ವರವ ಕೊಡುವ ವರ ಮಹಾಲಕ್ಷ್ಮಿ

0

ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ 

ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ || 

ಈ ಮಂತ್ರದ ಮೂಲಕ ಮಹಿಳೆಯರು ಪೂಜಿಸುತ್ತಾರೆ. ಕರಗಳೆರಡನ್ನೂ ಕಂಗಳಲ್ಲಿ ತುಂಬಿಕೊಂಡು ಆ ವ್ರತಾಚರಣೆಯ ದಿನವನ್ನಾರಂಭಿಸುತ್ತಾರೆ.  ಮನೆ ಮನ ಬೆಳಗುವ ಜ್ಯೋತಿ ಹೆಣ್ಣು. ಆ ಹೆಣ್ಣು ವ್ರತ ಮಾಡಿ ಪೂಜಿಸಿ ಆರಾಧನಾ ಮಾಡುವ ಶುಭದಿನವಾಗಿದೆ. 

ಭಾರತದ ದಕ್ಷಿಣದ ಭಾಗಗಳಲ್ಲಿ ಹೆಚ್ಚು ವಿಜೃಂಭಣೆಯಿಂದ ನಡೆಸುವ ವರಮಹಾಲಕ್ಷ್ಮಿ ಪೂಜೆಯನ್ನು ಉತ್ತರದ ಭಾಗಗಳಲ್ಲಿ ಮಹಾಲಕ್ಷ್ಮಿ ವ್ರತದ ಮೂಲಕ ಆಚರಿಸುತ್ತಾರೆ. ಎರಡೂ ಭಾಗಗಳಲ್ಲೂ ಒಂದೇ ದೇವರಾದ ಲಕ್ಷ್ಮಿಯನ್ನು ಕುಟುಂಬದ ಶಾಂತಿಗಾಗಿ ಮತ್ತು ಪ್ರಗತಿಗಾಗಿ ಪೂಜಿಸಲಾಗುತ್ತದೆ.

 ಇಲ್ಲಿ ವರ ಎಂದರೆ ದೇವರ ಕೃಪಾಕಟಾಕ್ಷವಾಗಿದೆ. ಅಂದರೆ ವರವನ್ನು ನೀಡುವ ದೇವರು ವರಮಹಾಲಕ್ಷ್ಮಿಯಾಗಿದ್ದಾರೆ ಎಂಬುದು ನಂಬಿಕೆಯಾಗಿದೆ. ವರಮಹಾಲಕ್ಷ್ಮಿ ವ್ರತವನ್ನು ವಿವಾಹವಾದ ಮುತ್ತೈದೆಯರು ಕೈಗೊಳ್ಳುತ್ತಾರೆ. 

 ವರಮಹಾಲಕ್ಷ್ಮಿ ವ್ರತವನ್ನು ಮಾಡುವುದು ಅಷ್ಟಲಕ್ಷ್ಮಿಯರ ವ್ರತಕ್ಕೆ ಸಮನಾದುದು ಎಂಬುದು ಹಿಂದಿನಿಂದಲೂ ಬಂದ ನಂಬಿಕೆ. ಸಂಪತ್ತು, ಭೂಮಿ, ವಿದ್ಯಾಭ್ಯಾಸ, ಪ್ರೀತಿ, ಖ್ಯಾತಿ, ಶಾಂತಿ, ಸಂತೋಷ ಮತ್ತು ಶಕ್ತಿಯ ಎಂಟು ದೇವತೆಗಳನ್ನು ಪೂಜಿಸಿದ ಮಹತ್ವ ಪುಣ್ಯ ವರಮಹಾಲಕ್ಷ್ಮಿ ದೇವರನ್ನು ಪೂಜಿಸುವುದರಲ್ಲಿದೆ ಎಂದು ಹೇಳುತ್ತಾರೆ. ಶ್ರಾವಣ ಮಾಸದ ಪೂರ್ಣ ಚಂದ್ರನಕ್ಕಿಂತ ಮೊದಲು ಶುಕ್ರವಾರದಂದು ಈ ವ್ರತವನ್ನು ಕೈಗೊಳ್ಳಲಾಗುತ್ತದೆ. 

ವಿವಾಹವಾದ ಮಹಿಳೆಯರು ಹೆಚ್ಚು ಶ್ರದ್ಧೆ ಭಕ್ತಿಯಿಂದ ಈ ವ್ರತಾಚರಣೆಯನ್ನು ಕೈಗೊಳ್ಳುತ್ತಾರೆ. ಮುಂಜಾನೆಯ ಕಾಲದಲ್ಲೇ ಸ್ನಾನವನ್ನು ಮುಗಿಸಿ  ಅರ್ಧ ದಿನ ಉಪವಾಸವನ್ನು ಕೈಗೊಳ್ಳುತ್ತಾರೆ.

