ಲ್ಯಾಂಪ್ಸ್ ಸೊಸೈಟಿಯ ಅತ್ಯುತ್ತಮ ಸಾಧನೆಗೆ ಡಿಸಿಸಿ ಬ್ಯಾಂಕ್ ಪ್ರಶಸ್ತಿ

0

ಪುತ್ತೂರು:ಸಹಕಾರಿ ಕ್ಷೇತ್ರದ ಮುಖಾಂತರ ಪರಿಶಿಷ್ಟ ವರ್ಗಗಳ ಅಭಿವೃದ್ದಿಗೆ ಸಹಕಾರಿಯಾಗುತ್ತಾ, ಸುಧೀರ್ಘ 56  ವರ್ಷಗಳ ಕಾಲ ಸೇವೆ ಸಲ್ಲಿಸುತ್ತಾ ಪರಿಶಿಷ್ಟ ವರ್ಗಗಳ ದೊಡ್ಡ ಪ್ರಮಾಣ ವಿವಿಧೋದ್ದೇಶ(ಲ್ಯಾಂಪ್ಸ್) ಸಹಕಾರಿ ಸಂಘವು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ನೀಡಲಾಗುವ ಪ್ರಶಸ್ತಿಗೆ ಭಾಜನವಾಗಿದೆ.
ಈ ಸಹಕಾರಿ ಸಂಘವು 1966-67 ರಲ್ಲಿ ಫಾರೆಸ್ಟ್ ಲೇಬರರ್‍ಸ್ ಕೋ-ಆಪರೇಟಿವ್ ಸೊಸೈಟಿಯಾಗಿ ಸರಕಾರದಿಂದ ಸ್ಥಾಪಿಸಲ್ಪಟ್ಟಿತ್ತು. 1976-77ರಲ್ಲಿ ಸರಕಾರದ ಆದೇಶದಂತೆ ಲ್ಯಾಂಪ್ಸ್ ಸಹಕಾರಿ ಸಂಘವಾಗಿ ಮರು ನಾಮಕರಣಗೊಂಡಿತ್ತು. ಈ ಸಂಘವು ಪರಿಶಿಷ್ಟ ವರ್ಗಗಳ ಸಮಗ್ರ ಅಭಿವೃದ್ಧಿಗೆ ಪೂರಕವಾದ ಎಲ್ಲಾ ರೀತಿಯ ಸಹಕಾರ, ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿರುತ್ತದೆ. ಸಹಕಾರಿ ಸಂಘದ ಪ್ರಧಾನ ಕಚೇರಿಯು ದರ್ಬೆಯಲ್ಲಿ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಜೊತೆಗೆ ನೆಕ್ಕಿಲಾಡಿ, ಬಡಗ್ನನೂರು ಹಾಗೂ ಅಜ್ಜಿಕಲ್ಲುಗಳಲ್ಲಿ ಶಾಖೆಗಳನ್ನು ಹೊಂದಿದ್ದು ಎಲ್ಲಾ ಶಾಖೆಗಳು ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ರೂ.1.25ಕೋಟಿ ವೆಚ್ಚದಲ್ಲಿ ನೆಕ್ಕಿಲಾಡಿ ಶಾಖಾ ಕಟ್ಟಡದ ವಿಸ್ತೃತ ಕಾಮಗಾರಿಗಳು ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜುಗೊಂಡಿದೆ.

ಬ್ಯಾಂಕಿಂಗ್ ವ್ಯವಹಾರ:
ಸಂಘದಲ್ಲಿ 2021-22ನೇ ಸಾಲಿನಲ್ಲಿ 4787  ಸದಸ್ಯರಿಂದ ರೂ.38,68,066 ಪಾಲು ಬಂಡವಾಳವಿರುತ್ತದೆ. ರೂ.24,15,616 ಸರಕಾರ ಪಾಲು ಬಂಡವಾಳವಿರುತ್ತದೆ. ರೂ.87,98,829 ಸಂಚಯ ಠೇವಣಿ, 5,92,350 ಮಾಸಿಕ ಠೇವಣಿ, 2,75,28,500 ನಿರಖು ಠೇವಣಿ ಹಾಗೂ ರೂ.60,37,107 ಸ್ವರ್ಣ ನಿತ್ಯನಿಧಿ ಠೇವಣಿ ಹೊಂದಿರುತ್ತದೆ. ರೂ.1,88,84,826.69ನ್ನು ವಿವಿಧ ರೂಪದಲ್ಲಿ ಧನ ವಿನಿಯೋಗ ಮಾಡಿದೆ. ರೂ.51,500 ವಿವಿಧ ಸಂಘ ಸಂಸ್ಥೆಗಳಲ್ಲಿ ಠೇವಣಿಯನ್ನು ಹೊಂದಿದೆ. ಕೃಷಿ, ಕೃಷಿಯೇತರ, ಗೃಹ ನಿರ್ಮಾಣ, ವಾಹನ ಖರೀದಿ ಮೊದಲಾದ ರೂಪದಲ್ಲಿ ರೂ.3,32,43,146 ಸಾಲ ವಿತರಿಸಲಾಗಿದ್ದು ಶೇ.98.32 ಸಾಲ ವಸೂಲಾತಿಯಾಗಿರುತ್ತದೆ. ವರದಿ ವರ್ಷದಲ್ಲಿ ಸಂಘವು ರೂ.16,75,645 ನಿವ್ವಳ ಲಾಭಗಳಿಸಿದೆ.

