ಫಿಲೋಮಿನಾ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ `ಎಲ್-ಡೊರಾಡೊ’ ಉದ್ಘಾಟನೆ

0

  • ಕನಸನ್ನು ಕಾಣಿ, ಗುರಿ ಸಾಧಿಸಿ, ಜೀವನದಲ್ಲಿ ಸಂತೋಷವಾಗಿರಿ-ಸಿಎ ನೌಫಲ್ ಎಂ

ಚಿತ್ರ: ಸಂತೋಷ್ ಮೊಟ್ಟೆತ್ತಡ್ಕ

ಪುತ್ತೂರು: ನಾವು ಮಾಡುವ ಯಾವುದೇ ಕೆಲಸವಾಗಲಿ, ಅದನ್ನು ಪ್ರೀತಿಯಿಂದ ಮಾಡುವಂತಾಗಬೇಕು. ಜೀವನದಲ್ಲಿ ಕನಸನ್ನು ಕಾಣಿ ಆದರೆ ಕಂಡಂತಹ ಕನಸನ್ನು ಸಾಧಿಸುವ ಗುರಿ ಇರಲಿ. ನಮ್ಮನ್ನು ನಾವು ಸಂತೋಷವಾಗಿರುವ ಜೊತೆಗೆ ಇತರರನ್ನೂ ಕೂಡ ಸಂತೋಷದಲ್ಲಿರುವಂತೆ ನಾವು ಕಾಣಬೇಕಿದೆ ಎಂದು ಫಿಲೋಮಿನಾ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ನೌಫಲ್ ಆಂಡ್ ಕಂಪೆನಿಯ ಚಾರ್ಟರ್ಡ್ ಎಕೌಂಟೆಂಟ್ ನೌಫಲ್ ಎಂ.ರವರು ಹೇಳಿದರು.

ಆ.5 ರಂದು ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ದರ್ಬೆ ಫಿಲೋನಗರದ ಸಂತ ಫಿಲೋಮಿನಾ ಕಾಲೇಜಿನ ಬೆಳ್ಳಿಹಬ್ಬದ ಸಭಾಂಗಣದಲ್ಲಿ ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಆಶ್ರಯದಲ್ಲಿ ಫ್ಯಾಕುಲಾ 2022 ಪ್ರಸ್ತುತಪಡಿಸುವ, ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ(ಐಕ್ಯೂಎಸಿ) ಇದರ ಸಹಯೋಗದಲ್ಲಿ ನಡೆದ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ `ಎಲ್-ಡೊರಾಡೊ’ ಕಾರ್ಯಕ್ರಮವನ್ನು ಅವರು ಬಹುಮಾನಗಳನ್ನು ಅನಾವರಣಗೊಳಿಸುವ ಮೂಲಕ ಚಾಲನೆ ನೀಡುತ್ತಾ ಮಾತನಾಡಿದರು. ನಾನು ಈ ಕಾರ್ಯಕ್ರಮದ ಅತಿಥಿಯಾಗಿ ಬಂದಿಲ್ಲ, ಯಾಕೆಂದರೆ ನನಗೆ ಫಿಲೋಮಿನಾ ವಿದ್ಯಾಸಂಸ್ಥೆಯು ಮನೆಯಿದ್ದಾಗೆ. ಆದ್ದರಿಂದ ನಮ್ಮ ಮನೆಯ ಕಾರ್ಯಕ್ರಮ ಎಂಬಂತೆ ಆಗಮಿಸಿದ್ದೇನೆ. ಅಂಕಿ ಅಂಶದ ಪ್ರಕಾರ ಫಿನ್‌ಲ್ಯಾಂಡ್ ದೇಶವು ಎಲ್ಲಾ ದೇಶಕ್ಕಿಂತ ಸಂತೋಷಭರಿತವಾದ ದೇಶವಾಗಿದೆ. ಭಾರತ ದೇಶವು ಈ ನಿಟ್ಟಿನಲ್ಲಿ ಹೆಜ್ಜೆಯನ್ನಿಟ್ಟಿದೆ. ನಾವು ನಮ್ಮ ನಿತ್ಯ ಜೀವನದಲ್ಲಿ `ಗುಡ್’ ಎನ್ನುವ ಪದದ ಬದಲಿಗೆ `ಹ್ಯಾಪಿ’ ಎಂಬ ಪದವನ್ನು ಸೇರಿಸಿ ಸದಾ ಹ್ಯಾಪಿಯಾಗಿರೋಣ ಎಂಬುದೇ ನನ್ನ ಅನಿಸಿಕೆಯಾಗಿದೆ. ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಧನಾತ್ಮಕತೆಯುಳ್ಳ ಚಿಂತನೆಯನ್ನು ಅಳವಡಿಸಿಕೊಂಡಲ್ಲಿ ಜೀವನ ಫಲಪ್ರದವೆನಿಸುವುದು ಎಂದರು.


ಸಮಾರಂಭದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೋರವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಬೋಧನಾ ಕೈಂಕರ್ಯವು ಹೆಚ್ಚು ಉದಾತ್ತತೆಯಿಂದ ಕೂಡಿದ ಕಾರ್ಯವಾಗಿದೆ. ವಿದ್ಯಾರ್ಥಿಗಳು ರ್‍ಯಾಂಕ್, ಡಿಸ್ಟಿಂಕ್ಷನ್ ಪಡೆಯುವುದು ಮುಖ್ಯವಲ್ಲ, ಇದರ ಜೊತೆಗೆ ಜೀವನದಲ್ಲಿ ಶಿಸ್ತು ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಮುನ್ನೆಡೆಯುವುದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳು ಇತರರ ಜ್ಞಾನ ಹಾಗೂ ಬುದ್ಧಿವಂತಿಕೆಯನ್ನು ಸದಾ ಗೌರವಿಸಬೇಕು. ಸ್ಪರ್ಧಿಗಳು ಇತರರೊಂದಿಗೆ ಸ್ಪರ್ಧೆಗಳಿಯದೆ, ನಾವು ಎಲ್ಲಿ ಎಡವಿದ್ದೇವೆ ಎಂದು ಅರಿತುಕೊಂಡು ಅವನ್ನು ಮತ್ತಷ್ಟು ಸುಧಾರಿಸಿಕೊಳ್ಳುವಂತೆ ಮಾಡುವ ಗುಣವನ್ನು ಬೆಳೆಸಿಕೊಳ್ಳಬೇಕಿದೆ ಎಂದರು.


ಗೌರವ ಅತಿಥಿ, ಫಿಲೋಮಿನಾ ಕಾಲೇಜಿನ ಕ್ಯಾಂಪಸ್ ನಿರ್ದೇಶಕ ವಂ|ಸ್ಟ್ಯಾನಿ ಪಿಂಟೋರವರು ಮಾತನಾಡಿ, ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಜೀವನವನ್ನು ಹೇಗೆ ಉತ್ತುಂಗತೆಯತ್ತ ಮುಂದುವರೆಸಿಕೊಂಡು ಹೋಗುವುದು ಎಂಬುದರ ಬಗ್ಗೆ ಸದಾ ಚಿಂತನೆಯಲ್ಲಿರುತ್ತಾರೆ ಮಾತ್ರವಲ್ಲದೆ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ. ಕಠಿಣ ಪರಿಶ್ರಮದೊಂದಿಗೆ ಜೀವನದಲ್ಲಿ ಯಶಸ್ಸು ಸಿಕ್ಕಾಗ ಅದರಷ್ಟು ಸಿಗುವ ಸಂತೋಷ ಮತ್ತೊಂದಿಲ್ಲ ಎಂದರು.

ಬಿಬಿಎ ವಿಭಾಗದ ಸ್ಟಾಫ್ ಸಂಯೋಜಕ ಅಭಿಷೇಕ್ ಸುವರ್ಣರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ಬಿಬಿಎ ವಿದ್ಯಾರ್ಥಿನಿ ಶ್ರೇಯಾ ಶೆಟ್ಟಿ ಮತ್ತು ಬಳಗ ಪ್ರಾರ್ಥಿಸಿದರು. ಬಿಬಿಎ ವಿಭಾಗದ ಮುಖ್ಯಸ್ಥ ಡಾ|ರಾಧಾಕೃಷ್ಣ ಗೌಡ ವಿ.ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಿದ್ಯಾರ್ಥಿನಿ ಪ್ರಜ್ಞಾ ಮುಖ್ಯ ಅತಿಥಿಗಳ ಪರಿಚಯ ಮಾಡಿದರು. ವಿದ್ಯಾರ್ಥಿ ಸಂಯೋಜಕ ಪ್ರಖ್ಯಾತ್ ರೈ ವಂದಿಸಿ, ವಿದ್ಯಾರ್ಥಿನಿ ಲಹರಿ ಕೆ.ವಿ ಕಾರ್ಯಕ್ರಮ ನಿರೂಪಿಸಿದರು.