ಕುಟುಂಬ ಶಾಂತಿ ಸಮಾಧಾನಕ್ಕಾಗಿ ಈ ವ್ರತವನ್ನು ಕೈಗೊಳ್ಳುತ್ತಾರೆ. ಅಷ್ಟ ಲಕ್ಷ್ಮಿಯರ ಪೂಜೆಯನ್ನು ಮಾಡಿದಂತಹ ಪುಣ್ಯ ವರಮಹಾಲಕ್ಷ್ಮಿ ವೃತದಲ್ಲಿ ದೊರೆಯುವುದರಿಂದ ಶ್ರದ್ಧೆ ಭಕ್ತಿ ಪೂಜಿಸುವಾಗ ಇರಲೇಬೇಕು.

ಲಕ್ಷ್ಮೀ ದೇವಿಯೂ ಕರದ ಅಗ್ರ ಸ್ಥಾನದಲ್ಲಿರುವವಳಾದ್ದರಿಂದ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿ ಸಂತೃಪ್ತಿ ಕಾಣುವ ಜನರೆಂದರೆ ಲಕ್ಷ್ಮೀದೇವಿಗೆ ಅಚ್ಚುಮೆಚ್ಚು.

ನಾವೆಷ್ಟು ಭಯ ಭಕ್ತಿ ಯಿಂದ ಪೂಜೆ ಮಾಡುತ್ತೇವೆಯೋ ಮತ್ತು ದೇವರಿಗೆ ಕೊಡುತ್ತೇವೆಯೋ, ಅದಕ್ಕಿಂತ ಹೆಚ್ಚಿನದನ್ನು ಶ್ರೀ ಮಹಾಲಕ್ಷ್ಮಿಯು ನಮಗೆ ಕರುಣಿಸುತ್ತಾಳೆ ಎಂಬುದು ಭಕ್ತರ ನಂಬಿಕೆ. ಭಕ್ತರು ತನ್ನ ಇಷ್ಟಾರ್ಥವನ್ನು ಕೋರಿಕೆ ಮಾಡುವರು.ಈ ದಿನ ಮಹಿಳೆಯರದ್ದೇ ಕಾರುಬಾರು.

ಪ್ರತಿಯೊಬ್ಬ ಪುರುಷನ ಏಳಿಗೆಯ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ಎಂಬ ಮಾತು ತಿಳಿದ ವಿಚಾರ. ಹೆಣ್ಣು ಮನೆ ಬೆಳಕು ಸ್ಥಿತಿ ಕಾರಕನಾದ ಶ್ರೀ ಮಹಾವಿಷ್ಣುವಿನ ಶಕ್ತಿಯೇ ಆಗಿರುವ ಶ್ರೀ ಮಹಾಲಕ್ಷ್ಮಿಯನ್ನು ಒಲಿಸಿಕೊಂಡರೆ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಭಕ್ತರ ನಂಬಿಕೆ.

ಪ್ರತಿ ವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸುವ ಮೂಲಕ ದೀರ್ಘ ಮಾಂಗಲ್ಯ ಭಾಗ್ಯವನ್ನು ಬೇಡುವುದಲ್ಲದೆ, ತಮ್ಮ ಕುಟುಂಬಕ್ಕೆ ಸಂಪತ್ತು, ಸುಖ ಸಮೃದ್ಧಿ ಕೋರುವ ಸುಮಂಗಳೆಯರು, ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವ್ರತವಿದು. ಹೀಗಾಗಿ, ತಾವೇ ಮಾಡುವ ಪೂಜೆ ಎಂಬ ಹೆಮ್ಮೆ ಈ ಮಹಿಳೆಯರಿಗೆ. 

ಹಬ್ಬವನ್ನು ದಿನಗಳೆದಂತೆ ಸಂಬಂಧಗಳು ಯಾಂತ್ರಿಕವಾಗುತ್ತಿರುವ ಈ ದಿನಗಳಲ್ಲಿ, ವರಮಹಾಲಕ್ಷ್ಮೀ ವ್ರತವು ಇತ್ತೀಚೆಗೆ ಸಾಮೂಹಿಕ ಆಚರಣೆಯಾಗುತ್ತಿರುವುದು ಕಂಡು ಬರುತ್ತದೆ. ಆಚರಣೆಯಲ್ಲಿ ಕಪ್ಪು ಬಣ್ಣದ ಬಲೆ, ಬ್ಲೌಸ್ ಪೀಸ್ ಅರಶಿನ ಕುಂಕುಮ ಪ್ರಸಾದವಾಗಿ ಸಿಗುವುದು.

