ರಾಜಧರ್ಮ ಪಾಲಿಸದ ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಬೇಕು-ವಿ.ಎಚ್. ಶಕೂರ್ ಹಾಜಿ

*ರಾಜಕೀಯ ಮೇಲಾಟದ ಕೊಲೆ-ಶರೀಫ್ ಕೊಯಿಲ
*ಸಮಗ್ರ ತನಿಖೆಯಾಗಿ ಸೂಕ್ತ ಪರಿಹಾರ ನೀಡಿ-ರಶೀದ್ ಅಮ್ಚಿನಡ್ಕ

ಪುತ್ತೂರು : ದ.ಕ.ಜಿಲ್ಲೆಯಲ್ಲಿ ಕಳೆದ 10 ದಿನಗಳಲ್ಲಿ ಮಸೂದ್, ಪ್ರವೀಣ್ ನೆಟ್ಟಾರ್ ಹಾಗೂ ಫಾಝಿಲ್‌ರವರ ಕೊಲೆಗಳು ನಡೆದಿರುವುದು ಖಂಡನೀಯ. ಈ ಮೂರು ಮಂದಿಯ ಕೊಲೆಗಳನ್ನು ನಡೆಸಿದ ಆರೋಪಿಗಳನ್ನು ಬಂಧಿಸಿ ಅವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್. ಶಕೂರ್ ಹಾಜಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಮೂರು ಯುವಕರ ಕೊಲೆ ನಡೆದರೂ ರಾಜ್ಯದ ಮುಖ್ಯಮಂತ್ರಿಯವರು ಕೇವಲ ಪ್ರವೀಣ್ ನೆಟ್ಟಾರ್‌ರವರ ಮನೆಗೆ ತೆರಳಿ ಸಾಂತ್ವನ ಹೇಳಿದ್ದಾರೆ. ಮಾತ್ರವಲ್ಲದೆ ಅವರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇದು ಸ್ವಾಗತಾರ್ಹವೇ ಆಗಿದ್ದರೂ ಇನ್ನೊಂದು ಸಮುದಾಯಕ್ಕೆ ಅನ್ಯಾಯವೆಸಗಿದ್ದಾರೆ. ಎಲ್ಲರ ಜೀವ ಒಂದೇ ಆಗಿದ್ದರೂ ಮುಖ್ಯಮಂತ್ರಿ ಗಳು ಹಿಂದೂ ಮುಸ್ಲಿಮ್ ಸಮಾಜವನ್ನು ವಿಭಜಿಸಿದ್ದಾರೆ. ಇದು ಮುಖ್ಯಮಂತ್ರಿ ಸ್ಥಾನಕ್ಕೆ ಚ್ಯುತಿ ತಂದಿದ್ದು ತಕ್ಷಣ ಅವರು ಮಸೂದ್ ಹಾಗೂ ಫಾಝಿಲ್ ಮನೆಗೂ ತೆರಳಿ ಸಾಂತ್ವನ ಹೇಳಿ ಅವರಿಗೆ ಸೂಕ್ತ ಪರಿಹಾರ ಘೋಷಿಸಬೇಕು. ಇಲ್ಲದಿದ್ದರೆ ರಾಜಧರ್ಮವನ್ನು ಪಾಲಿಸದ ಮುಖ್ಯಮಂತ್ರಿಯವರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಅವರು ಹೇಳಿದರು.

ಇಂತಹ ಕೊಲೆಗಳಿಗೆ ಮುಖ್ಯಮಂತ್ರಿಯವರೇ ನೇರ ಕಾರಣರಾಗಿದ್ದು ಕೆಲವು ಸಮಯಗಳ ಹಿಂದೆ ಕೊಲೆಯಾದ ಸಂದರ್ಭದಲ್ಲಿ ಕ್ರಿಯೆಗೆ ಪ್ರತಿಕ್ರಿಯೆ ಎಂದು ಹೇಳಿಕೆ ನೀಡಿ ಸಂಘ ಪರಿವಾರದವರನ್ನು ಹುರಿದುಂಬಿಸಿದ ಪರಿಣಾಮ ಇಂದು ದ.ಕ.ಜಿಲ್ಲೆ ಸೇರಿದಂತೆ ನಾನಾ ಕಡೆಗಳಲ್ಲಿ ಇಂತಹ ಕೃತ್ಯ ನಡೆಯುತ್ತದೆ ಎಂದು ಅವರು ಹೇಳಿದರು.

