ಕೊಂಬಾರು: ಮಳೆಯ ಆರ್ಭಟಕ್ಕೆ ಕೊಚ್ಚಿ ಹೋದ ರಸ್ತೆ – ತಹಸೀಲ್ದಾರ್ ಭೇಟಿ

0

ಕಡಬ: ತಾಲೂಕಿನ ಕೊಂಬಾರು ಗ್ರಾಮದಲ್ಲಿ ಮಳೆಯ ಆರ್ಭಟಕ್ಕೆ ಕಚ್ಚಾ ರಸ್ತೆಯೊಂದು ಕೊಚ್ಚಿ ಹೋಗಿ ಸಂಚಾರ ಸ್ಥಗಿತಗೊಂಡ ವಿದ್ಯಮಾನ ಬುಧವಾರ ರಾತ್ರಿ ನಡೆದಿದ್ದು, ಗುರುವಾರ ಕಡಬ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಸ್ಥಳೀಯಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಘಾಟಿ ಪ್ರದೇಶದ ತಪ್ಪಲು ಕೊಂಬಾರಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ನಿರಂತರ ಮಳೆಯಾಗುತಿದ್ದು ಈಗಾಗಲೇ ಕೆಲವು ಮನೆಗಳಿಗೆ ನೆರೆ ನೀರು ನುಗ್ಗಿ ಅವಾಂತರ ಸೃಷ್ಠಿಯಾಗಿದೆ. ಕೊಂಬಾರು ಗ್ರಾಮದ ಮರವಂಜಿ ಎಂಬಲ್ಲಿ ರಾಮಣ್ಣ ಗೌಡ ಎಂಬವರ ಮನೆಗೆ ಪಕ್ಕದ ಮರುವಂಜಿ ತೋಡಿನ ನೀರು ಮಂಗಳವಾರ ರಾತ್ರಿ ಹಾಗೂ ಬುಧವಾರ ರಾತ್ರಿ ನುಗ್ಗಿತ್ತು. ಇದೇ ಕಾರಣಕ್ಕೆ ಮನೆಯವರನ್ನು ಸ್ಥಳಾಂತರ ಮಾಡಲಾಗಿತ್ತು. ಬುಧವಾರ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ಕೊಂಬಾರು ಗ್ರಾಮದ ಪಟ್ಲೆತ್ತಿಮಾರು ಎಂಬಲ್ಲಿ ಕಚ್ಚಾ ರಸ್ತೆಯು ಸುಮಾರು ಹತ್ತು ಮೀಟರ್‌ನಷ್ಟು ಉದ್ದ ಕೊಚ್ಚಿ ಹೋಗಿ ಗುಂಡಿ ನಿರ್ಮಾಣವಾಗಿದೆ. ಮಳೆ ಆರ್ಭಟಕ್ಕೆ ಇಲ್ಲಿ ಹರಿಯುತ್ತಿರುವ ತೋಡೊಂದು ಭಾರೀ ನೀರಿನೊಂದಿಗೆ ತುಂಬಿ ಹರಿದು, ಕುಂಡೊಕೋರಿ ಎಂಬಲ್ಲಿ ತೋಡು ತೆರೆದುಕೊಂಡು ಪಟ್ಲೆತ್ತಿಮಾರ್ ರಸ್ತೆಯ ಮೇಲೆ ಹರಿದು ಹೋಗಿತ್ತು. ಪರಿಣಾಮ ರಸ್ತೆ ಹೇಳ ಹೆಸರಿಲ್ಲದಂತಾಗಿದೆ. ಸುಂಕದಕಟ್ಟೆ-ಕೊಂಬಾರು, ಬೋಳ್ನಡ್ಕ-ಕೆಂಜಾಲ ಮುಖಾಂತರ ಗುಂಡ್ಯವನ್ನು ಸಂಪರ್ಕಿಸುವ ಈ ರಸ್ತೆ ಈಗ ಪಟ್ಲೆತ್ತಿಮರ್ ಎಂಬಲ್ಲಿ ಕಿತ್ತು ಹೋಗಿ ಈ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.ಪರ್ಯಾಯ ರಸ್ತೆಯ ವ್ಯವಸ್ಥೆ ದುಸ್ತರವಾಗಿರುವುದರಿಂದ ಜನತೆ ಪರದಾಡುವಂತಾಗಿದೆ.

ಪಟ್ಲೆತ್ತಿಮಾರ್ ಎಂಬಲ್ಲಿ ರಸ್ತೆಯ ವಿಷಯದಲ್ಲಿ ತಗಾದೆಯಿದ್ದು, ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ದುರಸ್ತಿ ಕಾರ್ಯಕ್ಕೆ ತೊಡಕುಂಟಾಗಿದೆ. ಆದರೆ ಜನರಿಗೆ ತೊಂದರೆಯಾಗುತ್ತಿರುದರಿಂದ ದುರಸ್ತಿ ಅನಿವಾರ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಕಡಬ ತಹಸೀಲ್ದಾರ್ ಅನಂತ ಶಂಕರ್ ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿಗೆ ಸ್ಥಳೀಯಾಡಳಿತ ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಕೊಂಬಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಶೀಲ ಶಿವಪ್ರಸಾದ್, ಸದಸ್ಯರಾದ ಮಧುಸೂಧನ್ ಕೊಂಬಾರು, ಸದಾನಂದ ಪೂಜಾರಿ, ಚೆನ್ನಕೇಶವ ಗೌಡ ಕೈಂತಿಲ, ಜಯಶ್ರೀ ರಾಮಚಂದ್ರ, ಪಿಡಿಒ ರಾಘವೇಂದ್ರ ಗೌಡ, ಗ್ರಾಮಕರಣಿಕ ಸಿರಾಜ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here