ವಾಮಂಜೂರಿನ ನಾಲ್ವರ ಬರ್ಬರ ಕೊಲೆ ಪ್ರಕರಣದ ಅಪರಾಧಿ ಪೆರಿಯಡ್ಕದ ಪ್ರವೀಣ್ ಕುಮಾರ್ ಬಿಡುಗಡೆಗೆ ಆದೇಶ : ಸಮಾಜಕ್ಕೆ ಅಪಾಯದ ಭೀತಿಯಿದೆ-ಸಂತ್ರಸ್ತರ ಮನೆಯವರ ಆಕ್ಷೇಪ

Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1
Puttur_Advt_NewsUnder_1

ಮಂಗಳೂರು:90ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಂಗಳೂರಿನ ವಾಮಂಜೂರಿನಲ್ಲಿ ನಡೆದ ನಾಲ್ಕು ಮಂದಿಯ ಬರ್ಬರ ಕೊಲೆ ಪ್ರಕರಣದ ಅಪರಾಧಿಯಾಗಿ ಜೈಲಿನಲ್ಲಿರುವ ಉಪ್ಪಿನಂಗಡಿ ಪೆರಿಯಡ್ಕ ಮೂಲದ ಪ್ರವೀಣ್ ಕುಮಾರ್(62ವ.)ನನ್ನು ಈ ವರ್ಷ ಭಾರತದ ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಜೈಲಿನಿಂದ ಬಿಡುಗಡೆ ಮಾಡಲು ಆದೇಶವಾಗಿದೆ.

ಆದರೆ,ಆತನಿಂದ ಕೊಲೆಯಾದವರ ಕುಟುಂಬದವರಿಂದ ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.ಆತನನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಹತ್ಯೆಯಾದವರ ಕುಟುಂಬಸ್ಥರ ಪರವಾಗಿ ಸೀತಾರಾಮ ಮತ್ತು ಇತರರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.ವಾಮಜೂರು ಪ್ರವೀಣ್ ಕಳೆದ 28 ವರ್ಷಗಳಿಂದ ಜೈಲಿನಲ್ಲಿದ್ದು, ಪ್ರಸ್ತುತ ಬಳ್ಳಾರಿ ಜೈಲಿನಲ್ಲಿದ್ದಾನೆ.
ಮೂಲತ: ಉಪ್ಪಿನಂಗಡಿ ಸಮೀಪದ ಪೆರಿಯಡ್ಕ ನಿವಾಸಿಯಾಗಿದ್ದು ಮಂಗಳೂರು ಚಿಲಿಂಬಿಯಲ್ಲಿ ಟೈಲರಿಂಗ್ ಕೆಲಸ ಮಾಡಿಕೊಂಡಿದ್ದ ಪ್ರವೀಣ್ 1994ರ ಫೆಬ್ರವರಿ 23ರಂದು ರಾತ್ರಿ ವಾಮಂಜೂರಿನ ನಿವಾಸಿಗಳಾಗಿದ್ದು ಆತನ ಸಂಬಂಧಿಕರೇ ಆಗಿದ್ದ ಅಪ್ಪಿ ಶೇರಿಗಾರ್ತಿ(75ವ.),ಆಕೆಯ ಪುತ್ರಿ ಶಕುಂತಲಾ (36ವ.),ಮೊಮ್ಮಗಳು ದೀಪಿಕಾ(9ವ.)ಮತ್ತು ಅಪ್ಪಿ ಅವರ ಪುತ್ರ ಗೋವಿಂದ (30ವ.)ರವರನ್ನು ಕೊಲೆ ಮಾಡಿ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ.
ಸಿಂಗಲ್ ನಂಬರ್ ಲಾಟರಿ ಟಿಕೆಟ್ ಖರೀದಿಯ ಚಟಕ್ಕೆ ಅಂಟಿಕೊಂಡಿದ್ದ ಪ್ರವೀಣ್ ಹಣಕಾಸಿನ ಬಿಕ್ಕಟ್ಟಿನಲ್ಲಿದ್ದ.ಇದಕ್ಕಾಗಿ ಪತ್ನಿ ಮತ್ತು ಕುಟುಂಬದ ಸದಸ್ಯರ ಚಿನ್ನಾಭರಣಗಳನ್ನು ಅಡಮಾನವಿಟ್ಟಿದ್ದ ಮಾತ್ರವಲ್ಲದೆ ವಿವಿಧ ಮೂಲಗಳಿಂದ ಸಾಲವನ್ನೂ ಪಡೆದುಕೊಂಡಿದ್ದ.ಇಷ್ಟಾದರೂ ಕೈಯಲ್ಲಿ ಹಣವಿಲ್ಲದೆ ಅರ್ಥಿಕವಾಗಿ ಸಂಕಷ್ಟದಲ್ಲಿದ್ದ ಈತ ಈ ದುಷ್ಕೃತ್ಯವೆಸಗಿದ್ದ.