ಮಸೂದ್ ಅಲ್ಪಸಂಖ್ಯಾತ ಯುವಕ ಕೊಲೆಯಾದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡದೆ ಶಾಂತಿ ಸಹನೆ ಕಾಪಾಡುವಂತೆ ಅಲ್ಪಸಂಖ್ಯಾತರು ವಿನಂತಿಸಿಕೊಂಡಿದ್ದರು. ಮಾತ್ರವಲ್ಲದೆ ಆತನ ಮೃತದೇಹ ದಫನ ಮಾಡಲು ಮಸೀದಿಗೆ ಕೊಂಡೊಯ್ದ ಸಂದರ್ಭದಲ್ಲಿಯೂ ಯಾವುದೇ ಘೋಷಣೆ ಕೂಗದೆ ಯಾವುದೇ ಸಮುದಾಯದ ಭಾವನೆಗಳಿಗೆ ನೋವಾಗದ ರೀತಿಯಲ್ಲಿ ದೇವರು ಒಬ್ಬನೆ ಎಂಬ ವಾಕ್ಯದಡಿಯಲ್ಲಿ ಶವಸಂಸ್ಕಾರ ನಡೆಸಲಾಯಿತು. ಇದಾಗಿ ಹತ್ತು ದಿನಗಳ ಬಳಿಕ ಪ್ರವೀಣ ನೆಟ್ಟಾರು ಎಂಬ ಯುವಕನ ಕೊಲೆ ಆಗಿದೆ. ಇದು ಕೂಡ ಖಂಡನೀಯ ಆದರೆ ಪ್ರವೀಣರವರ ಶವದ ಮೆರವಣಿಗೆ ಸಂದರ್ಭದಲ್ಲಿ ಇನ್ನೊಂದು ಸಮುದಾಯವನ್ನು ನಿಂದಿಸುತ್ತ ಮಸೀದಿಗೆ ಕಲ್ಲು ಬಿಸಾಡಿ ಬೈಕ್‌ಗೆ ಬೆಂಕಿ ಹಚ್ಚಿ ಅಹಿತಕರ ಘಟನೆ ನಡೆಸಲು ಪ್ರಯತ್ನಿಸಲಾಯಿತು. ಇದೊಂದು ಬೇಸರದ ಸಂಗತಿಯಾಗಿದೆ. ಬಳಿಕ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನ ಕೊಲೆಯಾಯಿತು. ಈ ಸಂದರ್ಭದಲ್ಲಿ ಯುವಕನ ಶವಸಂಸ್ಕಾರದಲ್ಲಿ ಸಾವಿರಾರು ಜನರು ಸೇರಿದರೂ ಯಾವುದೇ ಅಹಿತಕರ ಘಟನೆ ನಡೆಯಲಿಲ್ಲ. ಶಾಂತಿಯುತವಾಗಿ ಮೃತದೇಹದ ದಫನ ನಡೆಯಿತು. ಈ ಎಲ್ಲಾ ಕೊಲೆಗಳು ರಾಜಕೀಯ ದುರುದ್ಧೇಶದಿಂದ ಕೂಡಿದ ಕೊಲೆಗಳಾಗಿದ್ದು ಜಿಲ್ಲೆಯಲ್ಲಿ ಈ ರೀತಿಯ ಘಟನೆ ನಡೆಯಬಾರದು ಎಂದು ಹೇಳಿದರು.

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಶರೀಫ್ ಕೊಯಿಲರವರು ಮಾತನಾಡಿ ಬೆಳ್ಳಾರೆ ಹಾಗೂ ಸುರತ್ಕಲ್‌ನಲ್ಲಿ ಮೂರು ಕೊಲೆಗಳಾಗಿದೆ. ಇದು ರಾಜಕೀಯ ಮೇಲಾಟದ ಕೊಲೆಗಳಾಗಿದ್ದು ಚುನಾವಣೆ ಹತ್ತಿರ ಬರುತ್ತಿದ್ದಂತೆ ಯುವಕರ ಮನಸ್ಸಿನಲ್ಲಿ ಹಿಂದೂ ಮುಸ್ಲಿಮ್ ಎನ್ನುವ ವಿಷಬೀಜ ಬಿತ್ತಿ ಇಂತಹ ಕೃತ್ಯಗಳನ್ನು ನಡೆಸಲಾಗುತ್ತಿದೆ ಎಂದರು.‌

ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕರವರು ಮಾತನಾಡಿ ಮುಖ್ಯಮಂತ್ರಿಯವರು ಮೃತರ ಬಗ್ಗೆ ತಾರತಮ್ಯ ನಡೆಸುತ್ತಿದ್ದಾರೆ. ಈ ಕೊಲೆಯ ಸಮಗ್ರ ತನಿಖೆ ನಡೆಸಿ ಇದರ ಹಿಂದಿರುವ ನೈಜ ಆರೋಪಿಗಳನ್ನು ಬಂಽಸಬೇಕಾಗಿದೆ. ಹಾಗೂ ಎಲ್ಲರಿಗೂ ಸೂಕ್ತ ಪರಿಹಾರ ನೀಡಬೇಕು ಎಂದರು.

ಬಜರಂಗದಳ, ಪಿಎಫ್ಐ ನಿಷೇಧಿಸಬೇಕು

ಕೋಮುವಾದಿ ಸಂಘಟನೆಗಳಾದ ಬಜರಂಗದಳ ಹಾಗೂ ಪಿಎಫ್ಐ ಗಳಿಂದ ಅಶಾಂತಿಯ ವಾತಾವರಣ ಉಂಟಾಗುತ್ತಿದ್ದು ತಕ್ಷಣ ಪಿಎಫ್ಐ ಮತ್ತು ಬಜರಂಗದಳವನ್ನು ನಿಷೇಧಿಸಿ ಕಾನೂನುಕ್ರಮ ಕೈಗೊಳ್ಳಬೇಕು ಎಂದು ವಿ.ಹೆಚ್.ಶಕೂರು ಹಾಜಿ ಒತ್ತಾಯಿಸಿದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.