ಕಲ್ಲುಗುಂಡಿ ನೆರೆಹಾನಿ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ-ಪರಿಶೀಲನೆ

0

ಮನೆ ಹಾನಿಯಾದವರಿಗೆ ರೂ.ಹತ್ತು ಸಾವಿರ ಪರಿಹಾರ ಘೋಷಣೆ

ಅಂಗಡಿ ಹಾನಿಯಾದವರಿಗೆ ನಷ್ಟಗಳನ್ನು ನೋಡಿಕೊಂಡು ಪರಿಹಾರಕ್ಕಾಗಿ ಸರಕಾರಕ್ಕೆ ಮನವಿ: ಡಾ.ರಾಜೇಂದ್ರ ಕೆ.ವಿ.

ಪುತ್ತೂರು:ಮೇಘಸ್ಪೋಟದಿಂದಾಗಿ ಜಲಾವೃತಗೊಂಡ ಕಲ್ಲುಗುಂಡಿಯ ಕೂಲಿಶೆಡ್ ಪ್ರದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಗಿರೀಶ್ ನಂದನ್, ಸುಳ್ಯ ತಹಶಿಲ್ದಾರ್ ಕು.ಅನಿತಾಲಕ್ಷ್ಮಿ, ತಾ.ಪಂ.ಕಾರ್ಯನಿರ್ವಾಹಕಾಧಿಕಾರಿ ಭವಾನಿಶಂಕರ, ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ ಸೇರಿದಂತೆ ಅಧಿಕಾರಿಗಳು ಆ.2ರಂದು ಸಂಜೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಯವರು,ದ.ಕ.ಜಿಲ್ಲೆಯ ಸುಳ್ಯ,ಕಡಬ ಭಾಗದಲ್ಲಿ ಕಳೆದ 24 ಗಂಟೆಯಲ್ಲಿ 28 ಸೆ.ಮೀ.ಗಿಂತಲೂ ಜಾಸ್ತಿ ಮಳೆಯಾಗಿದ್ದು, ಹಲವು ಭಾಗಗಳಲ್ಲಿ ಹಾನಿ ಸಂಭವಿಸಿದೆ.ನದಿ ಹಳ್ಳಗಳು ತುಂಬಿ ಹರಿದು ಬಹಳಷ್ಟು ಮನೆಗಳಿಗೆ ಹಾನಿಯಾಗಿದ್ದು, ಸ್ಥಳೀಯ ಅಂಗಡಿಗಳಿಗೂ ಹಾನಿ ಸಂಭವಿಸಿದೆ.ಬಹಳಷ್ಟು ಸೇತುವೆ ಮತ್ತು ರಸ್ತೆಗಳಿಗೂ ಹಾನಿ ಸಂಭವಿಸಿದೆ.ಬೆಳಿಗ್ಗೆಯಿಂದಲೇ ಸುಳ್ಯ ಹಾಗೂ ಕಡಬ ತಾಲೂಕಿನಲ್ಲಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ ಎಂದರು.

ಸುಳ್ಯದಿಂದ ಮುಖ್ಯಮಂತ್ರಿಗಳೊಂದಿಗೆ ವೀಡಿಯೋ ಕಾನರೆನ್ಸ್ ಮೂಲಕ ಮಾತನಾಡಿ, ಮನೆ ಹಾನಿಯಾದ ಮತ್ತು ಪಾತ್ರೆ, ಬಟ್ಟೆ ಹಾನಿಯಾದವರಿಗೆ ತಕ್ಷಣ ರೂ.ಹತ್ತು ಸಾವಿರದ ಚೆಕ್ ನೀಡಲು ತಹಶಿಲ್ದಾರ್ ಅವರಿಗೆ ಹೇಳಿದ್ದೇನೆ. ಮನೆ ದುರಸ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನಿರ್ದೇಶನದಂತೆ ಏನೇನು ಗೈಡ್ಲೈನ್ಸ್ ಇದೆಯೋ ಆ ಪ್ರಕಾರ ಪರಿಹಾರ ವಿತರಣೆ ಮಾಡಲು ತಿಳಿಸಿದ್ದೇನೆ. ಮಣ್ಣಿನ ಮನೆ, ಗುಡ್ಡ ಜರಿಯುವ ಪ್ರದೇಶದಲ್ಲಿರುವವರನ್ನು ಅಽಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು, ವಿ.ಎ., ಪಿ.ಡಿ.ಒ. ಸ್ಥಳೀಯ ಸಂಘ ಸಂಸ್ಥೆಗಳೊಂದಿಗೆ ಸೇರಿಕೊಂಡು ಸಾಂತ್ವನ ಕೇಂದ್ರಕ್ಕೆ ಸ್ಥಳಾಂತರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಸಾಂತ್ವನ ಕೇಂದ್ರದಲ್ಲಿಯೂ ಅವರಿಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಡಲು ಹೇಳಿದ್ದೇನೆ .ಕಲ್ಲುಗುಂಡಿಯಲ್ಲಿ ಸ್ಥಳೀಯ ಅಂಗಡಿಗಳಿಗೂ ಬಹಳಷ್ಟು ಹಾನಿಯಾಗಿ ನಷ್ಟ ಸಂಭವಿಸಿದ್ದು, ಪರಿಹಾರ ನೀಡಬೇಕು ಎಂಬ ಬೇಡಿಕೆ ಬಂದಿದೆ.ಅವರ ನಷ್ಟ ಎಷ್ಟಿದೆ ಎಂಬುದನ್ನು ನೋಡಿಕೊಂಡು ಸರಕಾರಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ‘ಸುದ್ದಿ’ಗೆ ಮಾಹಿತಿ ನೀಡಿದರು.

ಸಂಪಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಜಿ.ಕೆ.ಹಮೀದ್ ಅವರು ನೆರೆಹಾನಿಯಿಂದ ಗ್ರಾಮದಲ್ಲಿ ಸಂಭವಿಸಿದ ಹಾನಿಯನ್ನು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.ಈ ಸಂದರ್ಭದಲ್ಲಿ ಅಧಿಕಾರಿ ವರ್ಗದವರ ಜೊತೆಗೆ ನ.ಪಂ.ಅಧ್ಯಕ್ಷ ವಿನಯಕುಮಾರ್ ಕಂದಡ್ಕ, ನ.ಪಂ. ಸದಸ್ಯ ರಾಧಾಕೃಷ್ಣ ರೈ ಬೂಡು, ಅರಂತೋಡು-ತೊಡಿಕಾನ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ತಾ.ಪಂ. ಮಾಜಿ ಉಪಾಧ್ಯಕ್ಷೆ ಶ್ರೀಮತಿ ಪುಷ್ಪಾ ಮೇದಪ್ಪ, ಅರಂತೋಡು ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷೆ ಶ್ರೀಮತಿ ಭಾರತಿ ಪುರುಷೋತ್ತಮ, ಬಿಜೆಪಿ ಮಂಡಲ ಸಮಿತಿ ಪ್ರ.ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ, ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಶ್ರೀಮತಿ ಗೀತಾಶೇಖರ್ ಉಳುವಾರು, ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಸುನಿಲ್ ಕೇರ್ಪಳ,ಸಂಪಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ, ಸೇರಿದಂತೆ ಕಲ್ಲುಗುಂಡಿಯ ವರ್ತಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here