1994 ಫೆಬ್ರವರಿ 23ರಂದು ಸಂಜೆ ವಾಮಂಜೂರಿನಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದ ಆತ ರಾತ್ರಿ ಅಲ್ಲಿಯೇ ಮಲಗಿದ್ದ.ಮಧ್ಯ ರಾತ್ರಿ ಎದ್ದು, ಮನೆಯಲ್ಲಿ ಮಲಗಿದ್ದ 9 ವರ್ಷದ ಬಾಲಕಿ ಸಹಿತ 4 ಮಂದಿಯನ್ನೂ ಹಾರೆಯ ಹಿಡಿಯಿಂದ ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿ ಮನೆ ಮಂದಿಯ ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದ ಆರೋಪಿ ಪ್ರವೀಣನನ್ನು ಕೆಲವೇ ದಿನಗಳಲ್ಲಿ ಪೊಲೀಸರು ಬಂಧಿಸಿದ್ದರು.ಕೊಲೆ ಕೃತ್ಯ ಎಸಗಿದ್ದ ಬಗ್ಗೆ ಆತ ತಪ್ಪೊಪ್ಪಿಕೊಡಿದ್ದ.ಆತ ಕಳವು ಮಾಡಿ ಬಚ್ಚಿಟ್ಟುಕೊಂಡಿದ್ದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ವಿಚಾರಣೆಗೆ ಕರೆತರುತ್ತಿದ್ದಾಗ ಹೊಟೇಲ್‌ನಿಂದ ಪರಾರಿ: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಪ್ರವೀಣ್‌ನನ್ನು ವಿಚಾರಣೆಗಾಗಿ ಬೆಳಗಾವಿಯ ಹಿಂಡಲಗ ಜೈಲಿನಿಂದ ಮಂಗಳೂರು ಜೈಲಿಗೆ ಕರೆತರುತ್ತಿದ್ದಾಗ ಹುಬ್ಬಳ್ಳಿಯ ಕುಂದಗೋಳದಲ್ಲಿ ಹೊಟೇಲ್ ಒಂದರಲ್ಲಿ ಊಟ ಮಾಡುತ್ತಿದ್ದ ವೇಳೆ ಬೆಂಗಾವಲು ಪೊಲೀಸರ ಕೈಯಿಂದ ತಪ್ಪಿಸಿಕೊಂಡಿದ್ದ.ಆತನ ಸುಳಿವು ನೀಡುವವರಿಗೆ 1 ಲಕ್ಷ ರೂ. ನಗದು ಬಹುಮಾನವನ್ನು ಸಂತ್ರಸ್ತರ ಕುಟುಂಬದವರು ಆ ಸಂದರ್ಭದಲ್ಲಿ ಘೋಷಿಸಿದ್ದರು.
ಗೋವಾದಲ್ಲಿ ಅಡಗಿಕೊಂಡಿದ್ದ: ಪೊಲೀಸರು ವಿಚಾರಣೆಗಾಗಿ ನ್ಯಾಯಾಲಯಕ್ಕೆ ಕರೆತರುತ್ತಿದ್ದಾಗ ತಪ್ಪಿಸಿಕೊಂಡಿದ್ದ ಪ್ರವೀಣ್ ಗೋವಾಕ್ಕೆ ತೆರಳಿ ಅಲ್ಲಿ ಬೇರೆ ಹೆಸರಿನಲ್ಲಿ ಅಡಗಿಕೊಂಡಿದ್ದು, ಯುವತಿಯೋರ್ವಳನ್ನು ಪುಸಲಾಯಿಸಿ ಮದುವೆಯಾಗಿದ್ದಲ್ಲದೆ ಅಕೆಗೆ ಮಗುವೊಂದನ್ನು ಕರುಣಿಸಿದ್ದ.1999ರಲ್ಲಿ ಮಂಗಳೂರಿನ ಇನ್ಸ್ಪೆಕ್ಟರ್ ಜಯಂತ್ ಶೆಟ್ಟಿ ನೇತೃತ್ವದ ರೌಡಿ ನಿಗ್ರಹ ದಳ ಆತನನ್ನು ಪತ್ತೆ ಹಚ್ಚಿ ಬಂಧಿಸಿ ಪುನಃ ಜೈಲಿಗಟ್ಟಿತ್ತು.
