ಪುತ್ತೂರಿನಲ್ಲಿ ಏನೂ ಸಮಸ್ಯೆ ಇಲ್ಲ, ತರ್‍ಲೆ ಮಾಡುವವರ ವಿರುದ್ಧ ಕ್ರಮ-ಪುತ್ತೂರು ನಗರ ಪೊಲೀಸ್ ಠಾಣೆಗೆ ಎಡಿಜಿಪಿ ಅಲೋಕ್ ಕುಮಾರ್ ಭೇಟಿ

0


ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಪುತ್ತೂರಿನಲ್ಲಿ ಯಾವುದೇ ಏನೂ ಸಮಸ್ಯೆ ಇಲ್ಲ. ಎಲ್ಲಾ ಕಡೆ ನಿಗಾ ವಹಿಸಿದ್ದೇವೆ. ಒಳ್ಳೆಯ ಜನರೊಂದಿಗೆ ಒಳ್ಳೆಯ ರೀತಿಯಲ್ಲಿ ಇರಬೇಕು. ಯಾರು ತರ್‍ಲೆ ಮಾಡುತ್ತಾರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತೆವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಅವರು ಹೇಳಿದ್ದಾರೆ.


ದ.ಕ. ಜಿಲ್ಲೆಯಲ್ಲಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ನಡೆಯುತ್ತಿರುವ ತನಿಖೆ, ಬಂದೋಬಸ್ತ್ ಹಾಗೂ ಶಾಂತಿ ಸುವ್ಯವಸ್ಥೆ ಕುರಿತಂತೆ ಮಂಗಳೂರು ಕಮಿಷನರೇಟ್, ದ.ಕ. ಮತ್ತು ಉಡುಪಿ ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಂಗಳೂರಿನಲ್ಲಿ ಮಾಹಿತಿ ಪಡೆದ ಬಳಿಕ ಸುಳ್ಯ, ಬೆಳ್ಳಾರೆ ಪೊಲೀಸ್ ಠಾಣೆಗೆ ಭೇಟಿ ನೀಡುವ ನಡುವೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಠಾಣಾ ಇನ್‌ಸ್ಪೆಕ್ಟರ್‌ವರಿಂದ ಪುತ್ತೂರಿನಲ್ಲಿ ಹಲವು ಪ್ರಕರಣದಲ್ಲಿ ಭಾಗಿಯಾಗಿರುವವರ ಮಾಹಿತಿ ಪಡೆದರು. ಆ ಬಳಿಕ ಪತ್ರಿಕಾ ಮಾಧ್ಯಮದವರೊಂದಿಗೆ ಮಾತನಾಡಿದರು. ಪುತ್ತೂರಿನಲ್ಲಿ ಏನಾದರು ಸಮಸ್ಯೆ ಇದ್ದರೆ ನೀವೇ ತಿಳಿಸಿ. ನನ್ನ ಗಮನಕ್ಕೆ ಬಂದಂತೆ ಯಾವುದೇ ಸಮಸ್ಯೆ ಇಲ್ಲ. ಎಲ್ಲರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಕಡೆ ನಿಗಾ ವಹಿಸುತ್ತಿದ್ದೇವೆ. ಒಳ್ಳೆಯ ಜನರೊಂದಿಗೆ ಒಳ್ಳೆಯ ರೀತಿಯಲ್ಲಿ ಮತ್ತು ತರ್‍ಲೆ ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.

ಪುರುಷ ಹಿಂಬದಿ ಸವಾರರ ಪ್ರಯಾಣಕ್ಕೆ ನಿರ್ಬಂಧ:
ಅಹಿತಕರ ಘಟನೆ ನಿಯಂತ್ರಿಸುವ ಸಲುವಾಗಿ ಸಂಜೆ ಗಂಟೆ ೬ ರಿಂದ ಬೆಳಗ್ಗೆ ೬ರ ವರೆಗೆ ಹಾಕಿರುವ ನಿರ್ಬಂಧಗಳನ್ನು ಹಂತಹಂತವಾಗಿ ತೆರವು ಮಾಡಲಾಗುವುದು, ಅದರೊಂದಿಗೆ ದ್ವಿಚಕ್ರವಾಹನಗಳಲ್ಲಿ ಸಂಚರಿಸುವ ಸಹಸವಾರರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು. ಸಹಸವಾರರು ಅನೇಕ ಬಾರಿ ಅಪರಾಧಗಳಲ್ಲಿ ಭಾಗಿಯಾಗುವುದು ಜಾಸ್ತಿ ಕಂಡುಬಂದಿದೆ. ಇತರ ರಾಜ್ಯಗಳ ಮಾದರಿಯಲ್ಲಿ ಇಲ್ಲಿಯೂ ಅವರ ಮೇಲೆ ನಿಗಾ ಇರಿಸಲಾಗುತ್ತದೆ. ದ್ವಿಚಕ್ರ ವಾಹನದಲ್ಲಿ ೧೮ ರಿಂದ ೬೦ ವರ್ಷದೊಳಗಿನ ಪುರುಷರು ಇಬ್ಬರು ಹೋಗುವಂತಿಲ್ಲ. ಹಿರಿಯ ನಾಗರಿಕರು ಮತ್ತು ಮಕ್ಕಳನ್ನು ಹೊರತುಪಡಿಸಿ ಉಳಿದವರು ದ್ವಿಚಕ್ರ ವಾಹನದಲ್ಲಿ ಸಂಚರಿಸುವಂತಿಲ್ಲ. ಇದನ್ನು ಒಂದು ವಾರ ಜಾರಿಯಲ್ಲಿ ತಂದು ನೋಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಐಜಿಪಿ ದೇವಜ್ಯೋತಿ ರೇ, ದ.ಕ. ಜಿಲ್ಲಾ ಎಸ್ಪಿ ಋಷಿಕೇಶ್ ಸೊನಾವಣೆ, ಎಡಿಷನಲ್ ಎಸ್ಪಿ ಕುಮಾರಚಂದ್ರ, ಪುತ್ತೂರು ನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಕೆಟ್ಟು ಹೋದ ಸಿ.ಸಿ.ಕ್ಯಾಮರ ದುರಸ್ಥಿ ಗೊಳಿಸಲು ಸೂಚನೆ:
ಅಪರಾಧ ಮತ್ತು ಕಾನೂನು ಸುವ್ಯಸ್ಥೆಯ ದೃಷ್ಟಿಯಿಂದ ಸಿ.ಸಿ ಕ್ಯಾಮರ ಅಗತ್ಯವಾಗಿ ಉಪಯೋಗ ಆಗುತ್ತದೆ. ಇಂತಹ ಸಂದರ್ಭದಲ್ಲಿ ಸಿಸಿ ಕ್ಯಾಮರ ಸರಿಯಾಗಿ ಕಾರ್ಯ ನಿರ್ವಹಿಸಿರಬೇಕಾಗುತ್ತದೆ. ಪುತ್ತೂರಿನಲ್ಲಿ ಸಿಸಿ ಕ್ಯಾಮರ ಕೆಟ್ಟು ಹೋಗಿದ್ದರೆ ಅದನ್ನು ತಕ್ಷಣ ದುರಸ್ಥಿ ಮಾಡಲು ಸೂಚನೆ ನೀಡುತ್ತೇನೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.

LEAVE A REPLY

Please enter your comment!
Please enter your name here