ಪಟ್ಟಣಗಳಲ್ಲಿ ಭಯಂಕರ ಆಚರಣೆ ಕಂಡು ಬರುತ್ತವೆ. ಮುತ್ತೈದೆಯರಿಗೆ ಬಾಗಿಣ ಕೋಡುವುದು ಇವೆಲ್ಲಾ ರೂಢಿಯಲ್ಲಿದೆ. ಕಳೆದು ಹೋದ ಮಾನವೀಯ ಬಾಂಧವ್ಯಗಳ ಬೆಸುಗೆಗೂ ಪೂರಕವಾಗುತ್ತದೆ. ಎಂಬುದರಲ್ಲಿ ಎರಡು ಮಾತಿಲ್ಲ. ಹಬ್ಬಗಳ ಆಚರಣೆಯ  ಧ್ಯೇಯವೂ ಇದೇ ಆಗಿದೆ.

ಹಾಗೆಯೇ ಮನೆಯು ಚಿಕ್ಕದಾಗಿದ್ದರೂ, ಮನಸು ದೊಡ್ಡದಾಗಿರಬೇಕು. ಹೌದು ಮನೆ ಚಿಕ್ಕದಾದರೂ ತೊಂದರೆಯಿಲ್ಲ ಹಸಿದವರಿಗೆ ಅನ್ನ ಕೊಡುವುದು ಇದೆಲ್ಲಾ ದೊಡ್ಡ ಮನಸ್ಸು.  ಮನಸ್ಸು ಶುಭ್ರವಾಗಿರಬೇಕು, ಶುದ್ಧಿಯಾಗಿರಬೇಕು. ಆಗಲೇ ಮಾನವ ಧರ್ಮಕ್ಕೆ ಬೆಲೆ.

ಅದಕ್ಕೇ ಅಲ್ಲವೇ ದಾಸರು ಹೇಳಿದ್ದು – “ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು; ಘನವಾಗಿ ಮನೆಯನ್ನು ಬಳಿದು, ಅಲ್ಲಿ ಮಿನುಗುವ ತ್ರಿಗುಣದ ಒಲೆಗುಂಡ ನೆಡೆದು” ಎಂಬುದಾಗಿ ಹೇಳಿದ್ದಾರೆ.

ಅವರವರ ಧರ್ಮಾಚರಣೆಯು ಅವರವರಿಗೇ ಶ್ರೇಷ್ಠ. ಬೇರೆ ಧರ್ಮವನ್ನು ನಿಂದಿಸುವುದಕ್ಕೆ ಯಾವುದೇ ಧರ್ಮವೂ ಬೋಧಿಸುವುದಿಲ್ಲ. ಬೇರೊಂದು ಧರ್ಮ ವನ್ನು ನಿಂದಿಸುತ್ತಾರೆಂದರೆ, ತಮ್ಮದೇ ಧರ್ಮವನ್ನು ದೂಷಿಸಿದಂತೆ ನಮ್ಮ ಧರ್ಮಕ್ಕೆ ಅವಮಾನ ಮಾಡಿದಂತೆ ಎಂಬ ಸಂದೇಶದೊಂದಿಗೆ, ಭಾರತೀಯರು ಪರಧರ್ಮ ಸಹಿಷ್ಣುಗಳು ಎಂಬ ಮಾತನ್ನು ಉಳಿಸಿಕೊಳ್ಳೋಣ, ನಾವೆಲ್ಲರೂ ಮೊದಲು ಭಾರತೀಯರಾಗೋಣ, ಭಾರತೀಯತೆಯನ್ನು ಮೆರೆಯೋಣ. ಈ ಭೂಮಿಯಲ್ಲಿ ಉಳಿದಷ್ಟೂ ದಿನ ಒಂದಾಗಿ ಬಾಳೋಣ. ಎಲ್ಲಾ ಹಿಂದೂ ಧರ್ಮದ ಜನ ಮಿತ್ರರಿಗೆ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು

.

 

 

ಹರ್ಷಿತಾ ಹರೀಶ್ ಕುಲಾಲ್                                                                                                

LEAVE A REPLY

Please enter your comment!
Please enter your name here