ರ್‍ಯಾಂಕ್/ಪಿಎಚ್‌ಡಿ ಸನ್ಮಾನ…
ಮಂಗಳೂರು ವಿಶ್ವವಿದ್ಯಾನಿಲಯವು ನಡೆಸಿದ ಸ್ನಾತಕ ಪರೀಕ್ಷೆಯಲ್ಲಿ 2020-21ರ ಸ್ನಾತಕ ಪದವಿಯಲ್ಲಿ ಬಿಬಿಎ ವಿಭಾಗದಲ್ಲಿ 2ನೇ ರ್‍ಯಾಂಕ್ ಗಳಿಸಿದ ಮೈತ್ರಿ ಕೆ.ಬಿ, 2021-22ರ ಸಾಲಿನಲ್ಲಿ ೫ನೇ ರ್‍ಯಾಂಕ್ ಗಳಿಸಿದ ರಾಶಿಯಾ ರೈ, 7ನೇ ರ್‍ಯಾಂಕ್ ಗಳಿಸಿದ ಶ್ರೇಯಾ ಕೆ.ಎಸ್‌ರವರನ್ನು ಮತ್ತು ಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದ ಬಿಬಿಎ ವಿಭಾಗದ ಮುಖ್ಯಸ್ಥ ಡಾ|ರಾಧಾಕೃಷ್ಣ ಗೌಡ ವಿ.ರವರನ್ನು ಗುರುತಿಸಿ ಸನ್ಮಾನಿಸಲಾಯಿತು. ಸನ್ಮಾನಿತ ರ್‍ಯಾಂಕ್ ಗಳಿಸಿದವರ ಪೈಕಿ ಮೈತ್ರಿ ಕೆ.ಬಿರವರು ಅನಿಸಿಕೆ ವ್ಯಕ್ತಪಡಿಸಿದರು. ಬಿಬಿಎ ವಿಭಾಗದ ಉಪನ್ಯಾಸಕ ಪ್ರಶಾಂತ್ ರೈಯವರು ಸನ್ಮಾನಿತರ ಪರಿಚಯ ಮಾಡಿದರು.

ಸಾಕ್ಷ್ಯಚಿತ್ರ…
ಕಾಲೇಜಿನ ಬಿಬಿಎ ವಿಭಾಗವು ಹಲವು ವರ್ಷಗಳಿಂದ ಹಮ್ಮಿಕೊಳ್ಳುವ ರಾಷ್ಟ್ರಮಟ್ಟದ ಮ್ಯಾನೇಜ್‌ಮೆಂಟ್ ಫೆಸ್ಟ್ ಮಾತ್ರವಲ್ಲದೆ ಬಿಬಿಎ ವಿಭಾಗವು ನಡೆಸುತ್ತಿರುವ ನಿರಂತರ ಕಾರ್ಯಕ್ರಮಗಳನ್ನು ಹಾಗೂ ವಿವಿಧ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ಬಿಬಿಎ ವಿಭಾಗದ ಭಾಗವಹಿಸುವಿಕೆ ಹಾಗೂ ಬಹುಮಾನ ವಿಜೇತರ ಫೊಟೊಗಳು, ಕಾಲೇಜು ಕ್ಯಾಂಪಸ್‌ಗಳನ್ನೊಳಗೊಂಡ ಸಾಕ್ಷ್ಯಚಿತ್ರವನ್ನು ಈ ಸಂದರ್ಭದಲ್ಲಿ ಭಿತ್ತರಗೊಳಿಸಲಾಯಿತು.

LEAVE A REPLY

Please enter your comment!
Please enter your name here