ಬೇರೊಬ್ಬರ ಸ್ಥಿರಾಸ್ತಿ, ಮನೆ ತೋರಿಸಿ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್‌ನಿಂದ ರೂ.19 ಲಕ್ಷ ಸಾಲ ಪಡೆದು ವಂಚನೆ-ಪ್ರಕರಣ ದಾಖಲು

0

ಪುತ್ತೂರು: ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಸ್ಥಿರಾಸ್ತಿ ಮತ್ತು ಮನೆ ಖರೀದಿಗಾಗಿ ಕಬಕ ಗ್ರಾಮದ ಕರ್ಣಾಟಕ ಬ್ಯಾಂಕ್‌ನಿಂದ ರೂ.19 ಲಕ್ಷ ಸಾಲ ಪಡೆದು ವಂಚನೆ ಎಸಗಿರುವ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಬಕದ ಅಬ್ದುಲ್ ನಝೀರ್, ಫೌಝಿಯಾ ಮತ್ತು ಮಹಮ್ಮದ್ ರಫೀಕ್ ಎಂಬವರು ಬ್ಯಾಂಕ್‌ಗೆ `ಅಸಲಿ’ ಎಂದು `ನಕಲಿ’ ದಾಖಲೆ ಪತ್ರಗಳನ್ನು ಸಲ್ಲಿಸಿ ಸಾಲ ಪಡೆದು ವಂಚನೆ ಮಾಡಿರುವುದಾಗಿ ಆರೋಪಿಸಿ ದೂರು ನೀಡಲಾಗಿದೆ. 2019ರ ನ.14ರಂದು ಅಬ್ದುಲ್ ನಝೀರ್ ಮತ್ತು ಫೌಝಿಯಾ ಅವರು ಸ್ಥಿರಾಸ್ತಿ ಮತ್ತು ಮನೆ ಖರೀದಿಯ ಬಗ್ಗೆ ರೂ.19 ಲಕ್ಷ ಸಾಲವನ್ನು ಬ್ಯಾಂಕ್‌ನ ಮೆನೇಜರ್ ಅವರಲ್ಲಿ ಕೇಳಿದ್ದರು.ಈ ಸಂದರ್ಭ ಮಹಮ್ಮದ್ ರಫೀಕ್ ಅವರನ್ನು ಜಾಮೀನುದಾರರನ್ನಾಗಿ ಕಾಣಿಸಿದ್ದರು. ಬೇರೊಬ್ಬರು ನಿರ್ಮಿಸಿದ್ದ ಮನೆಯನ್ನು ತಮ್ಮದೆಂದು ತೋರಿಸಿ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬ್ಯಾಂಕ್‌ಗೆ ಹಾಜರುಪಡಿಸಿದ್ದರು. ಬ್ಯಾಂಕ್‌ನವರು ದಾಖಲೆ ಪತ್ರಗಳನ್ನು ಅಸಲಿ ಎಂದು ನಂಬಿ ರೂ.19 ಲಕ್ಷ ಸಾಲ ನೀಡಿದ್ದರು.ಆದರೆ, ಸಾಲ ಪಡೆದ ಆರೋಪಿಗಳು ಸಾಲವನ್ನು ಮರುಪಾವತಿಸದೆ ಇದುದರಿಂದ ಬ್ಯಾಂಕ್‌ನ ಮ್ಯಾನೇಜರ್ ಮತ್ತು ಅಧಿಕಾರಿಗಳು ಪರಿಶೀಲಿಸಿದಾಗ ಆರೋಪಿಗಳ ಬಣ್ಣ ಬಯಲಾಗಿದೆ. ತಮ್ಮದಲ್ಲದ ನಿವೇಶನ ಮತ್ತು ಕಟ್ಟಡವನ್ನು ತಮ್ಮದೆಂದು ತೋರಿಸಿ ನಕಲಿ ದಾಖಲೆಯನ್ನು ತಯಾರಿಸಿ ಅಸಲಿ ಎಂದು ಹಾಜರುಪಡಿಸಿ ಸಾಲ ಪಡೆದು ವಂಚಿಸಿರುವುದು ಬ್ಯಾಂಕಿನವರ ಗಮನಕ್ಕೆ ಬಂದಿತ್ತು.ಈ ಕುರಿತು ಬ್ಯಾಂಕ್‌ನ ಮ್ಯಾನೇಜರ್ ಶಶಿಧರ್ ಎಸ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ 406, 465, 468, 471, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here