ಭ್ರಷ್ಟಾಚಾರದ ಗಳಿಕೆ ಪ್ರಕರಣ:ಆರೋಪಿ ದಂಪತಿಗೆ ಶಿಕ್ಷೆ

ಈಡಿ ದೂರಿನ ವಿಚಾರಣೆ ನಡೆಸಿದ ಸಿಬಿಐ ಸ್ಪೆಷಲ್ ಕೋರ್ಟ್ ತೀರ್ಪು

  •  ಕರಪ್ಶನ್ ಕಾಯ್ದೆಯಲ್ಲಿ ದಾಖಲಾದ ಕೇಸಿನಲ್ಲಿ ಈಡಿ ದೂರಿನಲ್ಲಿ ಶಿಕ್ಷೆಯಾದ ರಾಜ್ಯದ ಮೊದಲ ಪ್ರಕರಣ
  •  ಪುತ್ತೂರು ಸಹಿತ ವಿವಿಧ ಕಡೆ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಜೆ.ವಿ.ರಾಮಯ್ಯದಂಪತಿ ಶಿಕ್ಷೆಗೊಳಗಾದವರು
  •  ಈಡಿ ಪರ ವಿಶೇಷ ಅಭಿಯೋಜಕ ಮಹೇಶ್ ಕಜೆಯವರ ವಾದ ಪುರಸ್ಕರಿಸಿದ ಕೋರ್ಟ್

ಪುತ್ತೂರು: ಅಕ್ರಮ,ಭ್ರಷ್ಟಾಚಾರದ ಗಳಿಕೆಯ ಪ್ರಕರಣವೊಂದರಲ್ಲಿ ಜಾರಿ ನಿರ್ದೇಶನಾಲಯ(ಈಡಿ) ನೀಡಿದ ದೂರೊಂದರ ವಿಚಾರಣೆ ಪೂರ್ಣಗೊಳಿಸಿದ ಬೆಂಗಳೂರಿನ 34ನೇ ಸಿಬಿಐ ವಿಶೇಷ ನ್ಯಾಯಾಲಯ ಪಿಎಂಎಲ್‌ಯ ಕಾಯ್ದೆಯಡಿ ನಿವೃತ್ತ ಸಾರಿಗೆ ಅಧಿಕಾರಿ ಜೆ.ವಿ.ರಾಮಯ್ಯ ಮತ್ತವರ ಪತ್ನಿ ದಂಪತಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಬೆಂಗಳೂರು ಜೆ.ಪಿ.ನಗರ ನಿವಾಸಿಯಾಗಿರುವ ಜೆ.ವಿ.ರಾಮಯ್ಯ ಎಂಬವರು 1978ರಿಂದ 2009ರ ಅವಧಿಯಲ್ಲಿ ತಮ್ಮ ಆದಾಯದ ಉತ್ಪತ್ತಿಯ ಮಿತಿಗಿಂತ ಹೆಚ್ಚಿನ ಸಂಪಾದನೆಯನ್ನು ಗಳಿಸಿ ಸುಮಾರು ಒಂದು ಕೋಟಿಗೂ ಮಿಗಿಲಾದ ಹೆಚ್ಚುವರಿ ಗಳಿಕೆಯನ್ನು ಮಾಡಿರುತ್ತಾರೆ ಎಂಬ ಆರೋಪದಲ್ಲಿ ನ್ಯಾಯಾಲಯ ಕಾನೂನಿನ ಬಿಸಿ ಮುಟ್ಟಿಸಿದೆ.

