ನಿರಂತರ ಮಳೆ: ಆ.5 ಮತ್ತು 6ರಂದು ಜಿಲ್ಲೆಯಲ್ಲಿ ರೆಡ್ ಅಲರ್ಟ್

0

ಪುತ್ತೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಮುಂಗಾರು ಮತ್ತೆ ಚುರುಕುಗೊಂಡಿದೆ. ಮಧ್ಯಾಹ್ನವರೆಗೆ ಸಾಧಾರಣ ಮಳೆಯಾಗಿದ್ದರೆ, ಬಳಿಕ ನಿರಂತರವಾಗಿ ಮಳೆ ಸುರಿದಿದೆ. ಗ್ರಾಮೀಣ, ಘಟ್ಟದ ತಪ್ಪಲಿನ ಭಾಗದಲ್ಲೂ ಭಾರೀ ಮಳೆಯಾಗಿದೆ.

ಹವಾಮಾನ ಇಲಾಖೆಯು ಆ.5 ಮತ್ತು 6ರಂದು ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಭಾರೀ ಗಾಳಿ ಬೀಸುವುದರಿಂದ ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಎಚ್ಚರಿಕೆ ನೀಡಲಾಗಿದೆ.

ಆ.4ರ ಬೆಳಗ್ಗಿನವರೆಗೆ ಬೆಳ್ತಂಗಡಿ 29.5 ಮಿ.ಮೀ, ಬಂಟ್ವಾಳ 7.7, ಮಂಗಳೂರು 5.8, ಪುತ್ತೂರು 11.6, ಸುಳ್ಯ 57.1, ಮೂಡುಬಿದಿರೆ 19.3, ಕಡಬ 59.3 ಮಿ.ಮೀ ಸಹಿತ ಜಿಲ್ಲೆಯಲ್ಲಿ ಸರಾಸರಿ 30 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಗುರುವಾರ 3 ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 7 ಮನೆಗಳಿಗೆ ಭಾಗಶಃ ಹಾನಿಯಾಗಿದೆ.34 ವಿದ್ಯುತ್ ಕಂಬಗಳು,2 ಟ್ರಾನ್ಸ್ ಫಾರ್ಮರ್, 1.68 ಕಿ.ಮೀ.ನಷ್ಟು ವಿದ್ಯುತ್ ತಂತಿಗೆ ಹಾನಿಯಾಗಿದೆ ಎಂದು ಜಿಲ್ಲಾಡಳಿತದ ಪ್ರಕಟಣೆ ತಿಳಿಸಿದೆ.

ಕಾಳಜಿ ಕೇಂದ್ರದಲ್ಲಿ 58 ಮಂದಿ: ಕಡಬ ಹಾಗೂ ಸುಳ್ಯ ತಾಲೂಕಿನ ಕಾಳಜಿ ಕೇಂದ್ರಗಳಲ್ಲಿ 58 ಮಂದಿ ಆಶ್ರಯ ಪಡೆದಿದ್ದಾರೆ. ಕಲ್ಮಕಾರು ಸರಕಾರಿ ಶಾಲೆಯಲ್ಲಿ 10 ಪುರುಷರು ಮತ್ತು 11 ಮಂದಿ ಮಹಿಳೆಯರು, ಸಂಪಾಜೆಯ ಸಜ್ಜನ ಪ್ರತಿಷ್ಠಾನದಲ್ಲಿ 8 ಪುರುಷರು ಮತ್ತು 4 ಮಂದಿ ಮಹಿಳೆಯರು, ಸುಬ್ರಹ್ಮಣ್ಯದ ಅನಘ ವಸತಿಗೃಹದಲ್ಲಿ 6 ಪುರುಷರು ಮತ್ತು 7 ಮಂದಿ ಮಹಿಳೆಯರು ಹಾಗೂ 6 ಮಕ್ಕಳಿದ್ದಾರೆ. ಯೇನೆಕಲ್ಲು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಒಬ್ಬ ಪುರುಷ ಮತ್ತು ಇಬ್ಬರು ಮಹಿಳೆಯರು ಹಾಗೂ ಮೂವರು ಮಕ್ಕಳಿದ್ದಾರೆ.

LEAVE A REPLY

Please enter your comment!
Please enter your name here