ಕಡೇಶಿವಾಲಯದ ಮಾದರಿ ಸುಸಜ್ಜಿತ ಗ್ರಂಥಾಲಯ

0

ಓದುವ ಹವ್ಯಾಸವನ್ನು ಗ್ರಾಮೀಣ ಜನರು ರೂಢಿಸಿಕೊಳ್ಳಲಿ, ಜ್ಙಾನದ ಮಟ್ಟ ಬೆಳೆಯಲಿ, ಎನ್ನುವ ದೃಷ್ಟಿಯಿಂದ ಗ್ರಂಥಾಲಯ ಹುಟ್ಟಿಕೊಂಡಿದೆ. ಅದರಂತೆ ಕಡೇಶಿವಾಲಯ ಪಂಚಾಯಿತಿಯ ಗ್ರಂಥಾಲಯವೂ ಒಂದು. ಆದರೆ ಈ ಗ್ರಂಥಾಲಯವು ಉಳಿದ ಗ್ರಂಥಾಲಯಕ್ಕಿಂತ ಭಿನ್ನವಾದ ಸ್ಥಾನದಲ್ಲಿ ನಿಲ್ಲುತ್ತದೆ ಕಾರಣ ಗ್ರಂಥಾಲಯವನ್ನು ಹೀಗೂ ವಿನಿಯೋಗಿಸಬಹುದು ಎನ್ನುವ ಮಾದರಿ. ಹೈಟೆಕ್ ಗ್ರಂಥಾಲಯವೆಂದೇ ಹೆಸರು ಪಡೆದು ಊರಿನವರಿಗೂ ಅಚ್ಚರಿ ಎನಿಸುವ ಗ್ರಂಥಾಲಯ.

ಡಿಜಿಟಲ್‌ಗೆ ಹೆಚ್ಚಿನ ಒತ್ತು: ಗ್ರಂಥಾಲಯ ಕೇವಲ ಪುಸ್ತಕಗಳಿಗೆ ಮಾನ್ಯತೆ ನೀಡದೆ ಡಿಜಿಟಲೀಕರಣಕ್ಕೂ ಹೆಜ್ಜೆ ಇಟ್ಟಿದೆ. ಅದರ ಸಲುವಾಗಿ ಮೂರು ಕಂಪ್ಯೂಟರ್, ಎರಡು ಮೊಬೈಲ್, ಸಾರ್ವಜನಿಕರ ಉಪಯೋಗಕ್ಕೆಂದೇ ಮೀಸಲಾಗಿವೆ. ಇದರ ಜೊತೆಗೆ ಪ್ರಿಂಟರ್ ಕೂಡ ಉಪಯೋಗಿಸಬಹುದಾಗಿದೆ. ಓದುಗರ ಉಪಯೋಗವಾಗಲೆಂದು ಉಚಿತ ವೈಫೈ ವ್ಯವಸ್ಥೆಯನ್ನು ಮಾಡಲಾಗಿರುವುದು ವಿಶೇಷ ಎನಿಸಿದೆ.

ತೆರೆದ ಗ್ರಂಥಾಲಯ: ಸುಮಾರು ನಲ್ವತೈದು ಸಾವಿರ ವೆಚ್ಚದಲ್ಲಿ ಗ್ರಂಥಾಲಯಕ್ಕೆ ಹೊಂದಿಕೊಂಡು ತೆರೆದ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು, ದಿನದ ಇಪ್ಪತ್ನಾಲ್ಕು ಗಂಟೆಯೂ ಓದಬಹುದಾಗಿದೆ. ತೆರೆದ ಗ್ರಂಥಾಲಯದಲ್ಲಿ ಸುಮಾರು ಇನ್ನೂರೈವತ್ತು ಪುಸ್ತಕಗಳಿದ್ದು ರಾತ್ರಿಯೂ ಬಂದು ಓದುವ ವ್ಯವಸ್ಥೆಯನ್ನು ಮಾಡಲಾಗಿದೆ.

