನ ನೋವನ್ನು ತೋಡಿಕೊಂಡರು, ಈ ಪಂಚಾಯತ್ ನಲ್ಲಿ ಬರುವಷ್ಟು ಮಾಹಿತಿ ಹಕ್ಕು ಅರ್ಜಿಗಳನ್ನು ನಾನು ಕೆಲಸ ನಿರ್ವಹಿಸಿದ ಯಾವ ಪಂಚಾಯತ್‌ನಲ್ಲಿ ಕಂಡಿಲ್ಲ, ಇಲ್ಲಿ ಕೆಲಸ ಮಾಡಲು ಬಿಡುವುದಿಲ್ಲ, ಮತ್ತೆ ಮಾಧ್ಯಮದಲ್ಲಿ ನನ್ನ ಹೇಳಿಕೆಯನ್ನೆ ಹೈಲೈಟ್ಸ್ ಮಾಡಲಾಗುತ್ತದೆ, ಗ್ರಾಮ ಸಭೆ ನಡೆಸಿರುವುದಕ್ಕೆ ನನ್ನನ್ನು ಹಠಮಾರಿ ಪಿಡಿಒ ಅಂತ ಉಲ್ಲೇಖಿಸಿದ್ದಾರೆ ಇದಕ್ಕೆಲ್ಲ ಸದಸ್ಯರಾರು ಮಾತನಾಡುತ್ತಿಲ್ಲ ಎಂದಾಗ ಉಪಾಧ್ಯಕ್ಷರು ಮಾತನಾಡಿ, ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ರಸ್ತೆಯ ವಿಚಾರವಾಗಿ ಗಲಾಟೆ ಮಾಡುತ್ತಿರುವಾಗ ನಾನು ಅವರನ್ನು ಸಮಾಧಾನಪಡಿಸುತ್ತೇನೆ, ಅರ್ಧ ಗಂಟೆ ಗ್ರಾಮ ಸಭೆ ಮುಂದೂಡುವ ಎಂದು ನಾವು ಕೇಳಿಕೊಂಡೆವು, ಅದಕ್ಕೆ ಗ್ರಾಮಸಭೆಯ ಮುಖ್ಯಸ್ಥರು ಆಗಿರುವ ನೋಡೆಲ್ ಅಧಿಕಾರಿ ಒಪ್ಪಿಕೊಂಡರೂ ನೀವು ಒಪ್ಪಿಕೊಳ್ಳದೆ ಗ್ರಾಮ ಸಭೆ ಮುಂದುವರಿಸಿದ್ದಿರಿ, ಇಲ್ಲಿ ಸಮನ್ವಯದ ಕೊರತೆ ಇದೆ, ಅದು ಸರಿ ಆದ ಮೇಲೆ ಎಲ್ಲ ಸರಿಯಾಗುತ್ತದೆ ಎಂದರು. ಇದಕ್ಕೆ ಉತ್ತರಿಸಿದ ಪಿಡಿಒ ಅವರು, ಇಲಾಖಾಧಿಕಾರಿಗಳು ಪೋಲಿಸ್ ಇಲಾಖೆಯವರು ಬಂದಿರುವುದರಿಂದ ಇದ್ದ ಜನರಿಗಾದರೂ ಮಾಹಿತಿ ನೀಡಲಿ ಎಂದು ಗ್ರಾಮ ಸಭೆ ಮುಂದುವರಿಸಿದ್ದು ಎಂದು ಹೇಳಿದರು. ಇದೇ ವೇಳೆ ಸದಸ್ಯ ವಿ.ಯಂ. ಕುರಿಯನ್ ಮಾತನಾಡಿ ಈಗೀಗ ಮಾಧ್ಯಮಗಳು ಸರಿಯಾಗಿ ತನ್ನ ಕೆಲಸವನ್ನು ಮಾಡುತ್ತಿಲ್ಲ, ತನ್ನ ಧರ್ಮವನ್ನು ಪಾಲಿಸುತ್ತಿಲ್ಲ ಎಂದು ಹೇಳಿದರು.

LEAVE A REPLY

Please enter your comment!
Please enter your name here