ನೆಲ್ಯಾಡಿ: ಮಂಗಳೂರು ವಿವಿ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

0

ನೆಲ್ಯಾಡಿ: ಮಂಗಳೂರು ವಿಶ್ವ ವಿದ್ಯಾಲಯದ ನೆಲ್ಯಾಡಿ ಘಟಕ ಕಾಲೇಜಿನ ಇತಿಹಾಸ ವಿಭಾಗದ ಆಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದಡಿ ’ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ-ವಸಾಹತು ಕಾಲಘಟ್ಟದ ಇತಿಹಾಸ ಕಥನ’ ಎಂಬ ವಿಷಯದ ಮೇಲೆ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಜು.29ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಗೋವಾ ವಿಶ್ವ ವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಎನ್. ಶ್ಯಾಮ್ ಭಟ್‌ರವರು ಸಂಕಿರಣ ಉದ್ಘಾಟಿಸಿ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ತ್ಯಾಗ ತಿಳಿಯಬೇಕಾದರೆ ಇತಿಹಾಸ ಓದಬೇಕು. ಆಚರಣೆಯೊಂದಿಗೆ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಂಡರೆ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯ ಕಾಲೇಜು ನೆಲ್ಯಾಡಿಯ ಸಂಯೋಜಕರಾದ ಡಾ. ಜಯರಾಜ್ ಎನ್.ರವರು ಮಾತನಾಡಿ, ಸ್ವಾತಂತ್ರ್ಯದ ಹೋರಾಟದ ಘಟನಾವಳಿಗಳನ್ನು ತೆರೆದಿಡುತ್ತಾ ಇದರ ಫಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಬೇಕು ಎಂದರು. ಇತಿಹಾಸ ವಿಭಾಗದ ಮುಖ್ಯಸ್ಥರು ಹಾಗೂ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಸಂಚಾಲಕರೂ ಆದ ಡಾ. ಸೀತಾರಾಮ ಪಿ.,ರವರು ಸ್ವಾಗತಿಸಿದರು. ಅರ್ಥಶಾಸ್ತ್ರ ಉಪನ್ಯಾಸಕಿ ಸ್ಪೂರ್ತಿ ಕೆ.ಟಿ. ವಂದಿಸಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಉಪನ್ಯಾಸಕಿಯರಾದ ಡೀನಾ ಮತ್ತು ದಿವ್ಯಾಶ್ರೀ ಜಿ., ನಿರೂಪಿಸಿದರು. ವೇದಿಕೆಯಲ್ಲಿ ಸೆಮಿನಾರ್‌ನ ಸಹಸಂಚಾಲಕಿ, ಇತಿಹಾಸ ಉಪನ್ಯಾಸಕಿಯಾದ ಲೀಲಾವತಿ ಉಪಸ್ಥಿತರಿದ್ದರು.

ಗೋಷ್ಠಿಗಳು:

ಕಾಲೇಜಿನ ಸಂಯೋಜಕರಾದ ಡಾ. ಜಯರಾಜ್ ಎನ್.,ರವರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ಎನ್.ಶ್ಯಾಮ್ ಭಟ್‌ರವರು ’ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟ: ಕೆಲವು ದೃಷ್ಟಿಕೋನಗಳು’ ಎಂಬ ವಿಷಯದ ಕುರಿತಂತೆ ವಿಷಯ ಮಂಡನೆ ಮಾಡಿದರು. ಈ ಗೋಷ್ಠಿಯಲ್ಲಿ ಆಂಗ್ಲ ಉಪನ್ಯಾಸಕಿ ವನಿತಾ ಪಿ., ವಂದಿಸಿದರು.

ಎರಡನೇಯ ಗೋಷ್ಠಿಯು ಪುತ್ತೂರು ಸಂತಫಿಲೋಮಿನಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ನೊರ್ಬರ್ಟ್ ಮಸ್ಕರೇನಸ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೃತ್ತ ಇತಿಹಾಸ ಪ್ರಾಧ್ಯಾಪಕ ಪ್ರೊ. ಪೀಟರ್ ವಿಲ್ಸನ್ ಪ್ರಭಾಕರ್‌ರವರು ’ದಕ್ಷಿಣ ಕನ್ನಡ ಜಿಲ್ಲೆಯ ಆರ್ಥಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯಲ್ಲಿ ಬಾಸೆಲ್ ಮಿಶನ್‌ನ ಪಾತ್ರ’, ಪುತ್ತೂರು ಫಿಲೋಮಿನಾ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ| ಶ್ರೀದರ್ ನಾಯ್ಕರವರು ’ಕಾಸರಗೋಡು ಸ್ವಾತಂತ್ರ್ಯ ಚಳುವಳಿ: ಗಾಂಧೀಜಿ ಪ್ರಭಾವ ’ ಮತ್ತು ಡಾ. ಸೀತಾರಾಮ ಪಿ.,ರವರು ’ಸ್ವಾತಂತ್ರ್ಯಪೂರ್ವ ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಪತ್ರಿಕೆಗಳ ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ನಿರೂಪಣೆ’ ಎಂಬ ವಿಷಯಗಳ ಕುರಿತಂತೆ ವಿಷಯ ಮಂಡನೆ ಮಾಡಿದರು.

ನಿಶ್ಮಿತಾ ಪಿ., ಸ್ವಾಗತಿಸಿದರು. ಸುರೇಶ್ ಕೆ., ವಂದಿಸಿದರು. ಚಂದ್ರಕಲಾ ನಿರೂಪಿಸಿದರು. ಎಲ್ಲಾ ವಿಚಾರ ಗೋಷ್ಠಿಗಳಲ್ಲಿ ಸಭಿಕರೊಂದಿಗೆ ಸಂವಾದ ನಡೆಯಿತು. ಇತಿಹಾಸ ಉಪನ್ಯಾಸಕಿ ಲೀಲಾವತಿಯವರ ಅಧ್ಯಕ್ಷತೆಯಲ್ಲಿ ನಡೆದ ಮುಂದಿನ ಗೋಷ್ಠಿಯಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟದ ಕುರಿತಂತೆ ವಿಷಯ ಮಂಡನೆ ಮಾಡಿದರು.

ಸಮಾರೋಪ:

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರೊ.ಪೀಟರ್ ವಿಲ್ಸನ್ ಪ್ರಭಾಕರ್‌ರವರು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಐತಿಹಾಸಿಕ ವಿಚಾರದ ಅರಿವಿನ ಸ್ಪಷ್ಟತೆಯ ಬಗ್ಗೆ ತಿಳಿಸಿ, ನೈಜ ಇತಿಹಾಸ ಕಟ್ಟುವುದರೊಂದಿಗೆ ಮರೆತು ಹೋದ ಇತಿಹಾಸವನ್ನು ಪುನರ್ ರೂಪಿಸಬೇಕು ಎಂದರು. ಅಧ್ಯಕ್ಷತೆಯನ್ನು ಡಾ. ಜಯರಾಜ್ ಎನ್., ವಹಿಸಿದ್ದರು. ಉಪನ್ಯಾಸಕಿ ದಿವ್ಯಾ ಕೆ.,ವಂದಿಸಿದರು. ಲೀಲಾವತಿ ವಂದಿಸಿದರು. ವೆರೋನಿಕಾ ಪ್ರಭಾ ವಿ.ಪಿ ಕಾರ್ಯಕ್ರಮ ನಿರೂಪಿಸಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಸೀತಾರಾಮ ಪಿ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here