ಗಲ್ಲು ಶಿಕ್ಷೆ ವಿಧಿಸಲಾಗಿತ್ತು: ನಾಲ್ವರ ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ್ದ ಮಂಗಳೂರಿನ ನ್ಯಾಯಾಲಯವು ಅಪರಾಧಿ ಪ್ರವೀಣ್‌ಗೆ ಗಲ್ಲು ಶಿಕ್ಷೆ ವಿಧಿಸಿತ್ತು.ಮಂಗಳೂರು ನ್ಯಾಯಾಲಯ ನೀಡಿದ್ದ ಈ ಶಿಕ್ಷೆಯನ್ನು ರಾಜ್ಯ ಹೈಕೋರ್ಟ್ ಮತ್ತು 2003ರಲ್ಲಿ ಸುಪ್ರೀಂ ಕೋರ್ಟು ಕೂಡಾ ಎತ್ತಿ ಹಿಡಿದಿತ್ತು.ಮರಣ ದಂಡನೆಯ ಶಿಕ್ಷೆಯ ಬಳಿಕ ಆತ ರಾಷ್ಟ್ರಪತಿಗೆ ಕ್ಷಮಾಪಣೆಯ ಅರ್ಜಿಯನ್ನು ಸಲ್ಲಿಸಿದ್ದ.ಈ ಅರ್ಜಿಯನ್ನು 2013 ಎಪ್ರಿಲ್ 4ರಂದು ರಾಷ್ಟ್ರಪತಿ ತಿರಸ್ಕರಿಸಿದ್ದರು. ಆದರೆ 2014ರ ಜನವರಿ 22ರಂದು ಸುಪ್ರೀಂ ಕೋರ್ಟ್ ಆತನ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಇಳಿಸಿತ್ತು.ಇದೀಗ ಸ್ವಾತಂತ್ರ್ಯೋತ್ಸವದ ಅಮೃತೋತ್ಸವದ ಸಂದರ್ಭದಲ್ಲಿ ಸರಕಾರವು ಕೆಲವು ಕೈದಿಗಳಿಗೆ ಜೈಲಿನಿಂದ ಬಿಡುಗಡೆಯ ಭಾಗ್ಯವನ್ನು ಕಲ್ಪಿಸಿದ್ದು, ಹೀಗೆ ಬಿಡುಗಡೆಯಾಗುವವರ ಪಟ್ಟಿಯಲ್ಲಿ ವಾಮಂಜೂರು ಪ್ರವೀಣನೂ ಒಬ್ಬನಾಗಿದ್ದಾನೆ.

ಆತ ಜೈಲಿನಿಂದ ಬಂದರೆ ಸಮಾಜಕ್ಕೆ ಅಪಾಯವಿದೆ
ಕಳೆದ 28 ವರ್ಷಗಳಿಂದ ಜೈಲಿನಲ್ಲಿ ಇರುವ ಕೊಲೆಪ್ರಕರಣದ ಅಪರಾಧಿ ಪ್ರವೀಣನನ್ನು ಬಿಡುಗಡೆ ಮಾಡುವ ಬಗ್ಗೆ ಸಂತ್ರಸ್ತ ಕುಟುಂಬದವರ ಪರವಾಗಿ ಗುರುಪುರದ ಸೀತಾರಾಮ ಅವರು ಆತಂಕ ಹಾಗೂ ಅಕ್ಷೇಪ ವ್ಯಕ್ತಪಡಿಸಿದ್ದಾರೆ. ಕೇವಲ 80,000 ರೂಪಾಯಿ ಹಣದ ಆಸೆಗಾಗಿ ನನ್ನ 75 ವರ್ಷ ಪ್ರಾಯದ ವೃದ್ಧ ತಾಯಿ, 36 ವರ್ಷ ಪ್ರಾಯದ ತಂಗಿ, 30 ವರ್ಷ ಪ್ರಾಯದ ಮಾನಸಿಕ ಅಸ್ವಸ್ಥ ಸಹೋದರ, ಹಾಗೂ 9 ವರ್ಷದ ಮುಗ್ದ ಬಾಲಕಿಯನ್ನು ಅಮಾನುಷವಾಗಿ ಕೊಲೆಗೈದ ಆತ ಜೈಲಿನಿಂದ ಹೊರಗೆ ಬಂದರೆ ಸಮಾಜಕ್ಕೆ ಅಪಾಯವಿದೆ ಎಂಬ ಭೀತಿ ನಮಗಿದೆ.ಸ್ವತಃ ಪ್ರವೀಣನ ಕುಟುಂಬದವರಿಗೂ ಆತ ಜೈಲಿನಿಂದ ಹೊರಗೆ ಬರುವುದರ ಬಗ್ಗೆ ಆತಂಕವಿದೆ.ಆತನನ್ನು ಬಿಡುಗಡೆ ಮಾಡಬಾರದು.ಇಂತಹ ವ್ಯಕ್ತಿಯನ್ನು ಬಿಡುಗಡೆ ಮಾಡುವುದು ಸ್ವಾತಂತ್ರೋತ್ಸವದ ಅಮೃತೋತ್ಸವಕ್ಕೆ ಅವಮಾನ ಎಂದು ಸೀತಾರಾಮರವರು ತಿಳಿಸಿದ್ದಾರೆ.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.