ಸೋಲಾರ್ ಬಳಕೆ, ಸಿಸಿ ಕ್ಯಾಮರಾ, ಶೌಚಾಲಯದ ವ್ಯವಸ್ಥೆ: ಗ್ರಂಥಾಲಯಕ್ಕೆ ಬೇಕಾದ ಸಮಗ್ರ ವಿದ್ಯುತನ್ನು ಸೋಲಾರ್ ಪವರ್ ಮೂಲಕ ಉಪಯೋಗಿಸಲಾಗುತ್ತಿದೆ. ಮತ್ತು ಗ್ರಂಥಾಲಯದ ಕಣ್ಗಾವಲಿಗೆ ಸಿಸಿ ಕ್ಯಾಮರವನ್ನು ಅಳವಡಿಸಲಾಗಿದೆ. ಶೌಚಾಲಯದ ವ್ಯವಸ್ಥೆಯೂ ಇಲ್ಲಿದೆ.

ಸಕ್ರಿಯ ಸಲಹಾ ಸಮಿತಿ: ಸರಕಾರದ ಆದೇಶದ ನಿಯಮದಡಿ ಗ್ರಂಥಾಲಯಗಳು ಸಲಹಾ ಸಮಿತಿಯನ್ನು ರಚಿಸಿ ಕಾರ್ಯನಿರ್ವಹಿಸಬೇಕೆಂದು ತಿಳಿಸಿದೆ ಅದರಂತೆ ಈ ಗ್ರಂಥಾಲಯವೂ ಪಂಚಾಯತಿ ಅಧ್ಯಕ್ಷ ಮತ್ತು ಸಲಹಾ ಸಮಿತಿಯ ಅಧ್ಯಕ್ಷ ಸುರೇಶ್ ಬನಾರಿ , ಮೇಲ್ವಿಚಾರಕಿ ಸೌಮ್ಯ ಮತ್ತು ಸಮಿತಿಯ ಸದಸ್ಯರ ನೇತೃತ್ವದಲ್ಲಿ ಸಕ್ರಿಯವಾಗಿ ಗ್ರಂಥಾಲಯದ ಅಭಿವೃದ್ಧಿಗೆ ಈ ಸಮಿತಿಯೂ ತನ್ನ ಆಲೋಚನೆಗಳನ್ನು ನೀಡುತ್ತಾ ಬರುತ್ತಿದೆ.

ಪುಸ್ತಕ ಜೋಳಿಗೆ ಅಭಿಯಾನ: ತಮ್ಮಲ್ಲಿರುವ ಓದಬಹುದಾದ ಪುಸ್ತಕವನ್ನು ಗ್ರಂಥಾಲಯಕ್ಕೆ ನೀಡುವ ವಿಶೇಷ ಅಭಿಯಾನವನ್ನು ಕಳೆದ ಒಂದು ವರ್ಷಗಳಿಂದ ಗ್ರಂಥಾಲಯ ಮಾಡಿಕೊಂಡು ಬರುತ್ತಿದೆ ಅದರ ಫಲವಾಗಿ ಅನೇಕ ಊರ ಓದುಗರು ತನ್ನಲ್ಲಿರುವ ಪುಸ್ತಕವನ್ನು ಉಚಿತವಾಗಿ ನೀಡುತ್ತಿದ್ದಾರೆ. ಈಗಾಗಲೇ ಅನೇಕ ಪುಸ್ತಕವು ಜಮೆ ಆಗಿದೆ.