ಕೋಲಾರದ ಲೋಕಾಯುಕ್ತ ಕಚೇರಿಯವರು ದಿನಾಂಕ 29-09-2009ರಂದು ಆರೋಪಿಗಳಾದ ಜೆ.ವಿ.ರಾಮಯ್ಯ(64ವ.) ಮತ್ತವರ ಪತ್ನಿ ಶ್ರೀಮತಿ ಎಂ.ಲಲಿತ ಯಾನೆ ಲಲಿತಮ್ಮ(59ವ.)ಅವರ ವಿರುದ್ಧ ಪಿ.ಸಿ.ಆಕ್ಟ್ 13(1)ಇ ಮತ್ತು 13(2) ರ ಅಡಿಯಲ್ಲಿ ಕೇಸನ್ನು ದಾಖಲಿಸಿಕೊಂಡಿದ್ದರು. ತನಿಖೆಯನ್ನು ಪೂರ್ಣಗೊಳಿಸಿ 2012ನೇ ಇಸವಿಯಲ್ಲಿ ಸದ್ರಿ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದರು.ತನ್ಮಧ್ಯೆ,ಲೋಕಾಯುಕ್ತ ಇಲಾಖೆಯವರು, ಜೆ.ವಿ.ರಾಮಯ್ಯ ಅವರು ಪಿ.ಎಂ.ಎಲ್.ಎ.(ಪ್ರಿವೆನ್ಷನ್ ಆಫ್ ಮನಿ ಲಾಂಡ್ರಿಂಗ್ ಆಕ್ಟ್)ನ ಅನ್ವಯವೂ ತಪ್ಪು ಎಸಗಿರುತ್ತಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೂ ಮಾಹಿತಿಯನ್ನು ನೀಡಿದ್ದರು.‌ ಲೋಕಾಯುಕ್ತ ಪೊಲೀಸರು ನೀಡಿದ ಮಾಹಿತಿಯನ್ವಯ ಜಾರಿ ನಿರ್ದೇಶನಾಲಯದವರು ಜೆ.ವಿ.ರಾಮಯ್ಯ ಮತ್ತು ಅವರ ಪತ್ನಿ ಲಲಿತಮ್ಮ ಅವರ ವಿರುದ್ಧ ಈ.ಸಿ.ಐ.ಆರ್.6/ಬಿ.ಝೆಡ್.2009ರಂತೆ 29/09/2009ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದರು.ನಂತರ ಕೂಲಂಕುಶ ತನಿಖೆಯನ್ನು ಮುಂದುವರಿಸಿ ಸದ್ರಿ ಕಾಯಿದೆನ್ವಯ ಆರೋಪಿಗಳ ಹೇಳಿಕೆಯನ್ನು ವಿಶೇಷವಾಗಿ ದಾಖಲಿಸಿಕೊಂಡಿದ್ದರು.ನಂತರ ಒಂದನೇ ಆರೋಪಿ ಜೆ.ವಿ.ರಾಮಯ್ಯ ಅವರು ಅಕ್ರಮವಾಗಿ ತನ್ನ ಆದಾಯದ ಮಿತಿಗಿಂತ ಹೆಚ್ಚಿನ ಗಳಿಕೆಯನ್ನು ಮಾಡಿ ಅದನ್ನು ಪ್ರಕರಣದ ಎರಡನೇ ಆರೋಪಿಯಾಗಿರುವ ಅವರ ಪತ್ನಿ ಲಲಿತಮ್ಮರವರ ಮುಖಾಂತರ ವಿನಿಯೋಗಿಸಿ ಖರೀದಿಸಿದ ಸುಮಾರು ಆರು ಆಸ್ತಿಗಳನ್ನು ಜಪ್ತಿ ಮಾಡಿದ್ದರು.