ಸಾಮಾಜಿಕವಾಗಿ ಸಂಘ:
ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಂಘವು ತನ್ನ ಸದಸ್ಯರಿಗೆ ವೈದ್ಯಕೀಯ ಸಹಾಯಧನ, ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಸಂಘದ ಮುಖಾಂತರ ಪಡಿತರ ಸಾಮಾಗ್ರಿಗಳ ವಿತರಣೆ, ಗೃಪಯೋಗಿ ಸಾಮಾಗ್ರಿಗಳು, ಜಿನಸು, ಸ್ಟೇಷನರಿ ಸಾಮಾಗ್ರಿಗಳನ್ನು ಮೂರು ಶಾಖೆಗಳ ಮೂಲಕ ವಿತರಿಸಲಾಗುತ್ತಿದೆ. ಸಂಘದ ಸದಸ್ಯರಿಗೆ ಉಳಿತಾಯ ಮನೋಭಾವಗಳನ್ನು ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಸ್ವ-ಸಹಾಯ ಸಂಘಗಳನ್ನು ರಚಿಸಿಕೊಳ್ಳಲಾಗಿದೆ. ಸಂಘದ ಮುಖಾಂತರ ಸ್ವ-ಸಹಾಯ ಗುಂಪಿನ ಸದಸ್ಯರಿಗೆ ಆರ್ಥಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಆಡಳಿತ ಮಂಡಳಿ:
ಪ್ರಸ್ತುತ ಸಂಘದ ಅಧ್ಯಕ್ಷರಾಗಿ ಪೂವಪ್ಪ ನಾಯ್ಕ ಎಸ್. ಆಲಂಕಾರು, ಉಪಾಧ್ಯಕ್ಷರಾಗಿ ಧರ್ಣಪ್ಪ ನಾಯ್ಕ ಉಪ್ಪಿನಂಗಡಿ, ನಿರ್ದೇಶಕರಾಗಿ ಮಂಜುನಾಥ ಎನ್.ಎಸ್. ಉಪ್ಪಳಿಗೆ, ಪೂವಪ್ಪ ನಾಯ್ಕ ಕೆ. ಕುಂಞಕುಮೇರು, ಅಪ್ಪಯ್ಯ ನಾಯ್ಕ ತಳೆಂಜಿ, ಕೃಷ್ಣ ನಾಯ್ಕ ಪಿ.ಎಂ. ಕೃಷ್ಣನಗರ, ನೇತ್ರಾಕ್ಷ ಏಣಿತ್ತಡ್ಕ, ಶೇಷಪ್ಪ ನಾಯ್ಕ ದೊಡ್ಡಡ್ಕ, ಅಶ್ವಿನಿ ಬಿ.ಕೆ ಮುಂಡೂರು, ಭವ್ಯ ಚಿಕ್ಕಮುಡ್ನೂರು, ರೇವತಿ ನಿಡ್ಪಳ್ಳಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಗಣಪಣ್ಣ ಹೆಚ್ ಹಾಗೂ ಸಿಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.

ಎರಡು ಬಾರಿ ರಾಜ್ಯ ಪ್ರಶಸ್ತಿ:
ಸಹಕಾರಿ ಕ್ಷೇತ್ರದ ಉತ್ತಮ ಸಾಧನೆಗಾಗಿ ಸಂಘವು 2005ರಲ್ಲಿ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅತ್ಯುತ್ತಮ ಸಹಕಾರಿ ಸಂಘ ರಾಜ್ಯ ಪ್ರಶಸ್ತಿ, 2007ರಲ್ಲಿ ಸಹಕಾರಿ ಚಳುವಳಿಯ ಶತಮಾನೋತ್ಸವದ ಸಮಾರೋಪ ಸಮಾರಭದಲ್ಲಿ ಅತ್ಯುತ್ತಮ ಸಹಕಾರಿ ಸಂಘ ರಾಜ್ಯ ಪ್ರಶಸ್ತಿಯನ್ನು ಅಂದಿನ ಸಹಕಾರಿ ಸಚಿವರಾಗಿದ್ದ ಜಿ.ಟಿ ದೇವೇ ಗೌಡರಿಂದ ಪುರಸ್ಕರಿಸಲ್ಪಟ್ಟಿದೆ.2021-22ರಲ್ಲಿ ಸಂಘವು ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಲ ಮೈಸೂರು ಇವರಿಂದ ಅತ್ಯುತ್ತಮ ಸಹಕಾರಿ ಸಂಘ ಎಂದು ಗೌರವಿಸಲ್ಪಟ್ಟಿದೆ. ಸಂಘವು ಕಳೆದ ೨೫ ವರ್ಷಗಳಿಂದ `ಎ’ ಶ್ರೇಣಿಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದಿರುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here