ಮಕ್ಕಳಿಗೆಂದೇ ಓದುವ ಬೆಳಕು ಅಭಿಯಾನ: ಹದಿನೆಂಟು ವರ್ಷದ ಓಳಗಿನ ಮಕ್ಕಳನ್ನು ಜ್ಞಾನಾರ್ಜನೆಯೆಡೆಗೆ ಕೊಂಡೊಯ್ಯಲು ಇರುವ ಅಭಿಯಾನ ಇದಾಗಿದ್ದು ಊರಿನಲ್ಲಿರುವ ಶಾಲೆಗಳನ್ನು ಸಂಪರ್ಕಿಸಿ ಅವರಿಗೆ ಮಾಹಿತಿ ನೀಡಿ ನೋಂದಾವಣೆ ಮಾಡಲಾಗುತ್ತಿದೆ. ಇದಲ್ಲದೆ ಗ್ರಂಥಾಲಯದಲ್ಲಿ ಚೆಸ್ ಆಟಕ್ಕೂ ಅವಕಾಶವನ್ನು ಕಲ್ಪಿಸಲಾಗಿದೆ.

ವಿಶಾಲ ಉದ್ಯಾನವನ: ಸುಮಾರು ಐದು ಲಕ್ಷ ವೆಚ್ಚದಲ್ಲಿ ಗ್ರಂಥಾಲಯದ ಮುಂಭಾಗ ಉದ್ಯಾನವನ ನಿರ್ಮಿಸಲಾಗಿದ್ದು, ಓದುಗರಿಗೆ, ಪಂಚಾಯತಿಗೆ ಬರುವ ಸಾರ್ವಜನಿಕರಿಗೆ ಹಿತವೆನಿಸುತ್ತಿದೆ.

ಮಾಹಿತಿ ಕೇಂದ್ರ: ಗ್ರಂಥಾಲಯದ ಜತೆ ಮಾಹಿತಿ ಕೇಂದ್ರವೂ ಇದರಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದು ಜಾತಿ, ಆದಾಯ ಪ್ರಮಾಣಪತ್ರ, ಆಯುಷ್ಮಾನ್ ಕಾರ್ಡ್,ಹೀಗೆ ಅನೇಕ ಸೌಲಭ್ಯಗಳಿಗೆ ಬೇಕಾದ ದಾಖಲೆಗಳ ಕುರಿತು ಮಾಹಿತಿ ನೀಡುವುದು ಮಾತ್ರವಲ್ಲದೆ, ಅರ್ಜಿ ಬರೆಯಲು ತಿಳಿಯದ ನಾಗರಿಕರಿಗೆ ಗ್ರಂಥಾಲಯದ ಮೇಲ್ವಿಚಾರಕಿ ಅರ್ಜಿಯನ್ನು ತುಂಬಿಕೊಡಬಹುದಾದ ವ್ಯವಸ್ಥೆಯೂ ಇದೆ.

 

`ಪುಸ್ತಕದಿಂದ ವಿಮುಖರಾಗುತ್ತಿರುವ ಯುವಜನತೆಯನ್ನು ಮತ್ತೆ ಓದಿನ ಕಡೆಗೆ ಆಕರ್ಷಿತಗೊಳಿಸಲು ಅಭಿವೃದ್ಧಿ ಮಾಡಲಾಗಿದೆ. ಕಂಪ್ಯೂಟರ್ ಕಲಿಯುವ ಆಶಕ್ತಿಯುಳ್ಳವರಿಗೂ ಅಭ್ಯಾಸ ಮಾಡಲು ಈ ಗ್ರಂಥಾಲಯ ಪೂರಕವಾಗಿದೆ. ಕಂಪ್ಯೂಟರ್ ಶಿಕ್ಷಣ ಮತ್ತು ಡಿಜಿಟಲ್ ಲೈಬ್ರೆರಿಯೂ ಹೊಸತನಕ್ಕೆ ನಾಂದಿಹಾಡಿದೆ.’ -ಸುನಿಲ್ ಕುಮಾರ್, ಪಿಡಿಓ, ಕಡೇಶಿವಾಲಯ ಗ್ರಾಪಂ

 

ಅಕ್ಷಯ್ ಕುಮಾರ್ ಎ. ಕಡೇಶಿವಾಲಯ 

LEAVE A REPLY

Please enter your comment!
Please enter your name here