ಜಪ್ತಿಯಾದ ಆದೇಶದ ವಿರುದ್ಧ ದೆಹಲಿಯ ಎಜುಡಿಕೇಟಿಂಗ್ ಅಥಾರಿಟಿಯ ಮುಂದೆ ದೂರನ್ನು ಸಲ್ಲಿಸಿ ತದನಂತರ ಸದ್ರಿ ಮುಟ್ಟುಗೋಲಿನ ಆದೇಶವನ್ನು ಖಾಯಂಗೊಳಿಸಿದ್ದರು. ಮಾತ್ರವಲ್ಲದೆ ಮತ್ತೂ ತನಿಖೆಯನ್ನು ಮುಂದುವರಿಸಿ ಜಾರಿ ಮನಿ ಲಾಂಡ್ರಿಂಗ್ ಕಾಯ್ದೆಯ ಸೆಕ್ಷನ್ 3 ಮತ್ತು 4ರ ಅನ್ವಯ ಅಪರಾಧ ಎಸಗಿದ್ದಾರೆ ಎಂಬ ಕಾರಣಕ್ಕಾಗಿ ಮತ್ತು ಸದ್ರಿ ಆರೋಪಿಗಳು ಅಕ್ರಮವಾಗಿ ಗಳಿಸಿದ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟುಗೋಲು ಹಾಕಬೇಕೆಂದು ಕೋರಿ ಬೆಂಗಳೂರಿನ ಸಿ.ಬಿ.ಐ. ವಿಶೇಷ ನ್ಯಾಯಾಲಯಕ್ಕೆ ದೂರನ್ನು ಸಲ್ಲಿಸಿದ್ದರು.ಸದ್ರಿ ಪ್ರಕರಣದಲ್ಲಿ ಕಾಲಕಾಲಕ್ಕೆ ತನಿಖೆಯನ್ನು ನಡೆಸಿದ ನ್ಯಾಯಾಲಯ ಅಂತಿಮವಾಗಿ ಜಾರಿ ನಿರ್ದೇಶನಾಲಯದ ಪರವಾದ ವಾದವನ್ನು ಮತ್ತು ಆರೋಪಿಗಳ ಪರ ವಕೀಲರ ವಾದವನ್ನು ಸವಿವರವಾಗಿ ಕೇಳಿತ್ತು. ಜಾರಿ ನಿರ್ದೇಶನಾಲಯದ ಪರವಾಗಿ ವಾದವನ್ನು ಮಂಡಿಸಿದ ವಕೀಲರು ಆರೋಪಿ ಜೆ.ವಿ.ರಾಮಯ್ಯ ಅವರು ತನ್ನ ಮಿತಿಗಿಂತ ಹೆಚ್ಚಿನ ಆದಾಯವನ್ನು ಗಳಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಾತ್ರವಲ್ಲದೇ,ಅವರು ತನ್ನ ಮಡದಿಯ ಹೆಸರಿನಲ್ಲಿ ಖರೀದಿಸಿದ ಆಸ್ತಿಯ ಮೌಲ್ಯವನ್ನು ಗಳಿಸಿರುವುದು ಕಂಡುಬರುತ್ತದೆ.ಈ ನಿಟ್ಟಿನಲ್ಲಿ ತನಿಖೆಯ ಸಮಯ ಆರೋಪಿ ಯಾವುದೇ ಸಮಜಾಯಿಷಿಕೆಯನ್ನು ಕೊಟ್ಟಿರುವುದಿಲ್ಲ.ಪಿ.ಎಂ.ಎಲ್.ಎ ಕಾಯಿದೆಯನ್ವಯ ಯಾವುದಾದರೂ ದೂರನ್ನು ಜಾರಿ ನಿರ್ದೇಶನಾಲಯ ದಾಖಲಿಸಿಕೊಂಡರೆ ಅದನ್ನು ಅಲ್ಲ ಎಂದು ಸಾಬೀತು ಪಡಿಸುವ ವಿಶೇಷ ಹೊಣೆಗಾರಿಕೆ ಆರೋಪಿಯದ್ದಾಗಿರುವ ಕಾರಣ ಸದ್ರಿ ಹೊಣೆಗಾರಿಕೆಯನ್ನು ಕಳಚಿಕೊಳ್ಳುವುದಕ್ಕೆ ಆರೋಪಿಗೆ ಸಾಧ್ಯವಾಗದೇ ಇರುವ ಕಾರಣ ಅವರ ವಿರುದ್ಧದ ಆರೋಪ ಸಾಬೀತಾಗಿರುತ್ತದೆ.ಮಾತ್ರವಲ್ಲದೇ, ಅವರ ಜೊತೆ ಅವರ ಪತ್ನಿಯೂ ಪೂರ್ಣ ತಿಳುವಳಿಕೆಯಿಂದ ಅಕ್ರಮವಾಗಿ ಗಳಿಸಿದ ಸಂಪತ್ತನ್ನು ಸಕ್ರಮೀಗಳಿಸುವ ಸಲುವಾಗಿ ಎಲ್ಲಾ ಸಹಕಾರವನ್ನು ನೀಡಿರುತ್ತಾರೆ.ಆದ್ದರಿಂದ ಕಾಯ್ದೆಯನ್ವಯ ಅವರು ಕೂಡ ಶಿಕ್ಷಾರ್ಹರಾಗಿರುತ್ತಾರೆ ಎಂದು ವಾದವನ್ನು ಮಂಡಿಸಿದ್ದರು. ಮಾತ್ರವಲ್ಲದೆ ತನಿಖೆಯ ಕಾಲದಲ್ಲಿ ಕೂಡ ಆರೋಪಿಗಳು ಸುಳ್ಳು ದಾಖಲೆ ಪತ್ರಗಳನ್ನು ಸೃಷ್ಟಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಲಯದ ದಾರಿ ತಪ್ಪಿಸುವ ಪ್ರಯತ್ನವನ್ನು ಮಾಡಿರುತ್ತಾರೆ ಎಂಬುದನ್ನು ಆಧಾರ ಸಹಿತವಾಗಿ ಕೋರ್ಟಿನ ಗಮನಕ್ಕೆ ತಂದಿದ್ದರು. ಇದನ್ನೆಲ್ಲಾ ಪರಿಗಣಿಸಿದ ನ್ಯಾಯಾಲಯ ಪಿ.ಎಮ್.ಎಲ್.ಎ. ಕಾಯಿದೆ ವಿಶೇಷ ಕಾಯಿದೆಯಾಗಿದ್ದು ಇದರಲ್ಲಿ ಆರೋಪವನ್ನು ನಿರಾಕರಿಸಿದರಷ್ಟೇ ಸಾಕಾಗುವುದಿಲ್ಲ ಅದನ್ನು ನ್ಯಾಯಾಲಯದ ಮುಂದೆ ಆಧಾರ ಸಹಿತವಾಗಿ ಸಾಬೀತು ಮಾಡಿಸುವಂತಹ ಜವಾಬ್ದಾರಿ ಆರೋಪಿಯದ್ದಾಗಿರುತ್ತದೆ.ಅದರಲ್ಲಿ ವಿಫಲನಾದಲ್ಲಿ ಆತನ ಮೇಲೆ ಹೊರಿಸಲಾದ ಆರೋಪ ಸಾಬೀತಾಗಿರುತ್ತದೆ ಎಂದು ಪೂರ್ವ ನಿರ್ಧರಿತ ಭಾವನೆ ಇರುತ್ತದೆ ಮತ್ತು ಈ ಪ್ರಕರಣದ ಆರೋಪಿಗಳು ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು ಕೂಡ ಸ್ಪಷ್ಟವಾಗಿ ಕಂಡುಬರುತ್ತದೆ.ತನಿಖೆಯ ಕಾಲದಲ್ಲೆಲ್ಲೂ ತಾವು ಗಳಿಸಿದ ಸಂಪತ್ತಿನ ಲೆಕ್ಕಾಚಾರವನ್ನು ಅವರು ಅಲ್ಲಗಳೆದಿರುವುದಿಲ್ಲ ಇತ್ಯಾದಿಯಾಗಿ ಸಮಗ್ರವಾಗಿ ಎಲ್ಲಾ ಕೋನದಿಂದಲೂ ಪ್ರಕರಣವನ್ನು ಪರಿಗಣಿಸಿ ಆರೋಪಿಗಳು ತಪ್ಪು ಮಾಡಿರುತ್ತಾರೆ ಎಂಬ ನಿರ್ಧಾರಕ್ಕೆ ಬಂದು ಅವರಿಗೆ ಶಿಕ್ಷೆಯನ್ನು ವಿಽಸಿ ಬೆಂಗಳೂರಿನ 34ನೇ ಸಿಬಿಐ ಕೋರ್ಟಿನ ನ್ಯಾಯಾಧೀಶ ಎಚ್.ಎಂ.ಮೋಹನ್ ಅವರು ಆದೇಶ ಮಾಡಿರುತ್ತಾರೆ.ಆರೋಪಿಗಳು ಮತ್ತು ಜಾರಿ ನಿರ್ದೇಶನಾಲಯದ ವಕೀಲರ ವಾದವನ್ನು ಆಲಿಸಿದ ನ್ಯಾಯಾಽಶರು ಆರೋಪಿಗಳಿಗೆ 3 ವರ್ಷ ಸಜೆ, 10,000 ರೂ. ದಂಡ ಮತ್ತು ಅವರು ಅಕ್ರಮವಾಗಿ ಗಳಿಸಿದ ಸುಮಾರು 70 ಲಕ್ಷಕ್ಕೂ ಮಿಗಿಲಾದ ಬೆಲೆಬಾಳುವ ಆಸ್ತಿಯನ್ನು ಕೇಂದ್ರ ಸರಕಾರಕ್ಕೆ ಮುಟ್ಟುಗೋಲು ಮಾಡಿಕೊಳ್ಳಬೇಕು ಎಂದು ಆದೇಶ ಮಾಡುವ ಮೂಲಕ ಭ್ರಷ್ಟಾಚಾರಿಗಳಿಗೆ ಎಚ್ಚರಿಕೆಯ ಕರೆಗಂಟೆಯನ್ನು ನೀಡಿದ್ದಾರೆ.

ರಾಜ್ಯದ ಮೊದಲ ಪ್ರಕರಣ

ಇದೊಂದು ಬಹಳ ಅಪರೂಪವಾದ ಪ್ರಕರಣವಾಗಿದ್ದು, ಕರಪ್ಶನ್ ಆಕ್ಟಿನಲ್ಲಿ ದಾಖಲಿಸಲಾದ ಕೇಸಿನಲ್ಲಿ ಜಾರಿ ನಿರ್ದೇಶನಾಲಯದ ದೂರಿನನ್ವಯ ಶಿಕ್ಷೆಗೊಳಪಟ್ಟ ಕರ್ನಾಟಕದ ಪ್ರಪ್ರಥಮ ಕೇಸು ಇದಾಗಿರುತ್ತದೆ.ಮಾತ್ರವಲ್ಲದೇ, ಇಡೀ ಕರ್ನಾಟಕದಲ್ಲಿ ಈ ಕಾಯಿದೆ ಜಾರಿಗೆ ಬಂದ 17 ವರ್ಷದ ಅವಽಯಲ್ಲಿ ಆರೋಪಿಗಳ ವಿರುದ್ಧದ ದೂರು ಸಾಬೀತಾದ ಮೂರನೆಯ ಮತ್ತು ದೇಶದಲ್ಲಿ 24ನೇ ಪ್ರಕರಣವಾಗಿರುತ್ತದೆ. ಈ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಪರವಾಗಿ ಇತ್ತೀಚೆಗಷ್ಟೇ ವಿಶೇಷ ಅಭಿಯೋಜಕರಾಗಿ ನೇಮಕಗೊಂಡಿದ್ದ ಪುತ್ತೂರಿನ ಕಜೆ ಲಾ ಚೇಂಬರ್ಸ್‌ನ ಮುಖ್ಯಸ್ಥ ಮಹೇಶ್ ಕಜೆಯವರು ವಾದವನ್ನು ಮಂಡಿಸಿದ್ದರು. ಈ ಪ್ರಕರಣದಲ್ಲಿ ಶಿಕ್ಷೆಗೊಳಗಾದ 1ನೇ ಆರೋಪಿ ಜೆ.ವಿ.ರಾಮಯ್ಯ ಅವರು ಈ ಹಿಂದೆ ಪುತ್ತೂರು, ಮಂಗಳೂರು ಸಹಿತ ಹಲವೆಡೆ ಸಾರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದರು.

Puttur_Advt_NewsUnder_2
Puttur_Advt_NewsUnder_2
Puttur_Advt_NewsUnder_2

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.